ಮಕ್ಕಳಿಗೆ ಮಾರಕ ಆನ್​ಲೈನ್​ ಗೇಮಿಂಗ್​ | Online gaming

Online gaming
Online gaming
Published on
ದೇಶದಲ್ಲಿ ಆನ್ಲೈನ್ ಗೇಮಿಂಗ್​​ಗಳಲ್ಲಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡು, ಕಂಗಾಲಾಗುವವರ ಸಂಖ್ಯೆ ಹೆಚ್ಚುತ್ತಿದೆ. ಮಕ್ಕಳ ಬಾಲ್ಯದ ಮುಗ್ಧತೆಯನ್ನೇ ಈ ಆನ್​ಲೈನ್ ಆಟಗಳು ಕಸಿದುಕೊಳ್ಳುತ್ತಿದ್ದು, ಅವರನ್ನು ಗೇಮಿಂಗ್ ವ್ಯಸನಿಯಾಗಿಸುತ್ತಿವೆ. ಕೆಲ ರಾಜ್ಯಗಳು ಇಂಥ ಆಟಗಳ ಮೇಲೆ ನಿಷೇಧ ಹೇರಿವೆಯಾದರೂ, ದೇಶಾದ್ಯಂತ ನಿಷೇಧ ಹೇರಬೇಕು ಎಂಬ ಆಗ್ರಹ ಬಲಗೊಳ್ಳುತ್ತಿದೆ. ಈ ನಡುವೆಯೇ, ಆನ್ಲೈನ್ ಗೇಮಿಂಗ್ ಪ್ಲಾಟ್​​ಫಾರ್ಮ್​ಗಳು​ ವರ್ಷದಿಂದ ವರ್ಷಕ್ಕೆ ತಮ್ಮ ಮಾರುಕಟ್ಟೆ ವಿಸ್ತರಿಸಿಕೊಳ್ಳುತ್ತಿವೆ. 
ಆನ್​ಲೈನ್​ ಗೇಮಿಂಗ್​ನ 7 ದೊಡ್ಡ ಪ್ಲಾಟ್​​ಫಾರ್ಮ್​ಗಳಲ್ಲಿ 55 ಕೋಟಿ ಬಳಕೆದಾರರಿದ್ದಾರೆ- ಇದು ಹೈಕೋರ್ಟ್ಗಳಲ್ಲಿ ಸರ್ಕಾರವೇ ಸಲ್ಲಿಸಿರುವ ಮಾಹಿತಿ. ಇಲ್ಲಿ ಪ್ರತಿನಿತ್ಯ ಸರಾಸರಿ 500 ಕೋಟಿ ಅಂದರೆ ವರ್ಷಕ್ಕೆ 1.80 ಲಕ್ಷ ಕೋಟಿ ರೂಪಾಯಿ ವಹಿವಾಟು ನಡೆಯುತ್ತದೆ. ಸಣ್ಣ ಪ್ರದೇಶಗಳಿಂದ ಹಿಡಿದು ದೇಶದ ಮಹಾನಗರಗಳವರೆಗೂ ಯುವ ಕ್ರಿಕಟ್​ನ ಭವಿಷ್ಯವಾಣಿ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಪಣಕ್ಕೆ ಇಡಲಾಗುತ್ತಿದೆ. ಉದ್ಯೋಗಿಗಳು ತಮ್ಮ ಸಂಬಳ ಮತ್ತು ಉಳಿತಾಯದ ಹಣವನ್ನು ಆನ್ಲೈನ್ ಆಟ ಅಥವಾ ಜೂಜಾಟಗಳಲ್ಲಿ ತೊಡಗಿಸುತ್ತಿದ್ದರೆ, ನಿರುದ್ಯೋಗಿಗಳು ಮತ್ತು ಕಾಲೇಜ್ ವಿದ್ಯಾರ್ಥಿಗಳು ದುಬಾರಿ ಬಡ್ಡಿದರದಲ್ಲಿ ಸಾಲ ಪಡೆದು ಹಣ ಹಾಕುತ್ತಿದ್ದಾರೆ.
 ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ. ಈ ಆನ್ಲೈನ್ ಗೇಮಿಂಗ್ಗಳನ್ನು ನಿಷೇಧಿಸಬೇಕು ಎಂದು ದೇಶದ ಹಲವು ಹೈಕೋರ್ಟ್ಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ದಾಖಲಾಗಿವೆ. ಇನ್ನು ಮಕ್ಕಳ ಪಾಲಿಗಂತೂ ಇವು ಮಾರಕವಾಗಿದ್ದು, ಮಾನಸಿಕ ಸ್ವಾಸ್ಥ್ಯವನ್ನು ಕಸಿದುಕೊಳ್ಳುತ್ತಿವೆ. 

