_1768499483828.webp?w=480&auto=format%2Ccompress&fit=max)
_1768499483828.webp?w=480&auto=format%2Ccompress&fit=max)
ಬೆಂಗಳೂರು: ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜನವರಿ 8ರಂದು ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಕೋಲ್ಕತ್ತಾದ ಐ-ಪ್ಯಾಕ್ (ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ) ಕಚೇರಿ ಮತ್ತು ಅದರ ನಿರ್ದೇಶಕ ಪ್ರತೀಕ್ ಜೈನ್ ನಿವಾಸದ ಮೇಲೆ ದಾಳಿ ನಡೆಸಿದ್ದರು.
ಈ ಸಂದರ್ಭದಲ್ಲೇ ಸ್ಥಳಕ್ಕೆ ಧಾವಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದಲ್ಲದೆ ಮಹತ್ವದ ಕಡತಗಳನ್ನು ಕಸಿದುಕೊಂಡು ಹೋಗಿದ್ದು, ಇಡೀ ದೇಶದ ಗಮನ ಸೆಳೆಯಿತು. ಕೇಂದ್ರ ತನಿಖಾ ಸಂಸ್ಥೆಗಳ ವಿರುದ್ಧ ಮಮತಾ ಗಲಾಟೆ ನಡೆಸುತ್ತಿರುವುದು ಇದೇ ಮೊದಲೇನಲ್ಲ. ಈ ಪ್ರಕರಣವೀಗ ಸುಪ್ರೀಂ ಕೋರ್ಟ್ನಲ್ಲಿದ್ದು, ನ್ಯಾಯಾಲಯ ಮಹತ್ವದ ಸಂಗತಿಗಳನ್ನು ಹೇಳಿದೆ.
ಜಾರಿ ನಿರ್ದೇಶನಾಲಯ ಸೇರಿದಂತೆ ತನಿಖಾ ಏಜೆನ್ಸಿಗಳ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡಕೂಡದು ಎಂದು ಸ್ಪಷ್ಟಪಡಿಸಿರುವ ಸುಪ್ರೀಂಕೋರ್ಟ್ ಐ-ಪ್ಯಾಕ್ ಮೇಲಿನ ಇ.ಡಿ. ದಾಳಿಯ ವಿಷಯ ಗಂಭೀರವಾದದ್ದು, ನಾವು ಮಧ್ಯಪ್ರವೇಶ ಮಾಡದಿದ್ದರೆ ಅರಾಜಕತೆ ಸೃಷ್ಟಿಯಾಗುವ ಸಂಭವ ಇತ್ತು ಎಂದಿದೆ. ಅಲ್ಲದೆ, ಇ.ಡಿ. ವಿರುದ್ಧ ಮಮತಾ ದಾಖಲಿಸಿದ್ದ ಎಫ್ಐಆರ್ಗೆ ತಡೆ ನೀಡಿದೆ. ನೆಲದ ಕಾನೂನಿನ ಪಾಲನೆ, ತನಿಖಾ ಸಂಸ್ಥೆಗಳಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುವುದು, ಅಪರಾಧಿಗಳಿಗೆ ರಕ್ಷಣೆ ನೀಡುವುದನ್ನು ತಪ್ಪಿಸುವ ಉದ್ದೇಶದಿಂದ ಪ್ರಕರಣದ ವಿಚಾರಣೆ ನಡೆಸುವುದು ಅನಿವಾರ್ಯ ಎಂದು ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಹಾಗೂ ವಿಪುಲ್ ಪಂಚೋಲಿ ಒಳಗೊಂಡ ಪೀಠವು ಹೇಳಿತು.
