ನೋ ನೆಟ್​​ವರ್ಕ್​ ಜೋನ್​ಗೆ ಲಗ್ಗೆ; ಯುವ ಪೀಳಿಗೆಯ ಹೊಸ ಟ್ರೆಂಡ್

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ತಂತ್ರಜ್ಞಾನದ ಅತಿಯಾದ ಅವಲಂಬನೆ ಮನುಷ್ಯನ ನೆಮ್ಮದಿಯನ್ನು ಕೆಡಿಸುತ್ತಿದೆ. ದಿನದಿಂದ ದಿನಕ್ಕೆ ಸ್ಕ್ರೀನ್ ಟೈಮ್ ಹೆಚ್ಚುತ್ತಿದ್ದು, ಇದು ಉದ್ವಿಗ್ನತೆ, ಅನಗತ್ಯ ಕಿರಿಕಿರಿ ಮತ್ತು ಒತ್ತಡವನ್ನು ಸೃಷ್ಟಿಸುತ್ತಿದೆ. ಇದರಿಂದ ಒಂದಿಷ್ಟು ದಿನಗಳಾದರೂ ಹೊರಬಂದರೆ ಮನಸ್ಸು ಚೇತೋಹಾರಿಯಾಗುತ್ತದೆ. ಮಾನಸಿಕ ಸ್ವಾಸ್ಥ್ಯ ಸುಧಾರಿಸುತ್ತದೆ. ಈ ನಿಟ್ಟಿನಲ್ಲಿ ಜೆನ್ ಝಿ ಪೀಳಿಗೆ ಆಯ್ಕೆ ಮಾಡಿಕೊಂಡಿರುವ ತಂತ್ರವೇ ಕೆಲ ದಿನಗಳ ಕಾಲ ಸ್ಮಾರ್ಟ್ ಫೋನ್, ಲ್ಯಾಪ್​ಟಾಪ್, ಇಂಟರ್​ನೆಟ್​ನಿಂದ ದೂರವಿರುವುದು. ಇದಕ್ಕಾಗಿ ಇಂಟರ್​ನೆಟ್ ಸಂಪರ್ಕ ಇಲ್ಲದ ನಿಸರ್ಗರಮ್ಯ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಇನ್ನು ಕೆಲವರು ಮನೆಯಲ್ಲಿದ್ದುಕೊಂಡೇ ‘ಡಿಜಿಟಲ್ ಉಪವಾಸ’ವನ್ನು ಕಠಿಣ ವ್ರತದಂತೆ ಆಚರಿಸುತ್ತಿದ್ದಾರೆ. ಇಂದಿನ ದಿನಗಳಲ್ಲಿ ಇಂಥದ್ದೊಂದು ಪುಟ್ಟ ಬ್ರೇಕ್ ಅನಿವಾರ್ಯ ಮತ್ತು ಇಂಟರ್​ನೆಟ್, ಸಾಮಾಜಿಕ ಮಾಧ್ಯಮಗಳ ಆಚೆ ವಾಸ್ತವದ ಬದುಕಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎನ್ನುವ ಮನೋವೈಜ್ಞಾನಿಕರು, ಈ ಮೂಲಕ ಜೀವನದ ಕ್ಷಣಗಳನ್ನು ಸಂಭ್ರಮಿಸಲು ಮುಂದಾಗಿ ಎಂದಿದ್ದಾರೆ.

