ನಮ್ಮ ವಿದೇಶಾಂಗ ನೀತಿ ಮೇಲೆ ಯಾವುದೇ ದೇಶಕ್ಕೆ ವಿಟೋ ಚಲಾಯಿಸುವ ಅಧಿಕಾರವಿಲ್ಲ; ಎಸ್ ಜೈಶಂಕರ್ | S Jaishankar

ಕೇಂದ್ರ ವಿದೇಶಾಂಗ ಸಚಿವ ಎಸ್​ ಜೈಶಂಕರ್
ಕೇಂದ್ರ ವಿದೇಶಾಂಗ ಸಚಿವ ಎಸ್​ ಜೈಶಂಕರ್
Published on
ನವದೆಹಲಿ: ಭಾರತ ಜಾಗತಿಕವಾಗಿ ತನ್ನ ಪಾಲುದಾರರನ್ನು ಆಯ್ದುಕೊಳ್ಳುವ, ಸ್ನೇಹಬೆಳಸಿಕೊಳ್ಳುವ, ವ್ಯಾಪಾರ ಮಾಡುವ ಸ್ವಾತಂತ್ರ್ಯವನ್ನು ಹೊಂದಿದ್ದು, ಅದನ್ನು ಬೇರೊಂದು ದೇಶ ನಿಯಂತ್ರಿಸುವ ವಿಟೋ ಅಧಿಕಾರವನ್ನು ಹೊಂದಿಲ್ಲ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್​ ಜೈಶಂಕರ್(S Jaishankar) ಹೇಳಿದ್ದಾರೆ.
ಎನ್​ಡಿಟಿವಿ ಸಂಪಾದಕ ರಾಹುಲ್ ಕನ್ವಾಲ್​ರೊಂದಿಗಿನ ಸಂದರ್ಶನದಲ್ಲಿ ಮಾತನಾಡಿರುವ ಅವರು, ಭೌಗೋಳಿಕ ರಾಜಕೀಯ ಏರಿಳಿತಗಳಿಂದ ತುಂಬಿರುವ ಜಗತ್ತಿನಲ್ಲಿ ರಷ್ಯಾದೊಂದಿಗಿನ ಭಾರತದ ಸಂಬಂಧ ಸ್ಥಿರವಾಗಿದೆ. ಯಾವುದೇ ದೇಶವು ಮತ್ತೊಂದು ದೇಶದೊಂದಿಗಿನ ಭಾರತದ ಸಂಬಂಧಗಳ ಮೇಲೆ ವೀಟೋ ಹೊಂದಿರುವುದು ಅಸಮಂಜಸವಾಗಿದೆ ಎಂದು ಪ್ರತಿಪಾದಿಸಿದ್ದಾರೆ. 
ಕಳೆದ 70-80 ವರ್ಷಗಳಲ್ಲಿ ಜಗತ್ತು ಬಹಳಷ್ಟು ಏರಿಳಿತಗಳನ್ನು ಕಂಡಿದೆ, ಆದರೆ ಭಾರತ ಮತ್ತು ರಷ್ಯಾ ವಿಶ್ವದ ಅತ್ಯಂತ ಸ್ಥಿರವಾದ ದೊಡ್ಡ ಸಂಬಂಧಗಳಲ್ಲಿ ಸೇರಿವೆ. ಚೀನಾ ಅಥವಾ ಯುರೋಪ್ ಜೊತೆಗಿನ ರಷ್ಯಾದ ಸಂಬಂಧಗಳಲ್ಲಿ ಏರಿಳಿತಗಳಿದ್ದವು. ಇತರ ದೇಶಗಳೊಂದಿಗೆ ನಮ್ಮ ಸಂಬಂಧಗಳು ಹಾಗೆ ಇದ್ದವು. ಹಾಗೆಯೇ ದೇಶದ ಬೀದಿಗಳಲ್ಲಿ ರಷ್ಯಾದ ಬಗ್ಗೆ ಒಂದು ಭಾವನೆ ಇದೆ ಎಂದು ತಿಳಿಸಿದ್ದಾರೆ.
ಭಾರತವು ತನ್ನ ಹಿತಾಸಕ್ತಿಗಾಗಿ ನಿಲ್ಲಬೇಕು. ರಾಜತಾಂತ್ರಿಕತೆ ಎಂದರೆ ಬೇರೆಯವರನ್ನು ಮೆಚ್ಚಿಸುವುದಲ್ಲ. ಅಮೆರಿಕದೊಂದಿಗಿನ ವ್ಯಾಪಾರವು ಅತ್ಯಂತ ಪ್ರಮುಖ ವಿಷಯವಾಗಿದೆ. ಅದರೊಂದಿಗೆ ಸಂವಹನದ ಕೊರತೆಯಿಲ್ಲ. ವ್ಯಾಪಾರ ಒಪ್ಪಂದವು ಶೀಘ್ರದಲ್ಲೇ ನಡೆಯಬಹುದು. ಸಮಂಜಸವಾದ ನಿಯಮಗಳ ಮೇಲೆ ಪೂರೈಸಲು ಸಿದ್ಧರಿದ್ದೇವೆ ಎಂದಿದ್ದಾರೆ.
ಎರಡು ದೇಶಗಳ ಹಿತಾಸಕ್ತಿಗಳಿಗೆ ಕೂಡಿಕೊಂಡು ಒಂದು ಹಂತಕ್ಕೆ ಬರಬಹುದು. ಮಾತುಕತೆ ಮೂಲಕ ಪರಿಹರಿಸುವ ವಿಷಯವಿದು. ನಮಗೆ ಕಾರ್ಮಿಕರು, ರೈತರು ಹಾಗೂ ಮಧ್ಯಮ ವರ್ಗದವರ ಹಿತಾಸಕ್ತಿ ಮುಖ್ಯವಾಗಿದೆ. ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದಗಳನ್ನು ಮಾಡುವಾಗ ನಾವು ವಿವೇಚನಾಯುಕ್ತರಾಗಿರಬೇಕು ಎಂದು ಹೇಳಿದ್ದಾರೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net