ಸಚಿವ ಸಂಪುಟ ಪುನಾರಚನೆ ಚರ್ಚೆ!...ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾದ ಪ್ರಧಾನಿ ಮೋದಿ | PM Modi meets President

PM Modi meets President | ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾದ ಪ್ರಧಾನಿ ಮೋದಿ
PM Modi meets President | ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾದ ಪ್ರಧಾನಿ ಮೋದಿ
Published on
ನವದೆಹಲಿ: ಕೇಂದ್ರ ಸಚಿವ ಸಂಪುಟ ಪುನಾರಚನೆಯಾಗಲಿದೆ ಎಂಬ ಚರ್ಚೆಗಳ ನಡುವೆಯೇ, ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ (PM Modi meets President) ಮಾತುಕತೆ ನಡೆಸಿದ್ದಾರೆ. ಈ ಭೇಟಿಯ ಅಧಿಕೃತ ವಿವರಗಳು ಹೊರಬೀಳದಿದ್ದರೂ, ರಾಷ್ಟ್ರಪತಿ ಭವನವು ಎಕ್ಸ್​ ಖಾತೆಯಲ್ಲಿ ಭೇಟಿಯ ಫೋಟೋಗಳನ್ನು ಹಂಚಿಕೊಂಡಿದೆ.
ಬಿಜೆಪಿ ಹಿರಿಯ ನಾಯಕ ಜಾರ್ಜ್ ಕುರಿಯನ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ರಾಜ್ಯಸಭಾ ಅವಧಿ ಮುಕ್ತಾಯಗೊಂಡಿದ್ದು, ಇತ್ತೀಚಿನ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಅವರಿಗೆ ಮತ್ತೆ ಟಿಕೆಟ್ ಸಿಕ್ಕಿರಲಿಲ್ಲ. ಅಲ್ಪಸಂಖ್ಯಾತ ವ್ಯವಹಾರಗಳು ಹಾಗೂ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ರಾಜ್ಯ ಸಚಿವರಾಗಿದ್ದ ಕುರಿಯನ್ ಅವರ ರಾಜೀನಾಮೆಯನ್ನು ಪ್ರಧಾನಿ ಮೋದಿಯವರ ಸಲಹೆಯ ಮೇರೆಗೆ ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ. ಸಂವಿಧಾನದ ವಿಧಿ 75ರ ಕ್ಲಾಸ್ (2) ರ ಅಡಿಯಲ್ಲಿ ಈ ರಾಜೀನಾಮೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಂಗೀಕರಿಸಲಾಗಿದೆ ಎಂದು ರಾಷ್ಟ್ರಪತಿ ಭವನ ತಿಳಿಸಿದೆ.
ಮತ್ತೊಂದೆಡೆ, ಜೂನ್ 21ಕ್ಕೆ ರಾಜ್ಯಸಭಾ ಅವಧಿ ಮುಗಿದಿರುವ ಕೇಂದ್ರ ರೈಲ್ವೇ ಮತ್ತು ಆಹಾರ ಸಂಸ್ಕರಣಾ ಉದ್ಯಮಗಳ ರಾಜ್ಯ ಸಚಿವ ರವನೀತ್ ಸಿಂಗ್ ಅವರಿಗೂ ಈ ಬಾರಿ ಬಿಜೆಪಿಯಿಂದ ಮತ್ತೆ ಮೇಲ್ಮನೆಗೆ ಅವಕಾಶ ಸಿಕ್ಕಿಲ್ಲ. ಹೀಗಾಗಿ ಅವರ ಮುಂದಿನ ನಡೆ ಏನು ಎಂಬ ಕುತೂಹಲವೂ ಹೆಚ್ಚಾಗಿದೆ.

ಸಂಘಟನೆಗೂ ಸರ್ಜರಿ!..

ಸಚಿವರ ರಾಜೀನಾಮೆ ಮಾತ್ರವಲ್ಲದೆ, ಇತ್ತೀಚೆಗೆ ಬಿಜೆಪಿ ಸಂಘಟನೆಯಲ್ಲಿ ನಡೆದಿರುವ ಪ್ರಮುಖ ನೇಮಕಾತಿಗಳು ಕೂಡ ಸಚಿವ ಸಂಪುಟ ಬದಲಾವಣೆಯ ಮುನ್ಸೂಚನೆಯನ್ನು ನೀಡುತ್ತಿವೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಹಾಗೂ ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವರಾಗಿರುವ ಹರ್ಷ್ ಮಲ್ಹೋತ್ರಾ ಅವರನ್ನು ಮೇ 28 ರಂದು ದೆಹಲಿ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಅದೇ ರೀತಿ, ಕೇಂದ್ರ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಅವರಿಗೆ ಕಳೆದ ಡಿಸೆಂಬರ್‌ನಲ್ಲಿ ಉತ್ತರ ಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷ ಜವಾಬ್ದಾರಿಯನ್ನು ನೀಡಲಾಗಿದೆ.
ಸಂಸತ್ತಿನ ಅವಧಿ ಮುಗಿದ ಸಚಿವರ ರಾಜೀನಾಮೆ ಮತ್ತು ಹಾಲಿ ಸಚಿವರಿಗೆ ಪಕ್ಷದ ಸಂಘಟನೆಯಲ್ಲಿ ದೊಡ್ಡ ಜವಾಬ್ದಾರಿಗಳನ್ನು ನೀಡಿರುವುದು ಮೋದಿ ಸರ್ಕಾರದ ಕ್ಯಾಬಿನೆಟ್‌ನಲ್ಲಿ ಶೀಘ್ರದಲ್ಲೇ ದೊಡ್ಡ ಮಟ್ಟದ ಬದಲಾವಣೆಗಳಾಗಲಿವೆ ಎಂಬ ವಾದಕ್ಕೆ ಪುಷ್ಟಿ ನೀಡಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net