ತಮಿಳುನಾಡು ರಾಜಕೀಯದಲ್ಲಿ ಬಿಗ್ ಟ್ವಿಸ್ಟ್.. ಸ್ಟಾಲಿನ್ ಸಮ್ಮುಖದಲ್ಲಿ ಅಧಿಕೃತವಾಗಿ ಡಿಎಂಕೆ ಸೇರ್ಪಡೆಗೊಂಡ ಮಾಜಿ ಸಿಎಂ ಪನ್ನೀರ್‌ಸೆಲ್ವಂ | Panneerselvam

Panneerselvam | ತಮಿಳುನಾಡು ಮಾಜಿ ಮುಖ್ಯಮಂತ್ರಿ ಓ ಪನ್ನೀರ್‌ಸೆಲ್ವಂ
Panneerselvam | ತಮಿಳುನಾಡು ಮಾಜಿ ಮುಖ್ಯಮಂತ್ರಿ ಓ ಪನ್ನೀರ್‌ಸೆಲ್ವಂ
Published on
ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ಉಚ್ಚಾಟಿತ ನಾಯಕ ಓ ಪನ್ನೀರ್‌ಸೆಲ್ವಂ (O Panneerselvam) ಇಂದು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಸಮ್ಮುಖದಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸೇರ್ಪಡೆಗೊಂಡರು.
ಮೂರು ಬಾರಿ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಓಪಿಎಸ್​​, ಜಯಲಲಿತಾ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. ಪನ್ನೀರ್‌ಸೆಲ್ವಂ ಮತ್ತು ಎಡಪ್ಪಾಡಿ ಕೆ ಪಳನಿಸ್ವಾಮಿ ಅವರೊಂದಿಗಿನ ಆಂತರಿಕ ಕಿತ್ತಾಟದ ಹಿನ್ನಲೆಯಲ್ಲಿ ಪನ್ನೀರ್​ಸೆಲ್ವಂರನ್ನು ಪಕ್ಷದಿಂದ ಉಚ್ಚಾಟಿಸಲಾಯಿತು.
ಓಪಿಎಸ್​​ ಸೇರ್ಪಡೆ ದಕ್ಷಿಣ ತಮಿಳುನಾಡಿನಲ್ಲಿ, ವಿಶೇಷವಾಗಿ ಪನ್ನೀರ್‌ಸೆಲ್ವಂ ಪ್ರಭಾವ ಉಳಿಸಿಕೊಂಡಿರುವ ತೇವರ್ ಪ್ರಾಬಲ್ಯದ ಪ್ರದೇಶದಲ್ಲಿ ಬೆಂಬಲವನ್ನು ಕ್ರೋಢೀಕರಿಸುವ ಕಾರ್ಯತಂತ್ರದ ಭಾಗವೆಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಪಕ್ಷ ಸೇರ್ಪಡೆಗೊಂಡ ಮಾಧ್ಯಮದವರೊಂದಿಗೆ ಮಾತನಾಡಿದ ಓಪಿಎಸ್​​, ತಮಿಳುನಾಡು ವಿಪಕ್ಷ ನಾಯಕ ಎಡಪ್ಪಾಡಿ ಪಳನಿಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡರು. ಇಪಿಎಸ್​ ಸರ್ವಾಧಿಕಾರಿ ಮತ್ತು ದುರಹಂಕಾರಿಯಾಗಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಗೆಲ್ಲುವ ಪರಿಸ್ಥಿತಿಯಲ್ಲಿ ಇಲ್ಲ ಎನ್ನುವ ವಾತಾವರಣೆ ಸೃಷ್ಟಿಸಿದ್ದಾರೆ ಎಂದು ಹೇಳಿದರು.
ಡಿಎಂಕೆ ಸೇರಲು ಅವಕಾಶ ನೀಡಿದ್ದಕ್ಕಾಗಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ಗೆ ಧನ್ಯವಾದ ಅರ್ಪಿಸುತ್ತಾ, ತಮಗಾದ ಕಹಿ ಅನುಭವಕ್ಕೆ ಪೂರ್ಣ ವಿರಾಮ ಹಾಕಲು ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಹೇಳಿದರು. ಪಕ್ಷವನ್ನು ಬಲಪಡಿಸಲು ಡಿಎಂಕೆಗಾಗಿ ಕೆಲಸ ಮಾಡುವುದನ್ನು ಮುಂದುವರಿಸುವುದಾಗಿ ಓಪಿಎಸ್​​​ ತಿಳಿಸಿದರು.
ಸ್ಟಾಲಿನ್ ಜನರಿಗೆ ಉತ್ತಮ ಆಡಳಿತ ನೀಡುತ್ತಿದ್ದಾರೆ, ಇದು ಜನರ ಮನಸ್ಸಿನಲ್ಲಿ ಅಚ್ಚೊತ್ತಿದೆ, ದಕ್ಷಿಣದ ಯಾವುದೇ ನಾಯಕರು ಬಲಿಷ್ಠರಾಗದಂತೆ ನೋಡಿಕೊಳ್ಳಲು ಪಳನಿಸ್ವಾಮಿ ಪ್ರಯತ್ನಿಸುತ್ತಿದ್ದಾರೆ. ದ್ರಾವಿಡ ಚಳವಳಿಯನ್ನು ಉಳಿಸಲು, ಅದರ ನೀತಿಯಂತಿರುವ ಡಿಎಂಕೆ ಕೆಲಸ ಮಾಡುತ್ತಿದೆ. ನಾನು ಇದೀಗ ತಳಮಟ್ಟದ ಕಾರ್ಯಕರ್ತನಾಗಿ ಪಕ್ಷ ಸೇರಿದ್ದೇನೆ ಎಂದು ಪನ್ನೀರ್‌ಸೆಲ್ವಂ ತಿಳಿಸಿದರು.