ಯಾವ ರಾಜ್ಯಗಳಲ್ಲಿ ಏನು?

  • ಕರ್ನಾಟಕ, ತಮಿಳುನಾಡು. ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳು ಕೆಲವು ಸ್ವರೂಪದ ಆನ್ಲೈನ್ ಗೇಮ್ಳನ್ನು ನಿಷೇಧಿಸಿವೆ. 
  • ಆಂಧ್ರಪ್ರದೇಶ, ಅಸ್ಸಾಂ, ಒಡಿಶಾ ಮತ್ತು ತೆಲಂಗಾಣ ರಾಜ್ಯಗಳು ಕೌಶಲ ಆಧಾರಿತ ಮತ್ತು ಅದೃಷ್ಟ ಆಧಾರಿತ- ಹೀಗೆ ಎರಡು ಸ್ವರೂಪದ ಗೇಮ್ಳನ್ನು ನಿಷೇಧಿಸಿವೆ.

ಕೇಂದ್ರದ ನಿಯಮಗಳು ಏನು ಹೇಳುತ್ತವೆ

ಆನ್​ಲೈನ್​ ಗೇಮಿಂಗ್ ಮೇಲೆ ಮುಂಚೆ ಸರ್ಕಾರದ ನಿಯಂತ್ರಣ ಇರಲಿಲ್ಲ. 2023ರ ಜೂನ್ನಲ್ಲಿ ಕೇಂದ್ರ ವಿದ್ಯುನ್ಮಾನ ಹಾಗೂ ಮಾಹಿತಿ ಸಚಿವಾಲಯವು ಈ ಬಗ್ಗೆ ನಿಯಮಗಳನ್ನು ರೂಪಿಸಿ, ಮೂಗುದಾರ ಹಾಕಿದೆ. ಹಣವನ್ನು ಪಣಕ್ಕಿಟ್ಟು ಆಡುವ ಗೇಮ್ಳಿಗೆ ಅವಕಾಶವಿಲ್ಲ ಎಂದು ಹೊಸ ನಿಯಮ ಸ್ಪಷ್ಟವಾಗಿ ಹೇಳುತ್ತದೆ. ಜೂಜಾಟ ಉದ್ದೇಶದಿಂದ ನಡೆಯುತ್ತಿರುವ ರಿಯಲ್ ಮನಿ ಗೇಮ್​​ಗಳಿಗೆ (ಆರ್ಎಂಜಿ) ದೇಶದಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಯಾವ ಸ್ವರೂಪದ ಆನ್​ಲೈನ್​ ಗೇಮ್ ನಿಷೇಧಿಸಬೇಕು, ಯಾವ ಸ್ವರೂಪದ ಆನ್​ಲೈನ್​ ಗೇಮ್ ಬಳಕೆಗೆ ಅಡಿಯಿಲ್ಲ ಎಂಬುದರ ಕುರಿತು ಕೇಂದ್ರದ ಸ್ವಯಂ ನಿಯಂತ್ರಣ ಸಂಸ್ಥೆಯ (ಎಸ್ಆರ್ಒ) ತಜ್ಞರು ನಿರ್ಧರಿಸಲಿದ್ದಾರೆ. ಆಟವೊಂದು ಅದರ ಫಲಿತಾಂಶದ ಆಧಾರದಲ್ಲಿ ಬಹುಮಾನದ ಹಣ ನೀಡುವಂತಿದ್ದರೆ ಅಂತಹ ಗೇಮ್​​ಗಳಿಗೆ ಅವಕಾಶವಿಲ್ಲ ಎಂದು ನಿಯಮದಲ್ಲಿ ಹೇಳಲಾಗಿದೆ.

