ಕೃಷಿಯಲ್ಲಿ ಎಐ ಕ್ರಾಂತಿ, ಸೈಬರ್ ಕ್ರೈಮ್‌ಗೆ ಕೌಂಟರ್: ಪ್ರಗತಿ ಸಭೆಯಲ್ಲಿ ಪ್ರಧಾನಿ ಮೋದಿ ನೀಡಿದ ಮಹತ್ವದ ಸಂದೇಶಗಳು ಇಲ್ಲಿವೆ! | PRAGATI Meeting

PRAGATI Meeting |  ಪ್ರಗತಿ ಸಭೆಯಲ್ಲಿ ಪ್ರಧಾನಿ ಮೋದಿ ನೀಡಿದ ಮಹತ್ವದ ಸಂದೇಶಗಳು ಇಲ್ಲಿವೆ (ಸಂಗ್ರಹ ಚಿತ್ರ)
PRAGATI Meeting | ಪ್ರಗತಿ ಸಭೆಯಲ್ಲಿ ಪ್ರಧಾನಿ ಮೋದಿ ನೀಡಿದ ಮಹತ್ವದ ಸಂದೇಶಗಳು ಇಲ್ಲಿವೆ (ಸಂಗ್ರಹ ಚಿತ್ರ)
Published on

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಸೇವಾ ತೀರ್ಥದಲ್ಲಿ ಐಸಿಟಿ ಆಧಾರಿತ ಹಾಗೂ ಬಹುಮಾದರಿಯ ವೇದಿಕೆಯಾದ ಪ್ರಗತಿ (ಪ್ರೊ-ಆಕ್ಟಿವ್ ಗವರ್ನೆನ್ಸ್ ಅಂಡ್ ಟೈಮ್ಲಿ ಇಂಪ್ಲಿಮೆಂಟೇಷನ್) (PRAGATI Meeting) 53ನೇ ಸಭೆಯ ಅಧ್ಯಕ್ಷತೆ ವಹಿಸಿ ಪ್ರಮುಖ ಯೋಜನೆಗಳ ಪರಾಮರ್ಶೆ ನಡೆಸಿದರು.

ಸಭೆಯಲ್ಲಿ ರೈಲ್ವೆ, ರಸ್ತೆ ಮತ್ತು ವಿದ್ಯುತ್ ಕ್ಷೇತ್ರಕ್ಕೆ ಸಂಬಂಧಿಸಿದ ಒಟ್ಟು ಆರು ಪ್ರಮುಖ ಮೂಲಸೌಕರ್ಯ ಯೋಜನೆಗಳ ಪ್ರಗತಿಯನ್ನು ಪ್ರಧಾನಿಯವರು ಪರಿಶೀಲಿಸಿದರು. ಒಟ್ಟು 9 ರಾಜ್ಯಗಳಲ್ಲಿ ವಿಸ್ತರಿಸಿರುವ ಈ ಯೋಜನೆಗಳ ಅಂದಾಜು ವೆಚ್ಚ 30,000 ಕೋಟಿ ರೂಪಾಯಿಗಳಿಗಿಂತಲೂ ಅಧಿಕವಾಗಿದೆ. ಸಂಪರ್ಕ ವ್ಯವಸ್ಥೆ ಬಲಪಡಿಸುವುದು, ಕೈಗಾರಿಕಾ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಬೆಂಬಲ ನೀಡುವುದು ಮತ್ತು ಸಾರ್ವಜನಿಕ ಸೇವೆಗಳನ್ನು ಸುಧಾರಿಸುವುದು ಈ ಯೋಜನೆಗಳ ಪ್ರಮುಖ ಉದ್ದೇಶವಾಗಿದೆ. ಯೋಜನೆಗಳನ್ನು ನಿಗದಿತ ಸಮಯಕ್ಕೆ ಪೂರ್ಣಗೊಳಿಸುವುದು, ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸುವುದು, ಬಾಕಿ ಇರುವ ಸಮಸ್ಯೆಗಳನ್ನು ಬಗೆಹರಿಸುವುದು ಮತ್ತು ತ್ವರಿತವಾಗಿ ಕಾಮಗಾರಿ ಮುಗಿಸುವುದಕ್ಕೆ ಸಭೆಯಲ್ಲಿ ಹೆಚ್ಚಿನ ಒತ್ತು ನೀಡಲಾಯಿತು.

ಯೋಜನೆಗಳ ವಿಳಂಬ!

ಮೂಲಸೌಕರ್ಯ ಯೋಜನೆಗಳಲ್ಲಿ ವಿಳಂಬವಾದರೆ ಕೇವಲ ವೆಚ್ಚ ಮಾತ್ರ ಹೆಚ್ಚಾಗುವುದಿಲ್ಲ, ಬದಲಾಗಿ ನಾಗರಿಕರು, ಉದ್ಯಮಗಳು ಮತ್ತು ದೇಶದ ಆರ್ಥಿಕತೆಗೆ ಸಿಗಬೇಕಾದ ಸೌಲಭ್ಯಗಳು ತಡವಾಗುತ್ತವೆ ಎಂದು ಪ್ರಧಾನಿ ಎಚ್ಚರಿಸಿದರು. ಯೋಜನೆಗಳನ್ನು ಬಿಡಿಭಾಗಗಳಾಗಿ ನೋಡದೆ ಸಂಪೂರ್ಣ ಯೋಜನೆಯಾಗಿ ವೀಕ್ಷಿಸಬೇಕು. ಆರಂಭದಿಂದ ಅಂತ್ಯದವರೆಗೆ ಸಮಗ್ರವಾಗಿ ಗಮನಹರಿಸಿ, ಯೋಜನೆ ಪೂರ್ಣಗೊಳ್ಳಲು ಅಡ್ಡಿಯಾಗುವ ಕೊರತೆಗಳನ್ನು ಸರಿಪಡಿಸಬೇಕು. ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳು ಯೋಜನೆಗಳ ಜವಾಬ್ದಾರಿಯನ್ನು ಸಂಪೂರ್ಣವಾಗಿ ವಹಿಸಿಕೊಂಡು ಕೆಲಸ ಮಾಡುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂದರು.

