ಘಟನೆಗೂ ಒಂದು ವಾರ ಮೊದಲೇ ಆತಂಕ ವ್ಯಕ್ತಪಡಿಸಿದ್ದರಂತೆ ಅಧಿಕಾರಿಗಳು!..ಮ್ಯಾಜಿಸ್ಟ್ರೇಟ್‌ಗೆ ಬರೆದಿದ್ದ ಪತ್ರದಲ್ಲಿ ಏನಿದೆ ಗೊತ್ತಾ..? | Malda Hostage Case

Malda Hostage Case
Malda Hostage Case
Published on
ಕೊಲ್ಕತ್ತಾ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ನಿರತರಾಗಿದ್ದ ಏಳು ನ್ಯಾಯಾಂಗ ಅಧಿಕಾರಿಗಳನ್ನು ಗುಂಪೊಂದು ಒತ್ತೆಯಾಳಾಗಿ ಇರಿಸಿಕೊಂಡ ಘಟನೆ ದೇಶಾದ್ಯಂತ ಸಂಚಲನ ಮೂಡಿಸಿದ್ದು, ಈ ಘಟನೆ ಸಂಭವಿಸುವ ಸುಮಾರು ಒಂದು ವಾರದ ಮೊದಲೇ, ಸಂಬಂಧಪಟ್ಟ ಅಧಿಕಾರಿಗಳು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಬರೆದ ಪತ್ರದಲ್ಲಿ ತಮಗೆ ಎದುರಾಗಬಹುದಾದ ಭದ್ರತಾ ಉಲ್ಲಂಘನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು ಎಂದು ಎನ್​ಡಿಟಿವಿ ವರದಿ ಮಾಡಿದೆ.
ಪೂರಕ ಪಟ್ಟಿಯ ಪ್ರಕಟಣೆಯ ದಿನಾಂಕ ಸಮೀಪಿಸುತ್ತಿದ್ದಂತೆ ಬಿಡಿಒ ಕಚೇರಿಯ ವಾತಾವರಣ ಸೂಕ್ಷ್ಮವಾಗುತ್ತಿದೆ ಮತ್ತು ದಾಖಲಾತಿಗೆ ಅನರ್ಹರೆಂದು ಕಂಡುಬಂದಿರುವ ಸ್ಥಳೀಯ ಅಂಶಗಳಿಂದ ಭದ್ರತಾ ಉಲ್ಲಂಘನೆಯ ಸ್ಪಷ್ಟ ಆತಂಕವಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದರು. ಅಲ್ಲದೆ, ಬಿಡಿಒ ಕಚೇರಿಯಲ್ಲಿ ಕನಿಷ್ಠ ಶೌಚಾಲಯ ಸೌಲಭ್ಯಗಳಿಲ್ಲದಿರುವುದು ಮತ್ತು ಸ್ಥಳಾವಕಾಶದ ಕೊರತೆಯಿಂದ ನ್ಯಾಯಾಂಗ ಶಿಷ್ಟಾಚಾರದೊಂದಿಗೆ ಕೆಲಸ ಮಾಡುವುದು ಕಷ್ಟಕರವಾಗಿದೆ ಎಂದು ದೂರಿದ್ದರು ಎಂದು ತಿಳಿದುಬಂದಿದೆ.
ಪ್ರತಿದಿನ ಮಾಲ್ಡಾ ಪಟ್ಟಣದಿಂದ ಕಾಲಿಯಾಚಕ್‌ಗೆ 54 ಕಿ.ಮೀ. ಪ್ರಯಾಣಿಸುವುದು ದೈಹಿಕವಾಗಿ ದಣಿವುಂಟುಮಾಡುತ್ತಿದೆ ಎಂದಿದ್ದ ಅಧಿಕಾರಿಗಳು, ತಮ್ಮ ಕೆಲಸದ ಸ್ಥಳವನ್ನು ಮಾಲ್ಡಾ ಪಟ್ಟಣದೊಳಗೆ ಸ್ಥಳಾಂತರಿಸುವಂತೆ ಮನವಿ ಮಾಡಿದ್ದರು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಇದನ್ನು ನ್ಯಾಯದ ಆಡಳಿತಕ್ಕೆ ಸವಾಲ್​ ಹಾಕುವ ನಿರ್ಲಜ್ಜ ಪ್ರಯತ್ನ ಎಂದು ಕರೆದಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು, ಮುನ್ಸೂಚನೆ ಇದ್ದರೂ ಸಹ ರಾಜ್ಯ ಅಧಿಕಾರಿಗಳು ಅಧಿಕಾರಿಗಳ ರಕ್ಷಣೆಗೆ ತಕ್ಷಣ ಧಾವಿಸದಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಗಂಟೆಗಟ್ಟಲೆ ಆಹಾರ ಮತ್ತು ನೀರಿಲ್ಲದೆ ಅಧಿಕಾರಿಗಳು ಪರದಾಡುವಂತಾದ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ನ್ಯಾಯಾಲಯ, ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಮತ್ತು ಡಿಜಿಪಿಯವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಜೊತೆಗೆ, ನ್ಯಾಯಾಂಗ ಅಧಿಕಾರಿಗಳ ಸುರಕ್ಷತೆ ಮತ್ತು ಎಸ್‌ಐಆರ್ ಪ್ರಕ್ರಿಯೆಯ ಸುಗಮ ನಡವಳಿಕೆಗಾಗಿ ಅಗತ್ಯವಿರುವಷ್ಟು ಕೇಂದ್ರ ಪಡೆಗಳನ್ನು ನಿಯೋಜಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.