ಡಿಜಿಟಲ್ ಜಗತ್ತಿನ ಕನೆಕ್ಟಿವಿಟಿಯಿಂದ ಬೇಸತ್ತಿರುವ ಇಂದಿನ ಯುವ ಪೀಳಿಗೆ (ಜೆನ್ ಝಿ) ಮತ್ತು ಉದ್ಯೋಗಿಗಳಿಗೆ ಈಗ ನೋ ನೆಟ್​ವರ್ಕ್ ಜೋನ್​ಗಳು ಹೊಸ ಆಕರ್ಷಣೆಯಾಗಿ ಮಾರ್ಪಟ್ಟಿವೆ. ಸದಾ ನೋಟಿಫಿಕೇಶನ್​ಗಳು, ಇ-ಮೇಲ್​ಗಳು, ವಾಟ್ಸ್​ಆಪ್ ಮೆಸೇಜ್​ಗಳು ಮತ್ತು ಸೋಶಿಯಲ್ ಮೀಡಿಯಾ ರೀಲ್ಸ್​ಗಳಲ್ಲೇ ಮುಳುಗಿರುವ ಜನರಿಗೆ ಫೋನ್ ಸಿಗ್ನಲ್ ಇಲ್ಲದ ಜಾಗಗಳು ನೆಮ್ಮದಿಯ ತಾಣಗಳಾಗಿ ಕಾಣಿಸುತ್ತಿವೆ. ಇದನ್ನು ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಡಿಟಾಕ್ಸ್ ಟ್ರೆಂಡ್ ಎಂದೂ ಕರೆಯಲಾಗುತ್ತಿದೆ. ಈ ಬಗೆಯ ಹೋಂಸ್ಟೇಗಳಲ್ಲಿ ವೈ-ಫೈ ಇರುವುದಿಲ್ಲ ಮತ್ತು ಮೊಬೈಲ್ ಫೋನ್ ಸಿಗ್ನಲ್ ಕೂಡ ಸಿಗುವುದಿಲ್ಲ. ಕೆಲವು ರೆಸಾರ್ಟ್​ಗಳು ಪ್ರವಾಸಿಗರು ಒಳಗೆ ಬರುವಾಗಲೇ ಅವರ ಫೋನ್​ಗಳನ್ನು ಲಾಕರ್​ನಲ್ಲಿ ಇಟ್ಟುಕೊಳ್ಳುವ ನಿಯಮ ಜಾರಿಗೆ ತಂದಿವೆ. ಫೋನ್ ಬದಲಿಗೆ ಪುಸ್ತಕ ಓದುವುದು, ಟ್ರೆಕ್ಕಿಂಗ್, ಕರಕುಶಲ ಕಲೆ, ಯೋಗ ಮತ್ತು ನಕ್ಷತ್ರ ವೀಕ್ಷಣೆಯಂತಹ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ. ಕೆಲವು ರೆಸ್ಟೋರೆಂಟ್​ಗಳು ಸಹ ಗ್ರಾಹಕರು ಮೊಬೈಲ್ ಫೋನ್ ಬಳಸದೆ/ವೀಕ್ಷಿಸದೆ ಊಟ ಮಾಡಿದರೆ, ಶೇಕಡ 5ರಿಂದ 10ರಷ್ಟು ರಿಯಾಯಿತಿ ನೀಡುತ್ತಿವೆ. ಹೀಗೆ ಮಾಡುವುದರಿಂದ ಊಟ/ತಿಂಡಿಯ ಸ್ವಾದ ಸವಿಯಲು ಸಾಧ್ಯವಾಗುತ್ತದೆ. ರುಚಿಗೆ ಮನಸೋತು ಗ್ರಾಹಕರು ಮತ್ತೆ ಮತ್ತೆ ಬರುತ್ತಾರೆ ಎಂಬುದು ರೆಸ್ಟೋರೆಂಟ್ ಮಾಲೀಕರ ಅನಿಸಿಕೆ. ಒಂದು ವೇಳೆ ಸ್ಮಾರ್ಟ್ ಫೋನ್ ನೋಡುತ್ತ, ರೀಲ್ ಸ್ಕ್ರಾಲ್​ ಮಾಡುತ್ತ ಊಟ ಮಾಡಿದರೆ ಗ್ರಾಹಕರಿಗೆ ರುಚಿ ಮತ್ತು ನಮ್ಮ ಬಾಣಸಿಗರ ಶ್ರಮ ಎರಡೂ ಅರ್ಥವಾಗುವುದಿಲ್ಲ ಎನ್ನುತ್ತಾರೆ.

