ಅಮೆರಿಕ-ಇರಾನ್ ಐತಿಹಾಸಿಕ ಒಪ್ಪಂದಕ್ಕೆ ಪ್ರಧಾನಿ ಮೋದಿ ಶ್ಲಾಘನೆ: ಜಾಗತಿಕ ಶಾಂತಿ ಹಾಗೂ ಆರ್ಥಿಕ ಸ್ಥಿರತೆಗೆ ಸಹಕಾರಿ ಎಂದ ನಮೋ!PM Modi

ಅಮೆರಿಕ-ಇರಾನ್ ಐತಿಹಾಸಿಕ ಒಪ್ಪಂದಕ್ಕೆ ಪ್ರಧಾನಿ ಮೋದಿ ಶ್ಲಾಘನೆ: ಜಾಗತಿಕ ಶಾಂತಿ ಹಾಗೂ ಆರ್ಥಿಕ ಸ್ಥಿರತೆಗೆ ಸಹಕಾರಿ ಎಂದ ನಮೋ!
ಅಮೆರಿಕ-ಇರಾನ್ ಐತಿಹಾಸಿಕ ಒಪ್ಪಂದಕ್ಕೆ ಪ್ರಧಾನಿ ಮೋದಿ ಶ್ಲಾಘನೆ: ಜಾಗತಿಕ ಶಾಂತಿ ಹಾಗೂ ಆರ್ಥಿಕ ಸ್ಥಿರತೆಗೆ ಸಹಕಾರಿ ಎಂದ ನಮೋ!
Published on
ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿರುವ ಐತಿಹಾಸಿಕ ಶಾಂತಿ ಒಪ್ಪಂದವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ(PM Modi) ಅವರು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿದ್ದ ಯುದ್ಧಕ್ಕೆ ಪೂರ್ಣವಿರಾಮ ಇಡಲು ಉಭಯ ದೇಶಗಳು ತೆಗೆದುಕೊಂಡಿರುವ ಈ ನಿರ್ಧಾರವು ಜಾಗತಿಕ ವಾಣಿಜ್ಯ ಮಾರ್ಗಗಳ ಸುರಕ್ಷತೆಗೆ ಹಾಗೂ ಪ್ರಾದೇಶಿಕ ಶಾಂತಿಗೆ ಹೊಸ ಮುನ್ನುಡಿ ಬರೆಯಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸೋಮವಾರ Xನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ, ಈ ಸಂಘರ್ಷದಿಂದ ಜಗತ್ತಿನಾದ್ಯಂತ ಉಂಟಾಗಿದ್ದ ಆರ್ಥಿಕ ಬಿಕ್ಕಟ್ಟು ಹಾಗೂ ಅಮಾಯಕ ಜನರ ಪ್ರಾಣಹಾನಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಸದ್ಯದ ಒಪ್ಪಂದವು ಜಾಗತಿಕ ಮಾರುಕಟ್ಟೆಗೆ ದೊಡ್ಡ ಆಶಾಕಿರಣವಾಗಿದೆ ಎಂದಿದ್ದಾರೆ.

