ಭಾರತೀಯರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ..ಸಂಘರ್ಷಕ್ಕಿಂತ ಸಂವಾದ ಮುಖ್ಯ ಎಂದ ಪ್ರಧಾನಿ ಮೋದಿ | Narendra Modi

Narendra Modi | ಪ್ರಧಾನಿ ನರೇಂದ್ರ ಮೋದಿ
Narendra Modi | ಪ್ರಧಾನಿ ನರೇಂದ್ರ ಮೋದಿ
Published on
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷವು ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಮಂಗಳವಾರ ರಾಜ್ಯಸಭೆಯನ್ನು ಉದ್ದೇಶಿಸಿ ಮಾತನಾಡಿ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಿದರು.
ಪ್ರಸ್ತುತ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಆತಂಕಕಾರಿ ಎಂದು ಕರೆದ ಪ್ರಧಾನಿ ಮೋದಿ, ಈ ಯುದ್ಧವು ಕೇವಲ ಆ ಪ್ರದೇಶಕ್ಕೆ ಸೀಮಿತವಾಗಿರದೆ ಜಾಗತಿಕ ವ್ಯಾಪಾರ ಮಾರ್ಗಗಳ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದಿದ್ದು, ಇಂಧನ ಬಿಕ್ಕಟ್ಟು ಮತ್ತು ದೇಶದ ಜನರ ಸುರಕ್ಷತೆಗಾಗಿ ಸರ್ಕಾರ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸದನಕ್ಕೆ ಮಾಹಿತಿ ನೀಡಿದರು.

ವ್ಯಾಪಾರ ಮತ್ತು ಇಂಧನ ಪೂರೈಕೆಗೆ ಧಕ್ಕೆ

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವು ವಿಶ್ವಾದ್ಯಂತ ಪೆಟ್ರೋಲ್, ಡೀಸೆಲ್ ಮತ್ತು ಅನಿಲ ಪೂರೈಕೆಯ ಸರಪಳಿಯನ್ನು ಅಸ್ತವ್ಯಸ್ತಗೊಳಿಸಿದೆ ಎಂದಿರುವ ಪ್ರಧಾನಿ ಮೋದಿ, ಈ ಯುದ್ಧವು ಭಾರತದ ವ್ಯಾಪಾರ ಮಾರ್ಗಗಳ ಮೇಲೆ ನೇರ ಪರಿಣಾಮ ಬೀರಿದ್ದು, ರಸಗೊಬ್ಬರಗಳಂತಹ ಅಗತ್ಯ ವಸ್ತುಗಳ ನಿಯಮಿತ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ ಎಂದರು.
ಹಾರ್ಮುಜ್ ಜಲಸಂಧಿಯ ಮೂಲಕ ಹಡಗು ಸಂಚಾರ ಕಷ್ಟಕರವಾಗುತ್ತಿರುವುದನ್ನು ಉಲ್ಲೇಖಿಸಿರುವ ಪ್ರಧಾನಿ ಮೋದಿ, ಈ ಬಿಕ್ಕಟ್ಟಿನ ನಡುವೆಯೂ ದೇಶಕ್ಕೆ ತೈಲ ಮತ್ತು ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ತಿಳಿಸಿದರು.

ಭಾರತೀಯರ ಸುರಕ್ಷತೆಯ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು..?

ಗಲ್ಫ್ ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು ಒಂದು ಕೋಟಿ ಭಾರತೀಯರ ಜೀವನ ಮತ್ತು ಜೀವನೋಪಾಯದ ರಕ್ಷಣೆ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದಿರುವ ಪ್ರಧಾನಿ ಮೋದಿ, ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡಿರುವ ಹಡಗುಗಳಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯ ಸಿಬ್ಬಂದಿಗಳಿದ್ದು, ಅವರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಪರಿಸ್ಥಿತಿಯನ್ನು ನಿಯಂತ್ರಿಸಲು ಭಾರತವು ಅಮೆರಿಕ ಸೇರಿದಂತೆ ಯುದ್ಧ ಪೀಡಿತ ರಾಷ್ಟ್ರಗಳ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದಿದ್ದು, ಈಗಾಗಲೇ ಪಶ್ಚಿಮ ಏಷ್ಯಾದ ನಾಯಕರೊಂದಿಗೆ ಎರಡು ಸುತ್ತಿನ ಮಾತುಕತೆ ನಡೆಸಿರುವುದಾಗಿ ತಿಳಿಸಿದರು.

ಯುದ್ಧಕ್ಕಿಂತ ಮಾತುಕತೆಯೇ ಬೆಸ್ಟ್

ಯುದ್ಧವು ಜಾಗತಿಕ ಇಂಧನ ಬಿಕ್ಕಟ್ಟನ್ನು ಇನ್ನಷ್ಟು ತೀವ್ರಗೊಳಿಸುತ್ತಿರುವ ಈ ಸಂದರ್ಭದಲ್ಲಿ, ಎಲ್ಲಾ ದೇಶಗಳು ಸಂಘರ್ಷವನ್ನು ನಿಲ್ಲಿಸಿ ಉದ್ವಿಗ್ನತೆಯನ್ನು ಕಡಿಮೆ ಮಾಡುವತ್ತ ಕೆಲಸ ಮಾಡಬೇಕು ಎನ್ನುವುದು ಭಾರತದ ನಿಲುವಾಗಿದ್ದು, ಇಂತಹ ಕಠಿಣ ಸನ್ನಿವೇಶದಲ್ಲಿ ರಾಜ್ಯಸಭೆಯು ಶಾಂತಿ ಮತ್ತು ಸಂವಾದದ ಪರವಾಗಿ ಒಗ್ಗಟ್ಟಿನ ಧ್ವನಿಯನ್ನು ಎತ್ತುವುದು ಅತ್ಯಗತ್ಯ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ ಮತ್ತು ಯುದ್ಧಕ್ಕಿಂತ ಮಾತುಕತೆಯ ಮೂಲಕವೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂಬುದು ಭಾರತದ ಬಯಕೆಯಾಗಿದೆ ಎಂದು ಪುನರುಚ್ಚರಿಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net