ನಾಯಿ ಕಚ್ಚಿ ಹಾಕಿದ ಚಪ್ಪಲಿಗೆ 5000 ರೂ. ಪರಿಹಾರ: ಕಂಪನಿಯ ಮೊಂಡುತನಕ್ಕೆ ಗ್ರಾಹಕ ನ್ಯಾಯಾಲಯದಲ್ಲಿ ಬಿಗ್ ಶಾಕ್! Sandals

ನಾಯಿ ಕಚ್ಚಿ ಹಾಕಿದ ಚಪ್ಪಲಿಗೆ 5000 ರೂ. ಪರಿಹಾರ: ಕಂಪನಿಯ ಮೊಂಡುತನಕ್ಕೆ ಗ್ರಾಹಕ ನ್ಯಾಯಾಲಯದಲ್ಲಿ ಬಿಗ್ ಶಾಕ್! Sandals
ನಾಯಿ ಕಚ್ಚಿ ಹಾಕಿದ ಚಪ್ಪಲಿಗೆ 5000 ರೂ. ಪರಿಹಾರ: ಕಂಪನಿಯ ಮೊಂಡುತನಕ್ಕೆ ಗ್ರಾಹಕ ನ್ಯಾಯಾಲಯದಲ್ಲಿ ಬಿಗ್ ಶಾಕ್! Sandals
Published on

ಪ್ರಮುಖ ಮುಖ್ಯಾಂಶಗಳು

  • ಬೀದಿನಾಯಿ ಕಚ್ಚಿದ ಸ್ಟ್ರಾಪ್‌ಗೆ ಕಂಪನಿಯಿಂದ ಹೊಸ ಚಪ್ಪಲಿ ಜೊತೆ 5,000 ರೂ. ದಂಡ
  • ಪಾದರಕ್ಷೆ ಕಂಪನಿಯನ್ನು ಕೋರ್ಟ್ ಮೆಟ್ಟಿಲೇರಿಸಿ ಧೂಳೀಪಟ ಮಾಡಿದ ಗ್ರಾಹಕ
  • ರಿಪೇರಿಗೆ ಒಪ್ಪದ ಕಂಪನಿಗೆ ಮಂಡಿಯೂರಿಸಿದ ಕೇರಳದ ಸಾಮಾಜಿಕ ಕಾರ್ಯಕರ್ತ
  • ಕೇವಲ ಒಂದು ದಿನದ ಹಳೆಯ ಚಪ್ಪಲಿಗಾಗಿ ಭರ್ಜರಿ ಕಾನೂನು ಹೋರಾಟ ಗೆದ್ದ ಬೋಬನ್
ಪಾಲಕ್ಕಾಡ್: ದೇವಸ್ಥಾನದ ಪ್ರವಾಸದ ವೇಳೆ ಬೀದಿನಾಯಿಯೊಂದು ಚಪ್ಪಲಿಯ ಸ್ಟ್ರಾಪ್ ಕಚ್ಚಿ, ಹರಿದುಹಾಕಿದ ಬಳಿಕ ಪಾದರಕ್ಷೆ ( Sandals ) ಕಂಪನಿಯೊಂದರ ವಿರುದ್ಧ ಕಾನೂನು ಹೋರಾಟ ಮಾಡಿ ಗ್ರಾಹಕ ನ್ಯಾಯಾಲಯದಲ್ಲಿ ದೊಡ್ಡ ಜಯ ಸಾಧಿಸಿದ ವಿಶೇಷ ಪ್ರಸಂಗವೊಂದು ಜರುಗಿದೆ. 
