ಅಹಮದಾಬಾದ್‌ನಲ್ಲಿ ಭವ್ಯ ದೀಪೋತ್ಸವ: ಪ್ರಧಾನಿ ಮೋದಿ ಜನ್ಮದಿನಕ್ಕೆ 76 ಸಾವಿರ ದೀಪ ಬೆಳಗಿದ್ದರ ಹಿಂದಿದೆ ವಿಶೇಷ ಕಾರಣ! | PM Modi 76th Birthday

PM Modi 76th Birthday | ಅಹಮದಾಬಾದ್‌ನಲ್ಲಿ ಭವ್ಯ ದೀಪೋತ್ಸವ
PM Modi 76th Birthday | ಅಹಮದಾಬಾದ್‌ನಲ್ಲಿ ಭವ್ಯ ದೀಪೋತ್ಸವ
Published on
PM Modi 76th Birthday: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 76ನೇ ಜನ್ಮದಿನದ ಅಂಗವಾಗಿ ಅಹಮದಾಬಾದ್‌ನ ವಿಶ್ವ ಉಮಿಯಾ ಧಾಮದಲ್ಲಿ ಮಧ್ಯರಾತ್ರಿ ವಿಶೇಷ ಆಚರಣೆ ನಡೆಯಿತು. ಪ್ರಧಾನಿಯವರ ದೀರ್ಘಾಯುಷ್ಯ ಹಾಗೂ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿ, ಅವರ ವಯಸ್ಸಿನ ಸಂಕೇತವಾಗಿ 76,000 ದೀಪಗಳನ್ನು ಬೆಳಗಿಸಲಾಯಿತು. ಸಾವಿರಾರು ಜನರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಮಹಾ ಆರತಿ ನೆರವೇರಿಸಿ, ವಂದೇ ಮಾತರಂ ಸಮೂಹ ಗಾಯನ ಮಾಡಲಾಯಿತು.
ಆದರೆ, ಈ 76,000 ದೀಪಗಳು ಪ್ರಧಾನಿ ಮೋದಿಯವರ ಜನ್ಮದಿನದ ಅಂಗವಾಗಿ ಆಯೋಜಿಸಲಾದ ಆಶೀರ್ವಾದದ ದೀಪ (Ashirwad Ka Diya) ಅಭಿಯಾನಕ್ಕಿಂತ ಭಿನ್ನವಾಗಿದ್ದು, ಈ ಎರಡರ ನಡುವಿನ ವ್ಯತ್ಯಾಸವೇನು..? ಮತ್ತು ಯಾರಿಗಾದರೂ ದೀಪ ಹಚ್ಚುವುದು ಸಾಂಪ್ರದಾಯಿಕವಾಗಿ ಏನನ್ನು ಸೂಚಿಸುತ್ತದೆ..? ಎನ್ನುವುದನ್ನು ಇಲ್ಲಿ ತಿಳಿಯೋಣ.
ವಿಶ್ವ ಉಮಿಯಾ ಧಾಮದಲ್ಲಿ ನಡೆದಿದ್ದು ಪ್ರಧಾನಿ ಮೋದಿಯವರ 76ನೇ ವರ್ಷದ ಸಂಕೇತವಾಗಿ ಒಂದೇ ಸ್ಥಳದಲ್ಲಿ ಆಯೋಜಿಸಲಾದ ನಿರ್ದಿಷ್ಟ ಕಾರ್ಯಕ್ರಮ. ಆದರೆ, ಆಶೀರ್ವಾದದ ದೀಪ ಎಂಬುದು ಬಿಜೆಪಿಯ ಸೇವಾ ಸಂಕಲ್ಪ ಅಭಿಯಾನದ ಭಾಗವಾಗಿದ್ದು, ಸಾರ್ವಜನಿಕರು ತಮ್ಮ ಮನೆಗಳಲ್ಲೇ ದೀಪ ಬೆಳಗಿಸಿ ಪ್ರಧಾನಿಯವರ ಆರೋಗ್ಯಕ್ಕಾಗಿ ಪ್ರಾರ್ಥಿಸುವ ಒಂದು ತಿಂಗಳ ವಿಸ್ತೃತ ಕಾರ್ಯಕ್ರಮವಾಗಿದೆ. ಈ ವಿಸ್ತೃತ ಅಭಿಯಾನವು ಸೆಪ್ಟೆಂಬರ್ 17 ರಂದು ಪ್ರಾರಂಭವಾಗಿ ಒಂದು ತಿಂಗಳ ಕಾಲ ನಡೆಯಲಿದೆ. ಇದರಲ್ಲಿ ಜನ್ಮದಿನದ ಆಚರಣೆಯ ಜೊತೆಗೆ ವಿವಿಧ ಸೇವಾ ಕಾರ್ಯಕ್ರಮಗಳೂ ಸೇರಿವೆ.
ಅಹಮದಾಬಾದ್‌ನ ವಿಶ್ವ ಉಮಿಯಾ ಧಾಮವು ಪ್ರಧಾನಿ ಮೋದಿಯವರ 76ನೇ ಜನ್ಮದಿನದ ನಿಮಿತ್ತ ಮಧ್ಯರಾತ್ರಿಯ ಕಾರ್ಯಕ್ರಮವನ್ನು ಆಯೋಜಿಸಿತ್ತು. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿ ಉಮಿಯಾ ದೇವಿಗೆ ಮಹಾ ಆರತಿ ನೆರವೇರಿಸಿ, ಪ್ರಧಾನಿಯವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಯಿತು.

