ನಿಮ್ಮ ಆಗಮನಕ್ಕಾಗಿ ಎದುರು ನೋಡುತ್ತಿದ್ದೇವೆ ಎಂದ ಉಜ್ಬೆಕ್ ವಿದ್ಯಾರ್ಥಿಗಳು!...ಪ್ರೀತಿಯ ಆಹ್ವಾನದ ವಿಡಿಯೋ ಹಂಚಿಕೊಂಡ ನಮೋ | PM Modi Uzbekistan Visit

PM Modi Uzbekistan Visit | ನಿಮ್ಮ ಆಗಮನಕ್ಕಾಗಿ ಎದುರು ನೋಡುತ್ತಿದ್ದೇವೆ ಎಂದ ಉಜ್ಬೆಕ್ ವಿದ್ಯಾರ್ಥಿಗಳು!
PM Modi Uzbekistan Visit | ನಿಮ್ಮ ಆಗಮನಕ್ಕಾಗಿ ಎದುರು ನೋಡುತ್ತಿದ್ದೇವೆ ಎಂದ ಉಜ್ಬೆಕ್ ವಿದ್ಯಾರ್ಥಿಗಳು!
Published on

ಉಜ್ಬೆಕಿಸ್ತಾನ್‌ಗೆ ಅಧಿಕೃತ ಭೇಟಿ ನೀಡಲು ತೆರಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಉಜ್ಬೆಕ್‌ನ ಯುವ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋಗೆ ಸಂತಸ ವ್ಯಕ್ತಪಡಿಸಿದ್ದಾರೆ. ಹಿಂದಿ ಭಾಷೆಯಲ್ಲಿ ಅತ್ಯಂತ ಸ್ಪಷ್ಟವಾಗಿ ಹಾಗೂ ಉತ್ಸಾಹದಿಂದ ಮಾತನಾಡಿರುವ ಮಕ್ಕಳ ಈ ವಿಡಿಯೋವನ್ನು ಪ್ರಧಾನಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಕುರಿತು ಬರೆದುಕೊಂಡಿರುವ ಪ್ರಧಾನಿ ಮೋದಿ, ಉಜ್ಬೆಕ್ ಮಕ್ಕಳ ಈ ಪ್ರೀತಿಯ ನಡೆ ಭಾರತ ಮತ್ತು ಉಜ್ಬೆಕಿಸ್ತಾನ್ ನಡುವಿನ ಆಳವಾದ ಸಾಂಸ್ಕೃತಿಕ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದ್ದಾರೆ. ತಮ್ಮ ಉಜ್ಬೆಕಿಸ್ತಾನ್ ಪ್ರವಾಸ ಆರಂಭಿಸುವ ಮೊದಲು ಈ ವಿಡಿಯೋ ನೋಡಿ ಸಂತೋಷವಾಯಿತು ಎಂದು ಹೇಳಿರುವ ಅವರು, ವಿದ್ಯಾರ್ಥಿಗಳು ಹಿಂದಿಯಲ್ಲಿ ಇಷ್ಟೊಂದು ಚೆನ್ನಾಗಿ ಪ್ರೀತಿ ವ್ಯಕ್ತಪಡಿಸಿರುವುದು ನಿಜಕ್ಕೂ ವಿಶೇಷವಾಗಿದೆ ಎಂದು ಹೇಳಿದ್ದಾರೆ.

ಭಾರತೀಯ ಸಂಸ್ಕೃತಿಯಿಂದ ಪ್ರಭಾವಿತರಾಗಿದ್ದೇವೆ ಎಂದ ಮಕ್ಕಳು!...