ಪ್ರವಾಸೋದ್ಯಮದಲ್ಲಂತೂ ‘ಮೊಬೈಲ್ ಫೋನ್ ಮುಕ್ತ ವಲಯ’ ಜನಪ್ರಿಯವಾಗಿದ್ದು, ಈ ಮೂಲಕ ನಿಸರ್ಗರಮ್ಯ ತಾಣಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚುತ್ತಿದೆ. ಒಂದು ಕಾಲದಲ್ಲಿ ಮೊಬೈಲ್ ಸಿಗ್ನಲ್ ಸಿಗದೇ ಇರುವುದು ಮೂಲಸೌಕರ್ಯದ ಕೊರತೆ ಎಂದು ಪರಿಗಣಿತವಾಗುತ್ತಿತ್ತು. ಆದರೆ ಇಂದು ಅದೇ ಕೊರತೆಯೇ ಒಂದು ಐಷಾರಾಮಿ ಸೌಲಭ್ಯವಾಗಿ ಮಾರ್ಪಟ್ಟಿದೆ! ಭಾರತದಲ್ಲಿ ವಿಶೇಷವಾಗಿ ಬೆಂಗಳೂರು, ಮುಂಬೈ, ದೆಹಲಿ, ಚೆನ್ನೈಯಂತಹ ಮೆಟ್ರೋ ಸಿಟಿಗಳ ಐಟಿ ಉದ್ಯೋಗಿಗಳು ಮತ್ತು 90ರ ದಶಕದ ಕೊನೆಯಲ್ಲಿ ಹುಟ್ಟಿದ ಜೆನ್ ಝಿ ಯುವಕ- ಯುವತಿಯರು ಈ ಟ್ರೆಂಡ್​ನ ಮುಂಚೂಣಿಯಲ್ಲಿದ್ದಾರೆ. ವರ್ಕ್ ಫ್ರಂ ಹೋಮ್ ಅಥವಾ ಹೈಬ್ರಿಡ್ ಮಾದರಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ವೈಯಕ್ತಿಕ ಜೀವನ ಮತ್ತು ಕಚೇರಿ ಜೀವನದ ನಡುವಿನ ಗೆರೆ ಅಸ್ಪಷ್ಟವಾಗಿದೆ. ವೀಕೆಂಡ್​ಗಳಲ್ಲೂ ಕಚೇರಿ ಕೆಲಸದ ಒತ್ತಡ ಇರುವುದರಿಂದ, ಇಷ್ಟಪಟ್ಟು ನೆಟ್​ವರ್ಕ್ ಇಲ್ಲದ ಜಾಗಗಳಿಗೆ ಇವರು ಪ್ರವಾಸ ಹೋಗುತ್ತಿದ್ದಾರೆ ಮತ್ತು ನಿಜಕ್ಕೂ ಇದೊಂದು ಚೇತೋಹಾರಿ ಅನುಭವ ಎಂದು ಬಣ್ಣಿಸುತ್ತಿದ್ದಾರೆ. ನೋ ಮೊಬೈಲ್ ಜೋನ್ ಎಂಬುದು ತಂತ್ರಜ್ಞಾನದ ವಿರೋಧಿ ಅಲೆಯಲ್ಲ; ಬದಲಿಗೆ ತಂತ್ರಜ್ಞಾನ ನಮ್ಮನ್ನು ನಿಯಂತ್ರಿಸಬಾರದು, ನಾವೇ ತಂತ್ರಜ್ಞಾನವನ್ನು ನಿಯಂತ್ರಿಸಬೇಕು ಎಂಬ ಅರಿವಿನಿಂದ ಮೂಡಿಬಂದಿರುವ ಅದ್ಭುತ ಹೆಜ್ಜೆಯಾಗಿದೆ. ಇದು ಜನರಿಗೆ ವರ್ಚುವಲ್ ಜಗತ್ತಿನಿಂದ ಹೊರಬಂದು, ನೈಜ ಜಗತ್ತಿನಲ್ಲಿ ಬದುಕಲು ಅನುವು ಮಾಡಿಕೊಡುತ್ತಿದೆ.

