ಇಟಾಲಿಯನ್ ಅಲ್ಲ, ಇಂಗ್ಲಿಷ್ ಕೂಡ ಅಲ್ಲ! ಮಕ್ಕಳ ಜತೆ ಹಿಂದಿಯಲ್ಲೇ ಸೋನಿಯಾ ಗಾಂಧಿ ಮಾತು; ಇದರ ಹಿಂದಿತ್ತು ಸ್ವೀಕಾರದ ಹಂಬಲ... sonia gandhi

ಇಟಲಿಯಲ್ಲಿ ಹುಟ್ಟಿ ಬೆಳೆದು ಭಾರತಕ್ಕೆ ಬಂದ ಸೋನಿಯಾ ಗಾಂಧಿ ಅವರಿಗೆ ಆರಂಭದಲ್ಲಿ ಹಿಂದಿ ಭಾಷೆಯ ಮೇಲೆ ಹೆಚ್ಚಿನ ಹಿಡಿತವಿರಲಿಲ್ಲ. ಆದರೂ ತಮ್ಮ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರೊಂದಿಗೆ ಇಂಗ್ಲಿಷ್ ಅಥವಾ ಇಟಾಲಿಯನ್ ಭಾಷೆಯಲ್ಲಿ ಮಾತನಾಡುವ ಬದಲು ಹಿಂದಿಯಲ್ಲೇ ಸಂಭಾಷಣೆ ನಡೆಸುತ್ತಿದ್ದರು. ಇದಕ್ಕೆ ಕೇವಲ ಭಾಷೆ ಕಲಿಯುವ ಆಸೆಯಷ್ಟೇ ಕಾರಣವಾಗಿರಲಿಲ್ಲ. ಭಾರತೀಯ ಸಮಾಜದಲ್ಲಿ ತಮ್ಮನ್ನು ಒಬ್ಬರಾಗಿ ಸ್ವೀಕರಿಸಬೇಕು, ಜನರ ಪ್ರೀತಿ ಗಳಿಸಬೇಕು ಎಂಬ ಆಳವಾದ ಬಯಕೆಯೂ ಇತ್ತು ಎಂಬುದನ್ನು ಅವರು ತಮ್ಮ ಆತ್ಮಕಥೆಯಲ್ಲಿ ಬಹಿರಂಗಪಡಿಸಿದ್ದಾರೆ.sonia gandhi
ಇಟಾಲಿಯನ್ ಅಲ್ಲ, ಇಂಗ್ಲಿಷ್ ಕೂಡ ಅಲ್ಲ! ಮಕ್ಕಳ ಜತೆ ಹಿಂದಿಯಲ್ಲೇ ಸೋನಿಯಾ ಗಾಂಧಿ ಮಾತು
ಇಟಾಲಿಯನ್ ಅಲ್ಲ, ಇಂಗ್ಲಿಷ್ ಕೂಡ ಅಲ್ಲ! ಮಕ್ಕಳ ಜತೆ ಹಿಂದಿಯಲ್ಲೇ ಸೋನಿಯಾ ಗಾಂಧಿ ಮಾತುWEB
Published on: 

ನವದೆಹಲಿ: ಇಟಲಿಯಲ್ಲಿ ಹುಟ್ಟಿ ಬೆಳೆದು ಭಾರತಕ್ಕೆ ಬಂದ ಸೋನಿಯಾ ಗಾಂಧಿ ಅವರಿಗೆ ಆರಂಭದಲ್ಲಿ ಹಿಂದಿ ಭಾಷೆಯ ಮೇಲೆ ಹೆಚ್ಚಿನ ಹಿಡಿತವಿರಲಿಲ್ಲ. ಆದರೂ ತಮ್ಮ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರೊಂದಿಗೆ ಇಂಗ್ಲಿಷ್ ಅಥವಾ ಇಟಾಲಿಯನ್ ಭಾಷೆಯಲ್ಲಿ ಮಾತನಾಡುವ ಬದಲು ಹಿಂದಿಯಲ್ಲೇ ಸಂಭಾಷಣೆ ನಡೆಸುತ್ತಿದ್ದರು. ಇದಕ್ಕೆ ಕೇವಲ ಭಾಷೆ ಕಲಿಯುವ ಆಸೆಯಷ್ಟೇ ಕಾರಣವಾಗಿರಲಿಲ್ಲ. ಭಾರತೀಯ ಸಮಾಜದಲ್ಲಿ ತಮ್ಮನ್ನು ಒಬ್ಬರಾಗಿ ಸ್ವೀಕರಿಸಬೇಕು, ಜನರ ಪ್ರೀತಿ ಗಳಿಸಬೇಕು ಎಂಬ ಆಳವಾದ ಬಯಕೆಯೂ ಇತ್ತು ಎಂಬುದನ್ನು ಅವರು ತಮ್ಮ ಆತ್ಮಕಥೆಯಲ್ಲಿ ಬಹಿರಂಗಪಡಿಸಿದ್ದಾರೆ.

