ಪಾಕ್ ಉಗ್ರ ಶಿಬಿರಗಳನ್ನು ಗಡಿಯಿಂದ ಬೇರೆಡೆಗೆ ಸ್ಥಳಾಂತರಿಸುತ್ತಿದೆ: BSF

BSF | ಗಡಿ ಭದ್ರತಾ ಪಡೆ
BSF | ಗಡಿ ಭದ್ರತಾ ಪಡೆ
Published on
ನವದೆಹಲಿ: ಆಪರೇಷನ್ ಸಿಂಧೂರದ ನಂತರ ಪಾಕಿಸ್ತಾನವು ತನ್ನ 60 ಭಯೋತ್ಪಾದಕ ಲಾಂಚ್‌ಪ್ಯಾಡ್‌ಗಳನ್ನು ಗಡಿಯಿಂದ ದೂರದಲ್ಲಿರುವ ಒಳಗಿನ ಸ್ಥಳಗಳಿಗೆ ಸ್ಥಳಾಂತರಿಸಿದೆ ಎಂದು ಗಡಿ ಭದ್ರತಾ ಪಡೆ (BSF) ಶನಿವಾರ (ನ.29) ತಿಳಿಸಿದೆ.
ಈ ಬಗ್ಗೆ ಮತನಾಡಿದ ಬಿಎಸ್‌ಎಫ್ ಡಿಐಜಿ ವಿಕ್ರಮ್ ಕುನ್ವರ್, ಆಪರೇಷನ್ ಸಿಂಧೂರದ ಸಮಯದಲ್ಲಿ ಬಿಎಸ್ಎಫ್ ಗಡಿಯುದ್ದಕ್ಕೂ ಅನೇಕ ಭಯೋತ್ಪಾದಕ ಲಾಂಚ್‌ಪ್ಯಾಡ್‌ಗಳನ್ನು ನಾಶಪಡಿಸಿದ ನಂತರ, ಪಾಕ್​ ಸರ್ಕಾರವು ಅಂತಹ ಎಲ್ಲಾ ಸೌಲಭ್ಯಗಳನ್ನು ಆಳ ಪ್ರದೇಶಗಳಿಗೆ ಸ್ಥಳಾಂತರಿಸಿತು. ಅಲ್ಲದೆ, ಸುಮಾರು 12 ಲಾಂಚ್‌ಪ್ಯಾಡ್‌ಗಳು ಸಿಯಾಲ್‌ಕೋಟ್ ಮತ್ತು ಜಫರ್ವಾಲ್‌ನ ಆಳ ಪ್ರದೇಶಗಳಿಂದ ಕಾರ್ಯನಿರ್ವಹಿಸುತ್ತಿವೆ ಎಂದಿದ್ದಾರೆ.
ಭಯೋತ್ಪಾದಕ ನೆಲೆಗಳು ನಿಖರವಾಗಿ ಗಡಿಯಲ್ಲಿಲ್ಲ. ಅದೇ ರೀತಿ, ಗಡಿಯಿಂದ ದೂರದಲ್ಲಿರುವ ಇತರ ಆಳ ಪ್ರದೇಶಗಳಲ್ಲಿ 60 ಲಾಂಚ್‌ಪ್ಯಾಡ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಬಿಎಸ್‌ಎಫ್ ಡಿಐಜಿ ವಿಕ್ರಮ್ ಕುನ್ವರ್ ತಿಳಿಸಿದ್ದಾರೆ.
ಉಗ್ರರು ಅಲ್ಲಿ ಶಾಶ್ವತವಾಗಿ ಕುಳಿತುಕೊಳ್ಳುವುದಿಲ್ಲ. ಅಲ್ಲದೆ, ಭಯೋತ್ಪಾದಕರನ್ನು ಭಾರತಕ್ಕೆ ಕಳುಹಿಸಬೇಕಾದ ಈ ಲಾಂಚ್‌ಪ್ಯಾಡ್‌ಗಳು ಸಾಮಾನ್ಯವಾಗಿ ಸಕ್ರಿಯವಾಗಿರುತ್ತವೆ. ಇವರನ್ನು ಎರಡು ಅಥವಾ ಮೂರು ಗುಂಪುಗಳಿಗಿಂತ ಹೆಚ್ಚು ಇರಿಸಲಾಗುವುದಿಲ್ಲ ಎಂದು ಡಿಐಜಿ ಕುನ್ವರ್ ಮಾಹಿತಿ ನೀಡಿದ್ದಾರೆ.