ಜೆನ್​ ಝಿ ಚಿತ್ತ ನೆಮ್ಮದಿಯತ್ತ

ಮಾನಸಿಕ ಆರೋಗ್ಯಕ್ಕೆ ಜೆನ್ ಝಿ ಪೀಳಿಗೆ ಆದ್ಯತೆ ನೀಡುತ್ತಿದೆ. ನೆಮ್ಮದಿಯೇ ಪ್ರಧಾನ ಎಂದು ಅರ್ಥ ಮಾಡಿಕೊಳ್ಳುತ್ತಿದೆ. ಕೆಲವು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದಾಗಿ ಯುವಕರಲ್ಲಿ FOMO (Fear of Missing out) ಅಂದರೆ ‘ಎಲ್ಲರೂ ಎಲ್ಲೋ ಮಜಾ ಮಾಡುತ್ತಿದ್ದಾರೆ, ನಾನು ಮಾತ್ರ ಏನನ್ನೋ ಕಳೆದುಕೊಳ್ಳುತ್ತಿದ್ದೇನೆ’ ಎಂಬ ಆತಂಕ ಹೆಚ್ಚಾಗಿತ್ತು. ಇದಕ್ಕೆ ತದ್ವಿರುದ್ಧವಾಗಿ ಹುಟ್ಟಿಕೊಂಡಿದ್ದೇ ಈ JOMO ಟ್ರೆಂಡ್. ಸೋಶಿಯಲ್ ಮೀಡಿಯಾದ FOMOದಿಂದ ದೂರ ಸರಿದು, JOMO (Joy of Missing Out- ಕನೆಕ್ಟಿವಿಟಿಯಿಂದ ದೂರವಿರುವ ಆನಂದ) ಅನ್ನು ಇವರು ಆಚರಿಸುತ್ತಿದ್ದಾರೆ. ‘ಜಗತ್ತಿನಲ್ಲಿ ಏನೇನೋ ನಡೆಯುತ್ತಿದೆ, ಅದರಲ್ಲಿ ನಾನು ಭಾಗವಹಿಸದಿದ್ದರೂ ಪರವಾಗಿಲ್ಲ’ ಎಂದು ನೆಮ್ಮದಿಯ ಮೂಡ್​ಗೆ ಜಾರುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ಸ್ವಲ್ಪ ಸಮಯ ದೂರವಿದ್ದು, ರೀಲ್ಸ್ ಮತ್ತು ಸ್ಟೇಟಸ್​ಗಳ ಜಗತ್ತಿನಿಂದ ಹೊರಬರುತ್ತಿದ್ದಾರೆ. ಪ್ರತಿಯೊಂದು ಪಾರ್ಟಿ ಅಥವಾ ಸಾಮಾಜಿಕ ಆಚರಣೆಗಳಲ್ಲಿ ಭಾಗವಹಿಸಲೇಬೇಕು ಎಂಬ ಒತ್ತಡದಿಂದ ಮುಕ್ತಿ ಪಡೆದು, ತಮಗೆ ಇಷ್ಟ ಬಂದಂತೆ ಸಮಯ ಕಳೆಯುತ್ತಿದ್ದಾರೆ. ಬೇರೆಯವರ ಜೀವನದ ಕಡೆಗೆ ಗಮನ ಕೊಡುವುದನ್ನು ನಿಲ್ಲಿಸಿ, ತಮ್ಮದೇ ಆದ ವೈಯಕ್ತಿಕ ಬೆಳವಣಿಗೆ, ಹವ್ಯಾಸಗಳು ಮತ್ತು ಪ್ರೀತಿಪಾತ್ರರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದಕ್ಕೆ ಆದ್ಯತೆ ನೀಡುತ್ತಿದ್ದು, ಇದು ಸಕಾರಾತ್ಮಕ ವ್ಯಕ್ತಿತ್ವವನ್ನು ರೂಪಿಸಲು ಸಹಕಾರಿಯಾಗುತ್ತಿದೆ. ನೂರಾರು ವರ್ಚುವಲ್ ಸ್ನೇಹಿತರಿಗಿಂತ, ವಾಸ್ತವದಲ್ಲಿ ಜೊತೆಗಿರುವ ಕೆಲವು ಆಪ್ತ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಗುಣಮಟ್ಟದ ಸಮಯ ಕಳೆಯಲು ಸಾಧ್ಯವಾಗುತ್ತಿದೆ.