ಪ್ರಮುಖ ಸಾರಿಗೆ ಮತ್ತು ಮೂಲಸೌಕರ್ಯ ಯೋಜನೆಗಳನ್ನು ರೂಪಿಸುವ ಹಂತದಲ್ಲೇ ತಾಂತ್ರಿಕ ಹಾಗೂ ಆರ್ಥಿಕ ಸಾಧ್ಯತೆಗಳನ್ನು ಪರಿಶೀಲಿಸಿ ಸಾಮಾನ್ಯ ಉಪಯುಕ್ತತೆ ಕಾರಿಡಾರ್‌ಗಳನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದರು. ಕಾಮಗಾರಿಯ ವೇಗದ ಜೊತೆಗೆ ಗುಣಮಟ್ಟದಲ್ಲೂ ಯಾವುದೇ ರಾಜಿ ಇರಬಾರದು. ಅದಕ್ಕಾಗಿ ಆಧುನಿಕ ತಂತ್ರಜ್ಞಾನ ಬಳಸಿ, ಪ್ರತಿ ಹಂತದಲ್ಲೂ ತಪಾಸಣೆ ನಡೆಸಬೇಕು ಎಂದು ಪ್ರಧಾನಿ ಮೋದಿ ಸೂಚನೆ ನೀಡಿದರು.

ಡಿಜಿಟಲ್ ಕೃಷಿ ಮಿಷನ್ ಮತ್ತು ಅಗ್ರಿಫ್ರಂಟ್/ಅಗ್ರಿಸ್ಟ್ಯಾಕ್

ಡಿಜಿಟಲ್ ಕೃಷಿ ಮಿಷನ್ ಅಡಿಯಲ್ಲಿ ಅಗ್ರಿಸ್ಟ್ಯಾಕ್ (AgriStack) ಯೋಜನೆಯನ್ನು ಪರಿಶೀಲಿಸಿದ ಪ್ರಧಾನಿ, ಕೃಷಿ ದತ್ತಾಂಶಗಳಿಂದ ಹೆಚ್ಚಿನ ಪ್ರಯೋಜನ ಪಡೆಯಲು ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ಇತ್ತೀಚಿನ ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವಂತೆ ಹೇಳಿದರು. ಬಿತ್ತನೆಯಿಂದ ಹಿಡಿದು ಸಂಸ್ಕರಣೆಯವರೆಗಿನ ಕೃಷಿ ಮೌಲ್ಯ ಸರಪಳಿಯಲ್ಲಿ ಈ ಡೇಟಾವನ್ನು ಸರಿಯಾಗಿ ಬಳಸಿದರೆ, ರೈತರಿಗೆ ಉತ್ತಮ ಯೋಜನೆಗಳು ಹಾಗೂ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಈ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡುತ್ತಿರುವ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.

ಸೈಬರ್ ವಂಚನೆ ತಡೆಗೆ ಜಾಗೃತಿ

ಡಿಜಿಟಲ್ ಅರೆಸ್ಟ್ ಸೇರಿದಂತೆ ಹೆಚ್ಚಾಗುತ್ತಿರುವ ಸೈಬರ್ ವಂಚನೆ ಪ್ರಕರಣಗಳ ಕುರಿತು ಕಳವಳ ವ್ಯಕ್ತಪಡಿಸಿದ ಪ್ರಧಾನಿ, ಸೈಬರ್ ಅಪರಾಧ ತಡೆಯಲು ನಿರಂತರ ತರಬೇತಿ, ಜಾಗೃತಿ ಮತ್ತು ಶಿಕ್ಷಣ ಅಗತ್ಯ ಎಂದರು. ವಿಶೇಷವಾಗಿ ಹಿರಿಯ ನಾಗರಿಕರು, ಯುವಕರು ಮತ್ತು ಸುಲಭವಾಗಿ ವಂಚನೆಗೆ ಒಳಗಾಗುವ ಜನರಿಗೆ ಸೈಬರ್ ವಂಚನೆ ವಿಧಾನಗಳು, ಎಚ್ಚರಿಕೆಯ ಸಂಕೇತಗಳು ಮತ್ತು ಸುರಕ್ಷಿತ ಡಿಜಿಟಲ್ ಅಭ್ಯಾಸಗಳ ಬಗ್ಗೆ ನಿಯಮಿತ ಸಾರ್ವಜನಿಕ ಜಾಗೃತಿ ಅಭಿಯಾನಗಳನ್ನು ನಡೆಸಬೇಕು. ಜೊತೆಗೆ ಹೊಸ ಮಾದರಿಯ ಸೈಬರ್ ವಂಚನೆಗಳನ್ನು ತಕ್ಷಣ ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಸಿಬ್ಬಂದಿಗೆ ನಿರಂತರ ತರಬೇತಿ ನೀಡಬೇಕು ಎಂದು ತಿಳಿಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net