ದಿಮಾಗಿ ನಕ್ಸಲ್ ಅಲ್ಲ, ನೀವು ಶುದ್ದ ನಕ್ಸಲ್: ಪಿ.ಚಿದಂಬರಂ ವಿರುದ್ಧ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ವಾಗ್ದಾಳಿ | CM Himanta Biswa Sarma

ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಪಿ.ಚಿದಂಬರಂ
ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಪಿ.ಚಿದಂಬರಂ
Published on
ಗುವಾಹಟಿ: ಪ್ರಧಾನಿ ಮೋದಿ ಬಳಸಿದ್ದ ದಿಮಾಗಿ ನಕ್ಸಲ್ ಪದಕ್ಕೆ, ಹೌದು ನಾನು ದಿಮಾಗಿ ನಕ್ಸಲ್ ಎಂದು ಕೌಂಟರ್ ನೀಡಿದ್ದ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಗೃಹಸಚಿವ ಪಿ.ಚಿದಂಬರಂ ವಿರುದ್ಧ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ(CM Himanta Biswa Sarma), ನೀವು ಕೇವಲ ದಿಮಾಗಿ ನಕ್ಸಲ್ ಅಲ್ಲ, ಶುದ್ಧ ನಕ್ಸಲ್ ಎಂದು ವಾಗ್ದಾಳಿ ನಡೆಸಿದ್ದಾರೆ.
ದಿಸ್ಪುರದಲ್ಲಿ ಸೋಮವಾರ(ಆ. 17) ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಸಿಎಂ ಶರ್ಮಾ, ಪಿ ಚಿದಂಬರಂ ಕೇವಲ ದಿಮಾಗಿ ನಕ್ಸಲ್' ಅಲ್ಲ, ಅವರು ಶುದ್ಧ ನಕ್ಸಲ್. ತಮ್ಮನ್ನು ತಾವು ದಿಮಾಗಿ ನಕ್ಸಲ್ ಎಂದು ಬಣ್ಣಿಸಿಕೊಂಡಿರುವುದರಿಂದ, ದೇಶದ ಗೃಹ ಸಚಿವರಾಗಿ ಅವರು ಸೇವೆ ಸಲ್ಲಿಸುತ್ತಿದ್ದಾಗ ನಕ್ಸಲ್‌ವಾದದ ವಿರುದ್ಧ ಕ್ರಮ ಕೈಗೊಳ್ಳಲು ಉದ್ದೇಶಪೂರ್ವಕವಾಗಿ ವಿಫಲರಾಗಿದ್ದಾರೆಯೇ ಎಂದು ತನಿಖೆಯಿಂದ ಪರಿಶೀಲಿಸಬೇಕು ಎಂದಿದ್ದಾರೆ.
ಮುಂದುವರೆದು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ದೇಶದಲ್ಲಿನ ಶಾಂತಿಯುತ ವಾತಾವರಣವಿದೆ. ಆದರೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಹತಾಶೆಗೊಂಡಿರುವ ಕಾಂಗ್ರೆಸ್ ಪಕ್ಷವು ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಲು ಬಯಸುತ್ತಿದೆ, ಅದರ ಮೂಲಕ 2029ರಲ್ಲಿ ಅಧಿಕಾರಕ್ಕೆ ಬರಲು ಬಯಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ, ಉಗ್ರಗಾಮಿ ಚಟುವಟಿಕೆಗಳು ಮತ್ತು ಭಯೋತ್ಪಾದನೆಯ ಪ್ರಭಾವವಿದ್ದ ಅಸ್ಸಾಂ ಹಾಗೂ ಇತರ ಪ್ರದೇಶಗಳಲ್ಲಿ ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವವನ್ನು ಶಾಂತಿಯುತವಾಗಿ ಆಚರಿಸುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಆದರೆ ಪ್ರಧಾನಿ ಮೋದಿ ಮತ್ತು ಶಾ ಅವರ ನೇತೃತ್ವದಲ್ಲಿ ನಾವು ಶಾಂತಿಯುತ ಹಾಗೂ ಅಭಿವೃದ್ಧಿಶೀಲ ಭಾರತವನ್ನು ಕಾಣುತ್ತಿದ್ದೇವೆ. ಇದನ್ನು ಕಾಂಗ್ರೆಸ್ ನಾಯಕತ್ವಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಪಿ ಚಿದಂಬರಂ ಹೇಳಿದ್ದೇನು?

ಆಗಸ್ಟ್ 15ರಂದು ಕೆಂಪು ಕೋಟೆಯಿಂದ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಭದ್ರತಾ ಪಡೆಗಳು ಅರಣ್ಯದಿಂದ ಸಶಸ್ತ್ರ ನಕ್ಸಲರನ್ನು ನಿರ್ಮೂಲನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಸಾಮಾಜಿಕ ಜೀವನದಲ್ಲಿ ಅದೇ ಮನಸ್ಥಿತಿ ಹೊಂದಿರುವ ದಿಮಾಗಿ ನಕ್ಸಲರಿದ್ದಾರೆ. ಈ ಹಿಂದೆ ಅವರು ಸರ್ಕಾರಿ ಸಮಿತಿಗಳು ಮತ್ತು ನೀತಿ ನಿರೂಪಣಾ ಸಂಸ್ಥೆಗಳಲ್ಲಿ ಪ್ರಭಾವಿ ಸ್ಥಾನಗಳನ್ನು ಅಲಂಕರಿಸಿದ್ದರು. ಅಂಥವರಿಂದ ಎಚ್ಚರದಿಂದರಬೇಕು ಎಂದು ಹೇಳಿದ್ದರು.
ಬಳಿಕ ಇದಕ್ಕೆ ಕೌಂಟರ್ ನೀಡಿದ್ದ ಪಿ.ಚಿದಂಬರಂ, ತಮ್ಮ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ, ನಾನು ದಿಮಗಿ ನಕ್ಸಲ್ ಎಂದು ಹೆಮ್ಮೆಪಡುತ್ತೇನೆ! ಎಂದು ತಿರುಗೇಟು ನೀಡಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net