3 ನಿಮಿಷದಲ್ಲೊಂದು ಕಾನೂನು ಪಾಸ್!...ವಿಪಕ್ಷಗಳಿಗೂ ಗೊತ್ತಾಗದಂತೆ ನಡೆದಿದ್ದೇನು..? ಸ್ಪೀಕರ್ ಭಾಷಣ ಮಾಡದೇ ನಿರ್ಗಮಿಸಿದ್ದೇಕೆ..? | Parliament Monsoon Session

Parliament Monsoon Session
Parliament Monsoon Session
Published on

Parliament Monsoon Session

ಗುರುವಾರ ಬೆಳಿಗ್ಗೆ ಲೋಕಸಭೆಯಲ್ಲಿ ಕಂಡುಬಂದ 3 ನಿಮಿಷ ಹಾಗೂ 10 ಸೆಕೆಂಡ್‌ಗಳ ಸಮಯ ಬಹುಶಃ ಈ ಇಡೀ ಮುಂಗಾರು ಅಧಿವೇಶನದಲ್ಲೇ ಅತ್ಯಂತ ಶಾಂತಿಯುತವಾದ ಕ್ಷಣವಾಗಿತ್ತು ಎಂದರೇ ತಪ್ಪಾಗದು. ರಾಷ್ಟ್ರೀಯ ಗೀತೆ ವಂದೇ ಮಾತರಂ ಪ್ರಸಾರವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲಾ ಸಂಸದರು ಎದ್ದುನಿಂತು ಗೌರವ ಸಲ್ಲಿಸಿದರು. ತಕ್ಷಣವೇ ಸ್ಪೀಕರ್ ಓಂ ಬಿರ್ಲಾ ಅವರು ಕಲಾಪವನ್ನು ಅನಿರ್ದಿಷ್ಟಾವಧಿಗೆ (Sine Die) ಮುಂದೂಡುತ್ತಿರುವುದಾಗಿ ಘೋಷಿಸಿದರು.

ಆದರೆ, ಕಲಾಪ ಆರಂಭವಾಗುವ ಮುನ್ನ ಎಂದಿನ ಗೊಂದಲಮಯ ವಾತಾವರಣವೇ ಇತ್ತು. ಬೆಳಿಗ್ಗೆ 11 ಗಂಟೆಗೆ ಗೃಹ ಸಚಿವ ಅಮಿತ್ ಷಾ ಅವರು ಲೋಕಸಭೆಗೆ ಆಗಮಿಸುತ್ತಿದ್ದಂತೆ, ಪ್ರತಿಪಕ್ಷಗಳ ಸಂಸದರು ಕ್ಷಮೆಯಾಚಿಸಿ, ಕ್ಷಮೆಯಾಚಿಸಿ ಹಾಗೂ ಲಾಠಿಚಾರ್ಜ್‌ಗೆ ಆದೇಶ ನೀಡಿದ್ದು ಯಾರು? ಎಂದು ಜೋರಾಗಿ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಸಂಸದರೂ ಸಹ ಗಲಾಟೆ ಎಬ್ಬಿಸಿದರು. ಅಮಿತ್ ಷಾ ಎಲ್ಲರಿಗೂ ಆಸನಗಳಲ್ಲಿ ಕುಳಿತುಕೊಳ್ಳುವಂತೆ ಸನ್ನೆ ಮಾಡಿದರು. ಆಡಳಿತ ಪಕ್ಷದ ಸಂಸದರು ಕುಳಿತರು, ಆದರೆ ವಿಪಕ್ಷಗಳ ಘೋಷಣೆಗಳನ್ನು ಕಂಡು ಷಾ ಒಂದು ಕ್ಷಣ ಮುಗುಳ್ನಕ್ಕರು.
ಪ್ರಧಾನಿ ನರೇಂದ್ರ ಮೋದಿ ಸದನಕ್ಕೆ ಆಗಮಿಸಿದ ನಂತರ ವಂದೇ ಮಾತರಂ ಧ್ವನಿಸಿತು. ಗೀತೆ ಮುಗಿಯುತ್ತಿದ್ದಂತೆ ಸ್ಪೀಕರ್ ಅನಿರ್ದಿಷ್ಟಾವಧಿ ಮುಂದೂಡಲಾಗಿದೆ ಎಂದು ಸಾರಿದರು. ಈ ಮೂಲಕ ನೀಟ್ ಪೇಪರ್ ಸೋರಿಕೆ ತಡೆ ವಿಧೇಯಕದ ಮೇಲಿನ ಚರ್ಚೆಯನ್ನು ಹೊರತುಪಡಿಸಿ, ಉಳಿದಂತೆ ಘೋಷಣೆಗಳು, ಕಲಾಪಕ್ಕೆ ತಡೆ, ಆರೋಪ-ಪ್ರತ್ಯಾರೋಪಗಳಿಗಷ್ಟೇ ಸೀಮಿತವಾಗಿದ್ದ ಅಧಿವೇಶನಕ್ಕೆ ಅಂತ್ಯಹಾಡಲಾಯಿತು.

