ಮಗಳ ಉತ್ತಮ ಭವಿಷ್ಯಕ್ಕಾಗಿ ಚಾಟ್‌ ಜಿಪಿಟಿ ಯನ್ನೇ ಇಂಗ್ಲಿಷ್ ಟೀಚರ್ ಮಾಡಿಕೊಂಡ ಕ್ಯಾಬ್ ಚಾಲಕ! ವೈರಲ್​ ಆಯ್ತು ವಿಡಿಯೋ.. Cab Driver Story

Cab Driver Story (ಚಿತ್ರ X)
Cab Driver Story (ಚಿತ್ರ X)
Published on

ಬೆಂಗಳೂರು: ತಂತ್ರಜ್ಞಾನ ಎನ್ನುವುದು ಬರೀ ಐಟಿ-ಬಿಟಿ ಕಂಪನಿಗಳು ಅಥವಾ ಉದ್ಯೋಗಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಸರಿಯಾದ ಮನಸ್ಸಿದ್ದರೆ ಸಾಮಾನ್ಯ ವ್ಯಕ್ತಿಯೂ ತಂತ್ರಜ್ಞಾನವನ್ನು ತನ್ನ ಜೀವನ ರೂಪಿಸಿಕೊಳ್ಳಬಹುದು ಎಂಬುದಕ್ಕೆ ದೆಹಲಿಯಲ್ಲಿ (Cab Driver Story) ನಡೆದ ಈ ಘಟನೆಯೇ ಸಾಕ್ಷಿ.

ಹೈದರಾಬಾದ್ ಮೂಲದ ವ್ಯಕ್ತಿ ತುಷಾರ್​ ಜೆಜಾನಿ ಎಂಬುವವರು ಇತ್ತೀಚೆಗೆ ದೆಹಲಿಯಲ್ಲಿ ಬೆಳಗಿನ ಜಾವ ಪ್ರಯಾಣಿಸುತ್ತಿದ್ದಾಗ ತಮ್ಮ ಕ್ಯಾಬ್​ ಚಾಲಕ ತನ್ನ ಮಗಳ ಉಜ್ವಲ ಭವಿಷ್ಯಕ್ಕಾಗಿ ಎಐ ಬಳಸಿ ಇಂಗ್ಲಿಷ್​ ಕಲಿಯುತ್ತಿದ್ದ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.

ಭೀತಿಯಿಂದ ಶುರುವಾಗಿ ಭರವಸೆಯಲ್ಲಿ ಮುಗಿದ ಪ್ರಯಾಣ!

ಬೆಳಗಿನ ಜಾವ 5 ಗಂಟೆಯ ಸುಮಾರಿಗೆ ಖಾಲಿ ರಸ್ತೆಯಲ್ಲಿ ಪ್ರಯಾಣಿಸುವಾಗ, ಚಾಲಕ ಫೋನ್​ನಲ್ಲಿ ಇಂಗ್ಲಿಷ್​ನಲ್ಲಿ ಮಾತನಾಡುವುದನ್ನು ಗಮನಿಸಿದ ಪ್ರಯಾಣಿಕ ತಾನು ಎಲ್ಲಿದ್ದೇನೆ ಮತ್ತು ಏನು ಮಾಡುತ್ತಿದ್ದೇನೆ ಎಂಬುದನ್ನು ವಿವರವಾಗಿ ಹಂಚಿಕೊಳ್ಳುತ್ತಿರುವುದನ್ನು ನೋಡುತ್ತಾರೆ. ಇದಾದ ಬಳಿಕ ಪ್ರಯಾಣಿಕನ ಆತಂಕವನ್ನು ಅರಿತ ಚಾಲಕ ತಕ್ಷಣವೇ ಮಾತುಕತೆ ಆರಂಭಿಸಿ ಅವರ ಭಯವನ್ನು ದೂರ ಮಾಡಿದರು.
ತುಷಾರ್ ಅವರು ತಾವು ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳುತ್ತಿರುವುದಾಗಿ ತಿಳಿಸಿದಾಗ, ಸುಮಾರು 10 ನಿಮಿಷಗಳ ಕಾಲ ಚಾಲಕ ಇಂಗ್ಲಿಷ್‌ನಲ್ಲೇ ಉತ್ತರಿಸುತ್ತಾ ಸಂಭಾಷಣೆ ಮುಂದುವರಿಸಿದನು.