ಹೀಗಿದೆ ಸ್ವರೂಪ

ಪ್ರವಾಸೋದ್ಯಮ ವಲಯ ಈ ಬೇಡಿಕೆಯನ್ನು ಅರಿತು ಹೊಸ ಮಾದರಿಯ ಪ್ಯಾಕೇಜ್​ಗಳನ್ನು ಪರಿಚಯಿಸುತ್ತಿದೆ. ಪಶ್ಚಿಮ ಘಟ್ಟಗಳ ದಟ್ಟ ಅರಣ್ಯಗಳು (ಕೊಡಗು, ಚಿಕ್ಕಮಗಳೂರು, ವಯನಾಡ್), ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡದ ದೂರದ ಹಳ್ಳಿಗಳು, ಲಡಾಖ್​ನ ಒಳಗಿನ ಪ್ರದೇಶಗಳಲ್ಲಿ ಆಪ್-ಗ್ರಿಡ್ ಹೋಂಸ್ಟೇಗಳು ಮತ್ತು ರೆಸಾರ್ಟ್​ಗಳು ಹೆಚ್ಚುತ್ತಿವೆ. ಇಲ್ಲಿನ ಹೋಂಸ್ಟೇಗಳಲ್ಲಿ ವೈ-ಫೈ ಇರುವುದಿಲ್ಲ ಮತ್ತು ಮೊಬೈಲ್ ಸಿಗ್ನಲ್ ಕೂಡ ಸಿಗುವುದಿಲ್ಲ. ಈ ತಾಣಗಳು ಡಿಜಿಟಲ್ ಡಿಟಾಕ್ಸ್ ಕ್ಯಾಂಪ್​ಗಳಂತೆ ಕಾರ್ಯ ನಿರ್ವಹಿಸುತ್ತಿವೆ. ಯಾವುದೇ ಗದ್ದಲವಿಲ್ಲದ, ಪ್ರಕೃತಿಯ ಶಬ್ದಗಳನ್ನು ಮಾತ್ರ ಆಸ್ವಾದಿಸಬಹುದಾದ ಪ್ರತ್ಯೇಕ ವಾತಾವರಣವನ್ನು ನಿರ್ವಿುಸಲಾಗುತ್ತಿದೆ. ಪ್ರಕೃತಿಯಲ್ಲಿ ನಮಗಾಗಿ ಸಮಯ ಕಳೆಯುವುದರಿಂದ ಸ್ವಯಂ ಅವಲೋಕನಕ್ಕೆ ಅವಕಾಶವಾಗುತ್ತದೆ. ನಮ್ಮವರೊಡನೆ ಮನಸ್ಸು ಬಿಚ್ಚಿ ಮಾತನಾಡುವುದರಿಂದ ಬಾಂಧವ್ಯಗಳು ಗಟ್ಟಿಯಾಗುತ್ತವೆ.

ಪರಿಣಾಮಗಳು ಏನು?

ಸಕಾರಾತ್ಮಕ ಮುಖ

ಸ್ಥಳೀಯ ಆರ್ಥಿಕತೆಗೆ ಬಲ: ಇದುವರೆಗೆ ಯಾರಿಗೂ ತಿಳಿಯದ, ನೆಟ್​ವರ್ಕ್ ಇಲ್ಲದ ಕಾರಣಕ್ಕೆ ನಿರ್ಲಕ್ಷಕ್ಕೆ ಒಳಗಾಗಿದ್ದ ಗ್ರಾಮೀಣ ಮತ್ತು ಗಿರಿಜನ ಪ್ರದೇಶಗಳು ಪ್ರವಾಸಿ ತಾಣಗಳಾಗುತ್ತಿವೆ. ಇದರಿಂದ ಸ್ಥಳೀಯ ಹೋಂಸ್ಟೇ ಮಾಲೀಕರಿಗೆ, ಗೈಡ್​ಗಳಿಗೆ ಉತ್ತಮ ಆದಾಯ ಸಿಗುತ್ತಿದೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗಿ, ಆರ್ಥಿಕ ಚಟುವಟಿಕೆಗಳು ಹೆಚ್ಚುತ್ತಿವೆ.

ಮಾನಸಿಕ ಆರೋಗ್ಯ ಸುಧಾರಣೆ: ನಿರಂತರ ಸ್ಕ್ರೀನ್ ಟೈಮ್ಂದ ಉಂಟಾಗುವ ಆತಂಕ (ಅ್ಡಛಿಠಿಢ), ನಿದ್ರಾಹೀನತೆ ಮತ್ತು ಮಾನಸಿಕ ಆಯಾಸ ಕಡಿಮೆ ಮಾಡಲು ಇದು ಸಹಕಾರಿಯಾಗಿದೆ.

ನೈಜ ಬಾಂಧವ್ಯ: ಮೊಬೈಲ್ ಫೋನ್ ನೋಡುತ್ತ ಕೂರುವ ಬದಲಿಗೆ, ಜೊತೆಗೆ ಬಂದವರೊಂದಿಗೆ ಮುಖಾಮುಖಿ ಮಾತನಾಡುವುದು, ಆಟ ಆಡುವುದರಿಂದ ಸಂಬಂಧಗಳು ಗಟ್ಟಿಯಾಗುತ್ತಿವೆ.

ಸವಾಲುಗಳು

ತುರ್ತು ಪರಿಸ್ಥಿತಿಯ ಭೀತಿ: ನೆಟ್​ವರ್ಕ್ ಇಲ್ಲದ ಜಾಗಗಳಲ್ಲಿ ಇದ್ದಕ್ಕಿದ್ದಂತೆ ಅನಾರೋಗ್ಯ ಉಂಟಾದರೆ ಅಥವಾ ಪ್ರಕೃತಿ ವಿಕೋಪ ಸಂಭವಿಸಿದರೆ ಸಹಾಯಕ್ಕಾಗಿ ಸಂರ್ಪಸುವುದು ಕಷ್ಟವಾಗುತ್ತದೆ.

