ನಿನ್ನ ಕೆಲಸ ಎಷ್ಟು ಇದೆಯೋ ಅಷ್ಟು ನೋಡ್ಕೋ... ಡೊನಾಲ್ಡ್​ ಟ್ರಂಪ್​ ವಿರುದ್ಧ ಕಮಲ್​ ಹಾಸನ್​ ವಾಗ್ದಾಳಿ! Kamal Haasan

ನಿನ್ನ ಕೆಲಸ ಎಷ್ಟು ಇದೆಯೋ ಅಷ್ಟು ನೋಡ್ಕೋ... ಡೊನಾಲ್ಡ್​ ಟ್ರಂಪ್​ ವಿರುದ್ಧ ಕಮಲ್​ ಹಾಸನ್​ ವಾಗ್ದಾಳಿ! Kamal Haasan
ನಿನ್ನ ಕೆಲಸ ಎಷ್ಟು ಇದೆಯೋ ಅಷ್ಟು ನೋಡ್ಕೋ... ಡೊನಾಲ್ಡ್​ ಟ್ರಂಪ್​ ವಿರುದ್ಧ ಕಮಲ್​ ಹಾಸನ್​ ವಾಗ್ದಾಳಿ! Kamal Haasan
Published on

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಮುಂದುವರಿದ ಯುದ್ಧದ ಸ್ಥಿತಿ
  • ರಷ್ಯಾದಿಂದ ಇಂಧನ ಖರೀದಿ ಮಾಡಲು ಭಾರತಕ್ಕೆ ಅನುಮತಿ ನೀಡಿದ್ದೇವೆ ಎಂದ ಅಮೆರಿಕ
  • ಇತರೆ ರಾಷ್ಟ್ರಗಳ ಆದೇಶಗಳನ್ನು ಭಾರತವು ಎಂದಿಗೂ ಪರಿಗಣಿಸುವುದಿಲ್ಲ ಎಂದ ಕಮಲ್​ ಹಾಸನ್​
ನವದೆಹಲಿ: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧ ನಡೆಯುತ್ತಿರುವುದರಿಂದ ಅಲ್ಪಕಾಲದವರೆಗೆ ರಷ್ಯಾದಿಂದ ಇಂಧನ ಖರೀದಿ ಮಾಡಲು ಭಾರತಕ್ಕೆ ಅನುಮತಿ ನೀಡಲಾಗಿದೆ ಎಂದು ಅಮೆರಿಕದ ಉನ್ನತ ಅಧಿಕಾರಿಯೊಬ್ಬರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ನಟ ಹಾಗೂ ರಾಜ್ಯಸಭಾ ಸದಸ್ಯ ಕಮಲ್​ ಹಾಸನ್ ( Kamal Haasan )​, ಇತರೆ ರಾಷ್ಟ್ರಗಳ ಆದೇಶಗಳನ್ನು ಭಾರತವು ಎಂದಿಗೂ ಪರಿಗಣಿಸುವುದಿಲ್ಲ ಎಂದಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಉದ್ದೇಶಿಸಿ ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿರುವ ಕಮಲ್​ ಹಾಸನ್​, ಆತ್ಮೀಯ ಅಧ್ಯಕ್ಷರೇ, ನಾವು ಭಾರತದ ಜನರು, ಸ್ವತಂತ್ರ ಮತ್ತು ಸಾರ್ವಭೌಮ ರಾಷ್ಟ್ರಕ್ಕೆ ಸೇರಿದವರು. ನಾವು ಇನ್ನು ಮುಂದೆ ದೂರದ ವಿದೇಶಿ ತೀರಗಳಿಂದ ಆದೇಶಗಳನ್ನು ತೆಗೆದುಕೊಳ್ಳುವುದಿಲ್ಲ. ದಯವಿಟ್ಟು ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನಿಮ್ಮ ಕೆಲವನ್ನು ನೋಡಿಕೊಳ್ಳಿ ಎಂದಿರುವ ಕಮಲ್​ ಹಾಸನ್​, ಸಾರ್ವಭೌಮ ರಾಷ್ಟ್ರಗಳ ನಡುವಿನ ಪರಸ್ಪರ ಗೌರವವು ಶಾಶ್ವತ ಜಾಗತಿಕ ಶಾಂತಿಯ ಏಕೈಕ ಅಡಿಪಾಯವಾಗಿದೆ. ನಿಮ್ಮ ದೇಶ ಮತ್ತು ಅದರ ಜನರಿಗೆ ಶಾಂತಿ ಮತ್ತು ಸಮೃದ್ಧಿಯನ್ನು ನಾವು ಬಯಸುತ್ತೇವೆ ಎನ್ನುವ ಮೂಲಕ ಯುದ್ಧದ ಸನ್ನಿವೇಶ ಸೃಷ್ಟಿ ಮಾಡಿರುವ ಟ್ರಂಪ್​ಗೆ ಖಡಕ್​ ತಿರುಗೇಟು ನೀಡಿದ್ದಾರೆ.