ಜಾಗತಿಕ ಆರ್ಥಿಕತೆಗೆ ಎದುರಾಗಿದ್ದ ಕಂಟಕ ನಿವಾರಣೆ: ಪ್ರಧಾನಿ ಮೋದಿ

ಅಮೆರಿಕ-ಇರಾನ್ ರಾಜತಾಂತ್ರಿಕ ಯಶಸ್ಸನ್ನು ಸ್ವಾಗತಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಬರೆದಿರುವ ಪ್ರಮುಖ ಅಂಶಗಳು ಹೀಗಿವೆ.
ಪಶ್ಚಿಮ ಏಷ್ಯಾದಲ್ಲಿ ತಿಂಗಳುಗಳಿಂದ ನಡೆಯುತ್ತಿದ್ದ ಭೀಕರ ಸಂಘರ್ಷವನ್ನು ಕೊನೆಗಾಣಿಸಲು ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿರುವ ಪ್ರಾಥಮಿಕ ಒಪ್ಪಂದವನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಈ ಯುದ್ಧವು ಜಗತ್ತಿನಾದ್ಯಂತ ತೀವ್ರ ಆರ್ಥಿಕ ಸಂಕಷ್ಟವನ್ನು ಸೃಷ್ಟಿಸಿತ್ತು ಮತ್ತು ಹಲವು ದೇಶಗಳಲ್ಲಿ ಭಾರಿ ಪ್ರಾಣಹಾನಿಗೆ ಕಾರಣವಾಗಿತ್ತು. ಈ ಒಪ್ಪಂದದ ಯಶಸ್ವಿ ಅನುಷ್ಠಾನವು ಈ ವಲಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಮರುಸ್ಥಾಪಿಸಲು ಸಹಾಯ ಮಾಡುತ್ತದೆ ಎಂದು ಭಾರತ ಆಶಿಸುತ್ತದೆ ಎಂದು ಹೇಳಿದ್ದಾರೆ.
ವಿಶ್ವದ ಅತ್ಯಂತ ಪ್ರಮುಖ ಸಮುದ್ರ ವಾಣಿಜ್ಯ ಮಾರ್ಗಗಳಲ್ಲಿ ಒಂದಾದ ಹೊರ್ಮುಜ್ ಜಲಸಂಧಿಯ ಸುರಕ್ಷತೆಯನ್ನು ಒತ್ತಿಹೇಳಿರುವ ಪ್ರಧಾನಿ, ಅಂತಾರಾಷ್ಟ್ರೀಯ ಹಡಗು ಸಂಚಾರದ ಸ್ವಾತಂತ್ರ್ಯ ಮತ್ತು ಮುಕ್ತ ವಾಣಿಜ್ಯವನ್ನು ರಕ್ಷಿಸುವುದು ಇಂದಿನ ಅತ್ಯಗತ್ಯವಾಗಿದೆ. ಬಾಕಿ ಉಳಿದಿರುವ ಇತರ ಜಟಿಲ ಸಮಸ್ಯೆಗಳೂ ಸಹ ಮುಂಬರುವ ಮಾತುಕತೆಗಳ ಮೂಲಕ ಶಾಶ್ವತವಾಗಿ ಬಗೆಹರಿಯಲಿವೆ ಎಂಬ ನಂಬಿಕೆ ನಮಗಿದೆ ಎಂದು ಪ್ರಧಾನಿ ಮೋದಿ ಆಶಯ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ಮಧ್ಯಸ್ಥಿಕೆ; ಜೂನ್ 19 ಕ್ಕೆ ಜಿನೀವಾದಲ್ಲಿ ಅಧಿಕೃತ ಸಹಿ

