Bankim Da Remark | ಏನಿದು 'ದಾ', 'ಬಾಬು' ವಿವಾದ..? ಪ್ರಧಾನಿ ಮಾತಿಗೆ ಬಂಗಾಳಿ ತಜ್ಞರ ವಿಶ್ಲೇಷಣೆ ಹೀಗಿದೆ...

Bankim Da Remark
Bankim Da Remark
Published on
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ವಂದೇ ಮಾತರಂ ಕುರಿತಾದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುವ ವೇಳೆ, ಈ ಗೀತೆ ಬರೆದ ಬಂಕಿಮ್ ಚಂದ್ರ ಚಟರ್ಜಿ ಅವರನ್ನು ಬಂಕಿಮ್ ದಾ ಎಂದು ಉಲ್ಲೇಖಿಸಿದ್ದು ಹೊಸ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.
ಬಂಗಾಳದ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿಗಳು ನೀಡಿರುವ ಆ ಹೇಳಿಕೆ ರಾಜ್ಯದಲ್ಲಿನ ಸಾಂಸ್ಕೃತಿಕ ಚರ್ಚೆಗೆ ಕಾರಣವಾಗಿದ್ದು, ಮೋದಿ ಮಾತಿಗೆ ಟಿಎಂಸಿ ಸಂಸದ ಸೌಗತ ರಾಯ್ ತಕ್ಷಣವೇ ಆಕ್ಷೇಪ ವ್ಯಕ್ತಪಡಿಸಿ, ಬಂಕಿಮ್ ಬಾಬು ಎಂದು ಸಂಭೋಧಿಸುವಂತೆ ಆಗ್ರಹಿಸಿದ ಸನ್ನಿವೇಶಕ್ಕೆ ಸದನ ಸಾಕ್ಷಿಯಾಯಿತು.
ಮುಂದಿನ ವರ್ಷ ನಡೆಯಲಿರುವ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿಯನ್ನು ಮಟ್ಟ ಹಾಕಲು ಒಳ್ಳೆಯ ರಾಜಕೀಯ ಅವಕಾಶವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಳಸಿಕೊಂಡಿದ್ದು, ನಿನ್ನೆ ಸಭೆಯೊಂದರಲ್ಲಿ ಮಾತನಾಡಿದ ದೀದಿ, ಪ್ರಧಾನಿಗಳ ಕ್ಷಮೆಗೆ ಒತ್ತಾಯಿಸಿದರು. ರಾಷ್ಟ್ರಗೀತೆ ಬರೆದ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಅವರನ್ನು ನೀವು ದಾ ಎಂದು ಸಂಬೋಧಿಸಿದ್ದೀರಿ...ಇದು ಅವಮಾನ ಮಾಡಿದಂತೆ, ಆದ್ದರಿಂದ ನೀವು ತಲೆ ಬಾಗಿ ಜನರ ಕ್ಷಮೆ ಕೇಳಬೇಕು ಎಂದು ಮಮತಾ ಆಗ್ರಹಿಸಿದ್ದಾರೆ.
2026 ರ ಬಂಗಾಳ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳ ಬಾಕಿ ಇರುವಾಗ ದಾದಾ ಮತ್ತು ಬಾಬು ಪದ ಬಳಕೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.

ಬೆಂಗಾಲಿಯಲ್ಲಿ 'ದಾ' ಮತ್ತು 'ಬಾಬು' ಅರ್ಥವೇನು?

