ಓವರ್​ಟೂರಿಸಂ: ಅತಿಯಾದ ಪ್ರವಾಸೋದ್ಯಮ ಮತ್ತು ನಲುಗುತ್ತಿರುವ ಪರ್ವತಗಳು

ಓವರ್​ಟೂರಿಸಂ: ಅತಿಯಾದ ಪ್ರವಾಸೋದ್ಯಮ ಮತ್ತು ನಲುಗುತ್ತಿರುವ ಪರ್ವತಗಳು
Published on: 

ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಂತಹ ಸೂಕ್ಷ್ಮ ಹಿಮಾಲಯನ್ ಪ್ರದೇಶಗಳು ಪ್ರಸ್ತುತ ಅನಿಯಂತ್ರಿತ ಪ್ರವಾಸೋದ್ಯಮದ ಭಾರಕ್ಕೆ ನಲುಗುತ್ತಿವೆ. ರಜಾದಿನಗಳಲ್ಲಿ ಗಿರಿಧಾಮಗಳಿಗೆ ಲಗ್ಗೆಯಿಡುವ ಪ್ರವಾಸಿಗರ ಅತಿಯಾದ ದಟ್ಟಣೆ, ವಿಪರೀತ ವಾಹನ ಸಂಚಾರ ಮತ್ತು ಪ್ಲಾಸ್ಟಿಕ್ ತ್ಯಾಜ್ಯವು ಸ್ಥಳೀಯ ಪರಿಸರ ಸಮತೋಲನವನ್ನು ತೀವ್ರವಾಗಿ ಹಾಳು ಮಾಡುತ್ತಿದೆ. ಪ್ರವಾಸೋದ್ಯಮದ ಆಕರ್ಷಣೆಯಿಂದಾಗಿ ಬೆಟ್ಟಗುಡ್ಡಗಳನ್ನು ಅವೈಜ್ಞಾನಿಕವಾಗಿ ಕೊರೆದು ಬೃಹತ್ ಹೋಟೆಲ್​ಗಳು ಮತ್ತು ರೆಸಾರ್ಟ್​ಗಳನ್ನು ನಿರ್ವಿುಸಲಾಗುತ್ತಿದ್ದು, ಇದು ಆಗಾಗ್ಗೆ ಸಂಭವಿಸುವ ಭೀಕರ ಭೂಕುಸಿತಗಳು ಹಾಗೂ ದಿಢೀರ್ ಪ್ರವಾಹಗಳಿಗೆ ನೇರ ಕಾರಣವಾಗುತ್ತಿದೆ. ಪ್ರವಾಸೋದ್ಯಮದಿಂದ ಸ್ಥಳೀಯ ಆರ್ಥಿಕತೆಗೆ ಆದಾಯ ಬರುತ್ತಿರುವುದು ನಿಜವಾದರೂ, ನಿಸರ್ಗದ ನಿಯಮಗಳನ್ನು ಗಾಳಿಗೆ ತೂರಿ ನಡೆಯುತ್ತಿರುವ ಅತಿಯಾದ ವಾಣಿಜ್ಯೀಕರಣವು ಪರ್ವತಗಳ ಜೀವವೈವಿಧ್ಯಕ್ಕೆ ಮತ್ತು ಜನರ ಜೀವಕ್ಕೆ ನಿರಂತರ ಬೆದರಿಕೆಯೊಡ್ಡಿದೆ.