ಘಟನೆಯ ಹಿನ್ನಲೆ

ಮಾಲ್ಡಾ ಜಿಲ್ಲೆಯ ಕಲಿಯಾಚಕ್ II ಬ್ಲಾಕ್ ಅಭಿವೃದ್ಧಿ ಕಚೇರಿ ಹೊರಗೆ ಬುಧವಾರ ಈ ಗದ್ದಲ ಆರಂಭವಾಗಿದ್ದು, ಎಸ್​ಐಆರ್​​ ಪ್ರಕ್ರಿಯೆಯ ಭಾಗವಾಗಿ ಮತದಾರರ ಪಟ್ಟಿಯಿಂದ ಲಕ್ಷಾಂತರ ಹೆಸರುಗಳನ್ನು ಅಳಿಸಿಹಾಕುತ್ತಿರುವುದನ್ನು ವಿರೋಧಿಸಿ ಬೃಹತ್ ಪ್ರತಿಭಟನೆ ಭುಗಿಲೆದ್ದಿತು. ಪ್ರತಿಭಟನಾಕಾರರು ಮೊದಲು ನ್ಯಾಯಾಂಗ ಅಧಿಕಾರಿಗಳೊಂದಿಗೆ ಚರ್ಚಿಸಲು ಸಭೆ ಕೋರಿದ್ದರು. ಅಧಿಕಾರಿಗಳು ಇದಕ್ಕೆ ಒಪ್ಪದಿದ್ದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ಸಂಜೆ 4 ಗಂಟೆ ಸುಮಾರಿಗೆ ಬಿಡಿಒ ಕಚೇರಿಗೆ ಮುತ್ತಿಗೆ ಹಾಕಿದ ಗುಂಪು, ಅಧಿಕಾರಿಗಳನ್ನು ಹೊರಬರದಂತೆ ತಡೆದು ಒತ್ತೆಯಾಳಾಗಿ ಇರಿಸಿಕೊಂಡಿತು ಎನ್ನಲಾಗಿದೆ. ಈ ಘಟನೆಯ ಹಿಂದೆ ಮೊಫಕ್ಕೆರುಲ್ ಇಸ್ಲಾಂ ಅವರ ಕೈವಾಡವಿದ್ದು, ಇವರೇ ಈ ಕೃತ್ಯದ ಮಾಸ್ಟರ್ ಮೈಂಡ್ ಎಂದು ಪೊಲೀಸರು ತಿಳಿಸಿದ್ದಾರೆ.

ಎಸ್‌ಐಆರ್ ವಿವಾದ

ಬಂಗಾಳ ಚುನಾವಣೆಗೆ ಮುನ್ನ ಚುನಾವಣಾ ಆಯೋಗ ನಡೆಸುತ್ತಿರುವ ಈ ಎಸ್‌ಐಆರ್ ಪ್ರಕ್ರಿಯೆ ಭಾರಿ ಚರ್ಚೆಗೆ ನಾಂದಿ ಹಾಡಿದೆ. ಅಂತಿಮ ಮತದಾರರ ಪಟ್ಟಿಯಲ್ಲಿ ಬರೋಬ್ಬರಿ 63 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಅಳಿಸಿಹಾಕಲಾಗಿದೆ. ಇನ್ನೂ 60 ಲಕ್ಷಕ್ಕೂ ಹೆಚ್ಚು ಮತದಾರರನ್ನು ತೀರ್ಪಿನ ಅಡಿಯಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದ್ದು, ಘೇರಾವ್ ಮಾಡಲ್ಪಟ್ಟ ನ್ಯಾಯಾಂಗ ಅಧಿಕಾರಿಗಳು ಈ 60 ಲಕ್ಷ ಮತದಾರರ ಭವಿಷ್ಯವನ್ನು ನಿರ್ಧರಿಸುವ ಜವಾಬ್ದಾರಿ ಹೊತ್ತಿದ್ದರು(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net