ಫೆಬ್ರವರಿಯಲ್ಲಿ ಇರಾನ್ ಮೇಲಿನ ಜಂಟಿ ದಾಳಿಯ ನಂತರ ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದಿದ್ದ ಯುದ್ಧವನ್ನು ಕೊನೆಗಾಣಿಸಲು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ನಡೆಸಿದ ಮಧ್ಯಸ್ಥಿಕೆ ಯಶಸ್ವಿಯಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ತಮ್ಮ ಟ್ರುತ್ ಸೋಷಿಯಲ್​ಯಲ್ಲಿ, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಜೊತೆಗಿನ ಒಪ್ಪಂದ ಈಗ ಸಂಪೂರ್ಣ ಮುಕ್ತಾಯಗೊಂಡಿದೆ ಎಂದು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಪ್ರಸಿದ್ಧ ಸುದ್ದಿ ಸಂಸ್ಥೆ 'ರಾಯಿಟರ್ಸ್' ವರದಿಯ ಪ್ರಕಾರ, ಬರುವ ಜೂನ್ 19ರ ಶುಕ್ರವಾರದಂದು ಸ್ವಿಟ್ಜರ್ಲೆಂಡ್‌ನಲ್ಲಿ ಈ ಐತಿಹಾಸಿಕ ತಿಳಿವಳಿಕೆ ಪತ್ರಕ್ಕೆ ಅಧಿಕೃತವಾಗಿ ಉಭಯ ದೇಶಗಳು ಸಹಿ ಹಾಕಲಿವೆ. ಈ ಒಪ್ಪಂದದ ಅನ್ವಯ ಲೆಬನಾನ್ ಸೇರಿದಂತೆ ಎಲ್ಲಾ ರಂಗಗಳಲ್ಲೂ ಸೋಮವಾರ ರಾತ್ರಿಯಿಂದಲೇ ಮಿಲಿಟರಿ ಕಾರ್ಯಾಚರಣೆಗಳನ್ನು ಶಾಶ್ವತವಾಗಿ ನಿಲ್ಲಿಸಲು ಇರಾನ್‌ನ ಉನ್ನತ ಭದ್ರತಾ ಮಂಡಳಿ ಸಮ್ಮತಿಸಿದೆ.

60 ದಿನಗಳ ಗಡುವು; ಜಾಗತಿಕ ಮಾರುಕಟ್ಟೆಯಲ್ಲಿ ಹರ್ಷದ ವಾತಾವರಣ

ಇರಾನ್‌ನ ಉಪ ವಿದೇಶಾಂಗ ಸಚಿವ ಕಾಜೆಮ್ ಘರೀಬಾಬಾದಿ ತಿಳಿಸಿರುವಂತೆ, ಸದ್ಯ ಜಾರಿಗೆ ಬರಲಿರುವ 60 ದಿನಗಳ ಕದನ ವಿರಾಮದ ಅವಧಿಯಲ್ಲಿ ಇರಾನ್‌ನ ಪರಮಾಣು ಯೋಜನೆ ಮತ್ತು ಅಮೆರಿಕ ವಿಧಿಸಿರುವ ಆರ್ಥಿಕ ನಿರ್ಬಂಧಗಳ ತೆರವು ಕುರಿತು ದೀರ್ಘಾವಧಿಯ ಉನ್ನತ ಮಟ್ಟದ ಮಾತುಕತೆಗಳು ನಡೆಯಲಿವೆ.
ಇದೇ ವೇಳೆ, ಜಾಗತಿಕ ಮಾರುಕಟ್ಟೆಯು ಈ ಬೆಳವಣಿಗೆಗೆ ಅತ್ಯಂತ ಧನಾತ್ಮಕವಾಗಿ ಸ್ಪಂದಿಸಿದೆ. ಯುದ್ಧದ ಭೀತಿಯಿಂದ ತತ್ತರಿಸಿದ್ದ ಏಷ್ಯಾದ ಪ್ರಮುಖ ಶೇರು ಮಾರುಕಟ್ಟೆಗಳು ಸೋಮವಾರ ಬೆಳಗ್ಗಿನ ವಹಿವಾಟಿನಲ್ಲಿ ಭಾರಿ ಜಿಗಿತ ಕಂಡರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಗಣನೀಯವಾಗಿ ಕುಸಿತ ಕಂಡಿದೆ. ಕಚ್ಚಾ ತೈಲಕ್ಕಾಗಿ ವಿದೇಶಗಳ ಮೇಲೆಯೇ ಹೆಚ್ಚು ಅವಲಂಬಿತವಾಗಿರುವ ಭಾರತದಂತಹ ಬೃಹತ್ ಆರ್ಥಿಕತೆಗೆ ಈ ಬೆಳವಣಿಗೆಯಿಂದ ಭಾರಿ ಆರ್ಥಿಕ ನಿರಾಳತೆ ಸಿಕ್ಕಂತಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net