ನೀರಲ್ಲ... ಪೆಟ್ರೋಲು! ಬೆಲೆ ಏರಿಕೆ ಭಯಕ್ಕೆ ಬಂಕ್​ಗೆ ನೀರಿನ ಟ್ಯಾಂಕರ್ ತಂದ ಪುಣ್ಯಾತ್ಮ! | Petrol

Petrol
Petrol
Published on
ನವದೆಹಲಿ: ದೇಶದಲ್ಲಿ ಇಂಧನ(Petrol) ಅಭಾವ ಉಂಟಾಗಲಿದೆ ಎಂಬ ಸುಳ್ಳು ವದಂತಿಗಳಿಗೆ ಕಿವಿಗೊಟ್ಟಿರುವ ಸಾರ್ವಜನಿಕರು ಆತಂಕದಿಂದ ಪೆಟ್ರೋಲ್ ಮತ್ತು ಡೀಸೆಲ್ ಸಂಗ್ರಹಿಸಲು ಮುಂದಾಗುತ್ತಿರುವುದು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಹೌದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ವ್ಯಕ್ತಿಯೊಬ್ಬ ನೀರಿನ ಟ್ಯಾಂಕರ್‌ಗೆ (Water Tanker) ಸಾವಿರಾರು ಲೀಟರ್ ಪೆಟ್ರೋಲ್​​ ತುಂಬಿಸುತ್ತಿರುವ ದೃಶ್ಯ ಕಂಡುಬಂದಿದ್ದು, ಇಂಟರ್ನೆಟ್ ಬಳಕೆದಾರರು ಹುಬ್ಬೆರುವಂತೆ ಮಾಡಿದೆ.
ಮಧ್ಯಪ್ರಾಚ್ಯದಲ್ಲಿ (Middle East) ಹೆಚ್ಚುತ್ತಿರುವ ಯುದ್ಧದ ಉದ್ವಿಗ್ನತೆಯಿಂದಾಗಿ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ಸ್ಥಗಿತಗೊಳ್ಳಬಹುದು ಅಥವಾ ಬೆಲೆ ಗಗನಕ್ಕೇರಬಹುದು ಎಂಬ ವದಂತಿಗಳು ಹಬ್ಬಿವೆ. ಈ ಹಿನ್ನೆಲೆಯಲ್ಲಿ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಜನ ಸಾಮಾನ್ಯರು ಪೆಟ್ರೋಲ್ ಬಂಕ್‌ಗಳ ಮುಂದೆ ಮುಗಿಬೀಳುತ್ತಿದ್ದಾರೆ. ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಸುಮಾರು 5,000 ಲೀಟರ್‌ಗಳಷ್ಟು ಇಂಧನವನ್ನು(ಪೆಟ್ರೋಲ್​) ಟ್ಯಾಂಕರ್ ಒಂದಕ್ಕೆ ತುಂಬಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇದು ಕೇವಲ ಒಬ್ಬ ವ್ಯಕ್ತಿಯಲ್ಲ, ಇಂತಹ ಹತ್ತಾರು ಪ್ರಕರಣಗಳು ವರದಿಯಾಗುತ್ತಿವೆ.
ಸರ್ಕಾರದ ಸ್ಪಷ್ಟನೆ: ಈ ಆತಂಕದ ನಡುವೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹಾಗೂ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ (PIB) ಅಧಿಕೃತ ಪ್ರಕಟಣೆ ಹೊರಡಿಸಿವೆ. "ದೇಶದಲ್ಲಿ ಇಂಧನ ಕೊರತೆಯಿಲ್ಲ. ಮುಂದಿನ 50 ರಿಂದ 60 ದಿನಗಳವರೆಗೆ ಸಾಕಾಗುವಷ್ಟು ಇಂಧನ ಸಂಗ್ರಹ ನಮ್ಮಲ್ಲಿದೆ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು ಮತ್ತು ಪ್ಯಾನಿಕ್ ಬೈಯಿಂಗ್ (Panic Buying) ಮಾಡಬಾರದು," ಎಂದು ಸರ್ಕಾರ ಮನವಿ ಮಾಡಿದೆ.
ಇದು ಏಕೆ ಅಪಾಯಕಾರಿ?
ಸಾಮಾನ್ಯ ನೀರಿನ ಟ್ಯಾಂಕರ್‌ಗಳು ಇಂಧನ ಸಾಗಿಸಲು ವಿನ್ಯಾಸಗೊಳಿಸಲಾದವುಗಳಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಸಾಗಿಸಲು ವಿಶೇಷವಾದ ಅಲ್ಯೂಮಿನಿಯಂ ಅಥವಾ ಸ್ಟೀಲ್ ಟ್ಯಾಂಕರ್‌ಗಳು ಬೇಕಾಗುತ್ತವೆ, ಇವುಗಳಲ್ಲಿ ಬೆಂಕಿ ನಂದಿಸುವ ಮತ್ತು ಸ್ಥಿರ ವಿದ್ಯುತ್ (Static Electricity) ತಡೆಗಟ್ಟುವ ವ್ಯವಸ್ಥೆ ಇರುತ್ತದೆ. ನೀರಿನ ಟ್ಯಾಂಕರ್‌ನಲ್ಲಿ ಪೆಟ್ರೋಲ್ ಸಾಗಿಸುವುದು ಭೀಕರ ಸ್ಫೋಟಕ್ಕೆ ಕಾರಣವಾಗಬಹುದು.ಅಲ್ಲದೆ, ಒಬ್ಬ ವ್ಯಕ್ತಿ 5,000 ಲೀಟರ್ ಸಂಗ್ರಹಿಸಿದರೆ, ನೂರಾರು ಜನರಿಗೆ ಇಂಧನ ಸಿಗದಂತಾಗುತ್ತದೆ. ಇಂಧನವನ್ನು ಅನಧಿಕೃತವಾಗಿ ಸಂಗ್ರಹಿಸುವುದು ಮತ್ತು ಕಪ್ಪು ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದು ಕಠಿಣ ಶಿಕ್ಷಾರ್ಹ ಅಪರಾಧವಾಗಿದೆ.

ನೆಟ್ಟಿಗರ ಆಕ್ರೋಶ

"ನಮಗೆ ಪೆಟ್ರೋಲ್ ಬಂಕ್‌ನಲ್ಲಿ ಬಾಟಲಿಗಳಲ್ಲಿ ಪೆಟ್ರೋಲ್ ನೀಡಲು ಅನುಮತಿ ಇಲ್ಲ, ಆದರೆ ಇಲ್ಲಿ ಇಡೀ ಟ್ಯಾಂಕರ್‌ಗೇ ತುಂಬಿಸಲಾಗುತ್ತಿದೆ. ಬಂಕ್ ಮಾಲೀಕರ ವಿರುದ್ಧ ಮತ್ತು ಈ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು," ಎಂದು ಜನರು ಎಕ್ಸ್ (X) ನಲ್ಲಿ ಆಗ್ರಹಿಸಿದ್ದಾರೆ. ಈ ಹಿಂದೆ ಪಂಜಾಬ್‌ನಲ್ಲೂ ಇಂತಹದ್ದೇ ಒಂದು ಘಟನೆ ನಡೆದಿದ್ದು, ಸುಮಾರು 1,000 ಲೀಟರ್ ಡೀಸೆಲ್ ಅನ್ನು ನೀರಿನ ತೊಟ್ಟಿಗೆ ತುಂಬಿಸಲಾಗಿತ್ತು,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net