ನಿಷೇಧವೇ ಸೂಕ್ತ ಮದ್ದು

ಆನ್​ಲೈನ್​  ಗೇಮಿಂಗ್ ಎಂಬುದು ಜೂಜಿನ ಪ್ರತಿರೂಪ. ಒಮ್ಮೆ ಈ ಚಟಕ್ಕೆ ದಾಸರಾದವರು ಅದರಿಂದ ಹೊರಬರುವುದು ಕಷ್ಟಸಾಧ್ಯ. ಅದರಲ್ಲೂ, ಹದಿಹರೆಯದವರು, ಯುವಕರು ಅಷ್ಟೇಕೆ ಗೃಹಿಣಿಯರು ಕೂಡ ಈ ಆನ್ಲೈನ್ ಆಟಗಳಲ್ಲಿ ತೊಡಗಿ ಲಕ್ಷಾಂತರ ರೂಪಾಯಿ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಆನ್ಲೈನ್ ಗೇಮ್ ಚಟಕ್ಕೆ ಬಿದ್ದು ಸಿಕ್ಕಾಪಟ್ಟೆ ಸಾಲ ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಉತ್ತರ ಕರ್ನಾಟಕ ಮೂಲದ ಇಬ್ಬರು ರಾಜಧಾನಿ ಬೆಂಗಳೂರಿನಲ್ಲಿ 2025ರ ಜನವರಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಆನ್ಲೈನ್ ಗೇಮ್ ಕಂಪನಿಗಳು ಯಾವುದೇ ಅಡ್ಡಿ, ಆತಂಕವಿಲ್ಲದೆ ಆಟದ ಹೆಸರಲ್ಲಿ ಜೂಜನ್ನು ನಡೆಸುತ್ತಿವೆ. ಇದನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಸರ್ಕಾರದಿಂದ ಜನರಲ್ಲಿ ಈ ಕುರಿತಾಗಿ ಜಾಗೃತಿ ಮೂಡಿಸುವ ಕೆಲಸವೂ ಅಗತ್ಯವಾಗಿ ಆಗಬೇಕು.