ಸ್ಪೀಕರ್ ಭಾಷಣ ಮಾಡದೇ ನಿರ್ಗಮಿಸಿದ್ದೇಕೆ..?

ವಿಶೇಷವೆಂದರೆ, ಪ್ರತಿಯೊಂದು ಅಧಿವೇಶನದ ಅಂತ್ಯದಲ್ಲಿ ಸ್ಪೀಕರ್ ಓಂ ಬಿರ್ಲಾ ಅವರು ಲೋಕಸಭೆಯ ಕಾರ್ಯಕ್ಷಮತೆಯನ್ನು ಉಲ್ಲೇಖಿಸಿ ಓದುತ್ತಿದ್ದ ವಾಡಿಕೆಯ ಸಮಾರೋಪ ಭಾಷಣವನ್ನು ಈ ಬಾರಿ ಓದಲೇ ಇಲ್ಲ. ಏಕೆಂದರೆ ಹೇಳಿಕೊಳ್ಳಲು ಹೆಚ್ಚಿನ ಸಾಧನೆಗಳೇ ಇರಲಿಲ್ಲ.
ಜುಲೈ 20 ರಂದು ಪ್ರಾರಂಭವಾದ ಈ ಅಧಿವೇಶನದಲ್ಲಿ ಮೊದಲು ನೀಟ್ ಪೇಪರ್ ಸೋರಿಕೆ ಪ್ರಕರಣ, ನಂತರ ಅಯೋಧ್ಯೆಯ ರಾಮಮಂದಿರ ದೇಣಿಗೆ ಕಳವು ಆರೋಪದ ಮೇಲೆ ವಿಪಕ್ಷಗಳು ನಿರಂತರವಾಗಿ ಕಲಾಪವನ್ನು ತಡೆದು ಪ್ರತಿಭಟಿಸಿದವು. ಜುಲೈ 20 ರಂದು ರಾಜಧಾನಿಯಲ್ಲಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದಾಳಿಯ ಬಗ್ಗೆ ಅಮಿತ್ ಷಾ ಸದನದಲ್ಲಿ ಉತ್ತರ ನೀಡಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದವು.
ನಿನ್ನೆ (ಬುಧವಾರ) ಗೃಹ ಸಚಿವ ಅಮಿತ್ ಷಾ ವಿದ್ಯಾರ್ಥಿಗಳ ವಿಷಯದ ಕುರಿತು ಚರ್ಚೆಗೆ ಸಿದ್ಧವಿದ್ದು, ವಿಪಕ್ಷಗಳ ಪ್ರತಿಯೊಂದು ಪ್ರಶ್ನೆಗೂ ಉತ್ತರಿಸುವುದಾಗಿ ಹೇಳಿದ್ದರು. ಸ್ಪೀಕರ್ ಪ್ರತಿಪಕ್ಷಗಳೊಂದಿಗೆ ಚರ್ಚಿಸಿ ಸಮಯ ನಿಗದಿಪಡಿಸುವಂತೆ ಮನವಿ ಮಾಡಿದ್ದರು. ಆದರೆ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದ ವಿಪಕ್ಷಗಳು, ನೇರವಾಗಿ ಷಾ ರಾಜೀನಾಮೆಗೆ ಪಟ್ಟು ಹಿಡಿದವು. ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಲು ಆದೇಶ ನೀಡಿದ್ದು ಯಾರು..? ದೆಹಲಿ ಪೊಲೀಸ್ ಮತ್ತು ಆರ್​ಎಎಫ್​ ಗೃಹ ಸಚಿವಾಲಯದ ಅಡಿಯಲ್ಲಿ ಬರುತ್ತವೆ. ಅಮಿತ್ ಷಾ ಆದೇಶ ನೀಡಿದ್ದರೆ ಅವರು ಅಪರಾಧಿ, ಆದೇಶ ನೀಡದಿದ್ದರೆ ಅವರು ಅಸಮರ್ಥ. ಎರಡೂ ಸಂದರ್ಭಗಳಲ್ಲೂ ಅವರು ರಾಜೀನಾಮೆ ನೀಡಬೇಕು ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

