ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಸ್ಥಾನವಿಲ್ಲ...ಶ್ವೇತಭವನದ ಶೂಟೌಟ್ ಬೆನ್ನಲ್ಲೇ ಟ್ರಂಪ್ ಸುರಕ್ಷತೆಗೆ ಮೋದಿ ಶುಭ ಹಾರೈಕೆ! | Narendra Modi

Narendra Modi | ಪ್ರಧಾನಿ ನರೇಂದ್ರ ಮೋದಿ
Narendra Modi | ಪ್ರಧಾನಿ ನರೇಂದ್ರ ಮೋದಿ
Published on
ವಾಷಿಂಗ್ಟನ್: ಇಲ್ಲಿನ ಡಿಸಿ ಹೋಟೆಲ್‌ನಲ್ಲಿ ನಡೆದ ಶ್ವೇತಭವನದ ವಾರ್ಷಿಕ ಪತ್ರಿಕಾ ಔತಣಕೂಟದ ವೇಳೆ ಸಂಭವಿಸಿದ ಭೀಕರ ಗುಂಡಿನ ದಾಳಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿತ ಅನೇಕ ನಾಯಕರು ಪ್ರಾಣಾಪಾಯದಿಂದ ಪಾರಾಗಿದ್ದು, ಈ ಘಟನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, ಅಧ್ಯಕ್ಷ ಟ್ರಂಪ್ ಮತ್ತು ಅವರ ಕುಟುಂಬದವರು ಹಾನಿಗೊಳಗಾಗದೆ ಸುರಕ್ಷಿತವಾಗಿರುವುದು ತಿಳಿದು ಸಂತೋಷವಾಯಿತು ಎಂದು ಹೇಳಿದ್ದಾರಲ್ಲದೆ, ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಸ್ಥಾನವಿಲ್ಲ ಮತ್ತು ಇದನ್ನು ಪ್ರತಿಯೊಬ್ಬರು ಖಂಡಿಸಬೇಕು ಎಂದು ಬರೆದುಕೊಂಡಿದ್ದಾರೆ.