ಪರಿಹಾರ ಕ್ರಮಗಳು

ಮಕ್ಕಳ ಜತೆ ಬೆರೆಯಿರಿ: ತಂದೆ-ತಾಯಿ ಇಬ್ಬರೂ ಉದ್ಯೋಗಕ್ಕೆ ತೆರಳುವುದರಿಂದ ಮಕ್ಕಳಿಗೆ ಸಮಯ ನೀಡಲಾಗುತ್ತಿಲ್ಲ. ಹಾಗಾಗಿ, ಪಾಲಕರು ಮಕ್ಕಳಿಗೆ ಕ್ವಾಲಿಟಿ ಟೈಮ್ ನೀಡಿ, ಅವರೊಂದಿಗೆ ಮುಕ್ತವಾಗಿ ಬೆರೆಯಬೇಕು. ಶಾಲೆಯ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳಬೇಕು. ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು.
ಹೊರಾಂಗಣ ಕ್ರೀಡೆಗೆ ಆದ್ಯತೆ: ನಾಲ್ಕು ವರ್ಷದ ಮಗು ಕೂಡ ಇಂದಿನ ದಿನಗಳಲ್ಲಿ ಸ್ಮಾರ್ಟ್ಫೋನ್ ಅನ್ನು ಲೀಲಾಜಾಲವಾಗಿ ಬಳಸುತ್ತಿದೆ. ಆದರೆ, ಪಾಲಕರು ಮಕ್ಕಳಿಗೆ ಹೊರಾಂಗಣ ಆಟಗಳನ್ನು ಆಡಲು ಬಿಡುತ್ತಿಲ್ಲ ಅಥವಾ ಮೊಬೈಲ್ ಫೋನ್ ವ್ಯಸನಕ್ಕೆ ಬಿದ್ದ ಮಗು ಆಟವಾಡಲು ಹೊರಗೆ ಹೋಗುತ್ತಿಲ್ಲ. ಈ ನಿಟ್ಟಿನಲ್ಲಿ ಶಾಲೆ ಮತ್ತು ಮನೆಯಲ್ಲಿ ಮಕ್ಕಳಿಗೆ ಹೊಸ ಹೊಸ ಹೊರಾಂಗಣ ಕ್ರೀಡೆಗಳನ್ನು ಹೇಳಿಕೊಟ್ಟು, ಅವರ ಆಸಕ್ತಿ ಹೆಚ್ಚಿಸಬೇಕು.
ಓದಿನ ಹವ್ಯಾಸ ಇರಲಿ: ಓದು ಎಂದರೆ ಬರೀ ಪಠ್ಯಪುಸ್ತಕದ ಅಧ್ಯಯನವಲ್ಲ. ಮಕ್ಕಳ ಕಥೆ, ಕಾಮಿಕ್ಸ್ ಸೇರಿದಂತೆ ಮಕ್ಕಳಿಗೆ ಸಂಬಂಧಪಟ್ಟ ಸಾಹಿತ್ಯ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಮನೆಯಲ್ಲೇ ಒಂದು ಪುಟ್ಟ ಗ್ರಂಥಾಲಯ ಮಾಡಿ ದಿನಪತ್ರಿಕೆ ಸೇರಿ ಪುಸ್ತಕ ಓದುವ ಹವ್ಯಾಸ ಬೆಳೆಸಬೇಕು.
ಮಕ್ಕಳ ಭಾವನೆಗಳನ್ನು ಅರಿಯಿರಿ: ಚಿಕ್ಕ ಮಕ್ಕಳಲ್ಲೂ ಒಂಟಿತನದ ಭಾವನೆ ಬೆಳೆಯುತ್ತಿರುವುದು ಅಪಾಯಕಾರಿ. ಮಕ್ಕಳು ಯಾವ ಸಂಗತಿಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ, ಅವರ ಸ್ನೇಹಿತ/ತೆಯರ ವಲಯ ಹೇಗಿದೆ ಎಂಬುದನ್ನು ಗಮನಿಸಿ, ಮಕ್ಕಳ ನಡವಳಿಕೆಯಲ್ಲಿ ತಪ್ಪು ಕಂಡುಬಂದರೆ ಪ್ರೀತಿಯ ಮಾತುಗಳಿಂದಲೇ ಅವರನ್ನು ತಿದ್ದಬೇಕು.
ದುಷ್ಪರಿಣಾಮ ತಿಳಿಸಿ: ಸ್ಮಾರ್ಟ್ಫೋನ್ನ ಅತಿಯಾದ ಬಳಕೆ ಮತ್ತು ಅದು ಸೃಷ್ಟಿಸುವ ಕಾಲ್ಪನಿಕ ಜಗತ್ತಿನ ದುಷ್ಪರಿಣಾಮದ ಬಗ್ಗೆ ಮಕ್ಕಳಿಗೆ ಮನದಟ್ಟು ಮಾಡಿಕೊಟ್ಟರೆ, ಸ್ಮಾರ್ಟ್ಫೋನ್ ಬಳಕೆ ತಗ್ಗಿಸಬಹುದು.

