20 ವರ್ಷಗಳ ಸುದೀರ್ಘ ಕಾನೂನು ಹೋರಾಟ ಅಂತ್ಯ!... ನಿಂಬಾಳ್ಕರ್ ಕೊಲೆ ಪ್ರಕರಣದಲ್ಲಿ ಎಲ್ಲಾ 9 ಆರೋಪಿಗಳಿಗೆ ಕ್ಲೀನ್ ಚೀಟ್ | Pawanraje Nimbalkar Case

Pawanraje Nimbalkar Case > 20 ವರ್ಷಗಳ ಸುದೀರ್ಘ ಕಾನೂನು ಹೋರಾಟ ಅಂತ್ಯ!... ನಿಂಬಾಳ್ಕರ್ ಕೊಲೆ ಪ್ರಕರಣದಲ್ಲಿ ಎಲ್ಲಾ 9 ಆರೋಪಿಗಳಿಗೆ ಕ್ಲೀನ್ ಚೀಟ್
Pawanraje Nimbalkar Case > 20 ವರ್ಷಗಳ ಸುದೀರ್ಘ ಕಾನೂನು ಹೋರಾಟ ಅಂತ್ಯ!... ನಿಂಬಾಳ್ಕರ್ ಕೊಲೆ ಪ್ರಕರಣದಲ್ಲಿ ಎಲ್ಲಾ 9 ಆರೋಪಿಗಳಿಗೆ ಕ್ಲೀನ್ ಚೀಟ್
Published on
Pawanraje Nimbalkar Case: ಮಹಾರಾಷ್ಟ್ರ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಕಾಂಗ್ರೆಸ್ ಮಾಜಿ ನಾಯಕ ಪವನ್‌ರಾಜೆ ನಿಂಬಾಳ್ಕರ್ ಮತ್ತು ಅವರ ಚಾಲಕ ಸಮದ್ ಕಾಜಿ ಜೋಡಿ ಕೊಲೆ ಪ್ರಕರಣದ ಎಲ್ಲಾ 9 ಮಂದಿ ಆರೋಪಿಗಳನ್ನು ವಿಶೇಷ ಸಿಬಿಐ (CBI) ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಳಿಸಿದೆ. ಹತ್ಯೆಯ ಮುಖ್ಯ ಸಂಚುಕೋರ ಎಂದು ಸಿಬಿಐ ಹೆಸರಿಸಿದ್ದ ಎನ್‌ಸಿಪಿ ಮಾಜಿ ನಾಯಕ ಪದ್ಮಸಿಂಹ ಪಾಟೀಲ್ ಖುಲಾಸೆಗೊಂಡವರಲ್ಲಿ ಪ್ರಮುಖರಾಗಿದ್ದು, ಇದರೊಂದಿಗೆ ಸುಮಾರು ಎರಡು ದಶಕಗಳ ಕಾಲ ನಡೆದ ಕೊಲೆ ಪ್ರಕರಣದ ಸುದೀರ್ಘ ಕಾನೂನು ಹೋರಾಟಕ್ಕೆ ತೆರೆ ಬಿದ್ದಂತಾಗಿದೆ.
ತೀರ್ಪು ಪ್ರಕಟವಾಗುವ ಮುನ್ನ ರಾಜಕೀಯ ನಾಯಕರು ಹಾಗೂ ಬೆಂಬಲಿಗರು ನ್ಯಾಯಾಲಯದ ಆವರಣದಲ್ಲಿ ಜಮಾಯಿಸಿದ್ದರು. ಪವನ್‌ರಾಜೆ ನಿಂಬಾಳ್ಕರ್ ಅವರ ಪುತ್ರ ಹಾಗೂ ಶಿವಸೇನಾ (UBT) ರೆಬೆಲ್ಸ್​ ಸಂಸದ ಓಂರಾಜೆ ನಿಂಬಾಳ್ಕರ್ ಕುಟುಂಬ ಸಮೇತರಾಗಿ ನ್ಯಾಯಾಲಯಕ್ಕೆ ಆಗಮಿಸಿದ್ದರೆ, ಇತ್ತ ಪ್ರಮುಖ ಆರೋಪಿಯಾಗಿದ್ದ ಪದ್ಮಸಿಂಹ ಪಾಟೀಲ್ ಕೂಡ ತಮ್ಮ ಕುಟುಂಬದೊಂದಿಗೆ ಕೋರ್ಟ್‌ಗೆ ಹಾಜರಾಗಿದ್ದರು.

ಏನಿದು ಪವನ್‌ರಾಜೆ ನಿಂಬಾಳ್ಕರ್ ಕೊಲೆ ಪ್ರಕರಣ..?

