ಮಕ್ಕಳ ಹಿಂಸಾತ್ಮಕ ನಡವಳಿಕೆ ಪಾಲಕರಲ್ಲಿ ಇರಲಿ ಎಚ್ಚರಿಕೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಸಹಪಾಠಿ ಮೇಲೆ ಮಾರಣಾಂತಿಕ ಹಲ್ಲೆ ಘಟನೆಯಲ್ಲಿ ಬಾಲಕ ಸಾವು, ಸ್ನೇಹಿತನ ಮೇಲೆ ಚಾಕುವಿನಿಂದ ಇರಿತ, ಕ್ಲಾಸ್ ರೂಮ್​ನಲ್ಲಿಯೇ ಶಿಕ್ಷಕನ ಎದೆಗೆ ಗುದ್ದಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ- ಇವು ಕೆಲ ದಿನಗಳ ಹಿಂದಷ್ಟೇ ಆತಂಕ ಸೃಷ್ಟಿಸಿದ ಸುದ್ದಿಗಳು. ಹಾಗಿದ್ದರೆ ಏನಾಗಿದೆ ಇಂದಿನ ಮಕ್ಕಳಿಗೆ? ಮನಸ್ಸು ಇಷ್ಟೊಂದು ಹಿಂಸೆಯತ್ತ ವಾಲಿದ್ದಾದರೂ ಏಕೆ?

ದೂರದ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧಕ್ಕಿಂತಲೂ ಈ ವಿದ್ಯಮಾನ ಅಪಾಯಕಾರಿ. ಅಪ್ರಾಪ್ತ ಬಾಲಕರಿಂದ ನಡೆದ ಈ ಅವಘಡಗಳು ನಮ್ಮ ಸಮಾಜ ಎಲ್ಲಿಗೆ ಬಂದು ನಿಂತಿದೆ ಎನ್ನುವುದರ ಬಗ್ಗೆ ಆತ್ಮಾವಲೋಕನದ ಜತೆಗೆ ಜ್ಞಾನದೇಗುಲಗಳೂ ಸುರಕ್ಷಿತವಲ್ಲ ಎಂಬ ಭಾವನೆ ಮೂಡಿಸಲಾರಂಭಿಸಿವೆ. ಎಲ್ಲಿ ಯಾವ ಮನಸ್ಥಿತಿಯ ಬಾಲಕರಿರುತ್ತಾರೋ ಎಂದು ಸಂಶಯದ ದೃಷ್ಟಿಯಿಂದ ನೋಡುವಂತಾಗಿದೆ.

ಅದೊಂದು ಕಾಲವಿತ್ತು. ಗುರುಗಳ ಬಗ್ಗೆ ಅಪಾರವಾದ ಭಯ ಭಕ್ತಿ ಮತ್ತು ಶ್ರದ್ಧೆ ಇರುತ್ತಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿಂದು ಎಲ್ಲವೂ ಉಲ್ಟಾಪಲ್ಟಿ ಆಗಿದೆ. ಜ್ಞಾನ ದೇಗುಲಗಳ ಆವರಣದಲ್ಲಿ ನೆತ್ತರು ಹರಿಯುತ್ತಿದೆ. ಕೊಠಡಿಗಳ ಗೋಡೆಗಳ ಮೇಲೆ ರಕ್ತದ ಕಲೆ ಕಾಣುತ್ತಿದೆ. ಆವೇಶ ಮತ್ತು ಕ್ಷುಲ್ಲಕ ಕಾರಣಕ್ಕಾಗಿ ಮಕ್ಕಳು ಹಂತಕರಾಗುತ್ತಿದ್ದಾರೆ. ನಂಬಿಕೆ, ಸಂಸ್ಕಾರ, ಸಂಸ್ಕೃತಿ, ಕೌಟುಂಬಿಕ ಮೌಲ್ಯಗಳನ್ನು ದುರ್ಬೀನು ಹಚ್ಚಿ ಹುಡುಕುವಂತಾಗಿದೆ. 

