ರಾಹುಲ್​ಗೆ ಬೂತ್ ಮಟ್ಟದ ನಾಯಕನಾಗುವ ಅರ್ಹತೆಯೂ ಇಲ್ಲ!...ಸ್ವಂತ ಸಹೋದರನಿಗೇ ತಿರುಗೇಟು ನೀಡಿ ಮಾತು ಉಳಿಸಿಕೊಂಡ ಶೆಹಜಾದ್ | Shehzad Poonawalla

Shehzad Poonawalla | ಸ್ವಂತ ಸಹೋದರನಿಗೇ ತಿರುಗೇಟು ನೀಡಿ ಮಾತು ಉಳಿಸಿಕೊಂಡ ಶೆಹಜಾದ್
Shehzad Poonawalla | ಸ್ವಂತ ಸಹೋದರನಿಗೇ ತಿರುಗೇಟು ನೀಡಿ ಮಾತು ಉಳಿಸಿಕೊಂಡ ಶೆಹಜಾದ್
Published on

ನವದೆಹಲಿ: ಇತ್ತೀಚೆಗಷ್ಟೇ ಬಿಜೆಪಿ ರಾಷ್ಟ್ರೀಯ ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಶೆಹಜಾದ್ ಪೂನಾವಾಲಾ (Shehzad Poonawalla), ತಮ್ಮ ರಾಜೀನಾಮೆಯನ್ನು ಪುರಸ್ಕರಿಸುವಂತೆ ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿದ್ದರು. ಆ ಸಂದರ್ಭದಲ್ಲಿ ನಾನು ವ್ಯವಸ್ಥೆಯನ್ನು ಬಿಡುತ್ತಿದ್ದೇನೆಯೇ ಹೊರತು ಪಕ್ಷ, ನಾಯಕತ್ವ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಅಭಿಮಾನ ಮತ್ತು ವಿಚಾರಧಾರೆಯನ್ನು ಅಲ್ಲ ಎಂದು ಸ್ಪಷ್ಟಪಡಿಸಿದ್ದರು.