ಅಲ್ಲದೆ. ಇ.ಡಿ. ದಾಳಿ ಸಂದರ್ಭದಲ್ಲಿ ಕರ್ತ್ಯವಕ್ಕೆ ಅಡ್ಡಿಪಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಸರ್ಕಾರ, ಡಿಜಿಪಿ ರಾಜೀವ್ ಕುಮಾರ್ ಹಾಗೂ ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಪ್ರಕರಣದ ಕುರಿತು ಮುಂದಿನ ವಿಚಾರಣೆಯನ್ನು ಫೆಬ್ರವರಿ 3ಕ್ಕೆ ಮುಂದೂಡಲಾಗಿದೆ. ಈ ಪ್ರಕರಣ ಎಲ್ಲ ರಾಜಕೀಯ ಪಕ್ಷಗಳಿಗೂ ಪಾಠವಾಗಬೇಕು. ತನಿಖಾ ಸಂಸ್ಥೆಗಳನ್ನೇ ಬೆದರಿಸುವುದು, ತನಿಖಾ ಸಂಸ್ಥೆಗಳ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ತನಿಖೆ ನಡೆಸುವವರ ಮೇಲೆಯೇ ವಿನಾಕಾರಣ ಆರೋಪಗಳನ್ನು ಹೊರಿಸುವುದು ನಿಜಕ್ಕೂ ದುರದೃಷ್ಟಕರ ಬೆಳವಣಿಗೆ. ಮಮತಾ ನುರಿತ ರಾಜಕಾರಣಿ. ಅವರಿಗೆ ಸಂವಿಧಾನದ ಮೌಲ್ಯಗಳ ಬಗ್ಗೆ ಅರಿವಿದೆ. ಹೀಗಿದ್ದೂ, ಇಂಥ ವರ್ತನೆ ಏಕೆ? ದಾಳಿಯ ಸ್ಥಳದಿಂದ ಸ್ವತಃ ಕಡತಗಳನ್ನು ತೆಗೆದುಕೊಂಡು ಹೋಗುವ ಮೂಲಕ ಮಮತಾ ಅನುಮಾನ ಹುಟ್ಟಿಸಿರುವುದಂತೂ ಹೌದು.
ತಪ್ಪೇ ಮಾಡದಿದ್ದರೆ ತನಿಖೆಗೆ ಹೆದರುವುದೇಕೆ? ಅದರ ಬದಲಿಗೆ ತನಿಖಾ ಏಜೆನ್ಸಿಗಳ ಜತೆ ನಿಲ್ಲುವ ಮೂಲಕ ಸತ್ಯಾಂಶ ಹೊರಬರಲು ಸಹಕರಿಸುವುದು ಸೂಕ್ತವಲ್ಲವೇ? ಈ ಹಿಂದೆ ಸಿ.ಬಿ.ಐ ಅಧಿಕಾರಗಳೊಡನೆ ದುರ್ವರ್ತನೆ ತೋರಲಾಗಿತ್ತು. ಪಡಿತರ ಹಗರಣಕ್ಕೆ ಸಂಬಂಧಿಸಿದಂತೆ 2024ರ ಜನವರಿಯಲ್ಲಿ ಟಿಎಂಸಿ ನಾಯಕ ಶೇಖ್ ಷಹಜಹಾನ್ ನಿವಾಸದ ಮೇಲೆ ದಾಳಿ ಮಾಡಲು ಹೋದ ಇ.ಡಿ. ಅಧಿಕಾರಿಗಳ ಮೇಲೆ ನೂರಾರು ಜನರು ಒಟ್ಟಾಗಿ ಹಲ್ಲೆ ಮಾಡಿದ್ದರು. ಯಾರು ಎಷ್ಟೇ ಪ್ರಭಾವಶಾಲಿಗಳಾಗಿರಲಿ, ನೆಲದ ಕಾನೂನಿನ ಪಾಲನೆ ಅತ್ಯಗತ್ಯ. ಈ ವಿಷಯದಲ್ಲಿ ಟಿಎಂಸಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ವಿವೇಚನೆಯಿಂದ ನಡೆದುಕೊಳ್ಳಲಿ. ತನಿಖಾ ಏಜೆನ್ಸಿಗಳ ಆತ್ಮಸ್ಥೈರ್ಯ ಕುಂದದಿರಲಿ.