ರೈಲ್ವೇ ಭದ್ರತಾ ನಿಯಮಗಳಿಗೆ 'ಡೋಂಟ್ ಕೇರ್': ಚಲಿಸುವ ಎಸಿ ಬೋಗಿಯಲ್ಲೇ ದೀಪ ಬೆಳಗಿ ಪೂಜೆ ಮಾಡಿದ ಪ್ರಯಾಣಿಕ! ವಿಡಿಯೋ ವೈರಲ್​.. Indian Railways

Indian Railways (ಚಿತ್ರ X)
Indian Railways (ಚಿತ್ರ X)
Published on
Indian Railways: ಸಾಮಾನ್ಯವಾಗಿ ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸುವಾಗ ಸುರಕ್ಷತೆಗೆ ಸಂಬಂಧಿಸಿದಂತೆ ಹತ್ತಾರು ನಿಯಮಗಳನ್ನು ವಿಧಿಸಲಾಗಿರುತ್ತದೆ. ಅದರಲ್ಲೂ ವಿಶೇಷವಾಗಿ ಉರಿಯುವ ವಸ್ತುಗಳು, ಸೀಮೆಎಣ್ಣೆ, ಗ್ಯಾಸ್ ಸಿಲಿಂಡರ್ ಹಾಗೂ ಪಟಾಕಿಗಳನ್ನು ಒಯ್ಯುವುದು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಆದರೆ, ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಎಸಿ (AC) ರೈಲು ಬೋಗಿಯ ವಿಡಿಯೋವೊಂದು ನೆಟ್ಟಿಗರಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶವನ್ನು ಹುಟ್ಟುಹಾಕಿದೆ.

ವೈರಲ್ ವೀಡಿಯೋದಲ್ಲಿ ಏನಿದೆ?

ವೈರಲ್ ಆಗಿರುವ ಈ ಕ್ಲಿಪ್‌ನಲ್ಲಿ ಪ್ರಯಾಣಿಕನೊಬ್ಬ ಚಲಿಸುವ ರೈಲಿನ ಮೇಲಿನ ಬರ್ತ್‌ನಲ್ಲಿ (Upper Berth) ಕುಳಿತು ಧೂಪದ್ರವ್ಯ ಮತ್ತು ಎಣ್ಣೆ ದೀಪವನ್ನು ಬೆಳಗಿಸುತ್ತಾ ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು ಕಾಣಬಹುದಾಗಿದೆ. 
ಈ ವೇಳೆ ಸಹಪ್ರಯಾಣಿಕನೊಬ್ಬ ಮಧ್ಯಪ್ರವೇಶಿಸಿ, ಮುಚ್ಚಿದ ಎಸಿ ಬೋಗಿಯಲ್ಲಿ ಬೆಂಕಿ ಅಥವಾ ಹೊಗೆ ಎಬ್ಬಿಸುವುದು ತೀವ್ರ ಅಪಾಯಕಾರಿ ಎಂದು ಎಚ್ಚರಿಸಲು ಯತ್ನಿಸುತ್ತಾನೆ. ಆದರೆ, ಆ ವ್ಯಕ್ತಿ ಈ ಮಾತನ್ನು ಕಿವಿಗೆ ಹಾಕಿಕೊಳ್ಳದೆ, ಕಾಲುಗಳನ್ನು ಚಾಚಿ ತನ್ನ ಪೂಜೆಯನ್ನು ಮುಂದುವರಿಸಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.
ನೆಟ್ಟಿಗರ ತೀವ್ರ ಆಕ್ರೋಶ
ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರ ಗಮನ ಸೆಳೆದಿದ್ದು, ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಒಬ್ಬ ಬಳಕೆದಾರ, "ಒಬ್ಬ ಮೂರ್ಖನ ಇಂತಹ ತಪ್ಪು ನಿರ್ಧಾರದಿಂದಾಗಿ ನೂರಾರು ಮುಗ್ಧ ಪ್ರಯಾಣಿಕರು ಬೆಲೆ ತೆರಬೇಕಾಗುತ್ತದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ರೈಲ್ವೇ ಸಚಿವರು ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸಿದ್ದಾರೆ.
ಮತ್ತೊಬ್ಬ ಬಳಕೆದಾರ, "ಸ್ವಸ್ಥ ಮನಸ್ಸಿನ ಯಾರೂ ಇಂತಹ ಕೆಲಸ ಮಾಡುವುದಿಲ್ಲ. ಇದೆಲ್ಲವೂ ನಿಜವಾದ ಭಕ್ತಿಗಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಬೇಕೆಂಬ 'ಕಾಯಿಲೆ'ಯಂತೆ ತೋರುತ್ತದೆ" ಎಂದು ಕಮೆಂಟ್ ಮಾಡಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net