ಪರಮಾಣು ರಿಯಾಕ್ಟರ್ ಕಾರ್ಯಾರಂಭ ಮಾಡುವ ಪ್ರಕ್ರಿಯೆಯನ್ನು ವಿಜ್ಞಾನದ ಭಾಷೆಯಲ್ಲಿ ಕ್ರಿಟಿಕಾಲಿಟಿ ಎನ್ನಲಾಗುತ್ತದೆ. ಈ ಹಂತವು ರಿಯಾಕ್ಟರ್ನ ಸುರಕ್ಷಿತ ಕಾರ್ಯಾಚರಣೆಯ ಗ್ಯಾರಂಟಿಯೂ ಹೌದು. ಇದೊಂದು ಅತ್ಯಂತ ಸೂಕ್ಷ್ಮ ಹಾಗೂ ತಾಂತ್ರಿಕ ಮೈಲಿಗಲ್ಲು. ರಿಯಾಕ್ಟರ್ನ ಒಳಗಿರುವ ಯುರೇನಿಯಂ ಪರಮಾಣುಗಳು ನ್ಯೂಟ್ರಾನ್ಗಳ ಹೊಡೆತಕ್ಕೆ ಸಿಲುಕಿ ಹೋಳಾಗುತ್ತವೆ, ಇದನ್ನು ಪರಮಾಣು ವಿದಳನ (ನ್ಯೂಕ್ಲಿಯರ್ ಫಿಷನ್) ಎಂದು ಕರೆಯಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಅಪಾರ ಪ್ರಮಾಣದ ಶಾಖದ ಜತೆಗೆ ಹೆಚ್ಚಿನ ನ್ಯೂಟ್ರಾನ್ಗಳು ಬಿಡುಗಡೆಯಾಗುತ್ತವೆ. ಈ ನ್ಯೂಟ್ರಾನ್ಗಳು ಮುಂದಿನ ಯುರೇನಿಯಂ ಪರಮಾಣುಗಳನ್ನು ಸೀಳುತ್ತಾ ಒಂದು ನಿರಂತರ ಸರಪಳಿ ಪ್ರಕ್ರಿಯೆಯನ್ನು (ಚೈನ್ ರಿಯಾಕ್ಷನ್) ಸೃಷ್ಟಿಸುತ್ತವೆ. ಇದು ಒಂದು ಸ್ಥಿರ ಮಟ್ಟವನ್ನು ತಲುಪಿ, ಬಾಹ್ಯ ಪ್ರಚೋದನೆಯಿಲ್ಲದೆ ತನ್ನಷ್ಟಕ್ಕೆ ತಾನೇ ನಿರಂತರವಾಗಿ ಶಾಖವನ್ನು ಉತ್ಪಾದಿಸಲು ಆರಂಭಿಸಿದಾಗ ರಿಯಾಕ್ಟರ್ ಕ್ರಿಟಿಕಲ್ ಆಗಿದೆ ಎಂದರ್ಥ. ಈ ಹಂತದಲ್ಲಿ ಉತ್ಪತ್ತಿಯಾಗುವ ಶಾಖವನ್ನು ಬಳಸಿ ನೀರನ್ನು ಕಾಯಿಸಿ ಹಬೆಯಾಗಿ ಪರಿವರ್ತಿಸಲಾಗುತ್ತದೆ. ಈ ಅಧಿಕ ಒತ್ತಡದ ಹಬೆಯು ಬೃಹತ್ ಟರ್ಬೆನ್ಗಳನ್ನು ತಿರುಗಿಸುವ ಮೂಲಕ ವಿದ್ಯುತ್ ಉತ್ಪಾದನೆಗೆ ಚಾಲನೆ ನೀಡುತ್ತದೆ. ಇದು ಕೇವಲ ತಾಂತ್ರಿಕ ಯಶಸ್ಸಲ್ಲ, ಅಣುಶಕ್ತಿ ವಲಯದಲ್ಲಿ ಭಾರತದ ಆತ್ಮನಿರ್ಭರತೆಗೆ ಮಾರ್ಗ.