ನಾನಿಲ್ಲದಿದ್ದರೆ ಪಾಕ್ ಪ್ರಧಾನಿ ಹೆಣವಾಗುತ್ತಿದ್ದರು...ಭಾರತದ ಆಕ್ರಮಣಕ್ಕೆ ಇಸ್ಲಾಮಾಬಾದ್ ನಡುಗಿತ್ತು ಎಂದ ಟ್ರಂಪ್​! | Donald Trump

Donald Trump | ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Donald Trump | ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Published on
ವಾಷಿಂಗ್ಟನ್​: ಬುಧವಾರ ತಮ್ಮ ವಾರ್ಷಿಕ ಸ್ಟೇಟ್ ಆಫ್ ದಿ ಯೂನಿಯನ್ ಭಾಷಣದಲ್ಲಿ ಮಾತನಾಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump), ದಕ್ಷಿಣ ಏಷ್ಯಾದ ಭೌಗೋಳಿಕ ರಾಜಕೀಯವನ್ನೇ ಅಲುಗಾಡಿಸುವಂತಹ ಹೇಳಿಕೆ ನೀಡಿದ್ದಾರೆ.
ಕಳೆದ ವರ್ಷ ಭಾರತವು ಪಾಕಿಸ್ತಾನದ ಮೇಲೆ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ತಡೆಯುವ ಮೂಲಕ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್​ರ ಜೀವ ರಕ್ಷಿಸಿದ್ದು ನಾನೇ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಸೇರಿದಂತೆ ಒಟ್ಟು ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ ಎಂಬ ತಮ್ಮ ಹೇಳಿಕೆಯನ್ನು ಟ್ರಂಪ್ ಬುಧವಾರ ಪುನರುಚ್ಚರಿಸಿದ್ದು, ಆಪರೇಷನ್ ಸಿಂಧೂರ ತಡೆಯಲು ಮಧ್ಯಪ್ರವೇಶ ಮಾಡಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್​​ರನ್ನು ಕೊಲ್ಲದಂತೆ ರಕ್ಷಿಸಿದ್ದೇನೆ ಎಂದು ಹೇಳಿದರು.
ಕಳೆದ ವರ್ಷದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ವಿಷಯದಲ್ಲಿ ನಾನು ಮಧ್ಯಪ್ರವೇಶಿಸದೆ ಹೋಗಿದ್ದರೆ ಪಾಕಿಸ್ತಾನದಲ್ಲಿ 35 ಮಿಲಿಯನ್ ಜನರು ಸಾಯುತ್ತಿದ್ದರು ಎಂದು ಶೆಹಬಾಜ್ ಷರೀಫ್ ಹೇಳಿರುವುದಾಗಿ ಟ್ರಂಪ್​ ತಿಳಿಸಿದ್ದಾರೆ.
ಟ್ರಂಪ್​ ಪರಿಹರಿಸಿರುವುದಾಗಿ ಹೇಳಿಕೊಂಡಿರುವ ಸಂಘರ್ಷಗಳಲ್ಲಿ ಇಸ್ರೇಲ್ ಮತ್ತು ಹಮಾಸ್, ಇಸ್ರೇಲ್ ಮತ್ತು ಇರಾನ್, ಈಜಿಪ್ಟ್ ಮತ್ತು ಇಥಿಯೋಪಿಯಾ, ಭಾರತ ಮತ್ತು ಪಾಕಿಸ್ತಾನ, ಸೆರ್ಬಿಯಾ ಮತ್ತು ಕೊಸೊವೊ, ರುವಾಂಡಾ ಮತ್ತು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಅರ್ಮೇನಿಯಾ ಮತ್ತು ಅಜೆರ್ಬೈಜಾನ್, ಮತ್ತು ಕಾಂಬೋಡಿಯಾ ಮತ್ತು ಥೈಲ್ಯಾಂಡ್ ನಡುವಿನ ಸಂಘರ್ಷಗಳು ಸಹ ಸೇರಿವೆ.

ಟ್ರಂಪ್​ ಮಾತು ನಿರಾಕರಿಸಿದ್ದ ಭಾರತ

ಆಪರೇಷನ್​ ಸಿಂಧೂರ ಸಮಯದಲ್ಲಿ ಶಾಂತಿ ಪುನಸ್ಥಾಪಿಸಲು ನಾನೇ ಕಾರಣ, ಕದನ ವಿರಾಮವಾಗಿದ್ದು ನನ್ನಿಂದಲೇ ಎಂಬ ಟ್ರಂಪ್ ಹೇಳಿಕೆಗಳನ್ನು ಭಾರತ ನಿರಾಕರಿಸುತ್ತಲೇ ಬಂದಿದ್ದು, ಸಂಘರ್ಷವನ್ನು ನಿಲ್ಲಿಸುವಲ್ಲಿ ಟ್ರಂಪ್ ಪಾತ್ರದ ಬಗ್ಗೆ ಕೇಳಿದಾಗ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಅಮೆರಿಕ, ಅಮೆರಿಕದಲ್ಲಿದೆ ಎಂದು ವ್ಯಂಗ್ಯವಾಡಿದರು.
ಮೂರನೇ ವ್ಯಕ್ತಿಯ ಹಸ್ತಕ್ಷೇಪವನ್ನು ತಿರಸ್ಕರಿಸಿದ ಭಾರತ, ಉಭಯ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒ) ಹಾಟ್‌ಲೈನ್‌ನಲ್ಲಿ ಸಂಪರ್ಕಿಸಿ, ದಾಳಿಯನ್ನು ನಿಲ್ಲಿಸುವಂತೆ ನಮ್ಮನ್ನು ವಿನಂತಿಸಿದ್ದಾರೆ ಎಂದು ನಿರಂತರವಾಗಿ ಸಮರ್ಥಿಸಿಕೊಂಡಿದೆ.
ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ ಬಳಿಕ, ಭಾರತ ಕಳೆದ ವರ್ಷ ಮೇ 7 ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಪ್ರಾರಂಭಿಸಿತು(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net