2006 ಜೂನ್ 3ರಂದು ಪವನ್‌ರಾಜೆ ನಿಂಬಾಳ್ಕರ್ ಮತ್ತು ಅವರ ಚಾಲಕ ಸಮದ್ ಕಾಜಿ ಮುಂಬೈನಿಂದ ಒಸ್ಮಾನಾಬಾದ್ (ಈಗಿನ ಧಾರಾಶಿವ್) ಗೆ ಪ್ರಯಾಣಿಸುತ್ತಿದ್ದಾಗ, ನವಿ ಮುಂಬೈನ ಕಲಂಬೋಲಿ ಬಳಿ ದುಷ್ಕರ್ಮಿಗಳು ಅವರ ವಾಹನವನ್ನು ತಡೆದು ಗುಂಡಿನ ದಾಳಿ ನಡೆಸಿದ್ದರು. ಈ ಭೀಕರ ದಾಳಿಯಲ್ಲಿ ನಿಂಬಾಳ್ಕರ್ ಮತ್ತು ಕಾಜಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಕೊಲೆಯಾಗುವ ಸಮಯದಲ್ಲಿ ನಿಂಬಾಳ್ಕರ್ ಅವರು ಹಾಲಿ ಶಾಸಕರಾಗಿದ್ದರು. ರಾಜಕೀಯ ಮತ್ತು ವಾಣಿಜ್ಯ ವೈಷಮ್ಯದ ಹಿನ್ನೆಲೆಯಲ್ಲಿ ನಿಂಬಾಳ್ಕರ್ ಅವರನ್ನು ಮಟ್ಟಹಾಕಲು ಸುಮಾರು 30 ಲಕ್ಷ ರೂಪಾಯಿ ಸುಪಾರಿ ನೀಡಲಾಗಿತ್ತು ಎಂದು ಸಿಬಿಐ ತನಿಖೆ ವೇಳೆ ಆರೋಪಿಸಿತ್ತು. ಮಾಜಿ ಸಂಸದ ಪದ್ಮಸಿಂಹ ಪಾಟೀಲ್ ಅವರನ್ನು ಈ ಪ್ರಕರಣದ ಮುಖ್ಯ ಸಂಚುಕೋರ ಎಂದು ಹೆಸರಿಸಲಾಗಿತ್ತು ಮತ್ತು ಅವರೊಂದಿಗೆ ಒಬ್ಬ ಉದ್ಯಮಿ, ನಿವೃತ್ತ ಅಬಕಾರಿ ಅಧಿಕಾರಿ ಹಾಗೂ ಶೂಟರ್‌ಗಳನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ಆದರೆ, ಪದ್ಮಸಿಂಹ ಪಾಟೀಲ್ ಆರಂಭದಿಂದಲೂ ಈ ಆರೋಪಗಳನ್ನು ನಿರಂತರವಾಗಿ ನಿರಾಕರಿಸುತ್ತಲೇ ಬಂದಿದ್ದರು.

ಸಂಜಯ್​ ರಾವತ್​ ಬಾಂಬ್​!..

20 ವರ್ಷ ಹಳೆಯದಾದ ತಂದೆಯ ಕೊಲೆ ಪ್ರಕರಣದಲ್ಲಿ ತಮಗೆ ಪೂರಕವಾದ ತೀರ್ಪು ಬರುವ ಭರವಸೆ ಸಿಕ್ಕಿದ್ದಕ್ಕೇ ಓಮ್ರಾಜೆ ಪಕ್ಷಾಂತರಕ್ಕೆ ಮುಂದಾಗಿದ್ದಾರೆ ಎಂದು ಶಿವಸೇನೆಯ ಹಿರಿಯ ನಾಯಕ ಸಂಜಯ್ ರಾವತ್ ಬಾಂಬ್ ಸಿಡಿಸಿದ್ದರು.
ಈ ಕೊಲೆಯನ್ನು ಆರಂಭದಲ್ಲಿ ನವಿ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದರು. ಆದರೆ ಪೊಲೀಸರ ತನಿಖೆಯ ಪ್ರಗತಿಯ ಬಗ್ಗೆ ನಿಂಬಾಳ್ಕರ್ ಕುಟುಂಬಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಕಾನೂನು ಹೋರಾಟಕ್ಕೆ ಇಳಿದಿದ್ದರು. ಅವರ ಮನವಿಯನ್ನು ಪುರಸ್ಕರಿಸಿದ ಬಾಂಬೆ ಹೈಕೋರ್ಟ್, ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (CBI) ವಹಿಸಿ ಆದೇಶಿಸಿತು. ಇದಾದ ಬಳಿಕ 2009ರಲ್ಲಿ ಪದ್ಮಸಿಂಹ ಪಾಟೀಲ್ ಅವರನ್ನು ಬಂಧಿಸಲಾಯಿತಾದರೂ, ಅದೇ ವರ್ಷ ಅವರಿಗೆ ಜಾಮೀನು ಸಿಕ್ಕಿತ್ತು. ಜುಲೈ 2011 ರಲ್ಲಿ ಈ ಪ್ರಕರಣದ ನ್ಯಾಯಾಲಯದ ವಿಚಾರಣೆ ಅಧಿಕೃತವಾಗಿ ಪ್ರಾರಂಭವಾಗಿ, ಒಂದು ದಶಕಕ್ಕೂ ಹೆಚ್ಚು ಕಾಲ ಮುಂದುವರೆಯಿತು.
ಈ ಸುದೀರ್ಘ ವಿಚಾರಣೆಯ ಅವಧಿಯಲ್ಲಿ ಪ್ರಾಸಿಕ್ಯೂಷನ್ ಪರವಾಗಿ ಒಟ್ಟು 128 ಸಾಕ್ಷಿಗಳನ್ನು ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೂ ಆರೋಪಿಗಳ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಕೋರ್ಟ್ ಎಲ್ಲರನ್ನೂ ಮುಕ್ತಗೊಳಿಸಿದೆ. ಮಹಾರಾಷ್ಟ್ರದ ಇತಿಹಾಸದಲ್ಲೇ ಅತ್ಯಂತ ದೀರ್ಘಾವಧಿ ನಡೆದ ರಾಜಕೀಯ ಕೊಲೆ ಪ್ರಕರಣದ ವಿಚಾರಣೆ ಇದಾಗಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net