ಸಾಮಾಜಿಕ ಹಾಗೂ ಪರಿಸರ ಕಾರ್ಯಕರ್ತರಾದ ಬೋಬನ್ ಮಟ್ಟುಮಂತ ಎಂಬುವರು ಬ್ರ್ಯಾಂಡೆಡ್ ಕಂಪನಿಗಳು ಗ್ರಾಹಕರ ಹಕ್ಕುಗಳ ವಿಷಯದಲ್ಲಿ ಮೊಂಡುತನ ಪ್ರದರ್ಶಿಸಿದಾಗ ಸುಮ್ಮನೆ ಹಿಂದೆ ಸರಿಯಬಾರದು, ಬದಲಿಗೆ ನ್ಯಾಯಾಲಯದ ಮೆಟ್ಟಿಲೇರಿ ಪಾಠ ಕಲಿಸಬೇಕು ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ರೋಚಕ ಕಾನೂನು ಹೋರಾಟ ಮತ್ತು ಗ್ರಾಹಕನ ಅದ್ಭುತ ಗೆಲುವಿನ ಸುದ್ದಿ ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಘಟನೆಯ ವಿವರಕ್ಕೆ ಬರುವುದಾದರೆ, ಕೇರಳದ ಪಾಲಕ್ಕಾಡ್ ಮೂಲದ ಸಾಮಾಜಿಕ ಕಾರ್ಯಕರ್ತ ಬೋಬನ್ ಮಟ್ಟುಮಂತ ಅವರು ಕೇವಲ 690 ರೂಪಾಯಿ ಮೌಲ್ಯದ ಪಾದರಕ್ಷೆ ನಷ್ಟವನ್ನು, ಬರೋಬ್ಬರಿ 5,000 ರೂಪಾಯಿ ಪರಿಹಾರ ಹಾಗೂ ಒಂದು ಹೊಸ ಜೋಡಿ ಚಪ್ಪಲಿಗಳಾಗಿ ಬದಲಾಯಿಸಿಕೊಳ್ಳುವ ಮೂಲಕ ಗ್ರಾಹಕ ನ್ಯಾಯಾಲಯದಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ. ಕೋಝಿಕೋಡ್ ಮೂಲದ ಪಾದರಕ್ಷೆ ತಯಾರಿಕಾ ಕಂಪನಿಯ ವಿರುದ್ಧ ಬೋಬನ್​ ಅವರು ನಡೆಸಿದ ಕಾನೂನು ಹೋರಾಟದ ಹಿನ್ನೆಲೆಯಲ್ಲಿ, ಗ್ರಾಹಕ ನ್ಯಾಯಾಲಯದ ಆದೇಶದ ಮೇರೆಗೆ ನಡೆದ ಸಂಧಾನ ಮಾತುಕತೆಯಲ್ಲಿ ಕಂಪನಿಯು ಈ ಪರಿಹಾರ ನೀಡಲು ಒಪ್ಪಿಕೊಂಡಿದೆ.
ದೇವಸ್ಥಾನದ ಸಂಪ್ರದಾಯದಂತೆ ಬೋಬನ್ ಅವರು ಪ್ರಾರ್ಥನೆ ಸಲ್ಲಿಸಲು ಒಳಗೆ ಹೋಗುವ ಮುನ್ನ ತಮ್ಮ ಚಪ್ಪಲಿಗಳನ್ನು ಹೊರಗೆ ಬಿಟ್ಟಿದ್ದರು. ಒಳಗೆ ದೇವರ ಧ್ಯಾನದಲ್ಲಿ ಮುಳುಗಿದ್ದಾಗ, ಹೊರಗಿದ್ದ ಸ್ಥಳೀಯ ಬೀದಿನಾಯಿಯೊಂದು ಇವರ ಪಾದರಕ್ಷೆಯ ಮೇಲೆ ಕಣ್ಣಿಟ್ಟಿತ್ತು. ಬೋಬನ್ ಅವರು ಪ್ರಾರ್ಥನೆ ಮುಗಿಸಿ ಹೊರಗೆ ಬಂದು ನೋಡುವಷ್ಟರಲ್ಲಿ, ಆ ಶ್ವಾನವು ಚಪ್ಪಲಿಯ ಸ್ಟ್ರಾಪ್ ಅನ್ನು ಕಚ್ಚಿ ಸಂಪೂರ್ಣವಾಗಿ ಹರಿದು ಹಾಕಿತ್ತು.
