750 ಕೋಟಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗಿದೆ ಎಂದ ಪ್ರಿಯಾಂಕಾ ಗಾಂಧಿ...ಇದು 'ಪಪ್ಪು 2.0' ಎಂದು ಬಿಜೆಪಿ ಗೇಲಿ! | Priyanka Gandhi

Priyanka Gandhi | 750 ಕೋಟಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗಿದೆ ಎಂದ ಪ್ರಿಯಾಂಕಾ ಗಾಂಧಿ...ಇದು 'ಪಪ್ಪು 2.0' ಎಂದು ಬಿಜೆಪಿ ಗೇಲಿ!
Priyanka Gandhi | 750 ಕೋಟಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗಿದೆ ಎಂದ ಪ್ರಿಯಾಂಕಾ ಗಾಂಧಿ...ಇದು 'ಪಪ್ಪು 2.0' ಎಂದು ಬಿಜೆಪಿ ಗೇಲಿ!
Published on
ನವದೆಹಲಿ: ಲೋಕಸಭೆಯಲ್ಲಿ ಪೇಪರ್ ಲೀಕ್ ತಡೆ ಮಸೂದೆ ಮೇಲಿನ ಚರ್ಚೆಯ ವೇಳೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi) ನೀಡಿದ ಹೇಳಿಕೆಯೊಂದು ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ದೇಶದಲ್ಲಿ ಒಟ್ಟು 750 ಕೋಟಿ ವಿದ್ಯಾರ್ಥಿಗಳು ಪರೀಕ್ಷಾ ಅಕ್ರಮಗಳಿಂದ ಬಾಧಿತರಾಗಿದ್ದಾರೆ ಎಂದು ಅವರು ಪ್ರತಿಪಾದಿಸಿದ್ದು, ಈ ಅಂಕಿ-ಅಂಶವನ್ನು ಕೈಗೆತ್ತಿಕೊಂಡಿರುವ ಆಡಳಿತಾರೂಢ ಬಿಜೆಪಿ ನಾಯಕರು, ವಯನಾಡ್​ ಸಂಸದೆಯ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸುತ್ತಿದ್ದಾರೆ.
ಸದನದ ಕಲಾಪದಲ್ಲಿ ಮಾತನಾಡುತ್ತಿದ್ದ ಪ್ರಿಯಾಂಕಾ ಗಾಂಧಿ, ಕಳೆದ 12 ವರ್ಷಗಳ ಅವಧಿಯಲ್ಲಿ ಸುಮಾರು 152 ಬಾರಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ವರದಿಯಾಗಿವೆ ಎಂದರು. ಈ ಅಕ್ರಮಗಳಿಂದಾಗಿ 750 ಕೋಟಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗಿದೆ ಮತ್ತು ಇದುವರೆಗೆ ಪರೀಕ್ಷಾ ಅಕ್ರಮ ಎಸಗುವ ಮಾಫಿಯಾಗಳ ವಿರುದ್ಧ ಯಾವುದೇ ಗಂಭೀರ ಶಿಕ್ಷೆಯಾಗಿಲ್ಲ ಎಂದು ಆರೋಪಿಸಿದರು.

ಬಿಜೆಪಿ ನಾಯಕರ ಕೌಂಟರ್!...