ಆ ವಿಡಿಯೋದಲ್ಲಿ ಹಲವು ಉಜ್ಬೆಕ್ ವಿದ್ಯಾರ್ಥಿಗಳು ಪ್ರಧಾನಿಯವರನ್ನು ತಮ್ಮ ದೇಶಕ್ಕೆ ಸ್ವಾಗತಿಸಿದ್ದು, ಭಾರತೀಯ ಸಂಸ್ಕೃತಿಯ ಮೇಲಿನ ತಮ್ಮ ಒಲವನ್ನು ಹಂಚಿಕೊಂಡಿದ್ದಾರೆ. ತಶ್ಕೆಂಟ್‌ನಿಂದ ನಮಸ್ತೆ ಎಂದು ಹೇಳಿದ ವಿದ್ಯಾರ್ಥಿಗಳು, ತಾವು ಹಿಂದಿ ಭಾಷೆಯನ್ನು ಕಲಿಯುತ್ತಿದ್ದು ಭಾರತೀಯ ಸಂಸ್ಕೃತಿಯಿಂದ ಪ್ರಭಾವಿತರಾಗಿದ್ದೇವೆ ಎಂದು ತಿಳಿಸಿದ್ದಾರೆ. ಭಾರತ ಮತ್ತು ಉಜ್ಬೆಕಿಸ್ತಾನ್ ನಡುವಿನ ಸ್ನೇಹ ತಮಗೆ ಅತ್ಯಂತ ವಿಶೇಷವಾದುದು ಎಂದಿರುವ ಅವರು, ಪ್ರಧಾನಿ ಮೋದಿಯವರ ಆಗಮನಕ್ಕಾಗಿ ಕಾತರದಿಂದ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.
ಮಧ್ಯ ಏಷ್ಯಾದ ರಾಷ್ಟ್ರಗಳೊಂದಿಗೆ ಭಾರತದ ಬಾಂಧವ್ಯವನ್ನು ಬಲಪಡಿಸುವ ಉದ್ದೇಶದಿಂದ ಪ್ರಧಾನಿ ಮೋದಿ ಉಜ್ಬೆಕಿಸ್ತಾನ್ ಮತ್ತು ಕಿರಗಿಜ್‌ಸ್ತಾನ್ ಭೇಟಿಯನ್ನು ಆರಂಭಿಸಿದ್ದಾರೆ. ಅಧ್ಯಕ್ಷ ಶವ್ಕತ್ ಮಿರ್ಜಿಯೋಯೆವ್ ಅವರ ಆಹ್ವಾನದ ಮೇರೆಗೆ ಮೊದಲ ಹಂತವಾಗಿ ತಾಶ್ಕೆಂಟ್‌ಗೆ ಭೇಟಿ ನೀಡುತ್ತಿರುವ ಅವರು, ವ್ಯಾಪಾರ, ಹೂಡಿಕೆ, ಡಿಜಿಟಲ್ ಸಂಪರ್ಕ, ರಕ್ಷಣೆ ಹಾಗೂ ಇಂಧನ ಕ್ಷೇತ್ರದಲ್ಲಿ ಸಹಕಾರವನ್ನು ಹೆಚ್ಚಿಸುವ ಕುರಿತು ಚರ್ಚಿಸಲಿದ್ದಾರೆ.
ತಮ್ಮ ಪ್ರವಾಸದ ಅವಧಿಯಲ್ಲಿ ಪ್ರಧಾನಿಯವರು ತಶ್ಕೆಂಟ್‌ನಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಸ್ಮಾರಕ ಹಾಗೂ ಮಹಾತ್ಮ ಗಾಂಧಿ ಕೇಂದ್ರಕ್ಕೂ ಭೇಟಿ ನೀಡಲಿದ್ದಾರೆ. ಇದು ಪ್ರಧಾನಿ ಮೋದಿಯವರ ನಾಲ್ಕನೇ ಉಜ್ಬೆಕಿಸ್ತಾನ್ ಪ್ರವಾಸವಾಗಿದ್ದು, ಈ ಭೇಟಿಯ ನಂತರ ಅವರು 26ನೇ ಎಸ್‌ಸಿಒ (SCO) ಶೃಂಗಸಭೆಯಲ್ಲಿ ಭಾಗವಹಿಸಲು ಕಿರಗಿಜ್‌ಸ್ತಾನ್ ದೇಶಕ್ಕೆ ಪ್ರಯಾಣಿಸಲಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net