ನಮ್ಮ ರೈತರ ಕಾಲುವೆಗೆ ಹನಿ ನೀರಿಲ್ಲ, ತಮಿಳುನಾಡಿಗೆ ತರಾತುರಿ!...ರಾಜ್ಯ ಸರ್ಕಾರದ ವಿರುದ್ಧ ಸಂಸದ ಬೊಮ್ಮಾಯಿ ವಾಗ್ದಾಳಿ | Basavaraj Bommai

Basavaraj Bommai | ನಮ್ಮ ರೈತರ ಕಾಲುವೆಗೆ ಹನಿ ನೀರಿಲ್ಲ, ತಮಿಳುನಾಡಿಗೆ ತರಾತುರಿ!...ರಾಜ್ಯ ಸರ್ಕಾರದ ವಿರುದ್ಧ ಸಂಸದ ಬೊಮ್ಮಾಯಿ ವಾಗ್ದಾಳಿ
Basavaraj Bommai | ನಮ್ಮ ರೈತರ ಕಾಲುವೆಗೆ ಹನಿ ನೀರಿಲ್ಲ, ತಮಿಳುನಾಡಿಗೆ ತರಾತುರಿ!...ರಾಜ್ಯ ಸರ್ಕಾರದ ವಿರುದ್ಧ ಸಂಸದ ಬೊಮ್ಮಾಯಿ ವಾಗ್ದಾಳಿ
Published on

ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮಲೆನಾಡು ಹಾಗೂ ಕೊಡಗು ಭಾಗದಲ್ಲಿ ಸುರಿದ ಮಳೆಯಿಂದಾಗಿ ಜಲಾಶಯಗಳಿಗೆ ಉತ್ತಮ ಪ್ರಮಾಣದ ನೀರು ಹರಿದುಬರುತ್ತಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿಗೆ ತರಾತುರಿಯಲ್ಲಿ ನೀರು ಹರಿಸಿ ಸಾಧನೆ ಎಂದು ಬಿಂಬಿಸಿಕೊಳ್ಳುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಪಕ್ಷದ ನಡೆದ ಕೋರ್ ಕಮಿಟಿ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬೊಮ್ಮಾಯಿ, ಕರ್ನಾಟಕದಲ್ಲಿ ವರುಣದೇವನ ಕೃಪೆಯಿಂದ ಉತ್ತಮ ಮಳೆಯಾಗಿದೆ. ಆದರೆ, ಜಲಾಶಯಗಳು ಭರ್ತಿಯಾಗುವ ಮುನ್ನವೇ ತಮಿಳುನಾಡಿಗೆ ತರಾತುರಿಯಲ್ಲಿ ನೀರು ಹರಿಸಿದೆ. ಏನೇ ಆಗಲಿ ಸುಪ್ರೀಂ ಕೋರ್ಟ್‌ನಲ್ಲಿ ನಮ್ಮ ಪರವಾಗಿ ವಾದ ಮಂಡಿಸಲು ನಮಗೆ ಬಲವಾದ ಅಂಶಗಳು ಲಭ್ಯವಾಗಿವೆ. ಜೂನ್ ಜುಲೈನಲ್ಲಿ ನೀರು ಬಿಡುವುದು ಅಷ್ಟೆ ಅಲ್ಲ, ಸರ್ಕಾರ ಮುಂದಿನ ದಿನಗಳಲ್ಲಿ ಕಾವೇರಿ ನೀರಿನ ನಿರ್ವಹಣೆಯನ್ನು ಹೇಗೆ ಮಾಡುತ್ತದೆ ಎಂಬುದನ್ನು ನಾವು ಕಾದು ನೋಡಬೇಕಿದೆ ಎಂದು ಹೇಳಿದರು.

ರೈತರ ಹಿತಾಸಕ್ತಿ ಕಾಯುವುದು ಮುಖ್ಯ

ರಾಜ್ಯದ ಜನತೆಗೆ ಕುಡಿಯುವ ನೀರು ಒದಗಿಸುವುದು, ಬೆಂಗಳೂರು, ಮಂಡ್ಯ, ಮೈಸೂರು ಭಾಗದ ಕುಡಿಯುವ ನೀರಿನ ಅಗತ್ಯತೆ ಹಾಗೂ ನಮ್ಮ ಮುಂಗಾರು ಬೆಳೆಗೆ ನೀರು ಸುರಕ್ಷಿತವಾಗಿ ಸಿಗುವಂತೆ ಮಾಡುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು ಎಂದಿರುವ ಸಂಸದ ಬೊಮ್ಮಾಯಿ ಅವರು, ತಮಿಳುನಾಡಿನವರು 9500 ಕೇಳಿದ್ದರು, ನಾವು 3500 ಕ್ಯೂಸೆಕ್ಸ್ ಬಿಟ್ಟಿದ್ದೇವೆ ಎನ್ನುವುದು ಹುಡುಗಾಟಿಕೆಯ ಮಾತಾಗಿದ್ದು, ಅದನ್ನೇ ದೊಡ್ಡ ಸಾಧನೆ ಎಂದು ಬಿಂಬಿಸುವ ರಾಜ್ಯ ಸರ್ಕಾರದ ಧೋರಣೆ ಸರಿಯಲ್ಲ. ಇಲ್ಲಿಯವರೆಗೆ ನಮ್ಮ ರೈತರ ಕಾಲುವೆಗಳಿಗೆ ಒಂದು ಹನಿ ನೀರನ್ನೂ ಹರಿಸಿಲ್ಲ. ರೈತರಿಗೆ ನೀರು ಕೊಡದೆ, ಸಾಧನೆ ಮಾಡಿದ್ದೇವೆ ಎಂದು ಬಿಂಬಿಸಿಕೊಳ್ಳುವುದು ಸರಿಯಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಸರ್ಕಾರ ಕೈಗೊಳ್ಳುವ ನಿರ್ಧಾರ ಹಾಗೂ ಸಭೆಯಲ್ಲಿ ಮಂಡಿಸುವ ಪ್ರಸ್ತಾಪಗಳನ್ನು ಗಮನಿಸಿ ಮುಂದಿನ ನಡೆ ತೀರ್ಮಾನಿಸಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net