ವಿಶ್ವ ನಾಯಕರಿಗೆ ನಮೋ ವಿಶೇಷ ಉಡುಗೊರೆ: ಜಾಗತಿಕ ವೇದಿಕೆಯಲ್ಲಿ ಬೀದರ್ 'ಬಿದ್ರಿ' ಕಲಾಕೃತಿ ಹೈಲೈಟ್, ಟ್ರಂಪ್‌ಗೆ ಪಿಚ್ವಾಯಿ ಕಲೆ ಗಿಫ್ಟ್! | PM Modi Gifts World Leaders

ಜಾಗತಿಕ ವೇದಿಕೆಯಲ್ಲಿ ಬೀದರ್ 'ಬಿದ್ರಿ' ಕಲಾಕೃತಿ ಹೈಲೈಟ್
ಜಾಗತಿಕ ವೇದಿಕೆಯಲ್ಲಿ ಬೀದರ್ 'ಬಿದ್ರಿ' ಕಲಾಕೃತಿ ಹೈಲೈಟ್
Published on: 

PM Modi Gifts World Leaders: ಆಸಿಯಾನ್ (ASEAN) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಫಿಲಿಪ್ಪೀನ್ಸ್​​ನ ಮನಿಲಾಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ರಾಜತಾಂತ್ರಿಕ ಮಾತುಕತೆಗಳ ಜೊತೆಗೆ ರಾಜ್ಯವು ಸೇರಿದಂತೆ ದೇಶದ ಪ್ರಮುಖ ರಾಜ್ಯಗಳ ಶ್ರೀಮಂತ ಕಲೆ ಮತ್ತು ಸಂಸ್ಕೃತಿಯನ್ನು ಜಾಗತಿಕ ವೇದಿಕೆಯಲ್ಲಿ ಅನಾವರಣಗೊಳಿಸಿದ್ದಾರೆ.

ಕ್ವಾಡ್ ರಾಷ್ಟ್ರಗಳು ಸೇರಿದಂತೆ ಶೃಂಗಸಭೆಯಲ್ಲಿ ಭಾಗವಹಿಸಿದ್ದ ವಿವಿಧ ದೇಶಗಳ ಅಗ್ರ ನಾಯಕರಿಗೆ ಪ್ರಧಾನಿ ಮೋದಿ ಅವರು ಶತಮಾನಗಳಷ್ಟು ಹಳೆಯದಾದ ದೇಶದ ಸಾಂಪ್ರದಾಯಿಕ ಕರಕುಶಲ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ವಿಶೇಷವೆಂದರೆ, ಈ ಉಡುಗೊರೆಗಳ ಪಟ್ಟಿಯಲ್ಲಿ ಬೀದರ್‌ನ ಹೆಮ್ಮೆಯ ಬಿದ್ರಿ ಕಲೆ ಕೂಡ ಸ್ಥಾನ ಪಡೆದಿದೆ.

ರಾಜ್ಯದ ಬಿದ್ರಿ ಕಲೆಗೆ ಜಾಗತಿಕ ಗೌರವ

ಬ್ರೂನೈ ಸುಲ್ತಾನ್ ಹಸನಲ್ ಬೊಲ್ಕಿಯಾ ಮತ್ತು ಮ್ಯಾನ್ಮಾರ್ ನಾಯಕರಿಗೆ ಪ್ರಧಾನಿ ಮೋದಿ ಅವರು ಬೀದರ್ ಜಿಲ್ಲೆಯ ಜಿಐ (GI) ಟ್ಯಾಗ್ ಹೊಂದಿರುವ ಸಾಂಪ್ರದಾಯಿಕ ಬಿದ್ರಿ ಬೆಳ್ಳಿಯ ಕೆತ್ತನೆಯ ಹೂದಾನಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಸತು ಮತ್ತು ತಾಮ್ರದ ಮಿಶ್ರಲೋಹದಿಂದ ತಯಾರಿಸಲಾದ ಕಪ್ಪು ಬಣ್ಣದ ಹೂದಾನಿಯ ಮೇಲೆ ಬೆಳ್ಳಿಯ ಸೂಕ್ಷ್ಮ ಕೆತ್ತನೆಗಳು ಹಾಗೂ ಬೀದರ್‌ನ ವಾಸ್ತುಶಿಲ್ಪದಿಂದ ಪ್ರೇರಿತವಾದ ಹೂವಿನ ವಿನ್ಯಾಸಗಳು ಈ ಕಲಾಕೃತಿಯ ವಿಶೇಷತೆಯಾಗಿದೆ.

