ತಮಿಳುನಾಡಿನಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಅವಕಾಶವಿಲ್ಲ; ಕಾಂಗ್ರೆಸ್​ನ ಅಧಿಕಾರ ಹಂಚಿಕೆ ಬೇಡಿಕೆಯನ್ನು ತಿರಸ್ಕರಿಸಿದ ಡಿಎಂಕೆ | DMK

ರಾಹುಲ್ ಗಾಂಧಿ ಮತ್ತು ಸಿಎಂ ಎಂ.ಕೆ.ಸ್ಟಾಲಿನ್
ರಾಹುಲ್ ಗಾಂಧಿ ಮತ್ತು ಸಿಎಂ ಎಂ.ಕೆ.ಸ್ಟಾಲಿನ್
Published on
ಚೆನ್ನೈ: ತಮಿಳುನಾಡಿನಲ್ಲಿ ಕೆಲವೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೂ ಮುಂಚೆ ಕಾಂಗ್ರೆಸ್​ನ ಸೀಟು ಹಂಚಿಕೆ ಜೊತೆ ಅಧಿಕಾರ ಹಂಚಿಕೆಯ ಪ್ರಸ್ತಾಪವನ್ನು ಭಾನುವಾರ(ಜ. 11) ಆಡಳಿತರೂಢ ಡಿಎಂಕೆ(DMK) ತಿರಸ್ಕರಿಸಿದೆ.
ಈ ಕುರಿತು ಮಾತನಾಡಿರುವ ಡಿಎಂಕೆ ಹಿರಿಯ ನಾಯಕ ಮತ್ತು ಗ್ರಾಮೀಣಾಭಿವೃದ್ದಿ ಸಚಿವ ಐ.ಪೆರಿಯಾಸಾಮಿ, ಅಧಿಕಾರ ಹಂಚಿಕೆ ಬಗ್ಗೆ ಪಕ್ಷಗಳು ಬೇಡಿಕೆಯನ್ನು ತಮ್ಮ ಹಕ್ಕಾಗಿ ಪ್ರಸ್ತಾಪಿಸಿದರೂ, ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಕಾಂಗ್ರೆಸ್ ಸೇರಿದಂತೆ ಮಿತ್ರಪಕ್ಷಗಳೊಂದಿಗೆ ಅಧಿಕಾರ ಹಂಚಿಕೊಳ್ಳುವುದರ ವಿರುದ್ಧ ದೃಢವಾಗಿದ್ದಾರೆ. ತಮಿಳುನಾಡಿನಲ್ಲಿ ಸಮ್ಮಿಶ್ರ ಸರ್ಕಾರ ರಚನೆಗೆ ಯಾವುದೇ ಅವಕಾಶವಿಲ್ಲ ಎಂದು ಹೇಳಿದ್ದಾರೆ.
ತಮಿಳುನಾಡಿನಲ್ಲಿ ಎಂದಿಗೂ ಸಮ್ಮಿಶ್ರ ಸರ್ಕಾರ ಇರಲಿಲ್ಲ. ರಾಜ್ಯದಲ್ಲಿ ಯಾವಾಗಲೂ ಡಿಎಂಕೆ ತನ್ನದೇ ಆದ ಆಡಳಿತ ನಡೆಸಿದೆ. ಪಕ್ಷದ ಈ ನಿಲುವಿನ ಬಗ್ಗೆ ಯಾವುದೇ ಸಂದೇಹವಿಲ್ಲ. ಸಿಎಂ ಈ ಬಗ್ಗೆ ದೃಢವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಮಾರ್ಚ್-ಏಪ್ರಿಲ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಿಗೆ ಮುಂಚಿತವಾಗಿ ಕಾಂಗ್ರೆಸ್ ಇತ್ತೀಚೆಗೆ ಸೀಟು ಹಂಚಿಕೆ ಜೊತೆಗೆ ಅಧಿಕಾರ ಹಂಚಿಕೆಯ ಬಗ್ಗೆಯೂ ಚರ್ಚೆಯಾಗಬೇಕು ಎಂದು ಕಾಂಗ್ರೆಸ್​ನ ಹಿರಿಯ ನಾಯಕ ಮತ್ತು ಸಂಸದ ಮಾಣಿಕ್ಯಂ ಟ್ಯಾಗೋರ್ ಹೇಳಿದ್ದರು.
ಪೆರಿಯಸಾಮಿ ಅವರ ಹೇಳಿಕೆ, ತಮಿಳುನಾಡಿನಲ್ಲಿ ಡಿಎಂಕೆಯ ದೀರ್ಘಕಾಲದ ನಿಲುವನ್ನು ತಿಳಿಸುತ್ತವೆ ಎನ್ನಲಾಗಿದ್ದು, 1967ರಿಂದ ಡಿಎಂಕೆ ಮತ್ತು ಎಐಎಡಿಎಂಕೆ ಎರಡೂ ಪಕ್ಷಗಳು ಮೈತ್ರಿಕೂಟಗಳ ಭಾಗವಾಗಿ ಚುನಾವಣೆಗಳಲ್ಲಿ ಸ್ಪರ್ಧಿಸಿದರೂ ಸ್ವಂತವಾಗಿ ಸರ್ಕಾರ ರಚಿಸಿವೆ. ಮಿತ್ರಪಕ್ಷಗಳಿಗೆ ಯಾವುದೇ ಅಧಿಕಾರವನ್ನು ನೀಡಿಲ್ಲ. ಜೊತೆಗೆ ಮಿತ್ರಪಕ್ಷಗಳು ಕೂಡ ಅಧಿಕಾರದ ಭಾಗವಾಗದೇ ಬಾಹ್ಯವಾಗಿ ಬೆಂಬಲ ಸೂಚಿಸಿವೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net