ಕುಟುಂಬ ಕಲಹದಿಂದ ನಲುಗಿದ ಪಕ್ಷಗಳು!

ರಾಜಕೀಯ
ರಾಜಕೀಯ
Published on

| ರವೀಂದ್ರ ಎಸ್. ದೇಶಮುಖ್

ಕುಟುಂಬದವರಲ್ಲೇ ಅಧಿಕಾರ ಉಳಿಯಬೇಕು ಎಂಬಲ್ಲಿಂದ ಆರಂಭವಾಗಿ ತಾನೇ ಅಧಿಕಾರಕೇಂದ್ರದಲ್ಲಿ ಇರಬೇಕು ಎಂಬ ಮಹತ್ವಾಕಾಂಕ್ಷೆ ಕುಟುಂಬಕಲಹಕ್ಕೆ ಕಾರಣವಾಗಿ, ರಾಜಕೀಯ ಪಕ್ಷಗಳನ್ನೇ ದುರ್ಬಲಗೊಳಿಸಿರುವ ನಿದರ್ಶನಗಳು ಹಲವು. ಇದಕ್ಕೆ ತಾಜಾ ಉದಾಹರಣೆ ಲಾಲು ಪ್ರಸಾದ್ ಯಾದವ್ ಸಾರಥ್ಯದ ರಾಷ್ಟ್ರೀಯ ಜನತಾ ದಳ (ಆರ್ಜೆಡಿ). ಇದಕ್ಕೂ ಮುನ್ನ, ಸೋದರರ ನಡುವಿನ ಜಗಳದಿಂದ (ಉದ್ಧವ್ ಠಾಕ್ರೆ-ರಾಜ್ ಠಾಕ್ರೆ ) ಶಿವಸೇನೆ ವಿಭಜನೆಯಾಯಿತು. ಶರದ್ ಪವಾರ್-ಅಜಿತ್ ಪವಾರ್ ಕದನದಲ್ಲಿ ಎನ್ಸಿಪಿ ಹೋಳಾಯಿತು. ವೈಎಸ್ಆರ್ ಪರಿವಾರ ಒಡೆಯಿತು. ಕೆಸಿಆರ್ ಪಕ್ಷ ಕೂಡ ಇದಕ್ಕೆ ಹೊರತಲ್ಲ.

ಭಾರತದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಸಮಾನವಾಗಿ, ಪಕ್ಷಭೇದ ಮರೆತು ಪಾಲಿಸುವ ‘ಸಿದ್ಧಾಂತ’ ಒಂದೇ-ಅದುವೇ ಕುಟುಂಬ ರಾಜಕಾರಣ! ರಾಷ್ಟ್ರೀಯ ಪಕ್ಷ, ಪ್ರಾದೇಶಿಕ ಪಕ್ಷಗಳಲ್ಲಿ ಹಾಸುಹೊಕ್ಕಾಗಿರುವ ಕುಟುಂಬ ರಾಜಕಾರಣದ ವ್ಯಾಪ್ತಿ ವರ್ಷದಿಂದ ವರ್ಷಕ್ಕೆ, ಚುನಾವಣೆಯಿಂದ ಚುನಾವಣೆಗೆ ಹೆಚ್ಚುತ್ತಲೇ ಇದೆ ಹೊರತು ಕಡಿಮೆಯಾಗುತ್ತಿಲ್ಲ. ಮೊದಲಿಗೆ, ‘ನಮ್ಮ ಕುಟುಂಬಕ್ಕೆ ಅಧಿಕಾರ ಲಭಿಸಬೇಕು’ ಎಂಬ ‘ಹೋರಾಟ’ ಆರಂಭ ವಾಗುತ್ತದೆ. ನಂತರದ ಹಂತದಲ್ಲಿ ಅಧಿಕಾರ ತನಗೇ ಸೀಮಿತವಾಗಬೇಕು ಎಂಬ ಸ್ಪರ್ಧೆ ಕುಟುಂಬಸದಸ್ಯರ ನಡುವೆಯೇ ನಡೆಯುತ್ತದೆ. ಕಲಹ ಇಷ್ಟಕ್ಕೆ ನಿಲ್ಲುವುದಿಲ್ಲ. ‘ನಾನೇ ಮೇಲು, ನನ್ನ ವರ್ಚಸ್ಸೇ ಅಧಿಕ’ ಎಂಬ ಪ್ರತಿಷ್ಠೆಗೆ ಬಿದ್ದು, ಪಕ್ಷಗಳೇ ಹೋಳಾಗುತ್ತವೆ. ಕುಟುಂಬ ಸದಸ್ಯರೇ ಪರಸ್ಪರ ಚುನಾವಣೆಗೆ ಸ್ಪರ್ಧಿಸುತ್ತಾರೆ. ಜನರು ಇಂಥ ಬೆಳವಣಿಗೆಗಳನ್ನು ತಿರಸ್ಕರಿಸಿ ಮಹತ್ವದ ಸಂದೇಶ ನೀಡುತ್ತಿದ್ದರೂ, ರಾಜಕೀಯ ಪಕ್ಷಗಳು ಅದನ್ನು ಗ್ರಹಿಸುವಲ್ಲಿ ವಿಫಲವಾಗಿವೆ. ಬಿಹಾರದಲ್ಲಿ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಲಾಲು ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಭಾರಿ ಸೋಲನ್ನು ಕಂಡಿದೆ. ಈ ಸೋಲು ಅವರ ಕುಟುಂಬದೊಳಗೇ ಕಂಪನ ಸೃಷ್ಟಿಸಿದ್ದು, ನಾಲ್ವರು ಹೆಣ್ಣುಮಕ್ಕಳು ಲಾಲು ಮನೆಯನ್ನು ತೊರೆದಿದ್ದಾರೆ. ಈ ಪೈಕಿ ಪುತ್ರಿ ರೋಹಿಣಿ ಆಚಾರ್ಯ ಅವರಂತೂ ಸೋದರ ತೇಜಸ್ವಿ ಯಾದವ್ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಕುಟುಂಬ ಕಲಹ ಬಿದ್ದಿಗೆ ಬಂದಿದೆ. ಚುನಾವಣೆಗೆ ಕೆಲ ತಿಂಗಳ ಮುನ್ನ ತೇಜಪ್ರತಾಪ್ ಯಾದವ್ ‘ಜನಶಕ್ತಿ ಜನತಾದಳ’ ಪಕ್ಷವನ್ನು ಸ್ಥಾಪಿಸಿ, ಕುಟುಂಬದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಸಾರಿದ್ದರು. ಕುಟುಂಬ ಸದಸ್ಯರ ಕಚ್ಚಾಟದ ಪರಿಣಾಮ ಆರ್ಜೆಡಿ ಈಗ ಮತ್ತೊಂದು ಅವಧಿಗೆ ಪ್ರತಿಪಕ್ಷದಲ್ಲಿ ಕೂರುವಂತಾಗಿದೆ.

ಬೇರೆಯಾದ ಠಾಕ್ರೆ ಸೋದರರು

ಮಹಾರಾಷ್ಟ್ರದಲ್ಲಿ ಬಾಳಾ ಠಾಕ್ರೆ ಇರುವವರೆಗೆ ಶಿವಸೇನೆ ಒಗ್ಗಟ್ಟಾಗಿತ್ತು ಮತ್ತು ರಾಜ್ಯದಲ್ಲಿ ಭಾರಿ ವರ್ಚಸ್ಸನ್ನು ಹೊಂದಿತ್ತು. ಬಾಳಾ ಠಾಕ್ರೆ ನಿಧನದ ಬೆನ್ನಲ್ಲೇ ಪಕ್ಷವನ್ನು ಮುನ್ನಡೆಸುವ ಸಂಬಂಧ ಅವರ ಪುತ್ರ ಉದ್ಧವ್ ಠಾಕ್ರೆ ಮತ್ತು ಉದ್ಧವ್ ಚಿಕ್ಕಪ್ಪನ ಮಗ ರಾಜ್ ಠಾಕ್ರೆ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿ, ಕಲಹಕ್ಕೆ ನಾಂದಿಯಾಯಿತು. ಕೊನೆಗೆ, 2022ರಲ್ಲಿ ಇದು ವಿಕೋಪಕ್ಕೆ ಹೋಯಿತು. ರಾಜ್ ಠಾಕ್ರೆ ಶಿವಸೇನೆಯನ್ನು ತ್ಯಜಿಸಿ, ‘ಮಹಾರಾಷ್ಟ್ರ ನವನಿರ್ವಣ ಸೇನಾ’ (ಎಂಎನ್ಎಸ್) ಎಂಬ ಪಕ್ಷ ಕಟ್ಟಿದರು. ಇದರಿಂದ ಪಾರಂಪರಿಕ ಮತಬ್ಯಾಂಕ್ ವಿಭಜನೆಯಾಯಿತು.

