ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯುವುದು ರಾಷ್ಟ್ರೀಯ ಹೊಣೆ, ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿದರೆ ಸುಮ್ಮನಿರಲ್ಲ ಎಂದ ಪ್ರಧಾನಿ ಮೋದಿ​ | Narendra Modi

 Narendra Modi | ಪ್ರಧಾನಿ ನರೇಂದ್ರ ಮೋದಿ
Narendra Modi | ಪ್ರಧಾನಿ ನರೇಂದ್ರ ಮೋದಿ
Published on
ನವದೆಹಲಿ: ನೀಟ್ ಪರೀಕ್ಷೆಯ ಅಕ್ರಮಗಳಿಗೆ ಕಾರಣರಾದವರು ಕಠಿಣ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ ಮತ್ತು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಮಂಗಳವಾರ ಭರವಸೆ ನೀಡಿದ್ದಾರೆ.
ಎನ್‌ಡಿಎ ಮೈತ್ರಿಕೂಟದ ಮಂಗಲ್ ಮಿಷನ್ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಯಲು ಮತ್ತು ಪರೀಕ್ಷಾ ವ್ಯವಸ್ಥೆಯಲ್ಲಿ ಜವಾಬ್ದಾರಿಯನ್ನು ಖಾತರಿಪಡಿಸಲು ಸರ್ಕಾರ ಬದ್ಧವಾಗಿದೆ. ಯಾವುದೇ ತಪ್ಪುಗಳಿಂದಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಹಾನಿ ಮಾಡುವ ಕೆಲಸಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದರು.
ನೀಟ್ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗಿರುವುದು ಕಂಡುಬಂದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪುನರುಚ್ಛರಿಸಿದ ನಮೋ, ನೀಟ್ ಅಕ್ರಮಗಳಿಗೆ ಕಾರಣರಾದವರನ್ನು ಜೈಲಿಗೆ ಕಳಿಸಿಯೇ ಸಿದ್ಧ ಎಂದರು.
ಮಂಗಲ್ ಮಿಲನ್ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೀಡಿದ ಪ್ರಮುಖ ಹೇಳಿಕೆಗಳು ಹಾಗೂ ಮಾರ್ಗದರ್ಶನಗಳನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದು, ಈ ಸಭೆಯಲ್ಲಿ ಪ್ರಧಾನಿಯವರು ನೀಟ್ ವಿವಾದ, ಭಾರತದ ಆರ್ಥಿಕ ಪ್ರಗತಿ ಮತ್ತು ಮುಕ್ತ ವ್ಯಾಪಾರ ಒಪ್ಪಂದಗಳ ಕುರಿತು ಸಂಸದರೊಂದಿಗೆ ವಿವರವಾಗಿ ಚರ್ಚಿಸಿದ್ದಾರೆ ಎಂದರು.
ಇಂತಹ ಕೃತ್ಯ ಎಸಗುವವರಿಗೆ ಮಾದರಿ ಶಿಕ್ಷೆಯಾಗಬೇಕು
ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ವರದಿಗಳು ಬಂದ ತಕ್ಷಣವೇ ಸರ್ಕಾರ ಯಾವುದೇ ವಿಳಂಬವಿಲ್ಲದೆ ತ್ವರಿತ ಕ್ರಮ ಕೈಗೊಂಡಿದೆ ಎಂಬುದನ್ನು ಪ್ರಧಾನಿ ಮೋದಿ ಒತ್ತಿಹೇಳಿದ್ದಾರೆ ಎಂದರು. ಪ್ರಶ್ನೆ ಪತ್ರಿಕೆ ಸೋರಿಕೆ ಬೆಳಕಿಗೆ ಬಂದ ತಕ್ಷಣವೇ 13 ಜನರನ್ನು ಬಂಧಿಸಿ ಜೈಲಿಗೆ ತಳ್ಳಲಾಗಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಾವುದೇ ಧಕ್ಕೆಯಾಗಬಾರದು ಎಂಬ ಉದ್ದೇಶದಿಂದ ನೀಟ್ ಮರುಪರೀಕ್ಷೆ ನಡೆಸುವುದಕ್ಕೆ ಮೊದಲ ಆದ್ಯತೆ ನೀಡಲಾಯಿತು. ನಂತರ ಮರುಪರೀಕ್ಷೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿ, ಫಲಿತಾಂಶಗಳನ್ನು ಯಾವುದೇ ವಿಳಂಬವಿಲ್ಲದೆ ಶೀಘ್ರದಲ್ಲೇ ಪ್ರಕಟಿಸಲಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಭವಿಷ್ಯದಲ್ಲಿ ಇಂತಹ ಪರೀಕ್ಷಾ ಅಕ್ರಮಗಳು ಮರುಕಳಿಸದಂತೆ ತಡೆಯಲು ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಅಗತ್ಯವನ್ನು ಪ್ರಧಾನಿಯವರು ಪ್ರತಿಪಾದಿಸಿದ್ದಾರೆ. ಪರೀಕ್ಷಾ ಪತ್ರಿಕೆ ಸೋರಿಕೆ ಜಾಲದಲ್ಲಿ ಭಾಗಿಯಾದವರನ್ನು ಬಂಧಿಸಿ ಈಗಾಗಲೇ ಜೈಲಿಗೆ ಕಳುಹಿಸಲಾಗಿದೆ. ಈ ಗಂಭೀರ ಅಪರಾಧದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಕಾನೂನಿನಡಿಯಲ್ಲಿ ಸಿಗಬಹುದಾದ ಅತ್ಯಂತ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಲು ದೇಶದ ಪ್ರಮುಖ ಹಾಗೂ ಹಿರಿಯ ವಕೀಲರನ್ನು ನಿಯೋಜಿಸಬೇಕು ಎಂದು ಪ್ರಧಾನಿ ಆದೇಶಿಸಿದ್ದಾರೆ. ಇದು ಭವಿಷ್ಯದಲ್ಲಿ ಇಂತಹ ಕೃತ್ಯ ಎಸಗುವವರಿಗೆ ಮಾದರಿ ಶಿಕ್ಷೆಯಾಗಬೇಕು ಹಾಗೂ ಇಂತಹ ಘಟನೆಗಳು ಪುನರಾವರ್ತನೆಯಾಗಬಾರದು ಎಂಬುದು ಸರ್ಕಾರದ ಸ್ಪಷ್ಟ ಉದ್ದೇಶವಾಗಿದೆ ಎಂದು ರಿಜಿಜು ಹೇಳಿದರು.