ಮಗಳಿಗಾಗಿ ಕಲಿಯುತ್ತಿದ್ದೇನೆ: ಚಾಲಕನ ಉತ್ತರಕ್ಕೆ ಪ್ರಯಾಣಿಕ ಭಾವುಕ!

ಭಾಷೆಯ ಈ ವೈವಿಧ್ಯತೆಯನ್ನು ಕಂಡು ಕುತೂಹಲಗೊಂಡ ತುಷಾರ್, "ನೀವು ಫೋನ್‌ನಲ್ಲಿ ಯಾರ ಜೊತೆ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದೀರಿ? ಎಂದು ಕೇಳಿದರು. ಆಗ ಚಾಲಕ ನಾನು ಚಾಟ್​ಜಿಪಿಟಿ ಜೊತೆ ಇಂಗ್ಲಿಷ್​ನಲ್ಲಿ ಮಾತನಾಡುತ್ತಾ ನನ್ನ ಭಾಷೆಯನ್ನು ಉತ್ತಮಪಡಿಸಿಕೊಳ್ಳುತ್ತಿದ್ದೇನೆ. ನನಗೆ ಈಗಷ್ಟೇ ಹೆಣ್ಣು ಮಗು ಜನಿಸಿದೆ. ಅವಳಿಗಾಗಿ ನಾನು ಕಲಿಯುತ್ತಿದ್ದೇನೆ. ಅವಳು ದೊಡ್ಡವಳಾದಾಗ ಆಕೆಯ ಓದಿಗೆ ನಾನು ನೆರವಾಗಬೇಕು ಜೊತೆಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂಬುದೇ ನನ್ನ ಆಸೆ ಎಂದು ಹೇಳಿದ್ದಾರೆ.
ಈ ಮಾತನ್ನು ಕೇಳಿದ ತುಷಾರ್, ಆ ಬೆಳಗಿನ ಜಾವ 5 ಗಂಟೆಯ ಖಾಲಿ ರಸ್ತೆಯಲ್ಲಿ ನನಗೊಂದು ವಿಚಾರ ಸ್ಪಷ್ಟವಾಯಿತು. ಆ ಚಾಲಕ ಬರಿ ಭಾಷೆ ಕಲಿಯುತ್ತಿರಲಿಲ್ಲ. ಬದಲಾಗಿ ತನ್ನ ಮಗಳ ಜೀವನದ ಆರಂಭಿಕ ಹಂತವನ್ನು ಬದಲಾಯಿಸಲು ಮೌನವಾಗಿ ಶ್ರಮಿಸುತ್ತಿದ್ದರು. ಆದಾಗ್ಯೂ, ತಂತ್ರಜ್ಞಾನ ಎಂಬುದು ಭಾರತದ ಪ್ರತಿಯೊಂದು ವರ್ಗಕ್ಕೂ ತಲುಪುತ್ತಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇರೊಂದಿಲ್ಲ ಎಂದು ಹೇಳಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಅನೇಕ ನೆಟ್ಟಿಗರು ಚಾಲಕನ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ತಂತ್ರಜ್ಞಾನದ ಅತ್ಯುತ್ತಮ ಮತ್ತು ನಿಜವಾದ ಬಳಕೆ ಎಂದರೆ ಇದೇ. ಕಲಿಯುವ ಆಸಕ್ತಿ ಮತ್ತು ಶ್ರದ್ಧೆಯಿದ್ದರೆ ತಂತ್ರಜ್ಞಾನ ಹೊಸ ಬಾಗಿಲುಗಳನ್ನು ತೆರೆಯುತ್ತದೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
ಎಐ ತಂತ್ರಜ್ಞಾನದ ದೊಡ್ಡ ಪವಾಡಗಳು ಬರಿ ಆಫೀಸುಗಳಲ್ಲಿ ಮಾತ್ರ ನಡೆಯುವುದಿಲ್ಲ, ಇಂತಹ ಸಾಮಾನ್ಯ ಜನರ ದೈನಂದಿನ ಜೀವನದಲ್ಲೂ ನಡೆಯುತ್ತವೆ" ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net