ಓವರ್​ಟೂರಿಸಂ ಅಂದರೆ ಅತಿಯಾದ ಪ್ರವಾಸೋದ್ಯಮವು ಇಂದು ಭಾರತದ ಹಿಮಾಲಯ ಪ್ರದೇಶಗಳಲ್ಲಿ ಪರಿಸರ ವಿಪತ್ತು ಮತ್ತು ಮಾನವ ಸಂಕಷ್ಟಕ್ಕೆ ಪ್ರಮುಖ ಕಾರಣವಾಗಿದೆ. ಹಿಮಾಲಯವು ಭೂವೈಜ್ಞಾನಿಕವಾಗಿ ಅತ್ಯಂತ ಕಿರಿಯ ಹಾಗೂ ಚಲನಶೀಲ ಪರ್ವತ ಶ್ರೇಣಿಯಾಗಿದ್ದು, ನೈಸರ್ಗಿಕವಾಗಿಯೇ ಮೃದು ಮಣ್ಣು ಮತ್ತು ಸೂಕ್ಷ್ಮ ಪರಿಸರವನ್ನು ಹೊಂದಿದೆ. ಈ ಪ್ರದೇಶದ ಧಾರಣಾ ಸಾಮರ್ಥ್ಯವನ್ನು ಮೀರಿ ನಡೆಯುತ್ತಿರುವ ಚಟುವಟಿಕೆಗಳು ಹಿಮಾಲಯದ ಅಸ್ತಿತ್ವಕ್ಕೇ ಕಂಟಕವಾಗಿವೆ. ಶಿಮ್ಲಾ, ಮನಾಲಿಯಂತಹ ನಗರಗಳಲ್ಲಿ ಹಾಗೂ ಚಾರ್​ಧಾಮ್ ಮಾರ್ಗಗಳಲ್ಲಿ ಬಹುಮಹಡಿಯ ನೂರಾರು ಹೋಟೆಲ್​ಗಳು ಮತ್ತು ರೆಸಾರ್ಟ್​ಗಳನ್ನು ಜಲಮೂಲಗಳ ಸಮೀಪ ಹಾಗೂ ಇಳಿಜಾರುಗಳ ಮೇಲೆ ನಿರ್ವಿುಸಲಾಗುತ್ತಿದೆ.

ಹೆದ್ದಾರಿ ವಿಸ್ತರಣೆ ಮತ್ತು ಸುರಂಗ ಮಾರ್ಗಗಳಿಗಾಗಿ ಬೆಟ್ಟಗಳನ್ನು ಕಡಿದು ಬ್ಲಾಸ್ಟಿಂಗ್ ಮಾಡುವುದರಿಂದ ಬೆಟ್ಟಗಳ ಆಂತರಿಕ ರಚನೆ ಸಡಿಲಗೊಂಡು ಭೂಕುಸಿತಗಳು ಹೆಚ್ಚುತ್ತಿವೆ. ಸ್ವಾಭಾವಿಕ ಜಲಮಾರ್ಗಗಳು ಒತ್ತುವರಿಯಾಗಿರುವುದರಿಂದ ಮಳೆಗಾಲದಲ್ಲಿ ಮೇಘಸ್ಪೋಟ ಸಂಭವಿಸಿದಾಗ ನೀರು ಸರಾಗವಾಗಿ ಹರಿಯಲು ಜಾಗವಿಲ್ಲ. ಮರಗಿಡಗಳ ನಾಶದಿಂದಾಗಿ ಮೇಲ್ಪದರದ ಮಣ್ಣು ಕೊಚ್ಚಿಹೋಗಿ ಭಾರೀ ಹಾನಿ ಸಂಭವಿಸುತ್ತಿದೆ. ಪ್ರಕೃತಿ ಚೇತರಿಸಿಕೊಳ್ಳಲು ನಮ್ಮಿಂದ ದೊಡ್ಡ ಸಹಾಯವೇನೂ ಬೇಕಿಲ್ಲ; ನಾವು ಅದಕ್ಕೆ ನೋವುಂಟು ಮಾಡುವುದನ್ನು ನಿಲ್ಲಿಸಿದರೆ ಸಾಕು. ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿಲ್ಲಿಸುವುದು ಪರಿಹಾರವಲ್ಲ, ಅಭಿವೃದ್ಧಿಯ ಅರ್ಥವನ್ನು ಬದಲಾಯಿಸುವುದು ಇಂದಿನ ತುರ್ತು ಅಗತ್ಯ. ನಿಜವಾದ ಪ್ರಗತಿಯೆಂದರೆ, ಕಡಿಯುವುದಕ್ಕಿಂತ ಹೆಚ್ಚು ಮರಗಳನ್ನು ಬೆಳೆಸುವುದು, ಪ್ರವಾಸೋದ್ಯಮವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವುದು. ಮೈದಾನಗಳಿಗೆ ತಂಪಾದ ನೆರಳು ಬೇಕು, ಪರ್ವತಗಳಿಗೆ ಪ್ರಶಾಂತವಾದ ಮೌನ ಬೇಕು. ಭಾರತದ ಉಳಿವಿಗಾಗಿ ಇವೆರಡೂ ಅನಿವಾರ್ಯ.

