ವಿಜಯ್ ಸಮಾವೇಶದಲ್ಲಿ ಮತ್ತೊಂದು ಬಲಿ...ಶವಪೆಟ್ಟಿಗೆ ಹೊತ್ತೇ ಸಮಾವೇಶಕ್ಕೆ ಹೋಗಿ ಎಂದು ಎಐಎಡಿಎಂಕೆ ವ್ಯಂಗ್ಯ! | Tvk Rally

Tvk Rally | ಸೇಲಂನಲ್ಲಿ ನಡೆದ ಟಿವಿಕೆ ರ‍್ಯಾಲಿ
Tvk Rally | ಸೇಲಂನಲ್ಲಿ ನಡೆದ ಟಿವಿಕೆ ರ‍್ಯಾಲಿ
Published on
ಚೆನ್ನೈ: ಸೇಲಂನಲ್ಲಿ ನಡೆದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ರ‍್ಯಾಲಿಯ (Tvk Rally) ವೇಳೆ ಬಿಸಿಲಿನ ತಾಪದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಈ ಘಟನೆಗೆ ಎಐಎಡಿಎಂಕೆ ಪ್ರತಿಕ್ರಿಯೆ ನೀಡುತ್ತಾ, ಭವಿಷ್ಯದಲ್ಲಿ ಟಿವಿಕೆ ಕಾರ್ಯಕ್ರಮಗಳಿಗೆ ಹಾಜರಾಗಲು ಶವಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗಬೇಕು ಎಂದು ಅಣುಕಿಸಿದೆ.
ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಎಐಎಡಿಎಂಕೆ ವಕ್ತಾರ ಕೋವೈ ಸತ್ಯನ್, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಡ್ಯಾನ್ಸಿಂಗ್ ಪಾಲ್‌ಬೇರರ್ಸ್ ಎಂಬ ಘಾನಾದ ನೃತ್ಯಗಾರರ ಗುಂಪನ್ನು ಒಳಗೊಂಡ ಪೋಸ್ಟ್ ಶೇರ್​ ಮಾಡಿದ್ದಾರೆ. ಅದರಲ್ಲಿ ಆರು ಜನರ ಗುಂಪು ಶವಪೆಟ್ಟಿಗೆಗಳನ್ನು ಹೊತ್ತುಕೊಂಡು ಹೋಗುತ್ತಿರುವುದನ್ನು ಕಾಣಬಹುದಾಗಿದೆ.

ವಿಜಯ್ ರ‍್ಯಾಲಿಯಲ್ಲಿ ವ್ಯಕ್ತಿ ಸಾವು

ಸೇಲಂನಲ್ಲಿ ವಿಜಯ್ ಭಾಷಣ ಮಾಡುತ್ತಿದ್ದ ಸಾರ್ವಜನಿಕ ಸಭೆಯಲ್ಲಿ ವ್ಯಕ್ತಿಯೊಬ್ಬ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ನಿರ್ಜಲೀಕರಣದಿಂದಾಗಿ ಶಾಖದ ಹೊಡೆತ ಕಾರಣ ಆ ವ್ಯಕ್ತಿ ಸ್ಥಳದಲ್ಲಿ ಪ್ರಜ್ಞೆ ತಪ್ಪಿ ಬಿದ್ದು ನಂತರ ಸಾವನ್ನಪ್ಪಿದ್ದು, ಸಂತ್ರಸ್ತ ಮೊದಲೇ ಹೃದಯ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದ ಎಂದು ಪೊಲೀಸ್ ಮೂಲಗಳು ಇಂಡಿಯಾ ಟುಡೇಗೆ ತಿಳಿಸಿವೆ
ಟಿವಿಕೆ ನಾಯಕ ನಿರ್ಮಲ್ ಕುಮಾರ್ ಪೋಸ್ಟ್​ ಹಂಚಿಕೊಂಡಿದ್ದು, ಸಂತ್ರಸ್ತನನ್ನು ಸೂರಜ್ ಎಂದು ಗುರುತಿಸಿದ್ದಾರೆ, ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುತ್ತಿದ್ದಾಗ ಅನಾರೋಗ್ಯದಿಂದಾಗಿ ಹಠಾತ್ತನೆ ಕುಸಿದು ಬಿದ್ದರು ಎಂದು ತಿಳಿಸಿದ್ದಾರೆ.
ಸೂರಜ್​ ಎಂದು ಗುರುತಿಸಲಾದ ವ್ಯಕ್ತಿಗೆ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಲಾಯಿತು, ಸಂಘಟಕರು ಅವರನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸಾಗಿಸಿದರು. ಆದರೂ ಹೃದಯಾಘಾತದಿಂದ ಸೂರಜ್ ಸಾವನ್ನಪ್ಪಿದ್ದು ಹೃದಯವಿದ್ರಾವಕವಾಗಿದೆ ಎಂದು ನಿರ್ಮಲ್ ಕುಮಾರ್ ತಮ್ಮ ಸಂತಾಪಗಳನ್ನು" ವ್ಯಕ್ತಪಡಿಸಿದ್ದಾರೆ.
5,000 ಜನರಿಗೆ ಮೀಸಲಾದ ಸ್ಥಳದಲ್ಲಿ ಆಯೋಜಕರು 7,000 ಕ್ಕೂ ಹೆಚ್ಚು ಜನರಿಗೆ ಪ್ರವೇಶ ನೀಡಿದ್ದಾರೆ ಮತ್ತು ಆರೋಗ್ಯ ಸಮಸ್ಯೆಗಳಿರುವ ವ್ಯಕ್ತಿಗಳಿಗೂ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ಸಾವಿಗೆ ನಿಖರವಾದ ಕಾರಣ ತಿಳಿದುಬಂದ ಬಳಿಕವೇ ಆಯೋಜಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.
ಸದ್ಯ ಈ ಘಟನೆ ಕಳೆದ ಸೆಪ್ಟೆಂಬರ್‌ನಲ್ಲಿ 41 ಜೀವಗಳನ್ನು ಬಲಿತೆಗೆದುಕೊಂಡ ಕರೂರ್ ಕಾಲ್ತುಳಿತ ದುರಂತದ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net