ಆಗಷ್ಟೇ ಖರೀದಿ ಮಾಡಿದ್ದರಿಂದ ಆ ಚಪ್ಪಲಿಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲೇಬೇಕೆಂದು ನಿರ್ಧರಿಸಿದ ಬೋಬನ್, ಮರುದಿನವೇ ಸ್ಥಳೀಯ ಪಾದರಕ್ಷೆ ದುರಸ್ತಿ ಮಾಡುವವರ ಬಳಿ ತೆರಳಿದ್ದಾರೆ. ಆದರೆ, ಹರಿದುಹೋಗಿದ್ದ ಸ್ಟ್ರಾಪ್ ಅನ್ನು ಸರಿಪಡಿಸಲು ಬೇಕಾದ ನಿಖರವಾದ ಕಂದು ಬಣ್ಣದ ಮೆಟೀರಿಯಲ್ ಯಾರ ಬಳಿಯೂ ಸಿಗಲಿಲ್ಲ. ಇದರಿಂದ ಬೇಸರಗೊಂಡರೂ ಹಠ ಬಿಡದ ಬೋಬನ್, ನೇರವಾಗಿ ಚಪ್ಪಲಿ ತಯಾರಿಕಾ ಕಂಪನಿಯನ್ನೇ ವಾಟ್ಸಾಪ್ ಮೂಲಕ ಸಂಪರ್ಕಿಸಿದ್ದಾರೆ. 
ಚಪ್ಪಲಿಯನ್ನು ರಿಪೇರಿ ಮಾಡಿಕೊಡುವಂತೆ ಹಾಗೂ ಅದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ತಾವೇ ಭರಿಸುವುದಾಗಿ ಕಂಪನಿಗೆ ತಿಳಿಸಿದ್ದಾರೆ. ಅಷ್ಟೇ ಅಲ್ಲ, ರಿಪೇರಿಗೆ ಬೇಕಾದ ಕಚ್ಚಾ ವಸ್ತುವನ್ನು ನೀಡಿದರೆ ಸಾಕು ತಾವೇ ಸರಿಪಡಿಸಿಕೊಳ್ಳುವುದಾಗಿ ವಿನಂತಿಸಿದ್ದಾರೆ. ಆದರೆ, ಕಂಪನಿಯು ಇದಕ್ಕೆ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ನೀಡದೆ ಮೊಂಡುತನ ಪ್ರದರ್ಶಿಸಿದೆ.
ಕಂಪನಿಯ ಈ ಉಡಾಫೆ ವರ್ತನೆಯಿಂದ ಆಕ್ರೋಶಗೊಂಡ ಕಾರ್ಯಕರ್ತ ಬೋಬನ್, ತಮ್ಮ ವಕೀಲರಾದ ರತೀಶ್ ಗೋಪಾಲನ್ ಅವರ ಮೂಲಕ ನೇರವಾಗಿ ಜಿಲ್ಲಾ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನ್ಯಾಯಾಲಯವು ತಕ್ಷಣವೇ ಕಂಪನಿಗೆ ನೋಟಿಸ್ ಜಾರಿ ಮಾಡಿದ್ದು, ಕಾನೂನಿನ ಚಾಟಿಗೆ ಹೆದರಿದ ಕಂಪನಿಯ ಪ್ರತಿನಿಧಿಗಳು ಕೊನೆಗೆ ಸಂಧಾನದ ಮೇಜಿಗೆ ಬರಲೇಬೇಕಾಯಿತು. 
ಎರಡು ಸುತ್ತುಗಳ ಸಂಧಾನ ಮಾತುಕತೆಯ ನಂತರ ಪಾದರಕ್ಷೆ ಕಂಪನಿಯು ಸಂಪೂರ್ಣವಾಗಿ ಮಣಿದಿದ್ದು, ಎರಡನೇ ಸಭೆಯಲ್ಲಿ ಬೋಬನ್‌ ಅವರಿಗೆ 5,000 ರೂಪಾಯಿಗಳ ಪೂರ್ಣ ಪರಿಹಾರ ಹಾಗೂ ಒಂದು ಹೊಸ ಜೋಡಿ ಚಪ್ಪಲಿಗಳನ್ನು ನೀಡಲು ಒಪ್ಪಿಕೊಂಡು ಅಂತಿಮ ಒಪ್ಪಂದಕ್ಕೆ ಸಹಿ ಹಾಕಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net