ವಾಹನದಟ್ಟಣೆಯ ಕಿರಿಕಿರಿ

ಮೇ ಮತ್ತು ಜೂನ್ ತಿಂಗಳ ರಜಾದಿನಗಳಲ್ಲಿ ಶಿಮ್ಲಾ-ಕಾಲ್ಕಾ ಹೆದ್ದಾರಿ ರ್ಪಾಂಗ್ ಸ್ಥಳವಾಗಿ ಮಾರ್ಪಡುತ್ತದೆ. ವಾಹನಗಳು 10ರಿಂದ 15 ಕಿಲೋಮೀಟರ್ ಉದ್ದದ ಸರತಿ ಸಾಲಿನಲ್ಲಿ ನಿಲ್ಲುತ್ತವೆ. ಪ್ರವಾಸಿಗರು 4ರಿಂದ 6 ಗಂಟೆಗಳ ಕಾಲ ಡೀಸೆಲ್ ಹೊಗೆಯಲ್ಲೇ ಕಳೆಯುತ್ತಾರೆ. ಹೋಟೆಲ್​ಗಳ ಜನರೇಟರ್​ಗಳು ರಾತ್ರಿಯಿಡೀ ಗರ್ಜಿಸುತ್ತವೆ. ಪ್ಲಾಸ್ಟಿಕ್ ಬಾಟಲಿಗಳು ಮತ್ತು ಕಸದ ಚೀಲಗಳು ಪರ್ವತದ ತೊರೆಗಳನ್ನು ಸೇರುತ್ತವೆ. ಈ ಎಲ್ಲ ಹೊರೆಯನ್ನು ಸಹಿಸಿಕೊಳ್ಳುವ ಶಕ್ತಿ ಮುಗಿಯುವವರೆಗೂ ಬೆಟ್ಟ ಗಳು ಮೌನವಾಗಿ ನರಳುತ್ತವೆ.

ಹಿಮಾಲಯ ಕೇವಲ ಬೆಟ್ಟಗಳಲ್ಲ!

ಗಂಗಾ, ಯಮುನಾ, ಸಿಂಧು ಮತ್ತು ಬ್ರಹ್ಮಪುತ್ರ ಸೇರಿದಂತೆ ಹತ್ತು ಪ್ರಮುಖ ನದಿ ವ್ಯವಸ್ಥೆಗಳಿಗೆ ಜೀವ ನೀಡುವುದು ಹಿಮಾಲಯ. ಕುಡಿಯುವ ನೀರು, ಕೃಷಿ ಮತ್ತು ನಿತ್ಯಜೀವನಕ್ಕಾಗಿ 60 ಕೋಟಿಗೂ ಹೆಚ್ಚು ಜನರು ಈ ನದಿಗಳನ್ನೇ ಅವಲಂಬಿಸಿದ್ದಾರೆ. ಈ ಪರ್ವತಗಳು ಕೇವಲ ಪ್ರವಾಸಿ ಆಕರ್ಷಣೆಗಳಲ್ಲ, ಇಡೀ ಉಪಖಂಡದ ಜೀವನಾಡಿಗಳು. 2025ರಲ್ಲಿ ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ ಮತ್ತು ಜಮ್ಮು-ಕಾಶ್ಮೀರ ಸೇರಿದಂತೆ ಹಿಮಾಲಯ ರಾಜ್ಯಗಳಿಗೆ 5 ಕೋಟಿಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ. ಶಿಮ್ಲಾ ನಗರವೊಂದಕ್ಕೇ 60 ಲಕ್ಷಕ್ಕಿಂತ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದಾರೆ. ಬ್ರಿಟಿಷರ ಕಾಲದಲ್ಲಿ ಕೇವಲ 25,000 ಜನರ ವಾಸಕ್ಕಾಗಿ ವಿನ್ಯಾಸಗೊಳಿಸಲಾದ ಈ ಸಣ್ಣ ನಗರದಲ್ಲಿ, ಇಂದು 4 ಲಕ್ಷಕ್ಕೂ ಹೆಚ್ಚು ಸ್ಥಳೀಯರಿದ್ದು, ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಲಗ್ಗೆಯಿಡುತ್ತಿದ್ದಾರೆ.

