ಪವನ್ ಖೇರಾಗೆ ಬಿಗ್ ರಿಲೀಫ್; ಅಸ್ಸಾಂ ಸಿಎಂ ಪತ್ನಿ ಹೂಡಿದ್ದ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕನಿಗೆ ನಿರೀಕ್ಷಣಾ ಜಾಮೀನು! | Pawan Khera

Pawan Khera | ಕಾಂಗ್ರೆಸ್ ನಾಯಕ ಪವನ್ ಖೇರಾ
Pawan Khera | ಕಾಂಗ್ರೆಸ್ ನಾಯಕ ಪವನ್ ಖೇರಾ
Published on
ದೆಹಲಿ​​: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪತ್ನಿ ರಿನಿಕಿ ಭುಯಾನ್ ಶರ್ಮಾ ಹೂಡಿದ್ದ ಕ್ರಿಮಿನಲ್ ಮಾನನಷ್ಟ ಮತ್ತು ನಕಲಿ ದಾಖಲೆ ಸೃಷ್ಟಿಯ ಪ್ರಕರಣದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಪವನ್ ಖೇರಾಗೆ (Pawan Khera) ಸುಪ್ರೀಂ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು, ಅಸ್ಸಾಂ ಪೊಲೀಸರ ಬಂಧನದ ಭೀತಿಯಿಂದ ಅವರಿಗೆ ಮುಕ್ತಿ ಸಿಕ್ಕಂತಾಗಿದೆ.
ಗುವಾಹಟಿ ಹೈಕೋರ್ಟ್‌ನ ಆದೇಶವನ್ನು ರದ್ದುಪಡಿಸಿದ ನ್ಯಾಯಮೂರ್ತಿಗಳಾದ ಮಹೇಶ್ವರಿ ಮತ್ತು ಎ.ಎಸ್. ಚಂದೂರ್ಕರ್ ಅವರಿದ್ದ ಪೀಠವು, ವೈಯಕ್ತಿಕ ಸ್ವಾತಂತ್ರ್ಯ ಮತ್ತು ನ್ಯಾಯಯುತ ತನಿಖೆಯ ನಡುವೆ ಸಮತೋಲನ ಇರಬೇಕು ಎಂದು ಅಭಿಪ್ರಾಯಪಟ್ಟಿದೆ. ಈ ಆದೇಶದ ವೇಳೆ ನ್ಯಾಯಾಲಯವು ಉಭಯ ನಾಯಕರ ವಿರುದ್ಧವೂ ಕಠಿಣ ಅವಲೋಕನಗಳನ್ನು ಮಾಡಿದ್ದು, ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ನಾಯಕರು ನೀಡಿದ ಹೇಳಿಕೆಗಳನ್ನು ಖಂಡಿಸುವುದರ ಜೊತೆಗೆ, ಮುಖ್ಯಮಂತ್ರಿಗಳು ಬಳಸಿದ ಭಾಷೆಯು ಸಂಸದೀಯ ಮರ್ಯಾದೆಗೆ ತಕ್ಕುದಾಗಿಲ್ಲ ಎಂದು ಎಚ್ಚರಿಸಿದೆ.
ಪವನ್ ಖೇರಾ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ಈ ಪ್ರಕರಣದಲ್ಲಿ ಕಸ್ಟಡಿ ಬಂಧನದ ಅಗತ್ಯವಿಲ್ಲ ಮತ್ತು ಸಾಂವಿಧಾನಿಕ ಹುದ್ದೆಯಲ್ಲಿರುವವರು ಬಳಸುವ ಭಾಷೆ ಸಭ್ಯತೆಯಿಂದ ಕೂಡಿರಬೇಕು ಎನ್ನುತ್ತಾ ಅಂಬೇಡ್ಕರ್ ಅವರ ಆಶಯಗಳನ್ನು ಪ್ರಸ್ತಾಪಿಸಿದರು. ಮತ್ತೊಂದೆಡೆ, ಅಸ್ಸಾಂ ಪೊಲೀಸರ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪಾಸ್‌ಪೋರ್ಟ್ ನಕಲು ಮಾಡಿದ ಗಂಭೀರ ಆರೋಪ ಇರುವುದರಿಂದ ತನಿಖೆಗೆ ಕಸ್ಟಡಿ ಅಗತ್ಯ ಎಂದು ಜಾಮೀನು ನೀಡುವುದನ್ನು ಪ್ರಬಲವಾಗಿ ವಿರೋಧಿಸಿದರು.
ಈ ಕಾನೂನು ಸಮರವು ಅನೇಕ ತಿರುವುಗಳನ್ನು ಪಡೆದುಕೊಂಡ ಬಳಿಕ ಸುಪ್ರೀಂ ಕೋರ್ಟ್‌ನಲ್ಲಿ ಖೇರಾಗೆ ನೆಮ್ಮದಿ ಸಿಕ್ಕಂತಾಗಿದ್ದು, ಈ ಹಿಂದೆ ತೆಲಂಗಾಣ ಹೈಕೋರ್ಟ್ ನೀಡಿದ್ದ ಏಳು ದಿನಗಳ ನಿರೀಕ್ಷಣಾ ಜಾಮೀನಿನ ನಂತರ ಪ್ರಕರಣವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಸದ್ಯ ಸರ್ವೋಚ್ಛ ನ್ಯಾಯಾಲಯದ ಈ ಆದೇಶವು ವ್ಯಕ್ತಿಯ ಮೂಲಭೂತ ಹಕ್ಕು ಮತ್ತು ತನಿಖಾ ಪ್ರಕ್ರಿಯೆಗಳ ನಡುವಿನ ಸಮತೋಲನವನ್ನು ಎತ್ತಿ ಹಿಡಿದಿದ್ದು, ಅಸ್ಸಾಂ ಮತ್ತು ಕಾಂಗ್ರೆಸ್ ನಾಯಕರ ನಡುವಿನ ರಾಜಕೀಯ ಸಂಘರ್ಷಕ್ಕೆ ಕಾನೂನು ಚೌಕಟ್ಟಿನಲ್ಲಿ ತಾತ್ಕಾಲಿಕ ವಿರಾಮ ನೀಡಿದೆ.

