ಜಮ್ಮು-ಕಾಶ್ಮೀರ ರಾಜ್ಯದ ಸ್ಥಾನಮಾನಕ್ಕಾಗಿ ದೆಹಲಿಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪ್ರತಿಭಟನೆ; ಇಂಡಿಯಾ ಕೂಟಕ್ಕೆ ಆಹ್ವಾನ | Omar Abdullah

Omar Abdullah |  ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ
Omar Abdullah | ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ
Published on
ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ಸಂಪೂರ್ಣ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸಬೇಕು ಎಂದು ಆಗ್ರಹಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ (Omar Abdullah) ನಿರ್ಧರಿಸಿದ್ದಾರೆ. ದೆಹಲಿಯಲ್ಲಿ ನಡೆದ ಇಂಡಿಯಾ (INDIA) ಮೈತ್ರಿಕೂಟದ ಪ್ರಮುಖ ಸಭೆಯಲ್ಲಿ ಭಾಗವಹಿಸಿದ್ದ ಒಮರ್ ಅಬ್ದುಲ್ಲಾ, ಈ ಹೋರಾಟಕ್ಕೆ ಕೈಜೋಡಿಸುವಂತೆ ಒಕ್ಕೂಟದ ಎಲ್ಲಾ ಮಿತ್ರ ಪಕ್ಷಗಳಿಗೆ ಆಹ್ವಾನ ನೀಡಿದ್ದಾರೆ.
ಮುಂದಿನ ತಿಂಗಳು ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನದಂದೇ ದೆಹಲಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಇದರಲ್ಲಿ ಭಾಗವಹಿಸುವಂತೆ ಕೋರಿ ಎಲ್ಲಾ ವಿರೋಧ ಪಕ್ಷದ ನಾಯಕರಿಗೆ ಶೀಘ್ರದಲ್ಲೇ ಪತ್ರ ಬರೆಯುವುದಾಗಿ ಒಮರ್ ಅಬ್ದುಲ್ಲಾ ತಿಳಿಸಿದ್ದಾರೆ. ಕಳೆದ ವಾರವಷ್ಟೇ ಒಮರ್ ಅಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್ (NC) ಪಕ್ಷವು, ಜಮ್ಮು-ಕಾಶ್ಮೀರದ ಸಾಂವಿಧಾನಿಕ ಹಕ್ಕುಗಳು ಮತ್ತು ರಾಜ್ಯದ ಸ್ಥಾನಮಾನದ ಮರುಸ್ಥಾಪನೆಗಾಗಿ ದೆಹಲಿಯಲ್ಲಿ ಹೋರಾಟ ನಡೆಸುವುದಾಗಿ ಪ್ರಕಟಿಸಿತ್ತು. ಈ ಪ್ರತಿಭಟನೆಯಲ್ಲಿ ಪಕ್ಷದ ಎಲ್ಲಾ ಶಾಸಕರು ಮತ್ತು ಸಂಸದರು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