ಬಂಗಾಳಿ ಭಾಷೆಯಲ್ಲಿ 'ದ' ಎನ್ನುವುದು ದಾದಾ ಎಂಬುದರ ಸಂಕ್ಷಿಪ್ತ ರೂಪವಾಗಿದ್ದು, ಇದರರ್ಥ ಅಣ್ಣ. ಇದನ್ನು ಮೂಲತಃ ಅನೌಪಚಾರಿಕವಾಗಿ ಹಿರಿಯ ವ್ಯಕ್ತಿಯನ್ನು ಸ್ನೇಹಪರ ರೀತಿಯಲ್ಲಿ ಉಲ್ಲೇಖಿಸಲು ಬಳಸಲಾಗುತ್ತದೆ. ಮತ್ತೊಂದೆಡೆ, 'ಬಾಬು' ಎಂಬ ಪದವನ್ನು ಸಾಮಾನ್ಯವಾಗಿ ವೈದ್ಯರು, ವೃತ್ತಿಪರರು, ವಿದ್ಯಾವಂತ ಮತ್ತು ಗೌರವಾನ್ವಿತ ವ್ಯಕ್ತಿಗಳಿಗೆ ಪ್ರತ್ಯಯವಾಗಿ ಬಳಸಲಾಗುತ್ತದೆ.
ದಾದಾ ಎಂಬ ಕಲ್ಪನೆಯು ಆಧುನಿಕವಾಗಿದ್ದು, 20 ನೇ ಶತಮಾನದ ಆರಂಭದಲ್ಲಿ ಇದರ ಬಳಕೆ ಆರಂಭವಾಗಿದೆ. ದಾದಾ ಅಥವಾ ದಾದಾಯಿಸಂ ಬಂಡಾಯ ಚಳುವಳಿಯೊಂದಿಗೆ ಹೆಚ್ಚಾಗಿ ಸಂಬಂಧ ಹೊಂದುತ್ತದೆ ಎನ್ನುವುದು ಆ ಭಾಗದ ಜನರ ಅಭಿಪ್ರಾಯ.

ತಜ್ಞರ ಮಾತೇನು..?

ಬಂಕಿಮ ಚಂದ್ರ ಚಟರ್ಜಿ ಅವರಂತಹ ಮಹಾನ್ ವ್ಯಕ್ತಿಗಳು ಮತ್ತು ಸಾಂಸ್ಕೃತಿಕ ಪ್ರತಿಮೆಗಳನ್ನು ಬಂಗಾಳಿಗಳು ದ ಅಥವಾ ದಾದಾ ಎಂದು ಕರೆಯುವುದನ್ನು ಇಷ್ಟಪಡುವುದಿಲ್ಲ ಎಂದು ಭಾಷಾಶಾಸ್ತ್ರಜ್ಞ, ವಿದ್ವಾಂಸ ಪಬಿತ್ರ ಸರ್ಕಾರ್ ಅಭಿಪ್ರಾಯಪಟ್ಟಿದ್ದಾರೆ. ಈ ರೀತಿಯ ಆತ್ಮೀಯತೆ ಅಗೌರವದಿಂದ ಕೂಡಿದ್ದು, ಬಂಕಿಮ್ ಚಂದ್ರ ಅವರೇ ಆಗಿರಲಿ, ವಿದ್ಯಾಸಾಗರ್ ಅವರೇ ಆಗಿರಲಿ ಅಥವಾ ರವೀಂದ್ರನಾಥ್ ಠ್ಯಾಗೂರ್​ ಆಗಿರಲಿ, ನಾವು ಸಾಮಾನ್ಯವಾಗಿ ಅವರನ್ನು ಹೆಸರಿನಿಂದ ಮಾತ್ರ ಉಲ್ಲೇಖಿಸುತ್ತೇವೆ ಎಂದು ಹೇಳಿದ್ದಾರೆ.
ದಾದಾ ಎನ್ನುವುದು ಹಿರಿಯ ಮತ್ತು ಆತ್ಮೀಯ ವ್ಯಕ್ತಿಯನ್ನು ಸೂಚಿಸಲು ಬಳಸುತ್ತದೆ, ಪ್ರತಿಯೊಂದು ಸಂಸ್ಕೃತಿಯೂ ವಿಭಿನ್ನವಾಗಿರುತ್ತವೆ. ಶಾಂತಿನಿಕೇತನದಲ್ಲಿ, ಕೆಲವರು ಶಿಕ್ಷಕರನ್ನು ದಾದಾ ಅಂತಲೇ ಕರೆಯುತ್ತಾರೆ. ಆದರೆ ಮಹಾನ್ ವ್ಯಕ್ತಿಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ದಾದಾ ಎಂದು ಕರೆಯುವುದು ಅಗೌರವ ಎಂದರು.

