ದೆಹಲಿ ರಾಷ್ಟ್ರದ ಶಕ್ತಿಯ ಸಂಕೇತ...ಯಮುನಾ ನದಿ ಮಾಲಿನ್ಯಕ್ಕೆ ಆಪ್ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದ ಪ್ರಧಾನಿ ಮೋದಿ | Narendra Modi

Narendra Modi | ಪ್ರಧಾನಿ ನರೇಂದ್ರ ಮೋದಿ
Narendra Modi | ಪ್ರಧಾನಿ ನರೇಂದ್ರ ಮೋದಿ
Published on

ಪ್ರಮುಖ ಮುಖ್ಯಾಂಶಗಳು

  • ದೆಹಲಿಯ ಅಭಿವೃದ್ಧಿ ರಾಷ್ಟ್ರೀಯ ಹೆಮ್ಮೆ
  • ಎಎಪಿ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ಟೀಕಾಪ್ರಹಾರ
  • .ಯಮುನಾ ನದಿ ಮಾಲಿನ್ಯಕ್ಕೆ ಆಪ್ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದ ನಮೋ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ರಾಷ್ಟ್ರ ರಾಜಧಾನಿಯಲ್ಲಿ 33,500 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ್ದು, ಇದರಲ್ಲಿ ಸುಮಾರು 18,300 ಕೋಟಿ ರೂ. ಮೆಟ್ರೋ ವಿಸ್ತರಣೆಗೆ ಮೀಸಲಿಟ್ಟಿದ್ದಾರೆ.
ಅಂತರರಾಷ್ಟ್ರೀಯ ಮಹಿಳಾ ದಿನದಂದು ಮಾತನಾಡಿದ ಪ್ರಧಾನಿ ಮೋದಿ, ಸಿಎಂ ರೇಖಾ ಗುಪ್ತಾರ ನಾಯಕತ್ವವನ್ನು ಶ್ಲಾಘಿಸುತ್ತಾ, ರಾಜಕೀಯ, ಆಡಳಿತ, ವಿಜ್ಞಾನ, ಕ್ರೀಡೆ ಮತ್ತು ಸಾಮಾಜಿಕ ಸೇವೆಯಲ್ಲಿ ಭಾರತದ ಮಹಿಳಾ ಶಕ್ತಿಗೆ ಗೌರವ ಸಲ್ಲಿಸಿದರು.

ಎಎಪಿ ಸರ್ಕಾರದ ವಿರುದ್ಧ ಟೀಕಾಪ್ರಹಾರ

ಕಳೆದ ಹತ್ತು ವರ್ಷದ ಆಪ್​ ಸರ್ಕಾರದ ಆಡಳಿತ ವೈಖರಿಯಲ್ಲಿ ಟೀಕಿಸಿದ ಪ್ರಧಾನಿ ಮೋದಿ, ರಾಜ್ಯದ ಅಭಿವೃದ್ಧಿ ಕುಂಠಿತವಾಗಲು, ರಾಜಕೀಯ ಕಾರಣಗಳಿಗಾಗಿ ಮೆಟ್ರೋ ಹಂತ-IV ಅನ್ನು ವಿಳಂಬ ಮಾಡಲಾಯಿತು, ಆಪ್​ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆಯನ್ನು ನಿರ್ಲಕ್ಷಿಸುವ ಮೂಲಕ ಬಡವರು ತೊಂದರೆಗೆ ಸಿಲುಕುವಂತೆ ಮಾಡಿದೆ ಎಂದು ಆರೋಪಿಸಿದರು.
ಯಮುನಾ ನದಿಯ ಮಾಲಿನ್ಯ ನಿಯಂತ್ರಣ ಮತ್ತು ಶುದ್ಧೀಕರಣದ ವಿಷಯದಲ್ಲಿ ಹಿಂದಿನ ಆಮ್ ಆದ್ಮಿ ಪಕ್ಷದ ಸರ್ಕಾರದ ವೈಫಲ್ಯವನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಟೀಕಿಸಿದ್ದಾರೆ. ಕೇಂದ್ರ ಸರ್ಕಾರದ ಸತತ ಮನವಿ ಹಾಗೂ ಎಚ್ಚರಿಕೆಗಳ ಹೊರತಾಗಿಯೂ, ದೆಹಲಿ ಸರ್ಕಾರವು ನದಿ ಸ್ವಚ್ಛಗೊಳಿಸುವಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.
ಕೇಂದ್ರದ ಸರ್ಕಾರದ ಮಿಷನ್ ಮೋಡ್ ಕಾರ್ಯವೈಖರಿಯನ್ನು ಎಎಪಿ ಆಡಳಿತಕ್ಕೆ ಹೋಲಿಸಿದ ಪ್ರಧಾನಿ, ದೆಹಲಿಯ ಸಂಚಾರ ದಟ್ಟಣೆ ಮತ್ತು ನದಿಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಪೆರಿಫೆರಲ್ ಎಕ್ಸ್‌ಪ್ರೆಸ್‌ವೇ ನಿರ್ಮಿಸಿ ಸಾರಿಗೆ ವ್ಯವಸ್ಥೆಯನ್ನು ಸುಗಮಗೊಳಿಸಲಾಗಿದೆ. ನೆನೆಗುದಿಗೆ ಬಿದ್ದಿದ್ದ ಯಮುನಾ ನದಿ ಶುದ್ಧೀಕರಣದ ಪ್ರಮುಖ ಯೋಜನೆಗಳನ್ನು ಕೇಂದ್ರವು ಆದ್ಯತೆಯ ಮೇಲೆ ಕೈಗೆತ್ತಿಕೊಂಡಿದೆ ಎಂದರು.
ಕೇವಲ ಮೂಲಸೌಕರ್ಯ ಮಾತ್ರವಲ್ಲದೆ, ಕಳೆದ ವರ್ಷವೇ ದೆಹಲಿಯಾದ್ಯಂತ ಹಲವಾರು ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು ಸ್ಥಾಪಿಸುವ ಮೂಲಕ ಜನಸಾಮಾನ್ಯರ ಆರೋಗ್ಯಕ್ಕೆ ಒತ್ತು ನೀಡಲಾಗಿದೆ ಎಂದು ಹೇಳಿದರು.

