ಬಂಗಲೆ ಖಾಲಿ ಮಾಡುವಂತೆ ನೋಟಿಸ್; ನನ್ನನ್ನು ಬಲವಂತವಾಗಿ ಹೊರ ಹಾಕಲಿ ನೋಡೋಣ; ಬಿಹಾರ ಸರ್ಕಾರಕ್ಕೆ ರಾಬ್ಡಿ ದೇವಿ ಸವಾಲ್ | Rabri Devi

ಮಾಜಿ ಸಿಎಂ ರಾಬ್ಡಿ ದೇವಿ
ಮಾಜಿ ಸಿಎಂ ರಾಬ್ಡಿ ದೇವಿ
Published on
ಪಾಟ್ನಾ: ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ(Rabdi Devi) ಅವರು ವಾಸಿಸುತ್ತಿರುವ 10 ಸರ್ಕ್ಯುಲರ್ ರಸ್ತೆಯ ಬಂಗಲೆಯನ್ನು ಖಾಲಿ ಮಾಡುವಂತೆ ನೋಟಿಸ್ ನೀಡಿದ್ದು, ಸರ್ಕಾರವೇ ನನ್ನನ್ನು ಬಲವಂತವಾಗಿ ಹೊರಹಾಕಲಿ ನೋಡೋಣ ಎಂದು ಅವರು ಬಿಹಾರ ಬಿಜೆಪಿ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಕಳೆದ ಎರಡು ದಶಕಗಳಿಂದ 10 ಸರ್ಕ್ಯುಲರ್ ರಸ್ತೆಯ ನಿವಾಸವೇ ರಾಬ್ರಿಯವರ ನಿವಾಸವಾಗಿದೆ. ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಮತ್ತು ತೇಜಸ್ವಿ ಯಾದವ್ ಕೂಡ ಅಲ್ಲೇ ವಾಸಿಸುತ್ತಿದ್ದಾರೆ. ಆದರೆ ಪ್ರಸ್ತುತ ಸಾಮ್ರಾಟ್ ಚೌಧರಿ ನೇತೃತ್ವದ ಬಿಜೆಪಿ ಸರ್ಕಾರ ಸಚಿವರು ಮತ್ತು ನಾಯಕರಿಗೆ ಬಂಗಲೆಗಳನ್ನು ಮರುನಿಯೋಜಿಸಿ ಆದೇಶ ಹೊರಡಿಸಿದೆ.
ಶುಕ್ರವಾರ ಬಿಹಾರ ಕಟ್ಟಡ ನಿರ್ಮಾಣ ಇಲಾಖೆಯು ರಾಬ್ರಿ ದೇವಿಗೆ ಮೂರನೇ ಮತ್ತು ಅಂತಿಮ ನೋಟಿಸ್ ನೀಡಿ, ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ನಿರ್ದೇಶಿಸಿದೆ. ಅವರಿಗೆ 39 ಹಾರ್ಡಿಂಗ್ ರಸ್ತೆಯಲ್ಲಿರುವ ಹೊಸ ಸರ್ಕಾರಿ ವಸತಿ ಬಂಗಲೆಗೆ ಶಿಫ್ಟ್ ಆಗುವಂತೆ ಸೂಚನೆ ನೀಡಿದೆ. 
ಕಳೆದ ವರ್ಷ ನವೆಂಬರ್‌ನಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಮುಗಿದ ಬಳಿಕವೇ ಮೊದಲ ನೋಟಿಸ್ ನೀಡಿತ್ತು. ಮತ್ತು ಮೇ 27 ರಿಂದ ಜಾರಿಗೆ ಬರುವಂತೆ 10 ಸರ್ಕ್ಯುಲರ್ ರಸ್ತೆ ಬಂಗಲೆಯನ್ನು ರಾಜ್ಯ ಡೈರಿ, ಮೀನುಗಾರಿಕೆ ಮತ್ತು ಪ್ರಾಣಿ ಸಂಪನ್ಮೂಲ ಸಚಿವ ನಂದ ಕಿಶೋರ್ ರಾಮ್ ಅವರಿಗೆ ನೀಡಲಾಗಿದೆ.
ಆದರೆ ರಾಬ್ಡಿ ದೇವಿ ಅವರು ಮನೆಯನ್ನು ಖಾಲಿ ಮಾಡಿಲ್ಲ. ಲಾಲು ಕುಟುಂಬಕ್ಕೆ 10 ಸರ್ಕ್ಯುಲರ್ ರಸ್ತೆ ಆಳವಾದ ಭಾವನಾತ್ಮಕ ಮೌಲ್ಯವನ್ನು ಹೊಂದಿದ್ದು, ಕಳೆದ ಎರಡು ದಶಕಗಳಿಂದ ಆರ್‌ಜೆಡಿಯ ರಾಜಕೀಯ ಚಟುವಟಿಕೆಗಳ ಕೇಂದ್ರ ಬಿಂದುವಾಗಿದೆ.  
ಇನ್ನೂ ಈ ಕುರಿತು ಮಾತನಾಡಿರುವ ರಾಬ್ಡಿದೇವಿ ಅವರು, ಯಾವುದೇ ಕಾರಣಕ್ಕೂ ನಿವಾಸವನ್ನು ಖಾಲಿ ಮಾಡುವುದಿಲ್ಲ. ಸರ್ಕಾರ ಬಯಸಿದರೆ, ಮುಖ್ಯಮಂತ್ರಿ ಸಾಮ್ರಾಟ್ ಚೌಧರಿಗೆ ನಾವು ಖಾಲಿ ಮಾಡಬೇಕು ಅನ್ನೋದಿದ್ರೆ, ಬಲವಂತವಾಗಿ ನಮ್ಮನ್ನು ಹೊರ ಹಾಕಲಿ ನೋಡೋಣ ಎಂದು ವಾಗ್ದಾಳಿ ನಡೆಸಿದ್ದಾರೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net