ಪ್ರಕೃತಿ ಮೇಲಿನ ಪರಿಣಾಮಗಳು

ತ್ಯಾಜ್ಯ ವಿಲೇವಾರಿ ಬಿಕ್ಕಟ್ಟು: ಲಕ್ಷಾಂತರ ಪ್ರವಾಸಿಗರು ತರುವ ಪ್ಲಾಸ್ಟಿಕ್ ಬಾಟಲಿಗಳು, ಕ್ಯಾರಿಬ್ಯಾಗ್​ಗಳು ಮತ್ತು ಆಹಾರದ ಪ್ಯಾಕೆಟ್​ಗಳು ಕಾಡುಗಳು ಮತ್ತು ನದಿಗಳಲ್ಲಿ ಸಂಗ್ರಹವಾಗುತ್ತಿವೆ. ಪ್ರವಾಸಿ ಋತುವಿನಲ್ಲಿ ಹಿಮಾಲಯನ್ ರಾಜ್ಯಗಳು ಪ್ರತಿದಿನ 4 ಸಾವಿರ ಮೆಟ್ರಿಕ್ ಟನ್​ಗೂ ಹೆಚ್ಚು ಘನತ್ಯಾಜ್ಯವನ್ನು ಉತ್ಪಾದಿಸಿವೆ. ಅಷ್ಟೇ ಅಲ್ಲ, ಪ್ರವಾಸಿ ಋತುವಿನಲ್ಲಿ ಸ್ಥಳೀಯರಿಗೆ ಕುಡಿಯುವ ನೀರಿನ ಕೊರತೆ ಉಂಟಾಗುತ್ತಿದೆ; ನೀರು ಹೋಟೆಲ್​ಗಳಿಗೆ ತಿರುಗಿಸಲ್ಪಡುತ್ತದೆ. ಸಂಚಾರ ದಟ್ಟಣೆಯಿಂದಾಗಿ ಸ್ಥಳೀಯ ಆಂಬುಲೆನ್ಸ್ ಹಾಗೂ ತುರ್ತು ಸೇವೆಗಳು ಸ್ಥಗಿತಗೊಂಡು, ರೋಗಿಗಳು, ಜನಸಾಮಾನ್ಯರು ಪರದಾಡುವಂತಾಗಿದೆ.

ಭೂಕುಸಿತಗಳು: ಇಳಿಜಾರುಗಳಲ್ಲಿ ಅವೈಜ್ಞಾನಿಕವಾಗಿ ನಿರ್ವಿುಸಲಾದ ಕಟ್ಟಡಗಳು ಬೆಟ್ಟಗಳ ಭೂವೈಜ್ಞಾನಿಕ ಸ್ಥಿರತೆಯನ್ನು ದುರ್ಬಲಗೊಳಿಸುತ್ತವೆ. 2023ರ ಮುಂಗಾರಿನಲ್ಲಿ ಹಿಮಾಚಲ ಪ್ರದೇಶವೊಂದರಲ್ಲೇ ಸಂಭವಿಸಿದ ಭೂಕುಸಿತಗಳಿಗೆ 70ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡರು.

ಹಿಮನದಿಗಳ ಕರಗುವಿಕೆ: ವಾಹನಗಳು ಮತ್ತು ಪ್ರವಾಸೋದ್ಯಮ ಚಟುವಟಿಕೆಗಳಿಂದ ಉತ್ಪತ್ತಿಯಾಗುವ ಬ್ಲಾ್ಯಕ್ ಕಾರ್ಬನ್ ಹಿಮನದಿಗಳ ಮೇಲೆ ಸಂಗ್ರಹವಾಗಿ, ಹಿಮ ಕರಗುವ ಪ್ರಕ್ರಿಯೆಯನ್ನು ತೀವ್ರಗೊಳಿಸುತ್ತಿದೆ. ಗಂಗೋತ್ರಿ ಹಿಮನದಿಯು ಪ್ರತಿವರ್ಷ 22 ಮೀಟರ್​ಗಳಷ್ಟು ಹಿಮ್ಮುಖವಾಗಿ ಸರಿಯುತ್ತಿದೆ.