ಸದಾ ನೆನಪಿನಲ್ಲಿರುವ ಸಂಜೆ ಎಂದ ಟ್ರಂಪ್

ಘಟನೆಯ ಕುರಿತಂತೆ ತಮ್ಮ ಟ್ರೂತ್ ಸೋಶಿಯಲ್​​ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಟ್ರಂಪ್​, ಇದು ಅನೇಕ ವರ್ಷಗಳ ಕಾಲ ನೆನಪಿನಲ್ಲಿ ಉಳಿಯುವ ಸಂಜೆಯಾಗಿದ್ದು, ಪರಿಸ್ಥಿತಿಯನ್ನು ಅದ್ಭುತವಾಗಿ ನಿಭಾಯಿಸಿದ ಭದ್ರತಾ ಸಂಸ್ಥೆಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಗುಂಡು ಹಾರಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಕಾರ್ಯಕ್ರಮ ಮುಂದುವರಿಸಲು ನಾನು ಶಿಫಾರಸು ಮಾಡಿದ್ದೇನೆ, ಆದರೆ ಅಂತಿಮ ನಿರ್ಧಾರವನ್ನು ಕಾನೂನು ಜಾರಿ ಸಂಸ್ಥೆಗಳ ಮಾರ್ಗದರ್ಶನದಂತೆ ತೆಗೆದುಕೊಳ್ಳಲಾಗುವುದು. ಏನೇ ಆದರೂ ಈ ಸಂಜೆ ನಿಗದಿತ ಕಾರ್ಯಕ್ರಮಕ್ಕಿಂತ ಭಿನ್ನವಾಗಿರಲಿದೆ ಎಂದು ತಿಳಿಸಿದ್ದಾರೆ.
ವರದಿಗಳ ಪ್ರಕಾರ, ನಾಲ್ಕರಿಂದ ಐದು ಸುತ್ತು ಗುಂಡು ಹಾರಿಸಲಾಗಿದ್ದು, ಗುಂಡಿನ ಶಬ್ದ ಕೇಳುತ್ತಿದ್ದಂತೆ ಭದ್ರತಾ ಪಡೆಗಳು ಗನ್ ಶಾಟ್ ಎಂದು ಕೂಗುತ್ತಾ ಎಚ್ಚರಿಕೆ ನೀಡಿದವು, ಇದರಿಂದ ರಾಜಕಾರಣಿಗಳು, ಪತ್ರಕರ್ತರು ಮತ್ತು ಸೆಲೆಬ್ರಿಟಿಗಳು ಸೇರಿದ್ದ ಸಭಾಂಗಣದಲ್ಲಿ ಗೊಂದಲ ಸೃಷ್ಟಿಯಾಯಿತು. ಸಭಾಂಗಣದ ಹತ್ತಿರ ಗುಂಡಿನ ಸದ್ದು ಕೇಳಿದ ಕೂಡಲೇ ಪೊಲೀಸ್ ಅಧಿಕಾರಿಯೊಬ್ಬರು ನನ್ನನ್ನು ಕೆಳಕ್ಕೆ ತಳ್ಳಿ ರಕ್ಷಿಸಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಸಿಎನ್‌ಎನ್‌ಗೆ ತಿಳಿಸಿದ್ದಾರೆ.
ಒಬ್ಬ ವ್ಯಕ್ತಿ ಅನೇಕ ಶಸ್ತ್ರಾಸ್ತ್ರಗಳೊಂದಿಗೆ ಭದ್ರತಾ ತಪಾಸಣಾ ಕೇಂದ್ರದ ಮೇಲೆ ದಾಳಿ ಮಾಡಿದಾಗ, ಕೆಲವು ಧೈರ್ಯಶಾಲಿ ಅಧಿಕಾರಿಗಳು ತಕ್ಷಣವೇ ಆತನನ್ನು ಹೊಡೆದುರುಳಿಸಿದರು ಎಂದು ಟ್ರಂಪ್ ಹೇಳಿದರು. ಈ ಕಾರ್ಯಾಚರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶದಿಂದ ಘಟನೆಯ ವಿಡಿಯೋವನ್ನು ಬಹಿರಂಗಪಡಿಸಲು ಆದೇಶಿಸಿದ್ದಾರೆ. ಇದು ನಮ್ಮ ಸಂವಿಧಾನದ ಮೇಲೆ ನಡೆದ ಗೂಂಡಾಗಿರಿಯ ಹಿಂಸಾಚಾರವನ್ನು ತೋರಿಸುವುದಲ್ಲದೆ, ಕಾನೂನು ಜಾರಿ ಸಂಸ್ಥೆಗಳು ದೇಶದ ಪರವಾಗಿ ಎಷ್ಟು ವೇಗವಾಗಿ ಕಾರ್ಯನಿರ್ವಹಿಸಿದವು ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಬಣ್ಣಿಸಿದ್ದಾರೆ.

ಘಟನೆಯ ಹಿನ್ನಲೆ!..

ಭೋಜನಕೂಟ ನಡೆಯುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಗುಂಡಿನ ಸದ್ದು ಕೇಳಿಬಂದಿದ್ದರಿಂದ ಅಲ್ಲಿ ಸೇರಿದ್ದ ಅತಿಥಿಗಳು ಪ್ರಾಣಭಯದಿಂದ ಮೇಜುಗಳ ಕೆಳಗೆ ಅಡಗಿಕೊಳ್ಳಬೇಕಾಯಿತು ಎಂದು ಪ್ರತ್ಯಕ್ಷದರ್ಶಿಗಳು ಮತ್ತು ವರದಿಗಾರರನ್ನು ಉಲ್ಲೇಖಿಸಿ ಎಎಫ್‌ಪಿ ವರದಿ ಮಾಡಿದೆ.
ಟ್ರಂಪ್​ ಕುಳಿತಿದ್ದಾಗಲೇ ಭದ್ರತಾ ತಂಡಗಳು (Tactical teams) ವೇದಿಕೆಯನ್ನು ಆಕ್ರಮಿಸಿಕೊಂಡವು ಮತ್ತು ತಕ್ಷಣವೇ ಅವರನ್ನು ಹಾಗೂ ಇತರ ಪ್ರಮುಖ ನಾಯಕರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದವು. ಈ ಸಂದರ್ಭದಲ್ಲಿ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಸೇರಿದಂತೆ ಸುಮಾರು 2,600 ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net