ಅದೆಷ್ಟೋ ಮಕ್ಕಳು, ‘ಇವೆಲ್ಲಾ ಹೊಟ್ಟೆ ತುಂಬಿಸಬಲ್ಲವೇ? ಸಾಕು ನಿಮ್ಮ ಆದರ್ಶದ ಮಾತು’ ಎಂದು ಕೇಳುವಂತಾಗಿದೆ. ಕೈ ತುಂಬಾ ಸಂಬಳ, ಐಷಾರಾಮಿ ಜೀವನ, ವಿದೇಶ ಪ್ರವಾಸಗಳೇ ಇವರ ಜೀವನದ ಗುರಿಯಾಗಿಬಿಟ್ಟಿದೆ. ಅಂಧಾನುಕರಣೆ ಇವರಲ್ಲಿನ ಬೆಳವಣಿಗೆ. ಇದು ಅವರಲ್ಲಿನ ಮನಸ್ಥಿತಿಯ ಅಧಃಪತನದ ಜತೆಗೆ ಇಂದಿನ ಸಮಾಜದ ಮಾನಸಿಕ ಸ್ವಾಸ್ಥ್ಯ ಎಷ್ಟು ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂಬುದನ್ನು ತೋರಿಸಿಕೊಡುತ್ತದೆ. ಶಿಕ್ಷಣ ವ್ಯವಸ್ಥೆ ಅವ್ಯವಸ್ಥೆಯಿಂದ ಕೂಡಿದ್ದು ಇದರಲ್ಲಿ ನೈತಿಕ ಮತ್ತು ಮಾನವೀಯ ಮೌಲ್ಯಗಳು ಕಳೆದುಹೋಗಿರುವುದು ಸ್ಪಷ್ಟ. 

ಶಿಸ್ತು, ಸಮಯಪ್ರಜ್ಞೆ, ನಿರ್ದಿಷ್ಟ ಗುರಿ ಮೊದಲಾದ ಅಂಶಗಳ ಜಾಗವನ್ನು ಹೆಚ್ಚು ಸಂಬಳ ನೀಡುವ ಉದ್ಯೋಗ ಪಡೆಯುವ ಗುರಿಯೊಂದಿಗೆ ಅಂಕಗಳಿಕೆ ಬೆನ್ನತ್ತಿ ಸಾಗುತ್ತಿರುವ ವ್ಯವಸ್ಥೆಯ ಪರಿಣಾಮವಿದು ಎಂದರೆ ತಪ್ಪಾಗದು. ವಿಶ್ವವೇ ಒಂದು ಕುಟುಂಬದಂತಾಗಿರುವ ಇಂದಿನ ಸಂದರ್ಭದಲ್ಲಿ ಭಾವನೆಗಳು ಬತ್ತಿ ಹೋಗಿವೆ. ಪರಿಣಾಮ ವ್ಯಕ್ತಿಯ ಭಾವನಾತ್ಮಕ ನಂಟು ಕಳೆದುಕೊಂಡು ವಿಕೃತನಾಗುತ್ತಿದ್ದಾನೆ. ಇದಕ್ಕೆ ಮಕ್ಕಳೂ ಹೊರತಾಗಿಲ್ಲ. ಡಿಜಿಟಲ್ ವ್ಯಸನ, ಮಾದಕ ದ್ರವ್ಯ, ಕುಡಿತದ ವ್ಯಸನಗಳು ಮಕ್ಕಳನ್ನು ಸಮಾಜ ಕಂಟಕರನ್ನಾಗಿ ರೂಪಿಸುತ್ತಿವೆ. ಮಕ್ಕಳು ರೀಲ್ಸ್, ಶಾರ್ಟ್ ವಿಡಿಯೋಗಳು ಮತ್ತು ಗೇಮ್ಳಿಂದ ಸಿಗುವ ಕ್ಷಣಿಕ ಮನರಂಜನೆಯ ದಾಸರಾಗಿದ್ದಾರೆ.