ಜೋಷಿಮಠದ ಘಟನೆ

ಉತ್ತರಾಖಂಡದ ಪವಿತ್ರ ಪಟ್ಟಣವಾದ ಜೋಷಿಮಠ 2023ರ ಜನವರಿಯಲ್ಲಿ ಕುಸಿಯಲಾರಂಭಿಸಿತು. 800ಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡವು. ಮಧ್ಯರಾತ್ರಿಯಲ್ಲಿ ಕುಟುಂಬಗಳನ್ನು ಸ್ಥಳಾಂತರಿಸಬೇಕಾಯಿತು. ಬದರಿನಾಥ ಮತ್ತು ಔಲಿ ಸ್ಕೀಯಿಂಗ್ ರೆಸಾರ್ಟ್​ಗೆ ಹೆಬ್ಬಾಗಿಲಾಗಿರುವ ಈ ಪಟ್ಟಣ ಅಕ್ಷರಶಃ ಇಬ್ಭಾಗವಾಗತೊಡಗಿತು. ದಶಕಗಳ ಕಾಲ ನಡೆದ ಮಿತಿಮೀರಿದ ನಿರ್ವಣ, ಅಸಂಖ್ಯಾತ ಹೋಟೆಲ್​ಗಳು, ಭೂವೈಜ್ಞಾನಿಕ ಸಮೀಕ್ಷೆ ನಡೆಸದೆ ಕೊರೆದ ರಸ್ತೆಗಳು ಮತ್ತು ಪರ್ವತದ ಒಡಲಿನಲ್ಲಿ ಕೊರೆದ ಜಲವಿದ್ಯುತ್ ಯೋಜನೆ ಜೋಷಿಮಠ ದುರಂತಕ್ಕೆ ಕಾರಣ. 1976ರಲ್ಲೇ ತಜ್ಞರ ಸಮಿತಿ (ಮಿಶ್ರಾ ಕಮಿಟಿ) ಈ ಬಗ್ಗೆ ಎಚ್ಚರಿಸಿದ್ದರೂ, ಯಾರೂ ಕಿವಿಗೊಡಲಿಲ್ಲ. ಜೋಷಿಮಠವು ಕೇವಲ ಒಂದು ಪ್ರತ್ಯೇಕ ಘಟನೆಯಲ್ಲ; ಅದು ಭವಿಷ್ಯದ ಆಪತ್ತಿನ ಮುನ್ಸೂಚನೆ.

  • ಭಾರತೀಯ ಅರಣ್ಯ ಸಮೀಕ್ಷೆಯ ವರದಿ ಪ್ರಕಾರ, ಕಳೆದೊಂದು ದಶಕದಲ್ಲಿ ಹಿಮಾಚಲ ಪ್ರದೇಶದಲ್ಲೇ 400 ಚದರ ಕಿ.ಮೀ ಅರಣ್ಯ ಪ್ರದೇಶ ಕಡಿಮೆಯಾಗಿದೆ. ಹಿಮಾಲಯದ ಶೇ. 65ಕ್ಕಿಂತ ಹೆಚ್ಚು ಹಿಮನದಿಗಳು ಕರಗಿ ಹಿಂದೆ ಸರಿಯುತ್ತಿವೆ.

  • ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್​ಬಿಐ) ಇತ್ತೀಚಿನ ವರದಿಯ ಪ್ರಕಾರ, ಹವಾಮಾನ ಸಂಬಂಧಿತ ವಿಪತ್ತುಗಳಿಂದಾಗಿ ಭಾರತಕ್ಕೆ ಪ್ರತಿವರ್ಷ 2.5 ಲಕ್ಷ ಕೋಟಿ ರೂ. ನಷ್ಟವಾಗುತ್ತಿದೆ.

  • ಕಳೆದ 30 ವರ್ಷಗಳಲ್ಲಿ ದೆಹಲಿಯ ಸರಾಸರಿ ಬೇಸಿಗೆ ತಾಪಮಾನ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ.

ಸುಸ್ಥಿರ ಪರಿಹಾರಗಳು

  • ಪ್ರತಿ ಪಟ್ಟಣ ಮತ್ತು ಟ್ರೆಕ್ಕಿಂಗ್ ಮಾರ್ಗಕ್ಕೆ ದಿನವೊಂದಕ್ಕೆ ಗರಿಷ್ಠ ಎಷ್ಟು ಪ್ರವಾಸಿಗರು ಮತ್ತು ವಾಹನಗಳು ಪ್ರವೇಶಿಸಬಹುದು ಎಂಬುದನ್ನು ನಿಖರವಾಗಿ ಲೆಕ್ಕಹಾಕಿ ಕಡ್ಡಾಯ ಮಿತಿ ವಿಧಿಸುವುದು.

  • ಉತ್ತರಾಖಂಡದ ಚಾರ್​ಧಾಮ್ ಯಾತ್ರೆ ಅಥವಾ ರೋಹ್ಟಾಂಗ್ ಪಾಸ್ ಮಾದರಿಯಲ್ಲಿ ಪೂರ್ವ ನೋಂದಣಿ, ಕಡ್ಡಾಯ ಇ-ಪಾಸ್ ಜಾರಿಗೊಳಿಸಿ, ಪ್ರವಾಸಿಗರ ದಟ್ಟಣೆ ಹೆಚ್ಚಿದಾಗ ಪ್ರವೇಶವನ್ನು ನಿರ್ಬಂಧಿ ಸುವುದು. ಪರಿಸರ ಪ್ರವಾಸೋದ್ಯಮ ಪರವಾನಗಿಗಳು ಕೇವಲ ವೆಬ್​ಸೈಟ್​ಗಳಿಗೆ ಸೀಮಿತವಾಗದೆ, ಕಟ್ಟುನಿಟ್ಟಾದ ತಪಾಸಣೆ ವ್ಯವಸ್ಥೆ ಜಾರಿಗೆ ತರುವುದು.