ಕಾಶ್ಮೀರ ಮತ್ತು ರಾಜಸ್ಥಾನದ ಕರಕುಶಲ ಸೊಬಗು

ಆತಿಥೇಯ ಫಿಲಿಪೈನ್ಸ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್ ಅವರಿಗೆ ಕೈಯಿಂದ ನೇಯ್ದ ಅತ್ಯಂತ ಮೃದುವಾದ ಕಾಶ್ಮೀರಿ ರೇಷ್ಮೆ ಕಾರ್ಪೆಟ್ ನೀಡಲಾಗಿದ್ದು, ಇದನ್ನು ತಯಾರಿಸಲು ವರ್ಷಗಳೇ ಬೇಕಾಗಬಹುದಂತೆ. ಇನ್ನು ಫಿಲಿಪ್ಪೀನ್ಸ್ ಪ್ರಥಮ ಮಹಿಳೆ ಲೂಯಿಸ್ ಅರನೆಟಾ-ಮಾರ್ಕೋಸ್ ಅವರಿಗೆ ಪೇಪಿಯರ್-ಮ್ಯಾಚೆ ಪೆಟ್ಟಿಗೆಯಲ್ಲಿ ಇರಿಸಿದ ಅಪರೂಪದ ಕಾಶ್ಮೀರಿ ಪಶ್ಮಿನಾ ಶಾಲು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ರಾಜಸ್ಥಾನದ ನಾಥದ್ವಾರದ ಸಾಂಪ್ರದಾಯಿಕ ಗೋಲ್ಡನ್ ಪಿಚ್ವಾಯಿ ಚಿತ್ರಕಲೆ, ಬಟ್ಟೆಯ ಮೇಲೆ ಖನಿಜ ವರ್ಣಗಳು ಮತ್ತು ಚಿನ್ನದ ಲೇಪನದಿಂದ ಕಮಲ, ಹಸು ಮತ್ತು ಪ್ರಕೃತಿಯನ್ನು ಸುಂದರವಾಗಿ ಚಿತ್ರಿಸಲಾಗಿದೆ. ಅದೇ ರೀತಿ, ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರಿಗೆ ರಾಜಸ್ಥಾನದ ಪ್ರಸಿದ್ಧ ಜೈಪುರ ಬ್ಲೂ ಪಾಟರಿ ಕಲಾಕೃತಿಯನ್ನು ಹಾಗೂ ಲಾವೋಸ್ ಪ್ರಧಾನಿಗೆ ರಾಜಸ್ಥಾನದ ಕಲ್ಲಿನ ಕೆತ್ತನೆ ಮತ್ತು ಚಿನ್ನದ ಅಲಂಕಾರವಿರುವ ರೋಸ್ ಕ್ವಾರ್ಟ್ಜ್ ಆನೆಯ ಕಲಾಕೃತಿಯನ್ನು ಉಡುಗೊರೆಯಾಗಿ ನೀಡಲಾಗಿದೆ.