ಸ್ಪೀಕರ್ ಚಹಾಕೂಟಕ್ಕೆ ವಿಪಕ್ಷಗಳ ಬಹಿಷ್ಕಾರ!

ಕಲಾಪ ಮುಗಿದ ಬಳಿಕ ಲೋಕಸಭಾ ಸ್ಪೀಕರ್ ಅವರು ಆಯೋಜಿಸಿದ್ದ ಸಾಂಪ್ರದಾಯಿಕ ಚಹಾ ಕೂಟವನ್ನು ಇಂಡಿಯಾ ಮೈತ್ರಿಕೂಟದ ನಾಯಕರು ಬಹಿಷ್ಕರಿಸಿದರು. ಪ್ರಧಾನಿ ಮೋದಿ ಸೇರಿದಂತೆ ಹಿರಿಯ ಎನ್‌ಡಿಎ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು. ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದರಾದ ಪ್ರಿಯಾಂಕಾ ಗಾಂಧಿ ಮತ್ತು ಕೆ ಸಿ ವೇಣುಗೋಪಾಲ್ ಅವರನ್ನು ಸಭೆಗೆ ಬರುವಂತೆ ಮನವೊಲಿಸಲು ಯತ್ನಿಸಿದರೂ, ಅವರು ನಿರಾಕರಿಸಿ ಮಲ್ಲಿಕಾರ್ಜುನ ಖರ್ಗೆ ಕಚೇರಿಗೆ ತೆರಳಿದರು ಎಂದು ತಿಳಿದುಬಂದಿದೆ.
ದಾಖಲೆಗಳ ಪ್ರಕಾರ, ಈ ಮುಂಗಾರು ಅಧಿವೇಶನದಲ್ಲಿ ಲೋಕಸಭೆಯು 11 ವಿಧೇಯಕಗಳನ್ನು ಪಾಸ್ ಮಾಡಿದೆ. ಆದರೆ ಪೇಪರ್ ಸೋರಿಕೆ ತಡೆ ಕಾಯ್ದೆಯನ್ನು ಹೊರತುಪಡಿಸಿ, ಉಳಿದೆಲ್ಲಾ ಮಸೂದೆಗಳನ್ನು ಗದ್ದಲದ ನಡುವೆಯೇ ಯಾವುದೇ ಚರ್ಚೆಯಿಲ್ಲದೆ ತರಾತುರಿಯಲ್ಲಿ ಅಂಗೀಕರಿಸಲಾಯಿತು. ಹೆಚ್ಚಿನ ಮಸೂದೆಗಳನ್ನು ವಿಪಕ್ಷಗಳ ಘೋಷಣೆಗಳ ನಡುವೆಯೇ ಕೆಲವೇ ನಿಮಿಷಗಳಲ್ಲಿ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.
ಪೇಪರ್ ಸೋರಿಕೆ ತಡೆ ಕಾಯ್ದೆಯ ಕುರಿತು ಲೋಕಸಭೆಯು ಸುಮಾರು 11 ಗಂಟೆಗಳ ಕಾಲ ಚರ್ಚೆ ನಡೆಸಿದ್ದರೆ, ಉಳಿದ ಮಸೂದೆಗಳು ಅಂಗೀಕಾರಗೊಂಡ ಕಾಲಾವಧಿ ಹೀಗಿದೆ.
  • ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ (ತಿದ್ದುಪಡಿ) ವಿಧೇಯಕ, 2026: 14 ನಿಮಿಷಗಳಲ್ಲಿ ಅಂಗೀಕಾರ.
  • ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ವಿಧೇಯಕ, 2026: 4 ನಿಮಿಷಗಳಲ್ಲಿ ಅಂಗೀಕಾರ.
  • ಸುಪ್ರೀಂ ಕೋರ್ಟ್ (ನ್ಯಾಯಾಧೀಶರ ಸಂಖ್ಯೆ) ತಿದ್ದುಪಡಿ ವಿಧೇಯಕ, 2026: 4 ನಿಮಿಷಗಳಲ್ಲಿ ಅಂಗೀಕಾರ.
  • ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ, 2026: 3 ನಿಮಿಷಗಳಲ್ಲಿ ಅಂಗೀಕಾರ.
  • ತೆರಿಗೆ ಮತ್ತು ಇತರ ಕಾನೂನುಗಳ (ತಿದ್ದುಪಡಿ) ವಿಧೇಯಕ, 2026: 3 ನಿಮಿಷಗಳಲ್ಲಿ ಅಂಗೀಕಾರ.
  • ಬ್ಯಾಂಕರ್‌ಗಳ ಪುಸ್ತಕಗಳ ಸಾಕ್ಷ್ಯ ವಿಧೇಯಕ, 2026: 5 ನಿಮಿಷಗಳಲ್ಲಿ ಅಂಗೀಕಾರ.
  • ನ್ಯಾಯಾಧಿಕಾರಗಳ ಸುಧಾರಣಾ ವಿಧೇಯಕ, 2026: 12 ನಿಮಿಷಗಳಲ್ಲಿ ಅಂಗೀಕಾರ.
  • ಕೇರಳ (ಹೆಸರು ಬದಲಾವಣೆ) ವಿಧೇಯಕ, 2026: 4 ನಿಮಿಷಗಳಲ್ಲಿ ಅಂಗೀಕಾರ.
  • ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (ತಿದ್ದುಪಡಿ) ವಿಧೇಯಕ, 2026: 10 ನಿಮಿಷಗಳಲ್ಲಿ ಅಂಗೀಕಾರ.
  • ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ವಿಧೇಯಕ, 2026: 5 ನಿಮಿಷಗಳಲ್ಲಿ ಅಂಗೀಕಾರ.

