ಡಿಲಿಮಿಟೇಷನ್ ವಿಷಯದಲ್ಲಿ ಡಿಎಂಕೆ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ: ಉದಯನಿಧಿ ಸ್ಟಾಲಿನ್ | Udhayanidhi Stalin

ಉದಯನಿಧಿ ಸ್ಟಾಲಿನ್
ಉದಯನಿಧಿ ಸ್ಟಾಲಿನ್
Published on
ಚೆನ್ನೈ: ಸಂಸತ್ತಿನಲ್ಲಿ ನಿರೀಕ್ಷಿತ ಡಿಲಿಮಿಟೇಷನ್ ಮಸೂದೆ ವಿರುದ್ಧ ಡಿಎಂಕೆ ತನ್ನ ನಿಲುವನ್ನು ಮೃದುಗೊಳಿಸಿದೆ ಎಂಬ ಊಹಾಪೋಹಗಳನ್ನು ತಳ್ಳಿಹಾಕಿರುವ ತಮಿಳುನಾಡು ವಿಧಾನಸಭೆ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್(Udhayanidhi Stalin), ಶುಕ್ರವಾರ(ಆ. 07) ಪಕ್ಷದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ಕಳೆದ ಒಂದು ವರ್ಷದಿಂದಲೂ ನಾವು ಸೀಮಾ ನಿರ್ಣಯ ಮಸೂದೆಯನ್ನು ವಿರೋಧಿಸುತ್ತಿದ್ದೇವೆ. ಅದನ್ನು ವಿರೋಧಿಸುತ್ತಲೇ ಇರುತ್ತೇವೆ. ಈ ಬಗ್ಗೆ ಇಡೀ ದೇಶದಲ್ಲೇ ಮೊದಲು ಧ್ವನಿ ಎತ್ತಿದ್ದು ಡಿಎಂಕೆ. ಹೋರಾಟದ ನೇತೃತ್ವ ವಹಿಸಿದ್ದವರು ನಮ್ಮ ನಾಯಕ ಎಂಕೆ ಸ್ಟಾಲಿನ್. ಕಳೆದ ವರ್ಷ ಐದು ರಾಜ್ಯಗಳ ಸಿಎಂಗಳನ್ನು ಚೆನ್ನೈಗೆ ಕರೆತಂದು, ಒಗ್ಗಟ್ಟಿನ ಧ್ವನಿ ಎತ್ತಿದ್ದರು ಎಂದು ತಿಳಿಸಿದ್ದಾರೆ.
ಇದೇ ವೇಳೆ ಸಿಎಂ ವಿಜಯ್ ರಾಜ್ಯದ ಸಂಸದರ ಸಭೆ ಕರೆದಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ವಿಷಯದ ಕುರಿತು ಟಿವಿಕೆ ಸರ್ಕಾರ ಈಗ ಎಲ್ಲಾ ಸಂಸದರ ಸಭೆ ಕರೆದಿದೆ. ನಮ್ಮ ನಾಯಕ ಎಂಕೆ ಸ್ಟಾಲಿನ್ ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.

ಇಂದು ಸರ್ವಪಕ್ಷಗಳ ಸಭೆ, ಡಿಎಂಕೆ ಭಾಗಿ ಸಾಧ್ಯತೆ

ಡಿಲಿಮಿಟೇಷನ್ ವಿಚಾರವಾಗಿ ತಮಿಳುನಾಡು ಸಿಎಂ ವಿಜಯ್ ಇಂದು(ಆ. 08) ರಾಜ್ಯದ ಎಲ್ಲಾ ಸಂಸದರ ಸಭೆ ನಡೆಸಲಿದ್ದು, ಎಲ್ಲಾ ಸಂಸದರಿಗೆ ಆಹ್ವಾನ ನೀಡಿದ್ದಾರೆ. ಕಾಂಗ್ರೆಸ್ ಸಂಸದರು ಸಭೆಯಲ್ಲಿ ಭಾಗವಹಿಸಲಿದ್ದು, ಡಿಎಂಕೆ ಕೂಡ ಭಾಗವಹಿಸುವ ಸಾಧ್ಯತೆಯಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಡಿಎಂಕೆ ಪ್ರಧಾನ ಕಾರ್ಯದರ್ಶಿ ದುರೈಮುರುಗನ್, ಆಗಸ್ಟ್ 8 ರಂದು ಹಾಲಿ ಸರ್ಕಾರ ಕರೆದಿರುವ ಸಂಸದರ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಲು ಮತ್ತು ನಮ್ಮ ಅಭಿಪ್ರಾಯಗಳನ್ನು ದಾಖಲಿಸಲು ನಮಗೆ ಯಾವುದೇ ಹಿಂಜರಿಕೆ ಇಲ್ಲ ಎಂದಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net