ಸೋನಿಯಾ ಗಾಂಧಿ ಅವರ ಆತ್ಮಕಥೆ Belonging: A Journey of Love ನವೆಂಬರ್ 10ರಂದು ಬಿಡುಗಡೆಯಾಗಿದೆ. ಈ ಪುಸ್ತಕದಲ್ಲಿ ತಮ್ಮ ವೈಯಕ್ತಿಕ ಬದುಕು, ಕುಟುಂಬದ ಅನುಭವಗಳು ಮತ್ತು ರಾಜಕೀಯ ಪಯಣದ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಮಕ್ಕಳೊಂದಿಗೆ ಹಿಂದಿಯಲ್ಲಿ ಮಾತನಾಡಲು ನಿರ್ಧರಿಸಿದ್ದರ ಹಿಂದಿನ ಭಾವನಾತ್ಮಕ ಕಾರಣ ಈಗ ಗಮನ ಸೆಳೆಯುತ್ತಿದೆ.

ಮಕ್ಕಳೊಂದಿಗೆ ಹಿಂದಿಯಲ್ಲೇ ಮಾತನಾಡುತ್ತಿದ್ದೇಕೆ?

ರಾಹುಲ್ ಮತ್ತು ಪ್ರಿಯಾಂಕಾ ಚಿಕ್ಕವರಿದ್ದಾಗ ಶಾಲೆಗೆ ಸೇರುವವರೆಗೂ ಸೋನಿಯಾ ಗಾಂಧಿ ಅವರೊಂದಿಗೆ ಹಿಂದಿಯಲ್ಲೇ ಮಾತನಾಡುತ್ತಿದ್ದರು. ಅವರ ಹಿಂದಿ ಉಚ್ಚಾರಣೆಯಲ್ಲಿ ಇಟಾಲಿಯನ್ ಭಾಷೆಯ ಪ್ರಭಾವ ಸ್ಪಷ್ಟವಾಗಿತ್ತು. ಜನರು ಮಕ್ಕಳೊಂದಿಗೆ ಇಟಾಲಿಯನ್ ಭಾಷೆಯಲ್ಲಿ ಮಾತನಾಡದೆ ಹಿಂದಿಯನ್ನೇ ಏಕೆ ಆಯ್ಕೆ ಮಾಡಿಕೊಂಡಿದ್ದೀರಿ ಎಂದು ಪ್ರಶ್ನಿಸುತ್ತಿದ್ದರಂತೆ. ಅದಕ್ಕೆ ಹಿಂದಿ ಮಾತನಾಡುವುದರಿಂದ ತಮ್ಮ ಭಾಷಾ ಕೌಶಲ ಸುಧಾರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಉತ್ತರಿಸುತ್ತಿದ್ದರು. ಆದರೆ ಅದು ಸಂಪೂರ್ಣ ಸತ್ಯವಾಗಿರಲಿಲ್ಲ. ಭಾರತೀಯ ಸಮಾಜ ತಮ್ಮನ್ನು ಒಪ್ಪಿಕೊಳ್ಳಬೇಕು, ಪ್ರೀತಿಯಿಂದ ಸ್ವೀಕರಿಸಬೇಕು ಮತ್ತು ಈ ದೇಶದ ಭಾಗವಾಗಿ ಗುರುತಿಸಿಕೊಳ್ಳಬೇಕು ಎಂಬ ಬಯಕೆಯೇ ನಿಜವಾದ ಕಾರಣವಾಗಿತ್ತು ಎಂದು ಬರೆದುಕೊಂಡಿದ್ದಾರೆ. ಮಕ್ಕಳು ಶಾಲೆಗೆ ಸೇರಿದ ಬಳಿಕ ಇಂಗ್ಲಿಷ್ ಕಲಿತರು. ಇಟಲಿಯಲ್ಲಿ ರಜಾದಿನಗಳನ್ನು ಕಳೆಯುವಾಗ ಅಜ್ಜ-ಅಜ್ಜಿ ಹಾಗೂ ಸಂಬಂಧಿಕರೊಂದಿಗೆ ಮಾತನಾಡಿ ಇಟಾಲಿಯನ್ ಭಾಷೆಯನ್ನೂ ಕಲಿತರು.