ಬನಾರಸಿ ರೇಷ್ಮೆ, ಚೋಳರ ಕಂಚು ಮತ್ತು ಗುಜರಾತ್ ಕಲೆ

ಜಪಾನ್ ಪ್ರಧಾನಿ ಸನಾಯೆ ತಕೈಚಿ ಅವರಿಗೆ ಸದೇಲಿ ಪೆಟ್ಟಿಗೆಯಲ್ಲಿ ಇರಿಸಿದ ರಾಯಲ್ ಬ್ಲೂ ಬಣ್ಣದ ಬನಾರಸಿ ಕತಾನ್ ರೇಷ್ಮೆ ಸ್ಟೋಲ್ ಉಡುಗೊರೆಯಾಗಿ ನೀಡಲಾಗಿದೆ. ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರಿಗೆ ತಮಿಳುನಾಡಿನ ಚೋಳರ ಪರಂಪರೆಯ ಕಂಚಿನ ಶಿಲ್ಪ, ಕಾಂಬೋಡಿಯಾ ಪ್ರಧಾನಿ ಹುನ್ ಮಾನೆಟ್ ಅವರಿಗೆ ಪ್ರಾಚೀನ ಲಾಸ್ಟ್-ವ್ಯಾಕ್ಸ್ ತಂತ್ರಜ್ಞಾನದಲ್ಲಿ ತಯಾರಿಸಿದ ಏಕತೆ ಮತ್ತು ಪ್ರಗತಿಯ ಸಂಕೇತವಾದ ಡೋಕ್ರಾ ದೋಣಿ ಶಿಲ್ಪ. ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರಿಗೆ ಸಮೃದ್ಧಿ ಮತ್ತು ಆತಿಥ್ಯದ ಸಂಕೇತವಾದ ಸಾಂಪ್ರದಾಯಿಕ ಬೆಳ್ಳಿ ಕೆತ್ತನೆಯ ಉರುಳಿ ಪಾತ್ರೆಯನ್ನು ಉಡುಗೊರೆಯಾಗಿ ನೀಡಲಾಗಿದೆ.

ಗುಜರಾತ್‌ನ ಕಚ್ ಜಿಲ್ಲೆಯ ನಿರೋನಾ ಗ್ರಾಮದ ಕೆಲವೇ ಕುಟುಂಬಗಳು ಉಳಿಸಿಕೊಂಡು ಬಂದಿರುವ ಅಪರೂಪದ ರೋಗನ್ ಆರ್ಟ್ ವಸ್ತ್ರ ಚಿತ್ರಕಲೆಯನ್ನು ಥೈಲ್ಯಾಂಡ್ ಪ್ರಧಾನಿಗೆ ನೀಡಲಾಗಿದೆ. ಟಿಮೋರ್-ಲೆಸ್ಟೆ ಪ್ರಧಾನಿ ಕ್ಸನಾನಾ ಗುಸ್ಮಾವೊ ಅವರಿಗೆ ಗುಜರಾತ್‌ನ ಖಂಭತ್‌ನ ಅಗೇಟ್ ಕಲ್ಲಿನ ಬಟ್ಟಲು ಹಾಗೂ ವಿಯೆಟ್ನಾಂ ಪ್ರಧಾನಿ ಲೆ ಮಿನ್ ಹಂಗ್ ಅವರಿಗೆ ಭಾರತದ ಜಾನಪದ ಶೈಲಿಯ ಸಾಂಪ್ರದಾಯಿಕ ಚರ್ಮದ ಗೋಡೆ ಅಲಂಕಾರಿಕ ಕಲಾಕೃತಿಯನ್ನು ಪ್ರಧಾನಿ ಮೋದಿ ಉಡುಗೊರೆಯಾಗಿ ನೀಡಿದ್ದಾರೆ.

ಬನಾರಸ್‌ನ ಮಗ್ಗಗಳಿಂದ ಹಿಡಿದು ಕಚ್ ಮತ್ತು ಬೀದರ್‌ನ ಕುಶಲಕರ್ಮಿಗಳ ಕಾರ್ಯಾಗಾರಗಳವರೆಗೆ ಭಾರತದ ಮೂಲೆ ಮೂಲೆಯ ಸಾಂಪ್ರದಾಯಿಕ ಕಲೆಗಳಿಗೆ ಪ್ರಧಾನಿ ಮೋದಿ ಅವರು ಈ ಉಡುಗೊರೆಗಳ ಮೂಲಕ ಜಾಗತಿಕ ಮನ್ನಣೆ ದೊರಕಿಸಿಕೊಟ್ಟಿದ್ದಾರೆ ಎಂದರೆ ತಪ್ಪಾಗದು(ಏಜೆನ್ಸೀಸ್​).