ಮಹಿಳಾ ಸಬಲೀಕರಣದ ಮೈಲಿಗಲ್ಲು

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ದೇಶದ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ನಾರಿ ಶಕ್ತಿಯ ಅಭೂತಪೂರ್ವ ಯಶಸ್ಸನ್ನು ಶ್ಲಾಘಿಸಿದರು. ದೇಶಾದ್ಯಂತ ಮೂರು ಕೋಟಿ ಸಹೋದರಿಯರನ್ನು ಲಖ್ಪತಿ ದೀದಿಯನ್ನಾಗಿ ರೂಪಿಸುವ ಮತ್ತು ಅವರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಪ್ರತಿಜ್ಞೆ ಮಾಡಿದರು.
ಹಿಂದೆ ಈ ಯೋಜನೆಗಳ ಕುರಿತು ವಿರೋಧ ಪಕ್ಷಗಳು ಮತ್ತು ಟೀಕಾಕಾರರು ಸಾಮಾಜಿಕ ಮಾಧ್ಯಮಗಳಲ್ಲಿ ಅಪಹಾಸ್ಯ ಮಾಡಿದ್ದನ್ನು ಪ್ರಧಾನಿ ನೆನಪಿಸಿಕೊಂಡಿದ್ದು, ಟೀಕೆಗಳ ನಡುವೆಯೂ ಇಂದು ಲಕ್ಷಾಂತರ ಮಹಿಳೆಯರು ಸಾಧಿಸಿ ತೋರಿಸಿದ್ದಾರೆ. ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ ಅಪಾರವಾದ ಸಾಮರ್ಥ್ಯವಿದೆ. ಅವರಿಗೆ ಸರಿಯಾದ ಅವಕಾಶಗಳನ್ನು ನೀಡಿದರೆ, ಅವರು ಎಲ್ಲಾ ಮಿತಿಗಳನ್ನು ಮೀರಿ ಬೆಳೆಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೆಹಲಿಯ ಅಭಿವೃದ್ಧಿ ರಾಷ್ಟ್ರೀಯ ಹೆಮ್ಮೆ

ದೆಹಲಿ ಕೇವಲ ಭಾರತದ ರಾಜಧಾನಿಯಲ್ಲ, ಅದು ರಾಷ್ಟ್ರದ ಹೆಮ್ಮೆಯ ಗುರುತು ಮತ್ತು ಭಾರತದ ಬೆಳೆಯುತ್ತಿರುವ ಶಕ್ತಿಯ ಸಂಕೇತವಾಗಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದು, ಆಧುನಿಕ ಮತ್ತು ಸಂಪರ್ಕಿತ ದೆಹಲಿಯು ಜಾಗತಿಕ ವೇದಿಕೆಯಲ್ಲಿ ಭಾರತದ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಎಂದರು.
ಕಳೆದ ದಶಕದ ಆಡಳಿತ ವೈಖರಿಗಿಂತ ಭಿನ್ನವಾಗಿ, ಬಿಜೆಪಿಯ ಮುಂಬರುವ ಆಡಳಿತದಲ್ಲಿ ದೆಹಲಿಯ ಸರ್ವತೋಮುಖ ಪ್ರಗತಿಯು ಹೊಸ ವೇಗವನ್ನು ಪಡೆದುಕೊಳ್ಳಲಿದೆ, ನಗರ ನವೀಕರಣ ಯೋಜನೆಗಳನ್ನು ವಿಶ್ವದರ್ಜೆಯ ರಾಜಧಾನಿಯ ದೃಷ್ಟಿಕೋನಕ್ಕೆ ಜೋಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net