ಇದನ್ನೂ ಓದಿ : ಸೋನಿಯಾ ಗಾಂಧಿ ಆತ್ಮಕಥೆ ಆಧರಿಸಿ ತೆಲುಗು ಸಿನಿಮಾ: ಕಾಂಗ್ರೆಸ್ ನಾಯಕ ಜಗ್ಗಾ ರೆಡ್ಡಿ ಘೋಷಣೆ! sonia gandhi Movie

ಹಿಂದಿ ಕಲಿತರೆ ಭಾರತೀಯಳಾಗಲು ಸಾಧ್ಯವೇ?

ಹಿಂದಿ ಕಲಿಯುವುದರಿಂದ ಭಾರತೀಯ ಸಮಾಜದಲ್ಲಿ ಸಂಪೂರ್ಣವಾಗಿ ಬೆರೆಯಬಹುದು ಎಂದು ಆರಂಭದಲ್ಲಿ ಭಾವಿಸಿದ್ದ ಸೋನಿಯಾ ಗಾಂಧಿ, ನಂತರ ಈ ವಿಚಾರ ಅಷ್ಟು ಸುಲಭವಲ್ಲ ಎಂಬುದನ್ನು ಅರಿತುಕೊಂಡಿದ್ದಾಗಿ ತಿಳಿಸಿದ್ದಾರೆ. ಭಾರತದಲ್ಲಿ ಒಂದೇ ಭಾಷೆ ಮಾತನಾಡುವ ಮತ್ತು ಒಂದೇ ಸಂಪ್ರದಾಯಗಳನ್ನು ಅನುಸರಿಸುವ ಜನರ ನಡುವೆಯೂ ಸಾಕಷ್ಟು ಭಿನ್ನತೆಗಳಿವೆ. ಕೇವಲ ಭಾಷೆ ಕಲಿಯುವುದರಿಂದ ಎಲ್ಲ ವ್ಯತ್ಯಾಸಗಳು ಮಾಯವಾಗುವುದಿಲ್ಲ ಎಂಬ ಅರಿವು ಮೂಡಿತ್ತು ಎಂದು ಆತ್ಮಕಥೆಯಲ್ಲಿ ವಿವರಿಸಿದ್ದಾರೆ. ಆದರೆ ಕೊನೆಗೆ ಕುಟುಂಬದ ಹೊರಗೆ, ರಾಜೀವ್ ಗಾಂಧಿ ಅವರ ರಾಜಕೀಯ ಕ್ಷೇತ್ರವಾಗಿದ್ದ ಅಮೇಥಿಯಲ್ಲಿ ಜನರಿಂದ ಸ್ವೀಕಾರ ದೊರೆಯಿತು ಎಂದು ನೆನಪಿಸಿಕೊಂಡಿದ್ದಾರೆ.

ಅಮಿತಾಭ್ ಬಚ್ಚನ್ ತಂದೆಯಿಂದ ಮೊದಲ ಹಿಂದಿ ಪಾಠ

ಸೋನಿಯಾ ಗಾಂಧಿ ಅವರಿಗೆ ಹಿಂದಿ ಕಲಿಸಿದವರಲ್ಲಿ ಖ್ಯಾತ ಕವಿ ಹರಿವಂಶ್ ರೈ ಬಚ್ಚನ್ ಕೂಡ ಒಬ್ಬರು. ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ತಂದೆಯಾಗಿರುವ ಹರಿವಂಶ್ ರೈ ಬಚ್ಚನ್ ಅವರನ್ನು ಸೋನಿಯಾ ಅಂಕಲ್ ಬಚ್ಚನ್ ಎಂದು ಕರೆಯುತ್ತಿದ್ದರು. ಅವರು ಆಗಾಗ ಸ್ವಲ್ಪ ಹಿಂದಿ ಕಲಿಸುತ್ತಿದ್ದರೂ, ಸರಾಗವಾಗಿ ಮಾತನಾಡುವಷ್ಟು ಜ್ಞಾನ ದೊರೆತಿರಲಿಲ್ಲ ಎಂದು ಸೋನಿಯಾ ತಿಳಿಸಿದ್ದಾರೆ.