ರೈತರ ಕಲ್ಯಾಣಕ್ಕೆ ಸರ್ಕಾರದ ಮೊದಲ ಆದ್ಯತೆ!

ಎನ್‌ಡಿಎ ಸಂಸದೀಯ ಪಕ್ಷದ ಮಂಗಲ್ ಮಿಲನ್ ಸಭೆಯು ಅತ್ಯಂತ ಅರ್ಥಪೂರ್ಣವಾಗಿ ನಡೆಯಿತು ಎಂದ ರಿಜಿಜು, ಹಲವು ಪ್ರಮುಖ ರಾಷ್ಟ್ರೀಯ ವಿಷಯಗಳ ಕುರಿತು ಪ್ರಧಾನಿಯವರು ಸಂಸದರಿಗೆ ಮಾರ್ಗದರ್ಶನ ನೀಡಿದರು ಎಂದರು. ಕಳೆದ ಕೆಲವು ತಿಂಗಳುಗಳಲ್ಲಿ ದೇಶ ಸಾಧಿಸಿದ ಪ್ರಮುಖ ಮೈಲಿಗಲ್ಲುಗಳನ್ನು ಪ್ರಸ್ತಾಪಿಸಿದ ಮೋದಿ, ವಿವಿಧ ದೇಶಗಳೊಂದಿಗೆ ಭಾರತ ಇತ್ತೀಚೆಗೆ ಮಾಡಿಕೊಂಡ ಮುಕ್ತ ವ್ಯಾಪಾರ ಒಪ್ಪಂದಗ ಕುರಿತೂ ಚರ್ಚಿಸಿದರು.

ವಿದೇಶಗಳೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುವಾಗ ಸರ್ಕಾರ ಯಾವುದೇ ಕಾರಣಕ್ಕೂ ರೈತರ ಹಿತಾಸಕ್ತಿಯ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪ್ರಧಾನಿ ಮೋದಿ ಎನ್‌ಡಿಎ ಸಂಸದರಿಗೆ ಭರವಸೆ ನೀಡಿದ್ದಾರೆ. ಭಾರತ ಸಹಿ ಮಾಡುವ ಪ್ರತಿಯೊಂದು ಮುಕ್ತ ವ್ಯಾಪಾರ ಒಪ್ಪಂದವೂ ರೈತರ ಕಲ್ಯಾಣಕ್ಕೆ ಮೊದಲ ಆದ್ಯತೆ ನೀಡುತ್ತದೆ ಮತ್ತು ಅವರ ಮೇಲೆ ಯಾವುದೇ ರೀತಿಯ ವಿಪರೀತ ಪರಿಣಾಮ ಬೀರದಂತೆ ನೋಡಿಕೊಳ್ಳುತ್ತದೆ. ದೇಶದ ಆರ್ಥಿಕ ಹಿತಾಸಕ್ತಿ ಹಾಗೂ ಕೃಷಿಕರ ಹಿತರಕ್ಷಣೆಯನ್ನು ಒಟ್ಟಿಗೆ ಕಾಯ್ದುಕೊಳ್ಳುವುದರಲ್ಲೇ ವ್ಯಾಪಾರ ಒಪ್ಪಂದದ ನೈಜ ಯಶಸ್ಸು ಅಡಗಿದೆ ಎಂದು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ ಎಂದು ರಿಜಿಜು ಮಾಹಿತಿ ನೀಡಿದರು(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net