ಜನ ಬದಲಾವಣೆ ಬಯಸುತ್ತಿದ್ದಾರೆ: ಬಂಕಿಪುರ ಗೆಲುವಿಗೆ ಪ್ರಶಾಂತ್ ಕಿಶೋರ್​ರನ್ನು ಅಭಿನಂದಿಸಿದ ಮಾಜಿ ಸಿಎಂ ಕೇಜ್ರಿವಾಲ್ | Ex CM Kejriwal

ಅರವಿಂದ್ ಕೇಜ್ರಿವಾಲ್ ಮತ್ತು ಪ್ರಶಾಂತ್ ಕಿಶೋರ್
ಅರವಿಂದ್ ಕೇಜ್ರಿವಾಲ್ ಮತ್ತು ಪ್ರಶಾಂತ್ ಕಿಶೋರ್
Published on
ನವದೆಹಲಿ: ಬಿಹಾರದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಸ್ವಕ್ಷೇತ್ರವಾದ ಬಂಕಿಪುರ ಉಪಾಚುನಾವಣೆಯಲ್ಲಿ ಜನ್ ಸುರಾಜ್ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಗೆದ್ದು ಬೀಗಿದ್ದು, ಬಿಜೆಪಿಯ 30 ವರ್ಷಗಳ ಅದಿಪತ್ಯವನ್ನು ಧೂಳಿಪಟ ಮಾಡಿದ್ದಾರೆ. ಈ ಕುರಿತು ಸಂತೋಷ ವ್ಯಕ್ತಪಡಿಸಿರುವ ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್(Ex CM Kejriwal) ಅವರು ಪ್ರಶಾಂತ್ ಕಿಶೋರ್ ಅವರನ್ನು ಅಭಿನಂದಿಸಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಬಿಜೆಪಿ ತನ್ನ ರಾಷ್ಟ್ರೀಯ ಅಧ್ಯಕ್ಷರ ಸ್ವಕ್ಷೇತ್ರವನ್ನು ಕಳೆದುಕೊಂಡಿದೆ. ದೇಶದ ಜನರು ಬದಲಾವಣೆ ಬಯಸಿದ್ದಾರೆ. ಪ್ರಶಾಂತ್ ಕಿಶೋರ್ ಅವರು ಬಂಕಿಪುರದಿಂದ ಭಾರಿ ಅಂತರದಿಂದ ಗೆದ್ದಿದ್ದಾರೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಹೇಳಿದ್ದಾರೆ.
ಉಪಚುನಾವಣೆಯಲ್ಲಿ ಬಿಜೆಪಿಯ ನೀರಜ್ ಕುಮಾರ್ ಅವರನ್ನು 18,953 ಮತಗಳಿಂದ ಸೋಲಿಸುವ ಮೂಲಕ ಜನ ಸುರಾಜ್ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಸೋಮವಾರ(ಆ. 03) ಭಾರಿ ಗೆಲುವು ಸಾಧಿಸಿದ್ದು, ತಮ್ಮ ಪಕ್ಷಕ್ಕೆ ಮೊದಲ ಚುನಾವಣಾ ಗೆಲುವು ನೀಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವರ ಪಕ್ಷ ಹೀನಾಯವಾಗಿ ಸೋತಿತ್ತು.


ಪ್ರಶಾಂತ್ ಕಿಶೋರ್ ಅವರ ಈ ಗೆಲುವು 1995ರಿಂದ ಬಿಹಾರದಲ್ಲಿ ಬಿಜೆಪಿಯ ಪ್ರಬಲ ಭದ್ರಕೋಟೆಗಳಲ್ಲಿ ಒಂದಾದ ಬಂಕಿಪುರ ಕ್ಷೇತ್ರದ ಮೇಲಿನ 35 ವರ್ಷಗಳ ನಿರಂತರ ಹಿಡಿತವನ್ನು ಕೊನೆಗೊಳಿಸಿದೆ. ಮತ್ತು ಪ್ರಶಾಂತ್ ಅವರ ಮುಂಬರುವ ರಾಜಕೀಯಕ್ಕೆ ದಾರಿ ಎಂದೇ ಪರಿಗಣಿಸಲಾಗಿದೆ.
ಬಂಕಿಪುರ ಕ್ಷೇತ್ರವನ್ನು ಪಶ್ಚಿಮ ಪಾಟ್ನಾ ಎಂದು ಕರೆಯಲಾಗುತ್ತಿತ್ತು. 1995ರಿಂದ ನಿರಂತರವಾಗಿ ಈ ಕ್ಷೇತ್ರವನ್ನು ಬಿಜೆಪಿ ಗೆಲ್ಲುತ್ತಾ ಬಂದಿದೆ. ಏಪ್ರಿಲ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ರಾಜ್ಯಸಭೆಗೆ ಆಯ್ಕೆಯಾದ ಬಳಿಕ ಉಪಚುನಾವಣೆ ನಡೆದಿದೆ. 2025ರ ವಿಧಾನಸಭಾ ಚುನಾವಣೆಯಲ್ಲಿ ನವೀನ್ ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net