ಈಗಂತೂ ರಾಜ್ ಠಾಕ್ರೆ ಪಕ್ಷ ದುರ್ಬಲಗೊಂಡಿದ್ದು, ಶಿವಸೇನೆ (ಉದ್ಧವ್ ಬಣ) ಕೂಡ ವಿರೋಧ ಪಕ್ಷದ ಸಾಲಿನಲ್ಲಿದೆ. ಇತ್ತೀಚೆಗೆ ಇಬ್ಬರೂ ಸೋದರರು ಒಂದಾಗುವ ಪ್ರಯತ್ನ ನಡೆದವು. ಉದ್ಧವ್ ಮತ್ತು ರಾಜ್ ಠಾಕ್ರೆ ಒಟ್ಟಾಗಿ ರ‍್ಯಾಲಿ ನಡೆಸಿದರಾದರೂ, ಆ ಬಳಿಕ ಯಾವುದೇ ರಚನಾತ್ಮಕ ಪ್ರಯತ್ನಗಳು ನಡೆಯದಿರುವುದು ಇಬ್ಬರ ಮನಸ್ಸುಗಳು ಒಂದಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿತು.

ಕುಟುಂಬ ರಾಜಕಾರಣದ ಪ್ರಾಬಲ್ಯ

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾಮ್್ಸರ್ ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ ವರದಿಯ ಪ್ರಕಾರ ಭಾರತದಲ್ಲಿ ಕುಟುಂಬ ರಾಜಕಾರಣದ ಪ್ರಾಬಲ್ಯ ಹೆಚ್ಚುತ್ತಿದೆ. ಈ ಸಂಸ್ಥೆಗಳ ವರದಿಯ ಪ್ರಕಾರ, ಈಗಿನ ಹಾಲಿ 5,203 ಸಂಸದರು ಮತ್ತು ಶಾಸಕರಲ್ಲಿ 1,106 (ಶೇಕಡ 21%) ನಾಯಕರು ರಾಜಕೀಯ ಕುಟುಂಬದಿಂದ ಬಂದವರೇ ಆಗಿದ್ದಾರೆ. ಲೋಕಸಭೆಯಲ್ಲಿ ಕುಟುಂಬ ರಾಜಕಾರಣದಿಂದ ಬಂದ ಸಂಸದರು 31%ರಷ್ಟಿದ್ದರೆ, ರಾಜ್ಯ ವಿಧಾನಸಭೆಗಳಲ್ಲಿ ಈ ಪ್ರಮಾಣ 20%ರಷ್ಟಿದೆ. ಕಾಂಗ್ರೆಸ್ನ 32%, ಬಿಜೆಪಿಯ 17% ಜನಪ್ರತಿನಿಧಿಗಳು ರಾಜಕೀಯ ಕುಟುಂಬಗಳ ಹಿನ್ನೆಲೆ ಹೊಂದಿದ್ದಾರೆ.