ಬುಧವಾರದಂದು, ಎಫ್​ಸಿಆರ್​ಎ ತಿದ್ದುಪಡಿ ವಿಧೇಯಕ, 2026 ಅನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸುವ ಪ್ರಸ್ತಾವನೆಯನ್ನು ಸರ್ಕಾರ ಮಂಡಿಸಿದಾಗಲೂ ಕೆಲ ನಿಮಿಷಗಳ ಕಾಲ ಬಿಸಿಯೇರಿದ ವಾತಾವರಣವಿತ್ತು. ಕಾಂಗ್ರೆಸ್ ಮತ್ತು ಸಮಾಜವಾದಿ ಪಾರ್ಟಿ ನೇತೃತ್ವದ ವಿಪಕ್ಷಗಳು ಈ ವಿಧೇಯಕವು ಅಲ್ಪಸಂಖ್ಯಾತರು ಮತ್ತು ಎನ್‌ಜಿಒಗಳ ವಿರೋಧಿಯಾಗಿದೆ ಎಂದು ಹಿಂಪಡೆಯಲು ಆಗ್ರಹಿಸಿದವು. ಆದರೆ ಸರ್ಕಾರ ಈ ಆರೋಪವನ್ನು ತಳ್ಳಿಹಾಕಿ, ವಿಧೇಯಕವನ್ನು ಜೆಪಿಸಿಗೆ ಕಳುಹಿಸಿತು.

ಅಧಿವೇಶನದ ಕೊನೆಯ ದಿನದಂದು ಸಂಸತ್ ಸಂಕೀರ್ಣದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಜಿದ್ದಾಜಿದ್ದಿನ ಪ್ರತಿಭಟನೆಗಳೂ ನಡೆದವು. ಇಂಡಿಯಾ ಒಕ್ಕೂಟವು ಅಮಿತ್ ಷಾ ರಾಜೀನಾಮೆಗೆ ಪಟ್ಟು ಹಿಡಿದು ಮತ್ತು ರಾಮಮಂದಿರ ದೇಣಿಗೆ ವಿಷಯವನ್ನು ಎತ್ತಿ ಪ್ರತಿಭಟಿಸಿದರೆ, ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟವು ಜಾರ್ಖಂಡ್‌ನಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮವನ್ನು ಖಂಡಿಸಿ, ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ಪ್ರತಿಭಟನೆ ನಡೆಸಿತು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net