30 ಲಕ್ಷ ರೂಪಾಯಿ ಉಡಾಯಿಸಿದ ಮೊಮ್ಮಗ

ಪುಣೆಯ ಪ್ರಕಾಶ್ ಅವರದ್ದು ಸಣ್ಣ ಉದ್ಯಮ. ವಯಸ್ಸು ಆಗಿದ್ದರಿಂದ ನೆರವಿಗಾಗಿ ಮುಂಬೈಯಲ್ಲಿದ್ದ 18 ವರ್ಷದ ಮೊಮ್ಮಗ ಗಿರಿರಾಜ್ನನ್ನು ಕರೆಸಿಕೊಂಡರು. ಉದ್ಯಮದ ಸೂಕ್ಷ್ಮಗಳನ್ನು ಹೇಳಿಕೊಟ್ಟರು. ಕೆಲವು ದಿನಗಳವರೆಗೆ ಎಲ್ಲವೂ ಸರಿಯಾಗಿಯೇ ನಡೆದಿತ್ತು. ಅದೊಂದು ದಿನ ಬೇರೊಬ್ಬ ಉದ್ಯಮಿಗೆ ಆರ್ಟಿಜಿಎಸ್ ಮಾಡಲು ಪ್ರಕಾಶ್ ಬ್ಯಾಂಕಿಗೆ ಹೋದರೆ ಅವರ ಖಾತೆಯಲ್ಲಿ 30 ಲಕ್ಷ ರೂಪಾಯಿ ಕಡಿಮೆ ಇತ್ತು.
ಬ್ಯಾಂಕ್ ವಹಿವಾಟುಗಳಿಗಾಗಿ ಗಿರಿರಾಜ್ನನ್ನೇ ಕಳುಹಿಸುತ್ತಿದ್ದರಿಂದ, ಈ ಬಗ್ಗೆ ಅವನನ್ನು ಪ್ರಶ್ನಿಸಿದರು. ಮೊದಲಿಗೆ ಹಾರಿಕೆಯ ಉತ್ತರ ನೀಡಿದ. ಖಡಕ್ ಆಗಿ ಕೇಳಿದಾಗ, ಕ್ರಿಕೆಟ್ ಬೆಟ್ಟಿಂಗ್ನಲ್ಲಿ ಹಣ ಕಳೆದುಕೊಂಡೆ ಎಂದು ಉತ್ತರಿಸಿದ. ಒಂದಿಷ್ಟು ಆಸ್ತಿ ಮಾರಿ ಪ್ರಕಾಶ್ ಸಾಲ ಹಿಂದಿರುಗಿಸಿದರು. ಆದರೆ, ಹಣದ ಕೊರತೆಯಿಂದ ಅವರ ಉದ್ಯಮವೇ ಮುಚ್ಚಿಹೋಯಿತು! ದುಡ್ಡು ವಾಪಸ್ ಬರಲಿಲ್ಲ. ಉದ್ಯಮವೂ ಇಲ್ಲ. ಮೊಮ್ಮಗ ಹೀಗೆ ಮಾಡಿದ್ದರಿಂದ ಮಗಳೊಂದಿಗಿನ ಬಾಂಧವ್ಯವೂ ಮುಂಚಿನಂತಿಲ್ಲ ಎಂದು ನೋವಿನಿಂದ ಹೇಳುತ್ತಾರೆ ಪ್ರಕಾಶ್.