ಮುಗಿಯದ ಮುನಿಸು

ಉತ್ತರಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ, ಮಾಜಿ ಮುಖ್ಯಮಂತ್ರಿ ಮಾಯಾವತಿ ಕುಟುಂಬದಲ್ಲೂ ರಾಜಕೀಯ ಕದನ ತೀವ್ರ ಪ್ರಮಾಣದಲ್ಲಿದೆ. ತಮಿಳುನಾಡಿನಲ್ಲಿ ದಿವಂಗತ ಕರುಣಾನಿಧಿ ಪರಿವಾರ, ಹರಿಯಾಣದಲ್ಲಿ ಚೌಟಾಲಾ ಕುಟುಂಬ, ಪಂಜಾಬ್ನಲ್ಲಿ ಬಾದಲ್ ಕುಟುಂಬದಲ್ಲಿ ಅಧಿಕಾರ, ರಾಜಕೀಯ ಉತ್ತರಾಧಿಕಾರಕ್ಕಾಗಿ ತೀವ್ರ ಭಿನ್ನಮತ, ಮುನಿಸುಗಳಿವೆ.

ಪಾಸ್ವಾನ್ ಕುಟುಂಬದ ವಿವಾದ

ಲೋಕ ಜನಶಕ್ತಿ ಪಕ್ಷದ ಸಂಸ್ಥಾಪಕ ರಾಮವಿಲಾಸ್ ಪಾಸ್ವಾನ್ ಬಿಹಾರದ ಪ್ರಭಾವಿ ನಾಯಕರಾಗಿದ್ದರು. 2020ರಲ್ಲಿ ಪಾಸ್ವಾನ್ ನಿಧನದ ನಂತರ ಉತ್ತರಾಧಿಕಾರಿ ವಿವಾದ ತಲೆದೋರಿತು. ರಾಮವಿಲಾಸ್ ಅವರ ಕಿರಿಯ ಸಹೋದರ, ಮಾಜಿ ಕೇಂದ್ರ ಸಚಿವ ಪಶುಪತಿ ಪಾರಸ್ 2021ರಲ್ಲಿ ತಮ್ಮನ್ನು ಎಲ್ಜೆಪಿ ಅಧ್ಯಕ್ಷ ಎಂದು ಘೋಷಿಸಿಕೊಂಡರು. ರಾಮವಿಲಾಸ್ ಪಾಸ್ವಾನ್ ಪುತ್ರ ಚಿರಾಗ್ ಇದರಿಂದ ಚಿಕ್ಕಪ್ಪನ ವಿರುದ್ಧ ಮುನಿಸಿಕೊಂಡರು.

ಇಬ್ಬರ ನಡುವಿನ ಮನಸ್ತಾಪ ಬಗೆಹರಿಯದ್ದರಿಂದ 2021ರಲ್ಲಿ ಎಲ್ಜೆಪಿ ಎರಡು ಹೋಳಾಯಿತು. ಪಶುಪತಿ ಪಾರಸ್ ರಾಷ್ಟ್ರೀಯ ಲೋಕ ಜನಶಕ್ತಿ ಪಾರ್ಟಿ (ಆರ್ಎಲ್ಜೆಪಿ)ಯನ್ನು ಸ್ಥಾಪಿಸಿದರೆ, ಚಿರಾಗ್ ಲೋಕ ಜನಶಕ್ತಿ ಪಕ್ಷ (ರಾಮವಿಲಾಸ್ ಬಣ)ವನ್ನು ಮುನ್ನಡೆಸಿದರು. ಚಿರಾಗ್ ಕೇಂದ್ರದಲ್ಲಿ ಸಚಿವರಾಗಿದ್ದು, ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಅವರ ಪಕ್ಷ 29ರಲ್ಲಿ 19 ಸ್ಥಾನಗಳನ್ನು ಗೆದ್ದು ಉತ್ತಮ ಸಾಧನೆ ತೋರಿದೆ.

