ದೇಶದಲ್ಲಿ ಶೀಘ್ರದಲ್ಲೇ E25 ಪೆಟ್ರೋಲ್ ಜಾರಿ ಮಾಡುವ ಪ್ರಸ್ತಾಪ ಇಲ್ಲ; ವದಂತಿಗೆ ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ | E25 petrol

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ನವದೆಹಲಿ: ದೇಶಾದ್ಯಂತ ಶೀಘ್ರದಲ್ಲೇ 25 ಪ್ರತಿಶತ ಎಥೆನಾಲ್​ನೊಂದಿಗೆ ಬೆರೆಸಿದ E25 ಪೆಟ್ರೋಲ್(E25 petrol) ಅನ್ನು ಪರಿಚಯಿಸಲಾಗುವುದು ಎಂಬ ಸುದ್ದಿಯನ್ನು ಅಲ್ಲಗೆಳೆದಿರುವ ಕೇಂದ್ರ ಸರ್ಕಾರ, ಪ್ರಸ್ತುತ ಅಂತಹ ಯಾವುದೇ ಪ್ರಸ್ತಾಪವು ನಮ್ಮ ಮುಂದಿಲ್ಲ. ತಕ್ಷಣಕ್ಕೆ E25 ಲಭ್ಯವಾಗುವಂತೆ ಮಾಡಲಾಗ್ತಿದೆ ಎಂಬ ಪ್ರಚಾರದಲ್ಲಿ ಸತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು, ವಾಹನ ಚಾಲಕರ ಕಳವಳಗಳನ್ನು ಪರಿಹರಿಸಲು ಪ್ರಯತ್ನಿಸಿದ್ದಾರೆ. ವಿವಿಧ ವಾಹನ ಮಾದರಿಗಳಲ್ಲಿ E25 ಮಿಶ್ರಣದ ಸೂಕ್ತತೆಯ ಕುರಿತು ಪರೀಕ್ಷೆಗಳು ಪ್ರಸ್ತುತ ನಡೆಯುತ್ತಿವೆ. ಸಂಪೂರ್ಣ ಅದರ ಪರಿಣಾಮದ ವರದಿಗಳನ್ನು ಸ್ವೀಕರಿಸಿದ ನಂತರವೇ ನಿರ್ಧಾರ ತೆಗೆದುಕೊಳ್ಳಲಾಗುವುದು. ಪ್ರಸ್ತುತ ದೇಶಾದ್ಯಂತ ಲಭ್ಯವಿರುವ E20 (ಶೇಕಡಾ 20 ಎಥೆನಾಲ್) ಪೆಟ್ರೋಲ್ ಸುರಕ್ಷಿತವಾಗಿದೆ. ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ್ದಾರೆ.
ಕಚ್ಚಾ ತೈಲ ಆಮದು ಕಡಿಮೆ ಮಾಡುವುದು, ಪರಿಸರವನ್ನು ರಕ್ಷಿಸುವುದು ಮತ್ತು ಕಬ್ಬು ಬೆಳೆಯುವ ರೈತರನ್ನು ಬೆಂಬಲಿಸುವ ಉದ್ದೇಶಗಳೊಂದಿಗೆ ಎಥೆನಾಲ್ ಮಿಶ್ರಣ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರವು ಉತ್ತೇಜಿಸುತ್ತಿದೆ ಎನ್ನಲಾಗಿದೆ. ಭಾರತದಲ್ಲಿ ಈಗಾಗಲೇ E20 ಪೆಟ್ರೋಲ್ ಪರಿಚಯ ಮಾಡಲಾಗಿದೆ. E20 ಪೆಟ್ರೋಲ್ ಬಳಕೆಯಿಂದಾಗಿ ಹಳೆಯ ವಾಹನ ಎಂಜಿನ್‌ಗಳ ಕಡಿಮೆ ಮೈಲೇಜ್ ಮತ್ತು ಕಳಪೆ ಕಾರ್ಯಕ್ಷಮತೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕಳವಳ ವ್ಯಕ್ತವಾಗುತ್ತಿದೆ.
ಈ ಸಂದರ್ಭದಲ್ಲಿ, E25 ಆಗಮನದ ಸುದ್ದಿ ವಾಹನ ಚಾಲಕರಲ್ಲಿ ಮತ್ತಷ್ಟು ಕಳವಳವನ್ನು ಹೆಚ್ಚಿಸಿತು. E20 ಪೆಟ್ರೋಲ್ ಅನುಷ್ಠಾನದ ನಂತರ, ಕೇಂದ್ರ ಸರ್ಕಾರವು ಈಗ E21 ಮತ್ತು E25 ಪೆಟ್ರೋಲ್ ಜಾರಿಗೊಳಿಸುವ ಬಗ್ಗೆ ಗಮನ ಹರಿಸಿದ್ದು, ಯೋಜನೆಯ ಪ್ರಕಾರ, 2027ರ ವೇಳೆಗೆ ದೇಶದಲ್ಲಿ E21 ಮತ್ತು 2029ರ ವೇಳೆಗೆ E25 ಪೆಟ್ರೋಲ್ ಪರಿಚಯಿಸುವ ಸಾಧ್ಯತೆಯನ್ನು ಪರಿಗಣಿಸುತ್ತಿದೆ ಎಂದು ಸುದ್ದಿ ಹರಡಿತ್ತು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net