Petrol, Diesel ದರ ಹೆಚ್ಚಳ! ಚುನಾವಣೆ ಬೆನ್ನಲ್ಲೇ ಬೆಲೆ ಏರಿಕೆ ವದಂತಿಗೆ ಬ್ರೇಕ್ ಹಾಕಿದ ಕೇಂದ್ರ

Petrol, Diesel
Petrol, Diesel
Published on
ನವದೆಹಲಿ: ವಿಧಾನಸಭಾ ಚುನಾವಣೆ ಮುಗಿದ ತಕ್ಷಣ ತೈಲ ಬೆಲೆ (Petrol, Diesel) ಗಗನಕ್ಕೇರಲಿದೆ ಎಂಬ ವದಂತಿಗಳಿಂದ ಕಂಗಾಲಾಗಿದ್ದ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಪಶ್ಚಿಮ ಬಂಗಾಳದ ಅಂತಿಮ ಹಂತದ ಮತದಾನ ಏಪ್ರಿಲ್ 29ಕ್ಕೆ ಮುಕ್ತಾಯವಾಗಲಿದ್ದು, ಆ ನಂತರ ಇಂಧನ ದರ ಏರಿಕೆಯಾಗುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟಪಡಿಸಿದೆ.
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ "ಚುನಾವಣೆ ಮುಗಿದ ಮರುದಿನವೇ ತೈಲ ಬೆಲೆ ಏರಿಕೆಯಾಗಲಿದೆ" ಎಂಬ ವದಂತಿಗಳು ಕಾಡ್ಗಿಚ್ಚಿನಂತೆ ಹರಡಿದ್ದವು. ಇದರಿಂದಾಗಿ ಆಂಧ್ರಪ್ರದೇಶ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಜನ ಮುಗಿಬಿದ್ದು ಪೆಟ್ರೋಲ್ ತುಂಬಿಸಿಕೊಳ್ಳಲು ಮುಂದಾಗಿದ್ದರು. ಆಂಧ್ರಪ್ರದೇಶದ ಸುಮಾರು 400ಕ್ಕೂ ಹೆಚ್ಚು ಪೆಟ್ರೋಲ್ ಬಂಕ್‌ಗಳು ಭಾನುವಾರ ಸ್ಟಾಕ್ ಇಲ್ಲದೆ ಖಾಲಿಯಾಗಿದ್ದವು. ಕೆಲವು ಕಡೆ ಬೇಡಿಕೆಯು ಶೇ. 30 ರಿಂದ 33 ರಷ್ಟು ಏರಿಕೆಯಾಗಿದ್ದು, ಪೆಟ್ರೋಲ್ ಬಂಕ್‌ಗಳ ಮುಂದೆ ಕಿಲೋಮೀಟರ್ ಉದ್ದದ ಸಾಲುಗಳು ಕಂಡುಬಂದಿದ್ದವು.

ಸರ್ಕಾರದ ಸ್ಪಷ್ಟನೆ

ಈ ಪರಿಸ್ಥಿತಿಯನ್ನು ಗಮನಿಸಿದ ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, "ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಜನರು ವದಂತಿಗಳನ್ನು ನಂಬಬೇಡಿ ಮತ್ತು ಗಾಬರಿಯಿಂದ ಮುಗಿಬಿದ್ದು ಇಂಧನ ಖರೀದಿಸಬೇಡಿ (Panic Buying)," ಎಂದು ಮನವಿ ಮಾಡಿದ್ದಾರೆ. ಅಲ್ಲದೆ, ದೇಶದಲ್ಲಿ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಮತ್ತು ವಿಮಾನ ಇಂಧನದ (ATF) ಸಾಕಷ್ಟು ದಾಸ್ತಾನು ಇದೆ ಎಂದು ಅವರು ಭರವಸೆ ನೀಡಿದ್ದಾರೆ.

ತೈಲ ಕಂಪನಿಗಳಿಗೆ ನಷ್ಟದ ಹೊರೆ

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರುತ್ತಿದ್ದರೂ, ಭಾರತದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಇಂಧನ ದರದಲ್ಲಿ ದೊಡ್ಡ ಬದಲಾವಣೆಯಾಗಿಲ್ಲ. ಇದರಿಂದಾಗಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಭಾರಿ ನಷ್ಟ ಅನುಭವಿಸುತ್ತಿವೆ. ಅಂಕಿಅಂಶಗಳ ಪ್ರಕಾರ, ತೈಲ ಕಂಪನಿಗಳಿಗೆ ಪ್ರತಿದಿನ ಸುಮಾರು 2,400 ಕೋಟಿ ರೂ. ನಷ್ಟವಾಗುತ್ತಿದೆ. ಪೆಟ್ರೋಲ್ ಮೇಲೆ ಪ್ರತಿ ಲೀಟರ್‌ಗೆ 20 ರೂ. ಮತ್ತು ಡೀಸೆಲ್ ಮೇಲೆ ಬರೋಬ್ಬರಿ 100 ರೂ.ಗಳಷ್ಟು ನಷ್ಟ ಅನುಭವಿಸುತ್ತಾ ಕಂಪನಿಗಳು ಮಾರಾಟ ಮಾಡುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾಗತಿಕ ಯುದ್ಧದ ಬಿಸಿ

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷದಿಂದಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದೆ. ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುವ ವ್ಯಾಪಾರಕ್ಕೆ ಅಡ್ಡಿಯಾಗುವ ಭೀತಿಯಿಂದಾಗಿ ಕಚ್ಚಾ ತೈಲದ ಬೆಲೆ ಕಳೆದ ಎರಡು ತಿಂಗಳಲ್ಲಿ ಶೇ. 50 ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ಬ್ಯಾರೆಲ್‌ಗೆ 70 ಡಾಲರ್ ಇದ್ದ ಬೆಲೆ ಈಗ ಸರಾಸರಿ 114 ಡಾಲರ್ ತಲುಪಿದೆ. ಈ ಏರಿಕೆಯು ಭಾರತದಂತಹ ಆಮದು ಅವಲಂಬಿತ ದೇಶದ ಮೇಲೆ ತೀವ್ರ ಒತ್ತಡ ಹೇರುತ್ತಿದೆ.

ಸ್ಥಿರವಾಗಿರುವ ದರಗಳು

ಭಾರತದಲ್ಲಿ 2022ರ ಏಪ್ರಿಲ್‌ನಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಬಹುತೇಕ ಸ್ಥಿರವಾಗಿಡಲಾಗಿದೆ. ಸದ್ಯ ದೆಹಲಿಯಲ್ಲಿ ಪೆಟ್ರೋಲ್ ಲೀಟರ್‌ಗೆ 94.77 ರೂ. ಮತ್ತು ಡೀಸೆಲ್ 87.67 ರೂ. ಇದೆ. ಬೆಂಗಳೂರಿನಲ್ಲೂ ದರಗಳಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಚುನಾವಣೆ ಮುಗಿದ ನಂತರವೂ ಇದೇ ದರ ಮುಂದುವರಿಯಲಿದೆ ಎಂಬ ಸರ್ಕಾರದ ಭರವಸೆಯು ವಾಹನ ಸವಾರರಿಗೆ ತಾತ್ಕಾಲಿಕ ಸಮಾಧಾನ ತಂದಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net