ರಾಜಕೀಯ ರಣತಂತ್ರ ಬದಲಿಸಿದ ಒಮರ್ ಅಬ್ದುಲ್ಲಾ

ಇದುವರೆಗೆ ಕೇಂದ್ರ ಸರ್ಕಾರದೊಂದಿಗೆ ಯಾವುದೇ ಸಂಘರ್ಷಕ್ಕಿಳಿಯದೆ, ಸಹಕಾರದ ಹಾದಿಯನ್ನು ಆಯ್ದುಕೊಂಡಿದ್ದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಈಗ ಇದ್ದಕ್ಕಿದ್ದಂತೆ ತಮ್ಮ ರಾಜಕೀಯ ರಣತಂತ್ರವನ್ನು ಬದಲಿಸಿದಂತೆ ಕಾಣುತ್ತಿದೆ. ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದರೂ, ರಾಜ್ಯದ ಸ್ಥಾನಮಾನವನ್ನು ಮರಳಿ ಪಡೆಯಲು ನ್ಯಾಷನಲ್ ಕಾನ್ಫರೆನ್ಸ್ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ತೀವ್ರ ಟೀಕೆಗಳು ಮತ್ತು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ಕೇಳಿಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಒಮರ್ ಅಬ್ದುಲ್ಲಾ ತಮ್ಮ ರಾಜಕೀಯ ಅಸ್ತಿತ್ವವನ್ನು ಗಟ್ಟಿಗೊಳಿಸಲು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ವಿಶೇಷವೆಂದರೆ, ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕಳೆದ 19 ತಿಂಗಳುಗಳಿಂದ ಒಮರ್ ಅಬ್ದುಲ್ಲಾ ಅವರು ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟದಿಂದ ಸಾಕಷ್ಟು ಅಂತರ ಕಾಯ್ದುಕೊಂಡಿದ್ದರು. ಆದರೆ, ಈಗ ರಾಷ್ಟ್ರೀಯ ಮಟ್ಟದಲ್ಲಿ ವಿರೋಧ ಪಕ್ಷಗಳ ಬೆಂಬಲವನ್ನು ಕ್ರೋಢೀಕರಿಸಲು ಅವರು ಮುಂದಾಗಿದ್ದು, ಜಮ್ಮು-ಕಾಶ್ಮೀರದ ಹೋರಾಟಕ್ಕೆ ಇದೊಂದು ಮೊದಲ ಗಂಭೀರ ಪ್ರಯತ್ನವೆಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಕಳೆದ ವರ್ಷವೂ ಅಬ್ದುಲ್ಲಾ ಜಮ್ಮು-ಕಾಶ್ಮೀರದ ಪರವಾಗಿ ಬೆಂಬಲ ಕೋರಿ ವಿವಿಧ ರಾಷ್ಟ್ರೀಯ ಪಕ್ಷಗಳ ನಾಯಕರಿಗೆ ಪತ್ರ ಬರೆದಿದ್ದರು.

ರಹಸ್ಯ ಸಭೆಯ ಬೆನ್ನಲ್ಲೇ ಪ್ರತಿಭಟನೆಯ ನಿರ್ಧಾರ

ದೆಹಲಿಯಲ್ಲಿ ಪ್ರತಿಭಟನೆ ನಡೆಸುವ ಮುನ್ನ ಒಮರ್ ಅಬ್ದುಲ್ಲಾ ತಮ್ಮ ಪಕ್ಷದ ಭವಿಷ್ಯದ ಕಾರ್ಯತಂತ್ರದ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದರು. ಕಳೆದ ವಾರ ಶ್ರೀನಗರದಿಂದ ಸುಮಾರು 22 ಕಿಲೋಮೀಟರ್ ದೂರದಲ್ಲಿರುವ, ಯಾವುದೇ ಮೊಬೈಲ್ ನೆಟ್‌ವರ್ಕ್ ಇಲ್ಲದ ದಾಚಿಗಾಮ್ ರಾಷ್ಟ್ರೀಯ ಉದ್ಯಾನವನಕ್ಕೆ ತಮ್ಮ ಪಕ್ಷದ ಎಲ್ಲಾ ಶಾಸಕರು, ಸಂಸದರು ಮತ್ತು ಸಚಿವರನ್ನು ಕರೆದೊಯ್ದು ಒಮರ್ ರಹಸ್ಯ ಸಭೆ ನಡೆಸಿದ್ದರು. ರಾಜ್ಯದ ಸ್ಥಾನಮಾನ ವಿಳಂಬವಾಗುತ್ತಿರುವುದರ ವಿರುದ್ಧ ಜನರಲ್ಲಿ ಮೂಡುತ್ತಿರುವ ಆಕ್ರೋಶವನ್ನು ತಣಿಸಲು ಮತ್ತು ಕೇಂದ್ರದ ಮೇಲೆ ಒತ್ತಡ ಹೇರಲು ಈ ಸಭೆಯಲ್ಲೇ ಹೋರಾಟದ ಅಂತಿಮ ರೂಪುರೇಷೆ ಸಿದ್ಧಪಡಿಸಲಾಗಿತ್ತು.
ಮುಂದಿನ ತಿಂಗಳು ದೆಹಲಿಯಲ್ಲಿ ನಡೆಯಲಿರುವ ಈ ಪ್ರತಿಭಟನೆಯು ಕೇಂದ್ರ ಸರ್ಕಾರ ಮತ್ತು ಜಮ್ಮು-ಕಾಶ್ಮೀರ ಸರ್ಕಾರದ ನಡುವಿನ ಸಂಬಂಧದಲ್ಲಿ ಹೊಸ ತಿರುವು ನೀಡುವ ಸಾಧ್ಯತೆಯಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net