ಹಿಂದೂ ಸಂಪ್ರದಾಯದಲ್ಲಿ ದೀಪ ಹಚ್ಚುವುದರ ಅರ್ಥವೇನು..?

ಬೃಹದಾರಣ್ಯಕ ಉಪನಿಷತ್ತಿನ ತಮಸೋ ಮಾ ಜ್ಯೋತಿರ್ಗಮಯ(ಕತ್ತಲೆಯಿಂದ ಬೆಳಕಿನತ್ತ ಕರೆದೊಯ್ಯು) ಎಂಬ ಪ್ರಾರ್ಥನೆಗೂ, ಹುಟ್ಟುಹಬ್ಬದಂದು ದೀಪ ಹಚ್ಚುವುದಕ್ಕೂ ನೇರ ಸಂಬಂಧವಿಲ್ಲ. ಉಪನಿಷತ್ತಿನಲ್ಲಿ ಈ ಮಾತನ್ನು ಆಧ್ಯಾತ್ಮಿಕ ಬೆಳಕು ಅಥವಾ ಜ್ಞಾನಕ್ಕಾಗಿ ಹೇಳಲಾಗಿದೆ. ಆದರೆ, ದೀಪವನ್ನು ಬೆಳಕು, ಶ್ರೇಯಸ್ಸು ಮತ್ತು ಶುಭ ಶಕುನದ ಸಂಕೇತವೆಂದು ಪರಿಗಣಿಸುವುದರಿಂದ, ಹುಟ್ಟುಹಬ್ಬದಂತಹ ವಿಶೇಷ ಸಂದರ್ಭಗಳಲ್ಲಿ ವ್ಯಕ್ತಿಯ ಒಳಿತು, ನಂಬಿಕೆ ಮತ್ತು ಶುಭ ಹಾರೈಕೆಗಳನ್ನು ವ್ಯಕ್ತಪಡಿಸಲು ದೀಪ ಬೆಳಗುವ ಸಂಪ್ರದಾಯ ಬೆಳೆದುಬಂದಿದೆ.
ದೀಪ ಹಚ್ಚುವುದು, ಆರತಿ ಬೆಳಗುವುದು ಅಥವಾ ತಿಲಕವಿಡುವುದು ವಿಶೇಷ ಸಂದರ್ಭಗಳಲ್ಲಿ ಶುಭ ಹಾರೈಕೆಗಳನ್ನು ತಿಳಿಸಲು ಬಳಸುವ ಕೌಟುಂಬಿಕ ಮತ್ತು ಧಾರ್ಮಿಕ ಸಂಪ್ರದಾಯಗಳ ಭಾಗವೂ ಆಗಿದೆ.