ಪ್ರಕರಣದ ಹಿನ್ನಲೆ!..

ಅಸ್ಸಾಂ ಚುನಾವಣೆಗೂ ಮುನ್ನ ಸಿಎಂ ಹಿಮಂತ ಬಿಸ್ವಾ ಶರ್ಮಾ ಪತ್ನಿ ರಿನಿಕಿ ಭೂಯಾನ್ ಶರ್ಮಾ ಅವರು ದುಬೈ ಸೇರಿ ಮೂರು ವಿದೇಶಗಳ ಪಾಸ್​ಪೋರ್ಟ್​ ಹೊಂದಿದ್ದಾರೆ. ಮತ್ತು ವಿದೇಶದಲ್ಲಿ ಆಸ್ತಿ ಮಾಡಿದ್ದಾರೆ. ಹಾಗೂ ಅಮೆರಿಕ ಹಲವು ಕಂಪನಿಗಳಲ್ಲಿ ಕೋಟ್ಯಂತರ ರೂ. ಹಣವನ್ನು ಹೂಡಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಆರೋಪ ಮಾಡಿದ ತಕ್ಷಣ ಅಂದು ರಾತ್ರಿಯೇ ರಿನಿಕಿ ಭುಯಾನ್ ಶರ್ಮಾ, ಖೇರಾ ವಿರುದ್ಧ ಗುವಾಹಟಿ ಅಪರಾಧ ಶಾಖೆಯ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನ ವಿವಿಧ ವಿಭಾಗಗಳ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ದೆಹಲಿಯ ಖೇರಾ ಮನೆ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಬಂಧನ ಭೀತಿಯಿಂದ ಖೇರಾ ತೆಲಂಗಾಣ ಹೈಕೋರ್ಟ್​ನಿಂದ ಒಂದು ವಾರಗಳ ಕಾಲ ನಿರೀಕ್ಷಣಾ ಜಾಮೀನು ಪಡೆದಿದ್ದರು. ಆದರೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅಸ್ಸಾಂ ಪೊಲೀಸರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net