  • ಬೃಹತ್ ಹೋಟೆಲ್​ಗಳ ಬದಲಿಗೆ ಸ್ಥಳೀಯ ಮನೆಗಳಲ್ಲಿ ಉಳಿದುಕೊಳ್ಳುವ ‘ಹೋಂಸ್ಟೇ’ಗಳಿಗೆ ಪ್ರೋತ್ಸಾಹ ನೀಡಬೇಕು, ಇದರಿಂದ ಸ್ಥಳೀಯರಿಗೆ ನೇರ ಆದಾಯ ಸಿಗುವುದರ ಜೊತೆಗೆ ಬೃಹತ್ ಕಟ್ಟಡಗಳ ನಿರ್ಮಾಣ ಕಡಿಮೆಯಾಗುತ್ತದೆ.

  • ನಗರಗಳ ಸುತ್ತ ಕಾನೂನುಬದ್ಧ ರಕ್ಷಣೆ ಹೊಂದಿರುವ ಹಸಿರು ಪಟ್ಟಿಗಳನ್ನು ನಿರ್ವಿುಸುವುದು.

ಪ್ರವಾಸಿಗರು ಏನು ಮಾಡಬಹುದು?

  • ಪ್ರವಾಸಿಗರ ಗರಿಷ್ಠ ದಟ್ಟಣೆ ಇರುವ ಮೇ-ಜೂನ್ ಬದಲು, ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಪ್ರಯಾಣಿಸಿ. ಗಿರಿಧಾಮಗಳಲ್ಲಿ ಸ್ವಂತ ವಾಹನಗಳ ಬದಲು ಸಾರ್ವಜನಿಕ ಸಾರಿಗೆ ಅಥವಾ ಹಂಚಿಕೆಯ ಟ್ಯಾಕ್ಸಿಗಳನ್ನು ಬಳಸಿ.

  • ಮರುಬಳಕೆಯ ನೀರಿನ ಬಾಟಲಿ ಮತ್ತು ಬ್ಯಾಗ್​ಗಳನ್ನು ಕೊಂಡೊಯ್ಯಿರಿ; ಬೆಟ್ಟಗಳಿಗೆ ಪ್ಲಾಸ್ಟಿಕ್ ಎಸೆಯದಿರುವುದೇ ಒಂದು ದೊಡ್ಡ ಸೇವೆ.

  • ಸ್ಥಳೀಯ ಧಾಬಾಗಳಲ್ಲಿ ಊಟ ಮಾಡಿ, ಹೋಮ್​ಸ್ಟೇಗಳಲ್ಲಿ ತಂಗಿ, ಸ್ಥಳೀಯ ಕುಶಲಕರ್ವಿುಗಳಿಂದ ವಸ್ತುಗಳನ್ನು ಖರೀದಿಸುವ ಮೂಲಕ ಸ್ಥಳೀಯ ಆರ್ಥಿಕತೆಗೆ ನೆರವಾಗಿ.

  • ಇಂದು ನೆಡುವ ಒಂದು ಆಲದ ಮರ ಮುಂದಿನ 200 ವರ್ಷಗಳ ಕಾಲ ನೆರಳು ನೀಡುತ್ತದೆ. ಇಂದು ರಕ್ಷಿಸುವ ಒಂದು ಹಿಮನದಿ ಮುಂದಿನ 500 ವರ್ಷಗಳ ಕಾಲ ನೀರು ಒದಗಿಸುತ್ತದೆ. ಯಾವುದೇ ಹಾನಿ ಮಾಡದೆ ಬಿಡುವ ಒಂದು ಬೆಟ್ಟದ ಇಳಿಜಾರು ಮುಂದಿನ ಮಳೆಗಾಲದಲ್ಲಿ ಸಂಭವಿಸಬಹುದಾದ ಭೀಕರ ಭೂಕುಸಿತವನ್ನು ತಡೆಯುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net