ದಾದಾ ಮತ್ತು ಬಾಬು ಸಂಸ್ಕೃತಿ...

ಬುರ್ದ್ವಾನ್ ವಿಶ್ವವಿದ್ಯಾಲಯದ ಬಂಗಾಳಿ ಪ್ರಾಧ್ಯಾಪಕಿ ಸಂಗೀತಾ ಸನ್ಯಾಲ್ ಕೂಡ ಪ್ರತಿಕ್ರಿಯೆ ನೀಡಿದ್ದು, ಸಮಕಾಲೀನ ದಾದಾ ಸಂಸ್ಕೃತಿಯನ್ನು 19 ನೇ ಶತಮಾನದ ಬಾಬು ಸಂಸ್ಕೃತಿಯೊಂದಿಗೆ ಬೆರೆಸಲು ಸಾಧ್ಯವಿಲ್ಲ ಎಂದಿದ್ದಾರೆ. ಇಂದು ದಾದಾ ಸಂಸ್ಕೃತಿ ಹೆಚ್ಚಾಗಿ ಕಂಡು ಬರುತ್ತದೆ, 19 ನೇ ಶತಮಾನದಲ್ಲಿ, ಬಾಬು ಸಂಸ್ಕೃತಿಯು ಬಂಗಾಳದಲ್ಲಿ ಒಂದು ವಿಶಿಷ್ಟ ಸಾಂಸ್ಕೃತಿಕ ವಿದ್ಯಮಾನವಾಗಿ ಹೊರಹೊಮ್ಮಿತು. ಆದರೆ ಮಹಾನ್ ವ್ಯಕ್ತಿಗಳನ್ನು ಉದ್ದೇಶಿಸಿ ಮಾತನಾಡುವಾಗ, ಇವುಗಳನ್ನು ಬೆರೆಸಲಾಗುವುದಿಲ್ಲ ಎಂದರು.
ದಾದಾ ಎಂಬುದು ಆಡುಮಾತಿನ ಪದವಾಗಿದ್ದು, ನೆರೆಹೊರೆಯವರನ್ನು ಅನೌಪಚಾರಿಕವಾಗಿ ಸಂಬೋಧಿಸಲು ಬಳಸಲಾಗುತ್ತದೆ. ವಯಸ್ಸಾದವರಿಗೆ ಮತ್ತು ಗೌರವಾನ್ವಿತ ವ್ಯಕ್ತಿಗಳಿಗೆ ನಾವು ದಾದಾ ಎಂದು ಕರೆಯುವುದಿಲ್ಲ. ಕೆಲವು ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರನ್ನು ದಾದಾ ಎಂದು ಸಂಬೋಧಿಸುವುದನ್ನು ನಾನು ನೋಡಿದ್ದೇನೆ, ಅದು ನನಗೆ ಇಷ್ಟವಿಲ್ಲ ಎಂದು ಸನ್ಯಾಲ್ ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಈ ವಿವಾದ ವ್ಯಾಪಿಸಲಿದ್ದು, ಟಿಎಂಸಿ ಇದನ್ನು ತನ್ನ ಪರವಾದ ಅಲೆಗಾಗಿ, ಬಂಗಾಳಿ ಸಂಸ್ಕೃತಿಯ ಮೇಲಿನ ದಾಳಿ ಎಂದು ಬಿಂಬಿಸಲು ಪ್ರಯತ್ನಿಸುತ್ತಿದೆ. 2021 ರ ಚುನಾವಣೆ ಸಮಯದಲ್ಲಿ ಸಚಿವ ಅಮಿತ್ ಷಾ ನೇತೃತ್ವದ ಕಾರ್ಯಕ್ರಮವೊಂದರಲ್ಲಿ ವಿದ್ಯಾಸಾಗರ್ ಪ್ರತಿಮೆಯನ್ನು ಧ್ವಂಸಗೊಳಿಸಿದ ಘಟನೆ ನಡೆದಾಗ, ಇದನ್ನು ಮಮತಾ ಸಮರ್ಪಕವಾಗಿ ಬಳಸಿಕೊಂಡರು ಎಂದು ವರದಿಯಾಗಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net