ರಾಜ್ಯಸಭೆಗೆ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆಗೆ ಆಕ್ರೋಶ; ಪಾಟ್ನಾದ ಜೆಡಿಯು ಕಚೇರಿ ಧ್ವಂಸಗೊಳಿಸಿದ ಪಕ್ಷದ ಕಾರ್ಯಕರ್ತರು | Nitish Kumar

ಸಿಎಂ ನಿತೀಶ್ ಕುಮಾರ್
ಸಿಎಂ ನಿತೀಶ್ ಕುಮಾರ್
Published on
ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್(Nitish Kumar) ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವುದಾಗಿ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ ಬಳಿಕ ಬಿಹಾರ ರಾಜಕಾರಣದಲ್ಲಿ ಬಿರುಗಾಳಿ ಎದ್ದಿದ್ದು, ಈ ನಿರ್ಧಾರದಿಂದ ಆಕ್ರೋಶಗೊಂಡಿರುವ ಜೆಡಿಯು ಕಾರ್ಯಕರ್ತರು ಗುರುವಾರ(ಮಾ. 05) ಪಾಟ್ನಾದ ಜೆಡಿಯು ಕಚೇರಿಯ ಆಸ್ತಿಪಾಸ್ತಿಯನ್ನು ಧ್ವಂಸಗೊಳಿಸಿದ್ದಾರೆ.
ನಿತೀಶ್ ಕುಮಾರ್ ಸಿಎಂ ಪದವಿಗೆ ರಾಜೀನಾಮೆ ನೀಡಿ ರಾಜ್ಯಸಭೆಗೆ ಹೋಗುವುದನ್ನು ವಿರೋಧಿಸಿರುವ ಜೆಡಿಯು ಕಾರ್ಯಕರ್ತರು, ಪಕ್ಷದ ಕಚೇರಿಗೆ ಅವರ ಮಗ ನಿಶಾಂತ್ ಕುಮಾರ್ ಆಗಮಿಸುವ ಮೊದಲು ಔತಣಕೂಟಕ್ಕಾಗಿ ಏರ್ಪಡಿಸಲಾಗಿದ್ದ ಬಫೆ ಕೌಂಟರ್​ ಅನ್ನು ಧ್ವಂಸಗೊಳಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಕೆಲವೇ ದಿನಗಳಲ್ಲಿ ನಿತೀಶ್ ಕುಮಾರ್ ಅವರ ಮಗ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ. ನಿತೀಶ್ ಕುಮಾರ್ ಅವರಿಗೆ ತೆರವಾದ ಸ್ಥಾನಕ್ಕೆ ಬಿಜೆಪಿ ಬಿಹಾರದಲ್ಲಿ ತನ್ನ ಮೊದಲ ಮುಖ್ಯಮಂತ್ರಿಯನ್ನು ಪ್ರತಿಷ್ಠಾಪಿಸಿದ್ರೆ, ಡಿಸಿಎಂ ಆಗಿ ನಿಶಾಂತ್ ಕುಮಾರ್ ಆಗಬಹುದು ಎಂದು ವರದಿಯಾಗಿದೆ.
ಇನ್ನೂ ರಾಜ್ಯಸಭೆಗೆ ಆಯ್ಕೆಯಾಗುವ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ನಿತೀಶ್ ಕುಮಾರ್, ಕಳೆದ ಎರಡು ದಶಕಗಳಲ್ಲಿ ಬಿಹಾರದ ಜನರು ನೀಡಿದ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ರಾಜ್ಯವು ಅಭಿವೃದ್ಧಿ ಮತ್ತು ಘನತೆಯ ಹೊಸ ಆಯಾಮವನ್ನು ಸಾಧಿಸಲು ಅನುವು ಮಾಡಿಕೊಟ್ಟಿದೆ. ತಮ್ಮ ಸಂಸದೀಯ ಪ್ರಯಾಣದ ಆರಂಭದಿಂದಲೂ, ಬಿಹಾರ ವಿಧಾನಸಭೆಯ ಉಭಯ ಸದನಗಳ ಹಾಗೂ ಸಂಸತ್ತಿನ ಎರಡೂ ಸದನಗಳ ಸದಸ್ಯರಾಗಿ ಸೇವೆ ಸಲ್ಲಿಸುವ ಆಕಾಂಕ್ಷೆ ಹೊಂದಿದ್ದೇನೆ. 
ಈ ಆಕಾಂಕ್ಷೆಯನ್ನು ಮನಸ್ಸಿನಲ್ಲಿಟ್ಟುಕೊಂಡು, ಈ ಬಾರಿ ನಡೆಯುತ್ತಿರುವ ಚುನಾವಣೆಯಲ್ಲಿ ರಾಜ್ಯಸಭಾ ಸದಸ್ಯರಾಗಲು ನಾನು ಬಯಸುತ್ತೇನೆ. ಬಿಹಾರದ ಜನರೊಂದಿಗಿನ ಸಂಬಂಧ ಮುಂದುವರಿಯುತ್ತದೆ. ಮುಂದಿನ ಹೊಸ ಸರ್ಕಾರಕ್ಕೆ ಸಂಪೂರ್ಣ ಸಹಕಾರ ಮತ್ತು ಮಾರ್ಗದರ್ಶನ ನೀಡುವುದಾಗಿ ಎಂದು ಬರೆದುಕೊಂಡಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net