ಭಯೋತ್ಪಾದಕ ಸಂಘಟನೆಗಳು ಮಿಶ್ರ ತರಬೇತಿ ನೀಡುತ್ತಿವೆ

ಪಾಕ್​ ಪೋಷಿತ ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಗುಂಪುಗಳು ಈ ಹಿಂದೆ ಬೇರೆ ಸ್ಥಳಗಳಿಂದ ಕಾರ್ಯನಿರ್ವಹಿಸುತ್ತಿದ್ದವು. ಆದರೆ ಈಗ ಮಿಶ್ರ ಗುಂಪುಗಳಲ್ಲಿ ಭಯೋತ್ಪಾದಕರಿಗೆ ತರಬೇತಿ ನೀಡುತ್ತಿವೆ ಎಂದು ಡಿಐಜಿ ಕುನ್ವರ್ ಹೇಳಿದ್ದಾರೆ.
ಹಿಂದೆ, ಉಗ್ರರು ಪ್ರದೇಶಗಳನ್ನು ಗುರುತಿಸುತ್ತಿದ್ದರು, ಅಲ್ಲಿ ಜೈಶ್-ಎ-ಮೊಹಮ್ಮದ್‌ಗೆ ಸೇರಿದವರು ಕೆಳ ಭಾಗದಲ್ಲಿ ಸಕ್ರಿಯರಾಗುತ್ತಾರೆ ಮತ್ತು ಲಷ್ಕರ್-ಎ-ತೈಬಾದವರು ಮೇಲ್ಭಾಗದಲ್ಲಿ ಸಕ್ರಿಯರಾಗುತ್ತಾರೆ. ಅಲ್ಲದೆ, ಆಪರೇಷನ್ ಸಿಂಧೂರದ ನಂತರ, ಭಯೋತ್ಪಾದಕರು ಮಿಶ್ರ ಗುಂಪನ್ನು ರಚಿಸಿದ್ದಾರೆ. ಉಗ್ರರಾಗಲು ಬಯಸುವವರು ಮಿಶ್ರ ಗುಂಪಿನಲ್ಲಿ ತರಬೇತಿ ಪಡೆಯಬಹುದು ಎಂದು ಕುನ್ವರ್ ತಿಳಿಸಿದ್ದಾರೆ.

ಯುದ್ಧಗಳ ಬಗ್ಗೆ ಬಿಎಸ್‌ಎಫ್‌ಗೆ ಉತ್ತಮ ಅನುಭವವಿದೆ

ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಯುದ್ಧಗಳನ್ನು ಎದುರಿಸುವಲ್ಲಿ ಉತ್ತಮ ಅನುಭವ ಹೊಂದಿರುವುದರಿಂದ, ಆಪರೇಷನ್ ಸಿಂಧೂರವನ್ನು ಪುನರಾರಂಭಿಸಲು ನಿರ್ಧರಿಸಿದರೆ ಸರ್ಕಾರದ ಆದೇಶಗಳನ್ನು ಪಾಲಿಸಲು ಬಿಎಸ್‌ಎಫ್ ಸಿದ್ಧವಾಗಿದೆ ಎಂದು ಜಮ್ಮು ಗಡಿನಾಡಿನ ಬಿಎಸ್‌ಎಫ್ ಐಜಿ ಶಶಾಂಕ್ ಆನಂದ್ ಹೇಳಿದ್ದಾರೆ.
ನಾವು 1965, 1971, 1999 ರ ಕಾರ್ಗಿಲ್ ಯುದ್ಧ ಅಥವಾ ಆಪರೇಷನ್ ಸಿಂಧೂರ್ ಬಗ್ಗೆ ಮಾತನಾಡಿದರೆ, ಬಿಎಸ್ಎಫ್ ಎಲ್ಲಾ ರೀತಿಯ ಯುದ್ಧಗಳ ಉತ್ತಮ ಅನುಭವವನ್ನು ಹೊಂದಿದೆ. ಇದು ಸಾಂಪ್ರದಾಯಿಕ ಅಥವಾ ಹೈಬ್ರಿಡ್ ಯುದ್ಧವಾಗಿರಬಹುದು. ನಾವು ಸಿದ್ಧರಿದ್ದೇವೆ. ನಮಗೆ ಅವಕಾಶ ಸಿಕ್ಕರೆ, ನಾವು ಮೇ ತಿಂಗಳಲ್ಲಿ ಮಾಡಿದ್ದಕ್ಕಿಂತ ಹೆಚ್ಚಿನ ಹಾನಿಯನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದ್ದೇವೆ. ಸರ್ಕಾರ ಯಾವುದೇ ನೀತಿಯನ್ನು ನಿರ್ಧರಿಸಿದರೂ, ಬಿಎಸ್ಎಫ್ ಅದರಲ್ಲಿ ತನ್ನ ಪಾತ್ರವನ್ನು ವಹಿಸುತ್ತದೆ ಎಂದು ಅನಂದ್ ತಿಳಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net