ದೀಪ ಹಚ್ಚುವುದರಿಂದ ಆಯುಷ್ಯ ಹೆಚ್ಚುತ್ತಾ..?

ದೀಪ ಹಚ್ಚುವುದು ದೀರ್ಘಾಯುಷ್ಯ ನೀಡುವುದಿಲ್ಲ. ಧಾರ್ಮಿಕ ಹಿನ್ನೆಲೆಯಲ್ಲಿ, ಇದು ಒಬ್ಬರ ಆಯುಷ್ಯವನ್ನು ನೇರವಾಗಿ ಹೆಚ್ಚಿಸುವ ವಿಧಾನಕ್ಕಿಂತ ಹೆಚ್ಚಾಗಿ ಪ್ರಾರ್ಥನೆ ಅಥವಾ ಶುಭ ಹಾರೈಕೆಯನ್ನು ಪ್ರತಿನಿಧಿಸುತ್ತದೆ. ಸಾಂಪ್ರದಾಯಿಕ ದೀಪದ ಪ್ರಾರ್ಥನೆಗಳು ಸಹ ಜ್ವಾಲೆಯನ್ನು ಶುಭ, ಶ್ರೇಯಸ್ಸು ಮತ್ತು ಉತ್ತಮ ಆರೋಗ್ಯಕ್ಕೆ ಜೋಡಿಸುತ್ತವೆ. ಆದ್ದರಿಂದ, ಈ ಆಚರಣೆಯನ್ನು ಪವಾಡದ ಪರಿಹಾರವೆಂದು ನೋಡುವ ಬದಲು, ಒಬ್ಬರ ಒಳಿತಿಗಾಗಿ ಶುಭ ಹಾರೈಸುವ ಭಾವನೆ ಎಂದು ತಿಳಿಯಬೇಕಾಗುತ್ತದೆ.

76 ಎಂಬ ಸಂಖ್ಯೆಯನ್ನೇ ಆಯ್ಕೆ ಮಾಡಿದ್ದೇಕೆ..?

ಅಹಮದಾಬಾದ್ ಕಾರ್ಯಕ್ರಮದ ಹಿಂದಿನ ಸಂಕೇತ ಸರಳವಾಗಿದ್ದು, ಪ್ರಧಾನಿ ಮೋದಿ 76ನೇ ವರ್ಷಕ್ಕೆ ಕಾಲಿಟ್ಟಿರುವುದಕ್ಕೆ ಪೂರಕವಾಗಿ 76,000 ದೀಪಗಳನ್ನು ಹಚ್ಚಲಾಯಿತು. ಮತ್ತೊಂದೆಡೆ, ವಿಸ್ತೃತ ಆಶೀರ್ವಾದದ ದೀಪ ಅಭಿಯಾನವು ಅವರ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಆಶೀರ್ವಾದ ಹಾಗೂ ಪ್ರಾರ್ಥನೆಯ ಸಂಕೇತವಾಗಿ ದೀಪವನ್ನು ಹಚ್ಚುವುದರ ಮೇಲೆ ಕೇಂದ್ರೀಕೃತವಾಗಿತ್ತು. ಎರಡೂ ಪ್ರಯತ್ನಗಳ ಪ್ರಮಾಣ ವಿಭಿನ್ನವಾಗಿದ್ದರೂ, ಪ್ರಮುಖ ಉದ್ದೇಶ ಒಂದೇ ಆಗಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net