ಓದಿನತ್ತ ಗಮನಹರಿಸಿ ಗುರಿ ತಲುಪಬೇಕಾದ ವಯಸ್ಸಿನಲ್ಲಿ ಮಕ್ಕಳ ಈ ಹಿಂಸಾತ್ಮಕ ನಡವಳಿಕೆ ಒಳ್ಳೆಯದಲ್ಲ. ಮಕ್ಕಳ ಹಿಂಸಾಚಾರದ ಕುರಿತಾದ ಸಂಶೋಧನೆಯು ಜೀವಶಾಸ್ತ್ರದ ಪ್ರಭಾವಗಳು, ಸಾಮಾಜಿಕ ಮತ್ತು ಆರ್ಥಿಕ ಅಂಶಗಳು, ಆಘಾತ, ವ್ಯಕ್ತಿತ್ವ ಮತ್ತು ಮನೋಧರ್ಮದ ಮೇಲೆ ಕೇಂದ್ರೀಕರಿಸಿದೆ. ಭಾವನಾತ್ಮಕ ಸಮಸ್ಯೆಗಳು, ಸಾಮಾಜಿಕ ಸಂಘರ್ಷ, ಶಸ್ತ್ರಾಸ್ತ್ರಗಳ ಲಭ್ಯತೆ, ಮದ್ಯ ಮತ್ತು ಮಾದಕ ವಸ್ತುಗಳ ಪರಿಣಾಮಗಳು ಮಕ್ಕಳ ಹಿಂಸಾತ್ಮಕ ನಡವಳಿಕೆಗೆ ಕೊಡುಗೆ ನೀಡುತ್ತವೆ. ವಯಸ್ಕರ ನಡವಳಿಕೆಯು ಗೊಂದಲಮಯ ಮತ್ತು ಭಾವನಾತ್ಮಕವಾಗಿ ಅಸ್ಥಿರವಾಗಿರುವ ಮತ್ತು ಸಂವಹನವು ಕಳಪೆಯಾಗಿರುವ ಮನೆಗಳಲ್ಲಿ ಬೆಳೆದ ಮಕ್ಕಳು ಇತರ ಜನರೊಂದಿಗೆ ಸಂಬಂಧದಲ್ಲಿ ಸಮಸ್ಯೆಗಳನ್ನು ಬೆಳೆಸಿಕೊಳ್ಳುತ್ತಾರೆ. 

ದೈಹಿಕ, ಭಾವನಾತ್ಮಕ ಮತ್ತು ಮಾನಸಿಕ ಕಿರುಕುಳವು ಮಗುವಿನ ಮೂಲಸುರಕ್ಷತೆಯ ಪ್ರಜ್ಞೆಯನ್ನು ಹಾನಿಗೊಳಿಸುತ್ತದೆ. ದೈಹಿಕವಾಗಿ ಕಿರುಕುಳಕ್ಕೊಳಗಾದ ಮತ್ತು ಹಿಂಸಾತ್ಮಕವಾಗಿ ನಡೆಸಿಕೊಂಡ ಮಕ್ಕಳು ಹೆಚ್ಚಾಗಿ ಕ್ರೌರ್ಯಕ್ಕೆ ಮುಂದಾಗುತ್ತಾರೆ. ನಿಮ್ಮ ಮಗುವು ವಿನಾಶಕಾರಿ ಅಥವಾ ಹಿಂಸಾತ್ಮಕವಾಗಬಹುದು ಎಂದು ನೀವು ಭಾವಿಸಿದಾಗ ಅರ್ಹ ಮಾನಸಿಕ ಆರೋಗ್ಯ ವೃತ್ತಿಪರರೊಂದಿಗೆ ಸಮಾಲೋಚಿಸುವುದು ಯಾವಾಗಲೂ ಸೂಕ್ತವಾಗಿದೆ. ಕೆಲವು ಮಕ್ಕಳು ಹಠಾತ್ ಪ್ರವೃತ್ತಿ, ಸಂವೇದನಾಶೀಲತೆಯ ಕೊರತೆ ಮತ್ತು ಬೇಗನೆ ಬೆದರುವ ಸ್ವಭಾವವನ್ನು ಹೊಂದಿರುತ್ತಾರೆ, ಇದು ಅವರನ್ನು ಹಿಂಸಾತ್ಮಕ ನಡವಳಿಕೆಯತ್ತ ತಳ್ಳಬಹುದು. ಮಕ್ಕಳಲ್ಲಿ ಹೆಚ್ಚುತ್ತಿರುವ ಕ್ರೌರ್ಯಕ್ಕೆ ಪರಿಸರ, ಅತಿಯಾದ ಮೊಬೈಲ್ ಬಳಕೆ, ಹಿಂಸಾತ್ಮಕ ಆಟಗಳು ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವ ಮುಖ್ಯ ಕಾರಣಗಳಾಗಿವೆ. 