ದೊಡ್ಡಪ್ಪನ ವಿರುದ್ಧವೇ ಬಂಡಾಯ

ನಾಲ್ಕು ಬಾರಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಶರದ್ ಪವಾರ್ ಸೋನಿಯಾ ಗಾಂಧಿಯವರ ವಿದೇಶಿಮೂಲ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವನ್ನು ತೊರೆದು, ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ)ವನ್ನು ಸ್ಥಾಪಿಸಿದರು. ಬಳಿಕ ಅದೇ ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಂಡರು. ಆದರೆ, ವಯೋವೃದ್ಧರಾದ ಶರದ್ ಪವಾರ್ ಎನ್ಸಿಪಿ ಅಧ್ಯಕ್ಷಸ್ಥಾನವನ್ನು ತಮಗೆ ಬಿಟ್ಟುಕೊಡುತ್ತಾರೆಂದು ಅವರ ಸಹೋದರನ ಪುತ್ರ ಅಜಿತ್ ಪವಾರ್ ಭಾವಿಸಿದ್ದರು. ಅಧ್ಯಕ್ಷ ಸ್ಥಾನದಲ್ಲಿ ಶರದ್ ಅವರೇ ಮುಂದುವರಿಯಲು ನಿರ್ಧರಿಸಿದ್ದರಿಂದ ಮುನಿಸಿಕೊಂಡ ಅಜಿತ್ ದೊಡ್ಡಪ್ಪನ ವಿರುದ್ಧ ಬಂಡಾಯ ಸಾರಿದರು.

ಶಾಸಕರ ದೊಡ್ಡ ಗುಂಪನ್ನು ತಮ್ಮ ಕಡೆಗೆ ಮಾಡಿಕೊಂಡು, ಎನ್ಸಿಪಿಯನ್ನೇ ವಿಭಜಿಸಿದರು. ಮಾತ್ರವಲ್ಲ, 2023ರಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರು. ಈ ಹಿಂದಿನ ಶಿವಸೇನೆ (ಶಿಂಧೆ ಬಣ) ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್, ಈಗ ದೇವೇಂದ್ರ ಫಡ್ನವಿಸ್ ನೇತೃತ್ವದ ಎನ್ಡಿಎ ಸರ್ಕಾರದಲ್ಲಿಯೂ ಉಪಮುಖ್ಯಮಂತ್ರಿಯಾಗಿದ್ದಾರೆ. 2024ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಾರಾಮತಿ ಕ್ಷೇತ್ರದಲ್ಲಿ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಲೆ ವಿರುದ್ಧ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಸ್ಪರ್ಧಿಸಿದ್ದರು. ಕೊನೆಗೆ, ಗೆಲುವು ಸುಪ್ರಿಯಾರತ್ತ ವಾಲಿತು. ಒಟ್ಟಾರೆ, ಈಗ ಮಹಾರಾಷ್ಟ್ರದಲ್ಲಿ ಎರಡು ಎನ್ಸಿಪಿ ಅಸ್ವಿತ್ವದಲ್ಲಿವೆ.

ಅಣ್ಣ-ತಂಗಿ ಜಗಳ

ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಭಾರತ ರಾಷ್ಟ್ರ ಸಮಿತಿಯ (ಬಿಆರ್ಎಸ್) ಮುಖ್ಯಸ್ಥರು. ಪುತ್ರ ಕೆ.ಟಿ.ರಾಮಾರಾವ್ರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿಸುವ ಮೂಲಕ, ಅವರೇ ಮುಂದಿನ ಉತ್ತರಾಧಿಕಾರಿ ಎಂದು ಸೂಚ್ಯವಾಗಿ ಹೇಳಿದ್ದಾರೆ. ಇದು ಚಂದ್ರಶೇಖರ್ ರಾವ್ ಪುತ್ರಿ ಮತ್ತು ರಾಮಾರಾವ್ ತಂಗಿ ಕೆ.ಕವಿತಾ ಮುನಿಸಿಗೆ ಕಾರಣವಾಗಿದೆ. ಪಕ್ಷದಲ್ಲಿ ತನ್ನನ್ನು ನಿರ್ಲಕ್ಷಿಸಲಾಗುತ್ತಿದೆ, ಷಡ್ಯಂತ್ರ ರಚಿಸಲಾಗಿದೆ ಎಂದು ಕವಿತಾ ಹಲವು ಬಾರಿ ಬಹಿರಂಗವಾಗಿ ಆರೋಪಿಸಿದ್ದುಂಟು. ಪಕ್ಷವಿರೋಧಿ ಚಟುವಟಿಕೆ ಆರೋಪದಡಿ ಅವರನ್ನು 2025ರ ಸೆಪ್ಟೆಂಬರ್ನಲ್ಲಿ ಬಿಆರ್ಎಸ್ ಪಕ್ಷ ದಿಂದ ಹೊರ ಹಾಕಲಾಗಿದೆ. ಆ ಬಳಿಕ ಅವರು ವಿಧಾನ ಪರಿಷತ್ ಸದಸ್ಯ ಸ್ಥಾನ ಮತ್ತು ಬಿಆರ್ಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಅದಾದ ಸ್ವಲ್ಪದಿನಗಳಲ್ಲೇ ‘ತೆಲಂಗಾಣ ಜಾಗೃತಿ’ ಎಂಬ ಪಕ್ಷವನ್ನು ಸ್ಥಾಪಿಸಿದ್ದಾರೆ.

