ದಯವಿಟ್ಟು ಜ್ಞಾನೇಶ್ ಕುಮಾರ್​​ರನ್ನು ಕರೆದೊಯ್ಯರಿ, ನೆಕ್ಸ್ಟ್ ವಿಮಾನದಲ್ಲಿ ಇವಿಎಂ ಸಹ ಕಳಿಸುತ್ತೇವೆ: ಡೊನಾಲ್ಡ್​ ಟ್ರಂಪ್​ಗೆ ಕಾಂಗ್ರೆಸ್ ಈ ರೀತಿ ಹೇಳಿದ್ದೇಕೆ? | Congress

ಡೊನಾಲ್ಡ್ ಟ್ರಂಪ್ ಮತ್ತು ಜ್ಞಾನೇಶ್ ಕುಮಾರ್
ಡೊನಾಲ್ಡ್ ಟ್ರಂಪ್ ಮತ್ತು ಜ್ಞಾನೇಶ್ ಕುಮಾರ್
Published on
ನವದೆಹಲಿ: ಭಾರತೀಯ ಚುನಾವಣಾ ವ್ಯವಸ್ಥೆ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಅವರ ಹೊಗಳಿಕೆಯನ್ನು ಅಪಹಾಸ್ಯ ಮಾಡಿರುವ ಕಾಂಗ್ರೆಸ್(Congress), ದಯವಿಟ್ಟು ಜ್ಞಾನೇಶ್ ಕುಮಾರ್ ಅವರನ್ನು ಅಮೆರಿಕಕ್ಕೆ ಕರೆದುಕೊಂಡು ಹೋಗಿ ಅಲ್ಲಿಯೇ ಇರಿಸಿಕೊಳ್ಳಿ, ಮುಂದಿನ ವಿಮಾನದಲ್ಲಿ ಇವಿಎಂಗಳನ್ನು ಸಹ ಕಳಿಸುತ್ತೇವೆ ಎಂದು ಹೇಳಿದೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ರಾಜ್ಯಸಭಾ ಸಂಸದ ಪವನ್ ಖೇರಾ, ಯ ಡೊನಾಲ್ಡ್ ಟ್ರಂಪ್, ದಯವಿಟ್ಟು ಜ್ಞಾನೇಶ್ ಕುಮಾರ್ ಗುಪ್ತಾ ಅವರನ್ನು ಅಮೆರಿಕಕ್ಕೆ ಕರೆದುಕೊಂಡು ಹೋಗಿ. ಅವರನ್ನು ಅಲ್ಲೇ ಇರಿಸಿ. ನಾವು ನಮ್ಮ ಇವಿಎಂಗಳನ್ನು ಸಹ ಮುಂದಿನ ವಿಮಾನದ ಮೂಲಕ ಕಳುಹಿಸುತ್ತೇವೆ.
ನೀವು ನಮ್ಮೆಡೆಗೆ ತೋರಿದ ಅವಮಾನ ಮತ್ತು ದಬ್ಬಾಳಿಕೆಗೆ ಪ್ರತಿಯಾಗಿ, ನಾವು ನಿಮಗಾಗಿ ಮಾಡಬಹುದಾದ ಕನಿಷ್ಠ ಕೆಲಸವಿದು. ಭಾರತದಿಂದ ಸರ್ ವಿತ್ ಲವ್ ಎಂದು ಬರೆದುಕೊಂಡಿದ್ದಾರೆ.

ಡೊನಾಲ್ಡ್ ಟ್ರಂಪ್ ಹೇಳಿದ್ದೇನು?

ಸೋಮವಾರ ತಮ್ಮ ಟ್ರುತ್ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಅಮೆರಿಕದಲ್ಲಿ ಮತದಾರರ ಗುರುತಿನ ಚೀಟಿ ಅಗತ್ಯತೆಗಳ ಕುರಿತು ಈ ತಿಂಗಳ ಆರಂಭದಲ್ಲಿ ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಹೇಳಿಕೆಯನ್ನು ಟ್ರಂಪ್ ಸ್ಮರಿಸಿಕೊಂಡಿದ್ದು, ಸೇಫ್‌ಗಾರ್ಡ್ ಅಮೆರಿಕನ್ ವೋಟರ್ ಎಲಿಜಿಬಿಲಿಟಿ (SAVE) ಅಮೆರಿಕ ಕಾಯ್ದೆಯನ್ನು ಜಾರಿಗೆ ತರುವ ಬಗ್ಗೆ ಮಾತನಾಡಿದ್ದಾರೆ.
ಈ ತಿಂಗಳ ಆರಂಭದಲ್ಲಿ ಭಾರತದ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರು, ಮಾನ್ಯವಾದ ಫೋಟೋ ಐಡಿ ಇಲ್ಲದೆ ಅಮೆರಿಕದಲ್ಲಿ ಚುನಾವಣೆಗಳನ್ನು ಹೇಗೆ ನಡೆಸಲು ಸಾಧ್ಯ ಎಂದು ಅಮೆರಿಕದ ಆಡಳಿತವನ್ನು ಪ್ರಶ್ನಿಸಿದ್ದನ್ನು ನೆನಪಿಸಿಕೊಂಡಿದ್ದಾರೆ. ಮುಂದುವರೆದು, ಭಾರತದಲ್ಲಿ ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ 646 ಮಿಲಿಯನ್‌ಗಿಂತಲೂ ಹೆಚ್ಚು ಜನರು ಭಾಗವಹಿಸಿದ್ದರು, ಆದರೆ ಶೇಕಡಾ ಒಂದಕ್ಕಿಂತ ಕಡಿಮೆ ಜನರು ಅಂಚೆ ಮತಪತ್ರಗಳ ಮೂಲಕ ಮತ ಚಲಾಯಿಸಿದ್ದನ್ನು ಶ್ಲಾಘಿಸಿದ್ದಾರೆ.
ಹಾಗೆಯೇ ಭಾರತದ ಚುನಾವಣಾ ವ್ಯವಸ್ಥೆಯನ್ನು ಅಮೆರಿಕದ ವ್ಯವಸ್ಥೆಯೊಂದಿಗೆ ಹೋಲಿಸಿದ್ದು, ನಮ್ಮಲ್ಲಿಯೂ ಮತದಾನದ ಪ್ರಕ್ರಿಯೆಯನ್ನು ಮತ್ತಷ್ಟು ಸುರಕ್ಷಿತ ಹಾಗೂ ಪಾರದರ್ಶಕಗೊಳಿಸಲು ಗುರುತಿನ ಚೀಟಿ ಮತ್ತು ಪೌರತ್ವದ ದಾಖಲೆಗಳನ್ನು ಕಡ್ಡಾಯಗೊಳಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net