ಅಂದಹಾಗೆ, ಅಮೆರಿಕದ ಖಜಾನೆ ಕಾರ್ಯದರ್ಶಿ ಮತ್ತು ಟ್ರಂಪ್ ಅವರ ಸಹಾಯಕ ಸ್ಕಾಟ್ ಬೆಸೆಂಟ್, ರಷ್ಯಾ ತೈಲವನ್ನು ಖರೀದಿಸಲು ಭಾರತಕ್ಕೆ ಅಮೆರಿಕ ಅನುಮತಿ ನೀಡಿದೆ ಎಂದು ಹೇಳಿಕೆ ನೀಡಿದ್ದಾರೆ. ಫಾಕ್ಸ್ ಬ್ಯುಸಿನೆಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಬೆಸೆಂಟ್​, ಭಾರತವು ಈ ಹಿಂದೆ ಅಮೆರಿಕದ ಮನವಿಯಂತೆ ರಷ್ಯಾದ ನಿರ್ಬಂಧಿತ ತೈಲವನ್ನು ಖರೀದಿಸುವುದನ್ನು ನಿಲ್ಲಿಸಿತ್ತು ಆದರೆ, ಈಗ ಜಾಗತಿಕವಾಗಿ ತೈಲದ ಕೊರತೆಯನ್ನು ನೀಗಿಸಲು ಮತ್ತು ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯನ್ನು ತಡೆಯಲು ಭಾರತವು ರಷ್ಯಾದಿಂದ ತೈಲವನ್ನು ಖರೀದಿಸಲು ಅಮೆರಿಕ ಅಧಿಕೃತವಾಗಿ ಸಮ್ಮತಿ ನೀಡಿದೆ. ರಷ್ಯಾ-ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಕಟ್ಟುನಿಟ್ಟಿನ ನಿಯಮಗಳನ್ನು ಸಡಿಲಿಸಿರುವ ಅಮೆರಿಕ, ಭಾರತಕ್ಕೆ ಇದೊಂದು ತಾತ್ಕಾಲಿಕ ರಿಯಾಯಿತಿಯನ್ನು ನೀಡಿದೆ ಮತ್ತು ಮುಂದಿನ ದಿನಗಳಲ್ಲಿ ರಷ್ಯಾದ ಮೇಲಿನ ಇನ್ನಷ್ಟು ತೈಲ ನಿರ್ಬಂಧಗಳನ್ನು ತೆಗೆದುಹಾಕುತ್ತೇವೆ ಎಂದಿದ್ದರು.
ಅಂದಹಾಗೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸ್ಕಾಟ್ ಬೆಸೆಂಟ್ ಅವರ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಒತ್ತಡವನ್ನು (ಬೆಲೆ ಏರಿಕೆ ಅಥವಾ ಪೂರೈಕೆಯ ಕೊರತೆ) ಕಡಿಮೆ ಮಾಡಲು ಬೇರೆ ಯಾವುದಾದರೂ ಕ್ರಮಗಳನ್ನು ತೆಗೆದುಕೊಳ್ಳುವ ಅವಕಾಶವಿದ್ದರೆ, ನಾನು ಖಂಡಿತವಾಗಿಯೂ ಅದನ್ನು ಮಾಡುತ್ತೇನೆ ಎಂದಿದ್ದಾರೆ.