ಭಾವನಾತ್ಮಕ ಒತ್ತಡ, ಶಿಸ್ತಿನ ಕೊರತೆ, ಮತ್ತು ಕುಟುಂಬದಲ್ಲಿನ ಹಿಂಸಾತ್ಮಕ ವಾತಾವರಣವು ಮಕ್ಕಳಲ್ಲಿ ಆಕ್ರಮಣಶೀಲತೆಯನ್ನು ಬೆಳೆಸುತ್ತಿದೆ. ಪೋಷಕರ ಸೂಕ್ತ ಮಾರ್ಗದರ್ಶನ, ಸಂವಾದ ಮತ್ತು ಪ್ರೀತಿಯು ಇದನ್ನು ತಡೆಯಲು ಅತ್ಯಗತ್ಯ. ಕಳೆದ ಒಂದು ದಶಕದಲ್ಲಿ 16 ರಿಂದ 18 ವರ್ಷದೊಳಗಿನ ಯುವಕರು ಕ್ಷಣಿಕ ಆವೇಶದಲ್ಲಿ ಎಸಗಿದ ಗಂಭೀರ ಅಪರಾಧಗಳ ಪ್ರಮಾಣದಲ್ಲಿ ಶೇ. 20ರಷ್ಟು ಏರಿಕೆ ಕಂಡುಬಂದಿದೆ. ಇದು ಭವಿಷ್ಯದ ದೃಷ್ಟಿಯಿಂದ ಬಲು ದೊಡ್ಡ ಅಪಾಯಕಾರಿ ಆತಂಕವೇ ಸರಿ. ಇದೊಂದು ರೀತಿ ಅಘೊಷಿತ ತುರ್ತಸ್ಥಿತಿ ಎಂದರೂ ಅತಿ ಶಯೋಕ್ತಿಯಾಗದು. 

ಯುವಜನರ ಅಸಹನೆ ಪ್ರವೃತ್ತಿ ಸಮಾಜದ ಶಾಂತಿಗೆ ಧಕ್ಕೆ ತರುತ್ತಿದೆ. ಶಾಲೆ ಕಲಿಯುವ ದಿನಗಳಲ್ಲಿ ಜೈಲು ಸೇರ ಬೇಕಾದ ಸ್ಥಿತಿ ಎದುರಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಮಕ್ಕಳ ಮೇಲೆ ನಿಗಾ ವಹಿಸುವ ಗುರುತರ ಜವಾಬ್ದಾರಿ ಜತೆ ಈ ನಿಟ್ಟಿನಲ್ಲಿ ಗಂಭೀರ ಚಿಂತನೆಯೂ ಅತ್ಯಗತ್ಯ. ಈಗ ನಡೆದಿರುವ ಮತ್ತು ನಡೆಯುತ್ತಿರುವ ಪ್ರತಿ ಘಟನೆಗಳು ಎಚ್ಚರಿಕೆಯನ್ನು ನೀಡಿವೆ. ಇದು ಇಲ್ಲಿಗೆ ನಿಲ್ಲುವಂತಾಗಿಸುವುದು ನಮ್ಮ ನಿಮ್ಮೆಲ್ಲರ ಹೊಣೆ ಅಷ್ಟೇ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net