ಸೋದರಿಯ ಅಸಮಾಧಾನ

ಆಂಧ್ರಪ್ರದೇಶದಲ್ಲಿ ವೈ.ಎಸ್.ರಾಜ ಶೇಖರ್ ರೆಡ್ಡಿ ಪ್ರಭಾವಿ ನಾಯಕ. ಮುಖ್ಯ ಮಂತ್ರಿಯಾಗಿದ್ದಾಗಲೇ 2009ರಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟರು. ಅವರ ಮರಣಾನಂತರ ವೈಎಸ್ಆರ್ ಪುತ್ರ ಜಗನ್ಮೋಹನ್ ರೆಡ್ಡಿ 2010ರ ನವೆಂಬರ್ನಲ್ಲಿ ಕಾಂಗ್ರೆಸ್ನ್ನು ತೊರೆದು 2011ರ ಮಾರ್ಚ್ 12ರಂದು ‘ಯುವಜನ ಶ್ರಮಿಕರು ರೈತು ಕಾಂಗ್ರೆಸ್ ಪಾರ್ಟಿ’ (ವೈಎಸ್ಆರ್ಸಿಪಿ) ಯನ್ನು ಸ್ಥಾಪಿಸಿದರು. ಆದರೆ, ಅಣ್ಣ ತನ್ನನ್ನು ನಿರ್ಲಕ್ಷಿಸಿದ್ದು ಮಾತ್ರವಲ್ಲ, ಅನ್ಯಾಯ ಮಾಡುತ್ತಿದ್ದಾರೆ ಎಂದು ಸೋದರಿ ವೈ.ಎಸ್.ಶರ್ವಿುಳಾ ಹಲವು ಸಂದರ್ಭದಲ್ಲಿ ಆರೋಪಿಸಿದರು. ಅಣ್ಣ-ತಂಗಿ ನಡುವಿನ ಜಗಳ ಮತ್ತಷ್ಟು ವಿಕೋಪಕ್ಕೆ ಹೋಯಿತು. ಪರಿಣಾಮ, ವೈ.ಎಸ್.ಶರ್ವಿುಳಾ 2021ರ ಜುಲೈ 8ರಂದು ವೈಎಸ್ಆರ್ ತೆಲಂಗಾಣ ಪಾರ್ಟಿ (ವೈಎಸ್ಆರ್ಟಿಪಿ)ಯನ್ನು ಸ್ಥಾಪಿಸಿದರು. ಆದರೆ, ಪಕ್ಷವನ್ನು ಮುನ್ನಡೆಸುವುದು ಅಷ್ಟು ಸುಲಭದ ಕೆಲಸವಲ್ಲ ಎಂಬ ವಾಸ್ತವವನ್ನು ಬಹುಬೇಗ ಅರ್ಥ ಮಾಡಿಕೊಂಡ ಶರ್ವಿುಳಾ 2024ರ ಜನವರಿ 4ರಂದು ವೈಎಸ್ಆರ್ಟಿಪಿಯನ್ನು ಕಾಂಗ್ರೆಸ್ನೊಂದಿಗೆ ವಿಲೀನ ಮಾಡಿದರು. ಅದೇನಿದ್ದರೂ, ಅಣ್ಣ-ತಂಗಿಯ ಜಗಳದಲ್ಲಿ ಮೂರನೆಯವರಿಗೆ ಅಂದರೆ ರಾಜಕೀಯ ವಿರೋಧಿಗಳಿಗೆ ಲಾಭವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net