ಭಾರತ ಸರ್ಕಾರದಿಂದ ಖಡಕ್​ ಉತ್ತರ

ಇನ್ನು ಪ್ರಸ್ತುತ ನಡೆಯುತ್ತಿರುವ ಸಂಘರ್ಷದಿಂದಾಗಿ ಉಂಟಾಗಿರುವ ಅಡೆತಡೆಗಳ ಹೊರತಾಗಿಯೂ ಭಾರತದ ಇಂಧನ ಸರಬರಾಜು ಸುರಕ್ಷಿತವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಹಾರ್ಮುಜ್ ಮಾರ್ಗದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಹೊರತಾಗಿಯೂ, ಭಾರತದ ಇಂಧನ ಪೂರೈಕೆ ಸುರಕ್ಷಿತ ಮತ್ತು ಸ್ಥಿರವಾಗಿದೆ. ಭಾರತವು ತನ್ನ ಕಚ್ಚಾ ತೈಲ ಮೂಲಗಳನ್ನು 27 ರಿಂದ 40 ದೇಶಗಳಿಗೆ ಹೆಚ್ಚಿಸಿದೆ. ಈ ಕ್ರಮ ಬಹು ಪರ್ಯಾಯ ಪೂರೈಕೆ ಮಾರ್ಗಗಳನ್ನು ಖಚಿತಪಡಿಸುತ್ತದೆ. ರಾಷ್ಟ್ರೀಯ ಹಿತಾಸಕ್ತಿ ವಿಚಾರದಲ್ಲಿ ಭಾರತ ಸದಾ ಮುಂದಿರುತ್ತದೆ. ಕೈಗೆಟುಕುವ ದರಗಳು ಲಭ್ಯವಿರುವಲ್ಲೆಲ್ಲ ತೈಲವನ್ನು ಖರೀದಿಸುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಅಲ್ಲದೆ, ರಷ್ಯಾದ ತೈಲವನ್ನು ಖರೀದಿಸಲು ಭಾರತವು ಯಾವುದೇ ದೇಶದ ಅನುಮತಿಯನ್ನು ಎಂದಿಗೂ ಅವಲಂಬಿಸಿಲ್ಲ ಎಂಬ ಸಂದೇಶವನ್ನು ಸಹ ರವಾನಿಸಿದೆ.
ಅಮೆರಿಕದ ಅಧಿಕಾರಿಯ "ಅನುಮತಿ" ಹೇಳಿಕೆಯ ನಂತರ ವಿಪಕ್ಷ ಕಾಂಗ್ರೆಸ್, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಭಾರತದ ವಿದೇಶಾಂಗ ನೀತಿಯು ನಮ್ಮ ಜನರ ಸಾಮೂಹಿಕ ಇಚ್ಛೆಯಿಂದ ಹೊರಹೊಮ್ಮುತ್ತದೆ. ಅದು ನಮ್ಮ ಇತಿಹಾಸ, ನಮ್ಮ ಭೌಗೋಳಿಕತೆ ಮತ್ತು ಸತ್ಯ ಮತ್ತು ಅಹಿಂಸೆಯನ್ನು ಆಧರಿಸಿದ ನಮ್ಮ ಆಧ್ಯಾತ್ಮಿಕ ನೀತಿಯಲ್ಲಿ ಬೇರೂರಿರಬೇಕು. ಆದರೆ, ಇಂದು ನಾವು ನೋಡುತ್ತಿರುವುದು ನೀತಿಯಲ್ಲ. ಇದು ರಾಜಿ ಮಾಡಿಕೊಂಡ ವ್ಯಕ್ತಿಯ ಶೋಷಣೆಯ ಪರಿಣಾಮವಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net