ಕೊರಿಯನ್ ಗೇಮ್ಸ್​ ಗೀಳಿಗೆ ಮೂವರು ಸೋದರಿಯರು ಬಲಿ

ಗಾಜಿಯಾಬಾದ್: ಅಪಾರ್ಟ್​​ಮೆಂಟೊಂದರಲ್ಲಿ 9ನೇ ಮಹಡಿಯಿಂದ ಮೂವರು ಸಹೋದರಿಯರು ಜಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಉತ್ತರಪ್ರದೇಶದನಲ್ಲಿ ನಡೆದಿದೆ. ಗಾಜಿಯಾಬಾದ್ನ ಭಾರತ್ ಸಿಟಿಯ ಅಪಾರ್ಟ್​​ಮೆಂಟ್ ಕಾಂಪ್ಲೆಕ್ಸ್ನಲ್ಲಿ ಬುಧವಾರ ಬೆಳಗಿನ ಜಾವ 2.30ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಮೂವರೂ ಕೊರಿಯನ್ ಗೇಮ್ಸ್​ ಗೀಳಿಗೆ ಒಳಗಾಗಿದ್ದು, ಅದೇ ಅವರ ಸಾವಿಗೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ. ಪಾಖಿ (12), ಪ್ರಾಚಿ (14) ಮತ್ತು ವಿಶಿಕಾ (16) ಮೃತಪಟ್ಟ ಸಹೋದರಿಯರು.
ಘಟನೆ ನಡೆದ ರಾತ್ರಿ ಮೂವರು ಸಹೋದರಿಯರು ಬಾಲ್ಕನಿಗೆ ಹೋಗಿ ಬಾಗಿಲು ಮುಚ್ಚಿ ಚಿಲಕ ಹಾಕಿಕೊಂಡಿದ್ದು, ನಂತರ ಒಬ್ಬೊಬ್ಬರಾಗಿ ಕಿಟಕಿಯಿಂದ ಹೊರಕ್ಕೆ ಜಿಗಿದಿದ್ದರು. ಕೂಗು ಹಾಗೂ ದೇಹ ನೆಲಕ್ಕೆ ಬಿದ್ದ ಸದ್ದು ಜೋರಾಗಿ ಕೇಳಿಸಿದ್ದರಿಂದ ಸೋದರಿಯರ ಪಾಲಕರು ಮತ್ತು ಅಪಾರ್ಟ್ವೆುಂಟ್ನಲ್ಲಿ ಇದ್ದವರಿಗೆ ಎಚ್ಚರವಾಗಿತ್ತು.
;ಮಾಹಿತಿ ಮೇರೆಗೆ ನಾವು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಮೂವರೂ ಆ ಅಪಾರ್ಟ್ವೆುಂಟ್ನ ಚೇತನ್ಕುಮಾರ್ ಎಂಬುವರ ಮಕ್ಕಳು ಎಂಬುದು ತಿಳಿಯಿತು ಎಂದು ಎಸಿಪಿ ಅತುಲ್ಕುಮಾರ್ ಸಿಂಗ್ ತಿಳಿಸಿದ್ದಾರೆ. ಮೂವರೂ ಆನ್ಲೈನ್ ಗೇಮ್ ಗೀಳಿಗೆ ಒಳಗಾಗಿದ್ದರು. ಅದಕ್ಕಾಗಿ ಏನು ಬೇಕಾದರೂ ಮಾಡುವಷ್ಟು ಚಟಕ್ಕೆ ಒಳಗಾಗಿದ್ದ ಸೋದರಿಯರು ಎರಡು ವರ್ಷಗಳಿಂದ ಶಾಲೆಗೂ ಹೋಗಿರಲಿಲ್ಲ. ಊಟ-ಸ್ನಾನ ಸೇರಿ ಎಲ್ಲವನ್ನೂ ಈ ಸಹೋದರಿಯರು ಒಟ್ಟಾಗಿಯೇ ಮಾಡುತ್ತಿದ್ದರು ಎಂದು ಎಸಿಪಿ ತಿಳಿಸಿದ್ದಾರೆ.
ನಾನು ತುಂಬ ತುಂಬ ಒಂಟಿ...: ಮಕ್ಕಳು ಕೊರಿಯನ್ ಹೆಸರುಗಳನ್ನು ಇಟ್ಟುಕೊಂಡಿದ್ದರು. ಮಧ್ಯದ ಮಗಳು ಪ್ರಾಚಿ ಎಲ್ಲದಕ್ಕೂ ನಾಯಕಿಯಂತಿದ್ದಳು, ಅವಳೇ ಇನ್ನಿಬ್ಬರಿಗೆ ಆ ಗೇಮ್ ಪರಿಚಯಿಸಿದ್ದಳು. ಇವೆಲ್ಲ ಗೊತ್ತಾಗಿ ಮಕ್ಕಳು ಮೊಬೈಲ್ ಬಳಸುವುದಕ್ಕೆ ಪಾಲಕರು ನಿರ್ಬಂಧ ವಿಧಿಸಿದ್ದರು. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಮಕ್ಕಳು ಈ ಗೇಮ್ ವ್ಯಸನಕ್ಕೆ ಒಳಗಾಗಿದ್ದು, ನಂತರ ಆಗಾಗ ತರಗತಿಯನ್ನು ತಪ್ಪಿಸುತ್ತಿದ್ದ ಮಕ್ಕಳು, ಕಳೆದ ಎರಡು ವರ್ಷಗಳಿಂದ ಶಾಲೆಗೆ ಹೋಗುವುದನ್ನೇ ಬಿಟ್ಟಿದ್ದರು ಎಂಬುದು ತಿಳಿದುಬಂದಿದೆ. ಮಕ್ಕಳ ಮಲಗುವ ಕೋಣೆಯಲ್ಲಿ ನಾನು ತುಂಬ ತುಂಬ ಒಂಟಿ...ಎಂಬಿತ್ಯಾದಿ ಇಂಗ್ಲಿಷ್ ಬರಹಗಳು ಕಂಡುಬಂದಿವೆ.
ಆ ಗೇಮ್ ಹೆಸರು ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಆದರೆ ಮಕ್ಕಳು ಕೊರಿಯನ್ ಸಂಸ್ಕೃತಿಯಿಂದ ಪ್ರಭಾವಿತರಾಗಿದ್ದರು ಮತ್ತು ಅದರ ಬಗ್ಗೆ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರನ್ನು ಮೊಬೈಲ್ಫೋನ್ ಬಳಸದಂತೆ ನಿರ್ಬಂಧಿಸಲಾಗಿತ್ತು. ಆ ನಿರ್ಬಂಧದಿಂದಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿ ನಿಮಿಷಾ ಪಟೇಲ್ ತಿಳಿಸಿದ್ದಾರೆ.

