ನೋಟು ಪತ್ತೆ ಪ್ರಕರಣ: ತನಿಖಾ ಸಮಿತಿ ರಚನೆ ವಿರೋಧಿಸಿದ್ದ ನ್ಯಾ.ಯಶವಂತ್ ವರ್ಮಾ ಅರ್ಜಿ ವಜಾಗೊಳಿಸಿದ ಸುಪ್ರೀಂ | Justice Yashwant Verma

ನ್ಯಾ.ಯಶವಂತ್ ವರ್ಮಾ
ನ್ಯಾ.ಯಶವಂತ್ ವರ್ಮಾ
Published on
ನವದೆಹಲಿ: ಅಗ್ನಿ ಅವಘಡದ ಸಮಯದಲ್ಲಿ ಮನೆಯಲ್ಲಿ ನೋಟು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಲೋಕಸಭಾ ಸ್ಪೀಕರ್ ರಚಿಸಿದ್ದ ತನಿಖಾ ಸಮಿತಿಯನ್ನು ಪ್ರಶ್ನಿಸಿದ್ದ ನ್ಯಾ.ಯಶವಂತ್ ವರ್ಮಾ(Justice Yashwant Verma) ಸಲ್ಲಿಸಿದ್ದ ಅರ್ಜಿಯನ್ನು ಇಂದು(ಜ. 16) ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ನ್ಯಾ.ದೀಪಂಕರ್ ದತ್ತ ಮತ್ತು ನ್ಯಾ.ಸತೀಶ್ ಚಂದ್ರ ಅವರ ದ್ವಿಸದಸ್ಯ ಪೀಠವು, ಜ. 08ರಂದು ನ್ಯಾ.ಯಶವಂತ ವರ್ಮಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತ್ತು. ಅರ್ಜಿದಾರರ ಪರ ಹಿರಿಯ ವಕೀಲ ಮುಕುಲ್ ರೋಹ್ಟಗಿ ವಾದಿಸಿದ್ರೆ, ಲೋಕಸಭೆ ಸಚಿವಾಲಯದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ಪ್ರತಿವಾದವನ್ನು ಆಲಿಸಿ, ಇಂದಿಗೆ ತೀರ್ಪನ್ನು ಕಾಯ್ದಿರಿಸಲಾಗಿತ್ತು.
ಲೋಕಸಭಾ ತನಿಖಾ ಸಮಿತಿಯ ರಚನೆಯಲ್ಲಿ ಕಾರ್ಯವಿಧಾನದ ಲೋಪವನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಇಂದು ವಜಾಗೊಳಿಸಿರುವ ದ್ವಿಸದಸ್ಯ ಪೀಠ, ಲೋಕಸಭೆ ಸ್ಪೀಕರ್ ರಚಿಸಿದ್ದ ಸಂಸದೀಯ ತನಿಖಾ ಸಮಿತಿಗೆ ತನಿಖೆ ಮಾಡಲು ಅವಕಾಶ ನೀಡಿದೆ.
2025 ಅಗಸ್ಟ್​ನಲ್ಲಿ ನ್ಯಾ.ಯಶವಂತ್ ವರ್ಮಾ ಅವರ ಮಹಾಭಿಯೋಗದ ಪ್ರಕ್ರಿಯೆಗಾಗಿ ಅವರ ವಿರುದ್ಧದ ಭ್ರಷ್ಟಾಚಾರ ಆರೋಪವನ್ನು ತನಿಖೆ ಮಾಡಿ ವರದಿ ನೀಡಲು ಲೋಕಸಭೆ ಸ್ಪೀಕರ್ ಮೂವರು ಸದಸ್ಯರ ಸಮಿತಿಯನ್ನು ರಚಿಸಿದ್ದರು. ಸಮಿತಿಯಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾ. ಅರವಿಂದ್ ಕುಮಾರ್, ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮಣಿಂದರ್ ಮೋಹನ್ ಹಾಗೂ ಹಿರಿಯ ವಕೀಲ ಬಿ.ವಿ. ಆಚಾರ್ಯ ಇದ್ದಾರೆ.
ಸದ್ಯ ಅಲಹಬಾದ್ ಹೈಕೋರ್ಟ್​ ನ್ಯಾಯಾಧೀಶರಾಗಿರುವ ವರ್ಮಾ ಅವರ ದೆಹಲಿ ಅಧಿಕೃತ ನಿವಾಸದಲ್ಲಿ 2025 ಮಾರ್ಚ್ 14 ರಂದು ಅಗ್ನಿ ಅವಘಡ ಸಂಭವಿಸಿತ್ತು. ಈ ವೇಳೆ ಹಲವು ನೋಟಿನ ಕಂತೆಗಳು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದವು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net