ನನ್ನ ಮನೆ ಕೆಡವಿದವರಿಗೆ ಜನರೇ ತಕ್ಕ ಪಾಠ ಕಲಿಸಿದ್ದಾರೆ! ಬಿಎಂಸಿ ಫಲಿತಾಂಶಕ್ಕೆ ಕಂಗನಾ ಖಡಕ್ ಪ್ರತಿಕ್ರಿಯೆ | Kangana Ranaut

ಧ್ವಂಸಗೊಂಡಿರುವ ಕಂಗನಾ ರನೌತ್ ಮನೆ , ಉದ್ಧವ್​ ಠಾಕ್ರೆ
ಧ್ವಂಸಗೊಂಡಿರುವ ಕಂಗನಾ ರನೌತ್ ಮನೆ , ಉದ್ಧವ್​ ಠಾಕ್ರೆ
Published on

ಪ್ರಮುಖ ಮುಖ್ಯಾಂಶಗಳು

  • ಮಹಾರಾಷ್ಟ್ರದ ಬಿಎಂಸಿ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು
  • ಮೂವತ್ತು ವರ್ಷಗಳ ಶಿವಸೇನೆಯ ಪಾರುಪತ್ಯಕ್ಕೆ ತಿಲಾಂಜಲಿ
  • ಉದ್ಧವ್ ಠಾಕ್ರೆ ವಿರುದ್ಧ ಹರಿಹಾಯ್ದ ನಟಿ, ಸಂಸದೆ ಕಂಗನಾ ರನೌತ್
ನವದೆಹಲಿ: ಏಷ್ಯಾದ ಅತ್ಯಂತ ಶ್ರೀಮಂತ ಪುರಸಭೆಯಾದ ಮಹಾರಾಷ್ಟ್ರದ ಬಿಎಂಸಿ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವನ್ನು ಸಾಧಿಸಿ, ಮೂವತ್ತು ವರ್ಷಗಳ ಶಿವಸೇನೆಯ ಪಾರುಪತ್ಯಕ್ಕೆ ತಿಲಾಂಜಲಿ ಹಾಡಿತು.
ಈ ಅಭೂತಪೂರ್ವ ಗೆಲುವಿಗಾಗಿ ಬಾಲಿವುಡ್​ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರನೌತ್ (Kangana Ranaut) ತಮ್ಮ ಪಕ್ಷದ ಪ್ರಧಾನಿ ನರೇಂದ್ರ ಮೋದಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೇರಿದಂತೆ ಇತರೆ ನಾಯಕರನ್ನು ಅಭಿನಂದಿಸಿದ್ದಾರೆ. 2020 ರಲ್ಲಿ ಅವಿಭಜಿತ ಶಿವಸೇನೆ ಅಧಿಕಾರದಲ್ಲಿದ್ದಾಗ ಮುಂಬೈನಲ್ಲಿರುವ ಕಂಗನಾ ಅವರ ಬಂಗಲೆಗೆ ಹೊಂದಿಕೊಂಡಿದ್ದ ಕಚೇರಿಯನ್ನು ಕೆಡವಿದ ಘಟನೆಗೆ ತನಗೆ ನ್ಯಾಯ ದೊರೆತಿದೆ ಎಂದು ಕಂಗನಾ ಹೇಳಿದ್ದಾರೆ.
ಮಹಾರಾಷ್ಟ್ರ ಬಿಎಂಸಿ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿನಿಂದ ನಾನು ಸಂಪೂರ್ಣವಾಗಿ ರೋಮಾಂಚನಗೊಂಡಿದ್ದೇನೆ. ಈ ಅದ್ಭುತ ಗೆಲುವಿಗಾಗಿ ನಾನು ಪ್ರಧಾನಿ ನರೇಂದ್ರ ಮೋದಿ ಜಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಜಿ ಮತ್ತು ಮಹಾರಾಷ್ಟ್ರದ ಇಡೀ ಬಿಜೆಪಿ ಕುಟುಂಬವನ್ನು ನಾನು ಅಭಿನಂದಿಸುತ್ತೇನೆ ಎಂದು ಕಂಗನಾ ರನೌತ್ ತಿಳಿಸಿದರು.
ಯಾರು ನನ್ನನ್ನು ನಿಂದಿಸಿದರೋ, ನನ್ನ ಮನೆಯನ್ನು ಕೆಡವಿದರೋ, ಯಾರು ನನಗೆ ಮಹಾರಾಷ್ಟ್ರವನ್ನು ತೊರೆಯುವಂತೆ ಬೆದರಿಕೆ ಹಾಕಿದರೋ ಇಂದು ಜನ ಅವರನ್ನೇ ಮಹಾರಾಷ್ಟ್ರದಿಂದ ಹೊರಹಾಕಿದ್ದಾರೆ ಎಂದು ಹೇಳಿದರು. ಮಹಿಳೆಯರಿಗೆ ಗೌರವ ಕೊಡದ, ಬೆದರಿಸುವ ಇಂತಹ ಮಾಫಿಯಾಗಳಿಗೆ ಜನತೆ ತಕ್ಕ ಪಾಠ ಕಲಿಸಿದೆ ಎಂದು ಹೇಳಿದರು.
ಮುಂಬೈನ 227 ಸ್ಥಾನಗಳಲ್ಲಿ ಬಿಜೆಪಿ 89 ಸ್ಥಾನಗಳಲ್ಲಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 29 ಚುನಾವಣಾ ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದರೆ, ಪ್ರತ್ಯೇಕವಾಗಿ ಸ್ಪರ್ಧಿಸಿದ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಕೇವಲ ಮೂರು ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದೆ.
ವಿರೋಧ ಪಕ್ಷದ ಶಿಬಿರದಲ್ಲಿ, ಉದ್ಧವ್​ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಮತ್ತು ಅದರ ಮಿತ್ರ ಪಕ್ಷ ಮಹಾರಾಷ್ಟ್ರ ನವನಿರ್ಮಾಣ ಸೇನೆ ಕ್ರಮವಾಗಿ 65 ಮತ್ತು 6 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿವೆ. ವಂಚಿತ್ ಬಹುಜನ ಅಘಾಡಿ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ ಕಾಂಗ್ರೆಸ್ 24 ವಾರ್ಡ್‌ಗಳಲ್ಲಿ ಮತ್ತು ಇತರರು 10 ವಾರ್ಡ್‌ಗಳಲ್ಲಿ ಗೆಲುವನ್ನು ಕಂಡಿದ್ದಾರೆ. ಬಿಜೆಪಿಯ ಈ ಗೆಲುವು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಮೇಲಿನ ಶಿವಸೇನೆ (UBT) ಹಿಡಿತವನ್ನು ಕೊನೆಗೊಳಿಸಿತು.
ಬಿಜೆಪಿ 137 ಸ್ಥಾನಗಳಲ್ಲಿ ಮತ್ತು ಶಿವಸೇನೆ 90 ಸ್ಥಾನಗಳಲ್ಲಿ ಸ್ಪರ್ಧಿಸಿದರೆ, ಅಜಿತ್ ಪವಾರ್ ಎನ್‌ಸಿಪಿ ಬಣವು 94 ಸ್ಥಾನಗಳಲ್ಲಿ ಪ್ರತ್ಯೇಕವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತು. ಶಿವಸೇನೆ (UBT) 163 ಅಭ್ಯರ್ಥಿಗಳನ್ನು, ಎಂಎನ್​ಎಸ್​ 52, ಕಾಂಗ್ರೆಸ್ 143 ಮತ್ತು VBA (ವಂಚಿತ್ ಬಹುಜನ್ ಅಘಾಡಿ) 46 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net