ಇದೀಗ ತಮ್ಮ ಆ ಹೇಳಿಕೆಗೆ ಪೂರಕವೆಂಬಂತೆ, ಸಕ್ಕರೆ ಬೆಲೆ ಏರಿಕೆ ಹಾಗೂ ಇ20 ಪೆಟ್ರೋಲ್ (E20 Petrol) ವಿಚಾರವಾಗಿ ಸ್ವತಃ ತಮ್ಮ ಸಹೋದರ ತೇಹಸೀನ್ ಪೂನಾವಾಲಾ ಮಾಡಿದ್ದ ಸಕ್ಕರೆ ಹಗರಣ ಆರೋಪಕ್ಕೆ ಶೆಹಜಾದ್ ತೀವ್ರ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನೂ ಕಟುವಾಗಿ ಟೀಕಿಸಿದ್ದಾರೆ.
ದೇಶದಲ್ಲಿ ಸಕ್ಕರೆ ಬೆಲೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರದ ಎಥನಾಲ್ ಮಿಶ್ರಣ (E20) ನೀತಿಯನ್ನು ಟೀಕಿಸಿದ್ದ ತೇಹಸೀನ್, ಸಕ್ಕರೆ ಹಗರಣದಿಂದಾಗಿ ಸಾಮಾನ್ಯ ಗ್ರಾಹಕರಿಗೆ ತೊಂದರೆಯಾಗುತ್ತಿದೆ ಮತ್ತು E20 ಪೆಟ್ರೋಲ್ ಬಳಕೆಯಿಂದಾಗಿ ವಾಹನಗಳು ಹಾಳಾಗುತ್ತಿವೆ ಎಂದು ಆರೋಪಿಸಿದ್ದರು. ಗ್ರಾಹಕ ವ್ಯವಹಾರಗಳ ಸಚಿವಾಲಯದ ಬೆಲೆ ಪೋರ್ಟಲ್ ದತ್ತಾಂಶದ ಪ್ರಕಾರ, ಜುಲೈ 20 ರಂದು ಕೆಜಿಗೆ 48.18 ರೂಪಾಯಿ ಇದ್ದ ಚಿಲ್ಲರೆ ಸಕ್ಕರೆ ಬೆಲೆ ಆಗಸ್ಟ್ 21 ರ ವೇಳೆಗೆ 58.20 ರೂಪಾಯಿಗೆ ಏರಿಕೆಯಾಗಿದೆ. ಹಬ್ಬದ ಸೀಸನ್‌ಗೆ ಮುನ್ನ ದೇಶೀಯವಾಗಿ ಸಕ್ಕರೆ ಲಭ್ಯತೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಕಾಳಸಂತೆಯ ವಿರುದ್ಧ ಕ್ರಮಗಳನ್ನು ಬಿಗಿಗೊಳಿಸಿದ್ದು, ಸಕ್ಕರೆ ಆಮದಿಗೆ ಅನುಮತಿ ನೀಡಿದೆ.
ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ತೇಹಸೀನ್, ಸಕ್ಕರೆ ಹಗರಣವು ದೇಶದಲ್ಲಿ ನಡೆದ ಅತ್ಯಂತ ಕಹಿ ಹಗರಣವಾಗಿದೆ, ರಾಜಕಾರಣಿಗಳ ಮಕ್ಕಳು ಕೋಟ್ಯಾಧಿಪತಿಗಳಾಗುತ್ತಿದ್ದರೆ, ಸಾಮಾನ್ಯ ಪ್ರಜೆ ಸಕ್ಕರೆಗೆ ಹೆಚ್ಚಿನ ಹಣ ನೀಡುತ್ತಿದ್ದಾನೆ ಹಾಗೂ ಇ20ಯಿಂದಾಗಿ ಅವರ ವಾಹನಗಳು ನಾಶವಾಗುತ್ತಿವೆ ಎಂದು ಬರೆದುಕೊಂಡಿದ್ದರು. ಇದಕ್ಕೆ ತಿರುಗೇಟು ನೀಡಿದ ಶೆಹಜಾದ್, ತೇಹಸೀನ್ ವಿರುದ್ಧ ವಾಗ್ದಾಳಿ ನಡೆಸಿದ್ದಲ್ಲದೆ ರಾಹುಲ್ ಗಾಂಧಿ ಬೂತ್ ಮಟ್ಟದ ನಾಯಕನಾಗಲು ಕೂಡ ಅನರ್ಹ ಎಂದು ವ್ಯಂಗ್ಯವಾಡಿದ್ದಾರೆ.