ಸ್ಟಾಲಿನ್ ರಿಯಾಕ್ಷನ್​

ಮಾಜಿ ಮುಖ್ಯಮಂತ್ರಿ ಮತ್ತು ಪ್ರೀತಿಯ ಸಹೋದರ ತಿರು. ಒ. ಪನ್ನೀರ್‌ಸೆಲ್ವಂ ಮಾತೃ ಸಂಘಟನೆಯಾದ ದ್ರಾವಿಡ ಮುನ್ನೇತ್ರ ಕಳಗಂಗೆ ಸೇರಿದ್ದಾರೆ. ನಾನು ಅವರನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇನೆ ಎಂದು ಸಿಎಂ ಸ್ಟಾಲಿನ್​ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ.
2026 ರ ವಿಧಾನಸಭಾ ಚುನಾವಣೆ ತಮಿಳುನಾಡು ಮತ್ತು ಫ್ಯಾಸಿಸ್ಟ್ ಬಿಜೆಪಿ ನಡುವಿನ ಪ್ರಜಾಸತ್ತಾತ್ಮಕ ಯುದ್ಧವಾಗಿದೆ. ಈ ಅರಿವಿನೊಂದಿಗೆ ವಿವಿಧ ಪ್ರಜಾಸತ್ತಾತ್ಮಕ ಶಕ್ತಿಗಳು ಡಿಎಂಕೆ ಮೈತ್ರಿಕೂಟಕ್ಕೆ ಸೇರುತ್ತಿವೆ. ನಮ್ಮೊಂದಿಗೆ ಸೇರಿಕೊಂಡಿರುವ ನಮ್ಮ ಸಹೋದರ ಪನ್ನೀರ್‌ಸೆಲ್ವಂ ಅವರು ಸದ್ಗುಣಶೀಲ ವ್ಯಕ್ತಿ, ಅವರ ಈ ಆಗಮನವು ಕಲ್ಯಾಣಕ್ಕಾಗಿ ಆಗಲಿ! ತಮಿಳುನಾಡು ಜಯಶಾಲಿಯಾಗಲಿ ಎಂದು ಪೋಸ್ಟ್​ನಲ್ಲಿ ಬರೆದಿದ್ದಾರೆ.

ಮರುಸೇರ್ಪಡೆಗೆ ಮನಸ್ಸು ಮಾಡಿದ್ದ ಓಪಿಎಸ್​​

ನಾನು ಎಐಎಡಿಎಂಕೆ ಜೊತೆ ಒಂದಾಗಲು ಸಿದ್ಧನಿದ್ದೇನೆ, ಟಿಟಿವಿ ದಿನಕರನ್ ನನ್ನನ್ನು ಸ್ವಾಗತಿಸಲು ತಯಾರಿದ್ದಾರೆ ಎಂದಿದ್ದ ಓಪಿಎಸ್​​, ವಿಪಕ್ಷ ನಾಯಕ ಪಳನಿಸ್ವಾಮಿಯನ್ನು ತಮ್ಮ ಹಿರಿಯ ಸಹೋದರ ಎಂದು ಕರೆದಿದ್ದರು. ಪನೀರ್‌ಸೆಲ್ವಂ ಎಐಎಡಿಎಂಕೆಗೆ ಮತ್ತೆ ಸೇರುವ ಪ್ರಯತ್ನವನ್ನು ಪಳನಿಸ್ವಾಮಿ ತಿರಸ್ಕರಿಸಿದ್ದು, ಪಕ್ಷದಲ್ಲಿ ಅವರಿಗೆ ಜಾಗವಿಲ್ಲ ಎಂದು ಹೇಳಿದ್ದರು.
234 ಸದಸ್ಯ ಬಲದ ತಮಿಳುನಾಡು ವಿಧಾನಸಭೆ ಚುನಾವಣೆ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದ್ದು, ಇದರೊಂದಿಗೆ ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ ಮತ್ತು ಪುದುಚೇರಿಯಲ್ಲಿ ಮತದಾನ ನಡೆಯಲಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net