ಪ್ರಧಾನಿ ಒಬ್ಬ ದೇಶದ್ರೋಹಿ; ವ್ಯಾಪಾರ ಒಪ್ಪಂದದ ವೇಳೆ ಯುಎಸ್​ಗೆ ದೇಶ ಮಾರಾಟ; ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ | Rahul Gandhi

ರಾಹುಲ್ ಗಾಂಧಿ
ರಾಹುಲ್ ಗಾಂಧಿ
Published on
ನವದೆಹಲಿ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಕುರಿತು ಕೇಂದ್ರ ಸರ್ಕಾರದ ವಿರುದ್ಧದ ವಾಗ್ದಾಳಿಯನ್ನು ಮುಂದುವರೆಸಿರುವ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi), ಪ್ರಧಾನಿ ಒಬ್ಬ ದೇಶದ್ರೋಹಿ, ವ್ಯಾಪಾರ ಒಪ್ಪಂದದ ವೇಳೆ ಯುಎಸ್​ಗೆ ದೇಶ ಮಾರಾಟ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬಂಗಾಳದ ಮಾಲ್ಡಾದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿರುವ ಅವರು, ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಾಷಿಂಗ್ಟನ್​ನ ಒತ್ತಡಕ್ಕೆ ಮಣಿಯುವ ಮೂಲಕ ಭಾರತದ ಇಂಧನ ಭದ್ರತೆಯನ್ನು ಅಮೆರಿಕಕ್ಕೆ ಹಸ್ತಾಂತರಿಸಲಾಗಿದೆ. ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಭಾರತವನ್ನು ಮಾರಿದ್ದು, ಇದರಿಂದ ಭಾರತದ ಕೃಷಿ ಕ್ಷೇತ್ರವು ನಾಶವಾಗಲಿದೆ. ಹೀಗಾಗಿ ಮೋದಿಯವರು ದೇಶಭಕ್ತ ಅಲ್ಲ, ದೇಶದ್ರೋಹಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಅಮೆರಿಕಕ್ಕೆ ದೇಶದ ದತ್ತಾಂಶವನ್ನು ಬಿಟ್ಟುಕೊಟ್ಟಿದೆ ಎಂದು ಆರೋಪಿಸಿರುವ ಅವರು, ಇದರಿಂದ ರಾಷ್ಟ್ರೀಯ ಭದ್ರತೆಗೆ ತೀವ್ರ ಹಾನಿಯಾಗಿದೆ. ಸುಮಾರು 9.5 ಲಕ್ಷ ಕೋಟಿ ರೂ. ಮೌಲ್ಯದ ಸರಕುಗಳನ್ನು ಖರೀದಿಸುವುದಾಗಿ ಕೇಂದ್ರ ಅಮೆರಿಕಕ್ಕೆ ಭರವಸೆ ನೀಡಿದೆ. ಒಂದು ವೇಳೆ ಅಮೆರಿಕದ ಸರಕುಗಳು ಸುನಾಮಿಯಂತೆ ಭಾರತಕ್ಕೆ ಪ್ರವೇಶಿಸಿದರೆ, ನಮ್ಮ ದೇಶದ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕಾರ್ಖಾನೆಗಳು ಮುಚ್ಚಲ್ಪಡುತ್ತವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈಗಾಗಲೇ ರಾಜ್ಯದಲ್ಲಿ ಕೈಗಾರಿಕೆಗಳನ್ನು ಮುಚ್ಚಿರುವುದರಿಂದ ಇದು ಬಂಗಾಳಕ್ಕೆ ದುಪ್ಪಟ್ಟು ನಷ್ಟವನ್ನುಂಟು ಮಾಡುತ್ತದೆ. ಅಮೆರಿಕ ವ್ಯಾಪಾರ ಒಪ್ಪಂದವು ಸಣ್ಣ, ಮಧ್ಯಮ ಗಾತ್ರದ ಕೈಗಾರಿಕೆಗಳನ್ನು ಮುಚ್ಚಲು ಕಾರಣವಾಗುತ್ತದೆ, ಭಾರತದಲ್ಲಿ ಉದ್ಯೋಗ ನಷ್ಟಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net