ಈ ಹೇಳಿಕೆ ಹೊರಬೀಳುತ್ತಿದ್ದಂತೆಯೇ ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಪೋಸ್ಟ್ ಮೂಲಕ ಕಾಂಗ್ರೆಸ್ ಸಂಸದೆಯ ಕಾಲೆಳೆದಿದ್ದಾರೆ. ಬಿಜೆಪಿ ರಾಷ್ಟ್ರೀಯ ವಕ್ತಾರೆ ಸಂಜು ವರ್ಮಾ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿದ್ದು, ಮೂಲ ಪಪ್ಪು ಮಹಾಶಯರ ಬಳಿಕ, ಈಗ ನಮಗೆ ಪಪ್ಪು ಆವೃತ್ತಿ 2.0 ಸಿಕ್ಕಿದೆ. ಭಾರತದ ಇಡೀ ಜನಸಂಖ್ಯೆಯೇ 145 ರಿಂದ 147 ಕೋಟಿಯಷ್ಟಿದೆ, ಹಾಗಿರುವಾಗ 750 ಕೋಟಿ ವಿದ್ಯಾರ್ಥಿಗಳು ಎಲ್ಲಿಂದ ಬಂದರು ಎಂದು ಪ್ರಶ್ನಿಸುವ ಮೂಲಕ ವ್ಯಂಗ್ಯವಾಡಿದ್ದಾರೆ.
ಅತ್ತ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಪ್ರತಿಕ್ರಿಯಿಸಿ, ದೇಶದ ಒಟ್ಟು ಜನಸಂಖ್ಯೆಗಿಂತಲೂ ಹಲವು ಪಟ್ಟು ಹೆಚ್ಚಿನ ಸಂಖ್ಯೆಯನ್ನು ಸಂಸತ್ತಿನಲ್ಲಿ ಉಲ್ಲೇಖಿಸಲಾಗಿದೆ. 140 ಕೋಟಿ ಜನರಿರುವ ನಾಡಿನಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳಿದ್ದಾರೆ ಎಂದು ನಂಬಿರುವಂತಿದೆ. 2024 ರ ಲೋಕಸಭಾ ಚುನಾವಣೆಗೆ ಮುನ್ನ ತಮ್ಮ ಸಹೋದರ ಪಪ್ಪು ಅಲ್ಲ ಎಂದು ಪ್ರತಿಪಾದಿಸಲು ಅವರು ಮುಂದೆ ಬಂದಿದ್ದರು, ಈಗ ಇಂತಹ ಆಶ್ಚರ್ಯಕರ ಎಡವಟ್ಟಿನ ನಂತರ ಅವರನ್ನು ಸಮರ್ಥಿಸಿಕೊಳ್ಳಲು ಯಾರು ಉಳಿದಿದ್ದಾರೆ ಎಂದು ಮಾಳವೀಯ ಎಕ್ಸ್ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಮತ್ತೊಬ್ಬ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಕೂಡ ಈ ಹೇಳಿಕೆಯನ್ನು ಟೀಕಿಸಿದ್ದು, ಇಂತಹ ಅಪೂರ್ಣ ಮಾಹಿತಿಗಳ ಮೂಲಕ ನಾಯಕರು ತಮ್ಮ ಜ್ಞಾನಮಟ್ಟವನ್ನು ತಾವೇ ಪ್ರದರ್ಶಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ವಿ. ಕಾಮಕೋಟಿಗೆ ಗೋಮೂತ್ರ ತಜ್ಞ ಅಂದಿದ್ದ ಪ್ರಿಯಾಂಕಾ!

ದೇಶದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮ ತಡೆಗೆ ಮತ್ತು ಪಾರದರ್ಶಕತೆ ತರಲು ಕೇಂದ್ರ ಸರ್ಕಾರ ರಚಿಸಿರುವ ಉನ್ನತ ಮಟ್ಟದ ಕಾರ್ಯಪಡೆಗೆ (ಟಾಸ್ಕ್ ಫೋರ್ಸ್) ಐಐಟಿ ಮದ್ರಾಸ್ ನಿರ್ದೇಶಕ ವಿ. ಕಾಮಕೋಟಿ ಅವರನ್ನು ನೇಮಕ ಮಾಡಿರುವುದನ್ನು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಖಂಡಿಸಿದ್ದು, ಅವರೊಬ್ಬ ಗೋಮೂತ್ರ ತಜ್ಞ ಎಂದು ಕರೆಯುವ ಮೂಲಕ ವಾಗ್ದಾಳಿ ನಡೆಸಿದ್ದಾರೆ.

ಅತ್ಯಾಚಾರಿಗಳನ್ನು ಸಮರ್ಥಿಸಿದವರಿಗೆ ಶಿಕ್ಷಣ ಖಾತೆ: ಪ್ರಿಯಾಂಕಾ ಆರೋಪ

ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಶಿಕ್ಷಣ ಸಚಿವಾಲಯದ ಹೆಚ್ಚುವರಿ ಹೊಣೆಗಾರಿಕೆ ವಹಿಸಿರುವುದಕ್ಕೆ ಪ್ರಿಯಾಂಕಾ ಗಾಂಧಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿಯು ಅತ್ಯಾಚಾರಿಗಳನ್ನು ಬೆಂಬಲಿಸಿದ ವ್ಯಕ್ತಿಯೊಬ್ಬರ ಮೇಲೆ ನಂಬಿಕೆ ಇಟ್ಟು ಈ ಹುದ್ದೆ ನೀಡಿದೆ ಎಂದು ಅವರು ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ. ಗರ್ಭಿಣಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗಳ ಬಿಡುಗಡೆಯನ್ನು ಬೆಂಬಲಿಸಿದ ವ್ಯಕ್ತಿಯನ್ನೇ ಪ್ರಧಾನಿ ಮೋದಿ ಹೊಸ ಶಿಕ್ಷಣ ಸಚಿವನ್ನಾಗಿ ನೇಮಿಸಿದ್ದಾರೆ. ಈ ನಿರ್ಧಾರದ ಮೂಲಕ ದೇಶದ ಕೋಟ್ಯಂತರ ಹೆಣ್ಣುಮಕ್ಕಳಿಗೆ ಪ್ರಧಾನಿ ಏನು ಸಂದೇಶ ನೀಡುತ್ತಿದ್ದಾರೆ..? ಈ ನಿರ್ಧಾರದ ಹಿಂದಿನ ಸಂದೇಶ ಸ್ಪಷ್ಟವಾಗಿದೆ ಎಂದು ಕಿಡಿಕಾರಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net