ವಾಣಿಜ್ಯೀಕರಣದ ಅಪಾಯ: ನೆಟ್​ವರ್ಕ್ ಇಲ್ಲದ ಪ್ರಕೃತಿಯನ್ನು ಮಾರಾಟ ಮಾಡಲು ಹೋಗಿ, ಅಂತಹ ಸೂಕ್ಷ್ಮ ಪರಿಸರ ವಲಯಗಳಲ್ಲೂ ಕಾಂಕ್ರೀಟ್ ಕಟ್ಟಡಗಳು ತಲೆಎತ್ತಿ ಪ್ರಕೃತಿಯ ನಾಶಕ್ಕೆ ಕಾರಣವಾಗಬಹುದು.

ಇತರೆಡೆಯೂ ಜಾರಿ

  • ಭಾರತ ಸೇರಿದಂತೆ ಜಗತ್ತಿನಾದ್ಯಂತ ಹಲವು ಸರ್ಕಾರಗಳು ಮತ್ತು ಶಿಕ್ಷಣ ಸಂಸ್ಥೆಗಳು ತರಗತಿ ಕೊಠಡಿಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುತ್ತಿವೆ. ವಿದ್ಯಾರ್ಥಿಗಳು ತರಗತಿಗೆ ಬರುವಾಗ ಫೋನ್​ಗಳನ್ನು ಪ್ರತ್ಯೇಕ ಲಾಕರ್​ಗಳಲ್ಲಿ ಅಥವಾ ಬ್ಯಾಗ್​ಗಳಲ್ಲಿ ಇಡುವುದು ಕಡ್ಡಾಯವಾಗುತ್ತಿದೆ.
  • ಇತ್ತೀಚಿನ ದಿನಗಳಲ್ಲಿ ಹಲವು ಪ್ರೀಮಿಯಂ ರೆಸ್ಟೋರೆಂಟ್​ಗಳು ನೋ-ಫೋನ್ ಡೈನಿಂಗ್ ನಿಯಮವನ್ನು ತರುತ್ತಿವೆ. ಕೆಲವು ರೆಸ್ಟೋರೆಂಟ್​ಗಳು ಗ್ರಾಹಕರು ತಮ್ಮ ಫೋನ್​ಗಳನ್ನು ಪ್ರವೇಶದ್ವಾರದಲ್ಲೇ ಲಾಕ್ ಇರುವ ಪೌಚ್​ಗಳಲ್ಲಿ ಇಟ್ಟರೆ ಬಿಲ್​ನಲ್ಲಿ ರಿಯಾಯಿತಿ ಅಥವಾ ಉಚಿತ ಐಸ್ಕ್ರೀಮ್ಂಥ ಆಕರ್ಷಕ ಆಫರ್​ಗಳನ್ನು ನೀಡುತ್ತಿವೆ.
  • ಪ್ರಸಿದ್ಧ ಕಲಾವಿದರ ಶೋಗಳಲ್ಲಿ ಪ್ರೇಕ್ಷಕರು ವಿಡಿಯೋ ರೆಕಾರ್ಡ್ ಮಾಡುವುದನ್ನು ತಡೆಯಲು ಮತ್ತು ಕಾರ್ಯಕ್ರಮವನ್ನು ನೇರವಾಗಿ ಆಸ್ವಾದಿಸಲು ‘ಟ್ಞಛ್ಟ ಕಟ್ಠ್ಚಛಿಠ’ (ಲಾಕ್ ಆಗುವ ವಿಶೇಷ ಬ್ಯಾಗ್) ಬಳಸಿ ಮೊಬೈಲ್​ಗಳನ್ನು ಸೈಲೆಂಟ್ ಮಾಡಿ ಲಾಕ್ ಮಾಡಲಾಗುತ್ತಿದೆ.
  • ಜನರು ತಮ್ಮ ಮನೆಗಳಲ್ಲೂ ಊಟದ ಮೇಜು ಮತ್ತು ಮಲಗುವ ಕೋಣೆಯನ್ನು ನೋ ಮೊಬೈಲ್ ಝೋನ್ ಎಂದು ಘೊಷಿಸಿಕೊಂಡು, ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net