ಇಬ್ಬರು ಪತ್ನಿಯರು

ಚೇತನ್​ಕುಮಾರ್​​ ಇಬ್ಬರು ಸಹೋದರಿಯರನ್ನು ಮದುವೆಯಾಗಿದ್ದಾನೆ, ಮೃತ ಮಕ್ಕಳ ಪೈಕಿ ಇಬ್ಬರು ಒಬ್ಬ ಹೆಂಡತಿಯ ಪುತ್ರಿಯರಾಗಿದ್ದು, ಇನ್ನೊಬ್ಬಳು ಮತ್ತೊಬ್ಬ ಹೆಂಡತಿಯ ಪುತ್ರಿ ಎಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳ ಕೋಣೆಯಲ್ಲಿ 8 ಪುಟಗಳ ಡೆತ್ನೋಟ್ ಸಿಕ್ಕಿದ್ದು, ಈ ಡೈರಿಯಲ್ಲಿ ಏನೇನು ಬರೆಯಲಾಗಿದೆಯೋ ಅವೆಲ್ಲವನ್ನೂ ಓದಿ, ಏಕೆಂದರೆ ಇವೆಲ್ಲವೂ ಸತ್ಯ. ಐಯಾಮ್ ರಿಯಲಿ ಸಾರಿ, ಸಾರಿ ಪಪ್ಪಾ.ಎಂದು ಬರೆಯಲಾಗಿದೆ. ಜತೆಗೆ ಅಳುವ ಇಮೋಜಿಯನ್ನೂ ಚಿತ್ರಿಸಲಾಗಿದೆ. ಪಾಕೆಟ್ ಡೈರಿಯಲ್ಲಿ ಈ ಡೆತ್ನೋಟ್ ಬರೆಯಲಾಗಿದ್ದು, ಅದರಲ್ಲಿ ಅವರ ಗೇಮಿಂಗ್ ಹಾಗೂ ಮೊಬೈಲ್ಫೋನ್ ಚಟುವಟಿಕೆಗಳ ಬಗ್ಗೆ ವಿವರ ನೀಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net