ರಾಜೀವ್ ಗಾಂಧಿ ಅವರನ್ನು ವಿವಾಹವಾದ ಬಳಿಕ ಹಿಂದಿ ಕಲಿಯುವುದು ಅಗತ್ಯವೆನಿಸಿ ಶಿಕ್ಷಕರೊಬ್ಬರನ್ನು ನೇಮಿಸಿಕೊಂಡರು. ಆದರೆ ಅವರ ಬೋಧನಾ ವಿಧಾನ ಸೂಕ್ತವಾಗಿರಲಿಲ್ಲ. ಹೀಗಾಗಿ ಆ ತರಗತಿಗಳನ್ನು ನಿಲ್ಲಿಸಿ ಮನೆಯ ಸಿಬ್ಬಂದಿಯೊಂದಿಗೆ ಮಾತನಾಡುವ ಮೂಲಕ ಭಾಷೆ ಕಲಿಯಲು ಆರಂಭಿಸಿದರು. ಇಂದಿರಾ ಗಾಂಧಿ ಅವರ ಮನೆಯಲ್ಲಿ ಊಟದ ಮೇಜಿನ ಬಳಿ ಹಿಂದಿಯಲ್ಲೇ ಮಾತನಾಡಬೇಕು ಎಂಬ ನಿಯಮವೂ ಭಾಷೆ ಕಲಿಯಲು ನೆರವಾಯಿತು.

ಸ್ಕೂಟರ್‌ನಲ್ಲಿ ಕುಳಿತು ಹಿಂದಿ ತರಗತಿಗೆ ಪ್ರಯಾಣ

ನಂತರ ದಕ್ಷಿಣ ದೆಹಲಿಯ ಗ್ರೀನ್ ಪಾರ್ಕ್‌ನಲ್ಲಿದ್ದ ಹಿಂದಿ ಶಿಕ್ಷಣ ಸಂಸ್ಥೆಗೆ ಸೇರಿದರು. ಸ್ನೇಹಿತೆ ಸಬೀನಾ ಅವರೊಂದಿಗೆ ಸುಜುಕಿ ಮೊಪೆಡ್‌ನಲ್ಲಿ ಕುಳಿತು ತರಗತಿಗಳಿಗೆ ತೆರಳುತ್ತಿದ್ದ ದಿನಗಳನ್ನು ಆತ್ಮಕಥೆಯಲ್ಲಿ ನೆನಪಿಸಿಕೊಂಡಿದ್ದಾರೆ. ವಾಹನ ದಟ್ಟಣೆಯ ನಡುವೆ ಸಾಗುವುದು ಕೆಲವೊಮ್ಮೆ ಭಯ ಹುಟ್ಟಿಸುತ್ತಿತ್ತು ಎಂದಿದ್ದಾರೆ.

ಅಲ್ಲಿ ಭಾರತದ ವಿವಿಧ ಭಾಗಗಳಿಂದ ಬಂದವರು ಹಾಗೂ ವಿದೇಶಿಗರು ಹಿಂದಿ ಕಲಿಯುತ್ತಿದ್ದರು. ಎಲ್ಲರೂ ವಿಭಿನ್ನ ಉಚ್ಚಾರಣೆಯಲ್ಲಿ ಮಾತನಾಡುವುದನ್ನು ಕಂಡು ಅವರಿಗೆ ಸಮಾಧಾನವಾಗುತ್ತಿತ್ತಂತೆ. ನಂತರ ಅದೇ ಸಂಸ್ಥೆಯಲ್ಲಿ ದೇವನಾಗರಿ ಲಿಪಿ, ವ್ಯಾಕರಣ ಮತ್ತು ಸಂಭಾಷಣಾ ಕೌಶಲಗಳನ್ನು ಕಲಿತರು. ಈ ಕಲಿಕೆ ಮುಂದಿನ ದಿನಗಳಲ್ಲಿ ದೊಡ್ಡ ಸಾರ್ವಜನಿಕ ಸಭೆಗಳಲ್ಲಿ ಹಿಂದಿಯಲ್ಲಿ ಮಾತನಾಡಲು ನೆರವಾಯಿತು ಎಂದು ಅವರು ಹೇಳಿದ್ದಾರೆ.

ಸೋನಿಯಾ ಗಾಂಧಿ ಅವರ ಹಿಂದಿ ಕಲಿಕೆಯ ಪಯಣ ಕೇವಲ ಭಾಷಾ ಅಭ್ಯಾಸವಾಗಿರಲಿಲ್ಲ. ಹೊಸ ದೇಶದಲ್ಲಿ ತಮ್ಮದೇ ಆದ ಗುರುತನ್ನು ರೂಪಿಸಿಕೊಳ್ಳುವ ಮತ್ತು ಜನರೊಂದಿಗೆ ಬೆರೆಯುವ ಪ್ರಯತ್ನವೂ ಆಗಿತ್ತು ಎಂಬುದು ಅವರ ಆತ್ಮಕಥೆಯ ಈ ನೆನಪುಗಳಿಂದ ತಿಳಿದುಬರುತ್ತದೆ