ಮುಜುಗರ ತಪ್ಪಿಸಿಕೊಳ್ಳಲು ಕೇಂದ್ರದಿಂದ ಜನಗಣತಿ ದತ್ತಾಂಶ ತಿರುಚುವ ಆತಂಕ: Asaduddin Owaisi ಆರೋಪ

Asaduddin Owaisi
Asaduddin Owaisi
Published on
ನವದೆಹಲಿ: ದೇಶದಲ್ಲಿ ಬಹುದಿನಗಳಿಂದ ಬಾಕಿ ಉಳಿದಿರುವ 2027ರ ಜನಗಣತಿ (Census) ಪ್ರಕ್ರಿಯೆಯ ಸಮಯ ಹಾಗೂ ಅದರ ವಿಶ್ವಾಸಾರ್ಹತೆಯನ್ನು ಎಐಎಂಐಎಂ (AIMIM) ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸದುದ್ದೀನ್ ಓವೈಸಿ(Asaduddin Owaisi) ತೀವ್ರವಾಗಿ ಪ್ರಶ್ನಿಸಿದ್ದಾರೆ.
ಶುಕ್ರವಾರ 'ಎಕ್ಸ್' (ಟ್ವಿಟರ್) ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, "ಸುಳ್ಳುಗಳಲ್ಲಿ ಮೂರು ವಿಧಗಳಿವೆ; ಸಾಮಾನ್ಯ ಸುಳ್ಳುಗಳು, ಕಡು ಸುಳ್ಳುಗಳು ಮತ್ತು ಅಂಕಿ-ಅಂಶಗಳು" ಎಂಬ ಪ್ರಸಿದ್ಧ ಗಾದೆಯನ್ನು ನೆನಪಿಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಏನಿದು ಆರೋಪ?

ಕೇಂದ್ರ ಸರ್ಕಾರವು 2027ರಲ್ಲಿ ನಡೆಸಲು ಉದ್ದೇಶಿಸಿರುವ ಡಿಜಿಟಲ್ ಜನಗಣತಿಯ ಸಮಯದ ಬಗ್ಗೆ ಅಸದುದ್ದೀನ್ ಓವೈಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರವು ಮುಜುಗರದಿಂದ ತಪ್ಪಿಸಿಕೊಳ್ಳಲು ಜನಗಣತಿಯ ನಿಷ್ಪಕ್ಷಪಾತತೆಯನ್ನು ಪಣಕ್ಕಿಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಏಕೆ ವಿರೋಧ?

ಓವೈಸಿ ಅವರ ಪ್ರಕಾರ, ದೇಶದ ಕ್ಷೇತ್ರಗಳ ಮರುವಿಂಗಡಣೆ (Delimitation), ವಿವಿಧ ಅಭಿವೃದ್ಧಿ ಯೋಜನೆಗಳ ಜಾರಿ ಮತ್ತು ಆಹಾರ ಭದ್ರತೆಯ ದೃಷ್ಟಿಯಿಂದ ಜನಗಣತಿಯ ದತ್ತಾಂಶಗಳು ಅತ್ಯಂತ ನಿರ್ಣಾಯಕವಾಗಿವೆ. ಆದರೆ ಸರ್ಕಾರವು ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ (NFHS) ಮುಕ್ತ ಬಯಲು ಶೌಚಾಲಯ ಮುಕ್ತ ಮತ್ತು ಅಡುಗೆ ಅನಿಲ ಬಳಕೆಯಂತಹ ಪ್ರಮುಖ ವಿಷಯಗಳ ಮಾಹಿತಿ ಸಂಗ್ರಹಿಸುವುದನ್ನೇ ನಿಲ್ಲಿಸಿದೆ. ಇದೇ ರೀತಿ ಜನಗಣತಿಯಲ್ಲೂ ನೈಜ ಅಂಕಿ-ಅಂಶಗಳನ್ನು ಮರೆಮಾಚುವ ಆತಂಕವಿದೆ ಎಂದು ಅವರು ದೂರಿದ್ದಾರೆ.

ಯಾವಾಗ ಮತ್ತು ಹೇಗೆ?

ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ 2021 ರಲ್ಲಿ ನಡೆಯಬೇಕಿದ್ದ ಜನಗಣತಿ ವಿಳಂಬವಾಗಿತ್ತು. ಈಗ ಬರೋಬ್ಬರಿ 16 ವರ್ಷಗಳ ಸುದೀರ್ಘ ಗ್ಯಾಪ್ ನಂತರ, 2027 ರ ಮಾರ್ಚ್ 1 ರ ವೇಳೆಗೆ ದೇಶದ ಜನಸಂಖ್ಯೆಯನ್ನು ಪೂರ್ಣ ಪ್ರಮಾಣದಲ್ಲಿ ಲೆಕ್ಕ ಹಾಕಲು ಕೇಂದ್ರ ಗೃಹ ಸಚಿವಾಲಯ ಸಜ್ಜಾಗಿದೆ. ಇದು ಭಾರತದ ಮೊದಲ ಸಂಪೂರ್ಣ 'ಡಿಜಿಟಲ್ ಜನಗಣತಿ' ಆಗಲಿದ್ದು, ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಜಾತಿ ಆಧಾರಿತ ಗಣತಿಯನ್ನೂ ಒಳಗೊಳ್ಳಲಿದೆ. ಸದ್ಯ ನಾಗರಿಕರು ತಾವಾಗಿಯೇ ಆನ್‌ಲೈನ್‌ನಲ್ಲಿ ವಿವರ ಸಲ್ಲಿಸುವ ಸ್ವಯಂ-ಗಣತಿ ಹಾಗೂ ಮನೆಗಳ ಪಟ್ಟಿ ಮಾಡುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ.
ಅಧಿಕಾರಿಗಳ ಸ್ಪಷ್ಟನೆ: ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತ ಮೃತುಂಜಯ್ ಕುಮಾರ್ ನಾರಾಯಣ್ ಅವರು, ನಾಗರಿಕರು ನಿಖರ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ. ಈ ವೈಯಕ್ತಿಕ ಮಾಹಿತಿಗಳನ್ನು ರಹಸ್ಯವಾಗಿಡಲಾಗುವುದು ಮತ್ತು ಯಾವುದೇ ಸರ್ಕಾರದ ಸೌಲಭ್ಯ ಕಡಿತಗೊಳಿಸಲು ಇದನ್ನು ಬಳಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net