ಅತ್ಯಗತ್ಯ ವಸ್ತುಗಳ ಬೆಲೆಗಳನ್ನು ಪಟ್ಟಿ ಮಾಡಿದ ಜೈರಾಮ್​ ರಮೇಶ್​

ಇದೇ ವಿಚಾರವಾಗಿ ಕೇಂದ್ರದ ವಿರುದ್ಧ ಹಾಯ್ದಿರುವ ಕಾಂಗ್ರೆಸ್​ನ ಹಿರಿಯ ನಾಯಕ ಜೈರಾಮ್ ರಮೇಶ್, ಹಣದುಬ್ಬರವು ಸಾಮಾನ್ಯ ಕುಟುಂಬಗಳ ಮೇಲೆ ಹೆಚ್ಚಿನ ಹೊರೆಯಾಗಿದ್ದು, ದಿನನಿತ್ಯದ ವೆಚ್ಚಗಳ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದಿದ್ದಾರೆ. ಹಿಟ್ಟು, ಅಕ್ಕಿ, ಜೀರಿಗೆ, ಅರಿಶಿನ, ಅಡುಗೆ ಎಣ್ಣೆ ಮತ್ತು ಸಕ್ಕರೆ ಸೇರಿದಂತೆ ಹಲವು ಅತ್ಯಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಪಟ್ಟಿ ಮಾಡಿದ ಅವರು, ದಿನಬಳಕೆಯ ವಸ್ತುಗಳು, ಟೈರ್‌ಗಳು ಮತ್ತು ಕಾರುಗಳ ಬೆಲೆಗಳು ನಿರಂತರವಾಗಿ ಏರಿಕೆಯಾಗುತ್ತಿವೆ ಎಂದು ಆರೋಪಿಸಿದ್ದಾರೆ. ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡ ಇ20 ಪೆಟ್ರೋಲ್ ಕುರಿತು ಟೀಕಿಸಿದ್ದು, ಎಥನಾಲ್ ಮಿಶ್ರಣ ಹೆಚ್ಚಳದಿಂದ ಕಬ್ಬು ಉತ್ಪಾದನೆಗೆ ಬಳಕೆಯಾಗಿ ಸಕ್ಕರೆ ಬೆಲೆ ಏರಿಕೆಯಾಗಿದೆ ಹಾಗೂ ಇದು ವಾಹನಗಳ ಮೈಲೇಜ್ ಮತ್ತು ಎಂಜಿನ್ ಕಾರ್ಯಕ್ಷಮತೆಯ ಮೇಲೆ ದುಷ್ಪರಿಣಾಮ ಬೀರಿ ಗ್ರಾಹಕರಿಗೆ ಆರ್ಥಿಕ ಹೊರೆಯುಂಟುಮಾಡುತ್ತಿದೆ ಎಂದಿದ್ದಾರೆ.

ವಿಪಕ್ಷಗಳ ಆರೋಪಕ್ಕೆ ಕೇಂದ್ರ ಸರ್ಕಾರದ ಸ್ಪಷ್ಟನೆ!...

ಮತ್ತೊಂದೆಡೆ, ಸಕ್ಕರೆ ಬೆಲೆ ಏರಿಕೆಗೆ ಎಥನಾಲ್ ಉತ್ಪಾದನೆಗೆ ಸಕ್ಕರೆಯನ್ನು ಬಳಸಿರುವುದೇ ಕಾರಣ ಎಂಬ ಆರೋಪವನ್ನು ಕೇಂದ್ರ ಸರ್ಕಾರ ಶುಕ್ರವಾರ ಸ್ಪಷ್ಟವಾಗಿ ತಿರಸ್ಕರಿಸಿದ್ದು, ನಿರೀಕ್ಷೆಗಿಂತ ಕಡಿಮೆ ದೇಶೀಯ ಉತ್ಪಾದನೆ, ಹಬ್ಬದ ಋತುವಿನ ಹೆಚ್ಚುವರಿ ಬೇಡಿಕೆ ಮತ್ತು ಹವಾಮಾನ ವೈಪರೀತ್ಯದಿಂದ ಬೆಳೆ ಹಾನಿಯಾಗಿದ್ದೇ ಬೆಲೆ ಏರಿಕೆಗೆ ಮುಖ್ಯ ಕಾರಣ ಎಂದು ಸರ್ಕಾರ ತಿಳಿಸಿದೆ. ಸರ್ಕಾರದ ದತ್ತಾಂಶಗಳ ಪ್ರಕಾರ, ಎಥನಾಲ್ ಉತ್ಪಾದನೆಗೆ ಬಳಸಲಾದ ಸಕ್ಕರೆಯ ಪ್ರಮಾಣವು 2022-23 ರಲ್ಲಿ ಶೇ. 12 ರಷ್ಟಿದ್ದು, ಅದು 2025-26 ರಲ್ಲಿ ಶೇ. 9 ಕ್ಕೆ ಕುಸಿದಿದೆ. ಅಲ್ಲದೆ, ಪ್ರಸ್ತುತ ಭಾರತದಲ್ಲಿ ಉತ್ಪಾದನೆಯಾಗುವ ಒಟ್ಟು ಎಥನಾಲ್​​ನಲ್ಲಿ ಸುಮಾರು ಮುಕ್ಕಾಲು ಭಾಗವನ್ನು ಧಾನ್ಯಗಳಿಂದ, ವಿಶೇಷವಾಗಿ ಮೆಕ್ಕೇಜೋಳದಿಂದ ತಯಾರಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net